ಬೆಂಗಳೂರು, ಅ.14: ಚಿಂತಾಮಣಿ(Chintamani)ವಿಧಾನಸಭೆ ಕ್ಷೇತ್ರದ ಜನತಾದಳದ ಮುಖಂಡರು ಹಾಗೂ ನಗರಸಭೆ ಸದಸ್ಯರಾದ ಶ್ರೀ ಅಗ್ರಹಾರ ಮುರಳಿ ಅವರ ಮೇಲೆ ನಿನ್ನೆ(ಅ.13) ದುಷ್ಕರ್ಮಿಗಳು ಮಚ್ಚು ಲಾಂಗ್ಗಳಿಂದ ಪೈಶಾಚಿಕ ದಾಳಿ ನಡೆಸಿರುವ ಘಟನೆ ಖಂಡನೀಯ. ಈ ಕೃತ್ಯ ಎಸಗಿದ ದುರುಳರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಅವರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ಹಳೇ ದ್ವೇಷ ಹಿನ್ನೆಲೆ ಚಿಂತಾಮಣಿ ನಗರಸಭೆ ಸದಸ್ಯ ಮುರಳಿ ಎಂಬುವವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಗಜಾನನ ವೃತ್ತದಲ್ಲಿ ನಿನ್ನೆ ನಡೆದಿತ್ತು. ಈ ಹಿನ್ನಲೆ ಕಾಂಗ್ರೆಸ್ಸರಕಾರ ಅಧಿಕಾರಕ್ಕೆ ಬಂದ ಮೇಲೆ ವಿಪಕ್ಷಗಳ ಮುಖಂಡರು, ಕಾರ್ಯಕರ್ತರ ಮೇಲೆ ದೌರ್ಜನ್ಯ ಮೇರೆ ಮೀರಿದೆ. ಗೃಹ ಇಲಾಖೆ, ಪೊಲೀಸ್ ವ್ಯವಸ್ಥೆ, ಆಡಳಿತ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಅಧಿಕಾರಿಗಳು ಆಡಳಿತ ಪಕ್ಷ ನಾಯಕರ ಕೈಗೊಂಬೆಗಳು ಆಗಿರುವ ಪರಿಣಾಮವೇ ಇಂತಹ ಘಟನೆಗಳಿಗೆ ದಾರಿ ಆಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಚಿಂತಾಮಣಿ ವಿಧಾನಸಭೆ ಕ್ಷೇತ್ರದ @JanataDal_S ಮುಖಂಡರು, ನಗರಸಭೆ ಸದಸ್ಯರಾದ ಶ್ರೀ ಅಗ್ರಹಾರ ಮುರಳಿ ಅವರ ಮೇಲೆ ದುಷ್ಕರ್ಮಿಗಳು ಮಚ್ಚು ಲಾಂಗ್ ಗಳಿಂದ ಪೈಶಾಚಿಕ ದಾಳಿ ನಡೆಸಿರುವ ಘಟನೆ ಖಂಡನೀಯ. ಈ ಕೃತ್ಯ ಎಸಗಿದ ದುರುಳರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು ಹಾಗೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.1/4@INCKarnataka ಸರಕಾರ…
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) October 14, 2023
ಇದನ್ನೂ ಓದಿ:ಹಳೇ ದ್ವೇಷ; ಚಿಂತಾಮಣಿ ನಗರಸಭೆ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ
ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಪೂರ್ಣವಾಗಿ ಕುಸಿದು ಬಿದ್ದಿದೆ. ಮೊದಲು ಇಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ. ಕೆಲ ದಿನಗಳ ಹಿಂದೆ ಹಾಸನದಲ್ಲಿ ಜೆಡಿಎಸ್ ಮುಖಂಡರಾದ ಶ್ರೀ ಕೃಷ್ಣೇಗೌಡರನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಹೊಳೆನರಸೀಪುರದಲ್ಲಿ ನಮ್ಮ ಪಕ್ಷದ ಮುಖಂಡರಾದ ಶ್ರೀ ಅಶ್ವತ್ಥ್ ಅವರ ಮೇಲೆ ದಾಳಿ ನಡೆಡಿತ್ತು. ಈಗ ಚಿಂತಾಮಣಿಯಲ್ಲಿ ಅಂತಹದ್ದೇ ಘಟನೆ ನಡೆದಿರುವುದು ಪ್ರತಿಪಕ್ಷಗಳನ್ನು ಹೆದರಿಸಿ ಬೆದರಿಸುವ ದುಷ್ಟ ಹುನ್ನಾರವಲ್ಲದೆ ಮತ್ತೇನಲ್ಲ ಎಂದರು.
ಅದರಲ್ಲೂ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ವ್ಯವಸ್ಥಿತವಾಗಿ ಗುರಿ ಮಾಡಲಾಗುತ್ತಿದೆ. ಇದು ಸರಿ ಅಲ್ಲ, ಇದನ್ನು ಸಹಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಸದಾ ಶಾಂತಿ ನೆಲೆಸಿರಬೇಕು ಎನ್ನುವುದು ನಮ್ಮ ಪಕ್ಷದ ಆಶಯ. ಸರಕಾರ ಮತ್ತು ಗೃಹ ಸಚಿವರು ಕೂಡಲೇ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ಪಕ್ಷದ ವತಿಯಿಂದ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ