Karnataka Rain: ಕರ್ನಾಟಕದ ವಿವಿಧೆಡೆ ಗುಡುಗು ಮಳೆ; ಓರ್ವ ಸಾವು, ನೀರಿನಲ್ಲಿ ಕೊಚ್ಚಿ ಹೋದ ಬೈಕ್ಗಳು
ಕರ್ನಾಟಕದಲ್ಲಿ ಮುಂದಿನ ಐದು ದಿನಗಳವರೆಗೆ ಧಾರಾಕಾರವಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಇಂದು ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ.
ಬೆಂಗಳೂರು: ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದ್ದು, ನಾಳೆ ಚಂಡಮಾರುತವಾಗು ಸಾಧ್ಯತೆ ಇದೆ ಎಂದು ಹಮಾವಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಪ್ರಭಾವದಿಂದಾಗಿ ರಾಜ್ಯಾದ್ಯಂತ ಇನ್ನೂ 5 ದಿನಗಳ ಧಾರಾಕಾರ ಮಳೆಯಾಗಲಿದೆ (Karnataka Rain). ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ಅಲ್ಲಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಓರ್ವ ಸಾವನ್ನಪ್ಪಿದ ಘಟನೆಯೂ ನಡೆದಿದೆ. ಹಾಗಿದ್ದರೆ ಮಳೆಯಿಂದಾಗಿ ಯಾವ ಜಿಲ್ಲೆಯಲ್ಲಿ ಏನಾಯ್ತು? ಇಲ್ಲಿದೆ ಮಾಹಿತಿ.
ಕಲಬುರಗಿ ನಗರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು. ಸರ್ಕಾರಿ ಶಾಲೆಯ ಆವರಣದಲ್ಲಿದ್ದ ಬೃಹತ್ ಮರ ಧರೆಗುರುಳಿ ಅವಾಂತರವೇ ಸೃಷ್ಟಿಯಾಗಿದೆ. ಕಲಬುರಗಿ ಬಳಿಯ ಕೋಟನೂರು ಡಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಮತದಾನಕ್ಕೆ ಸಕಲ ಸಿದ್ಧತೆ ನಡೆಸುತ್ತಿರುವ ನಡುವೆಯೇ ಗಾಳಿ ಸಹಿತ ಭಾರಿ ಮಳೆ ಬಂದ ಹಿನ್ನೆಲೆ ಬೃಹತ್ ಮರ ಧರೆಗುರುಳಿದೆ. ಸದ್ಯ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: Karnataka Rain: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ; ಮತದಾನಕ್ಕೆ ಮಳೆ ಅಡ್ಡಿ, ನಾಳೆಯಿಂದ ಐದು ದಿನ ಕರ್ನಾಟಕದಲ್ಲಿ ಭಾರೀ ಮಳೆ
ಗದಗ ಜಿಲ್ಲೆಯ ವಿವಿಧೆಡೆ ಗುಡುಗು ಸಮೇತವಾಗಿ ಮಳೆಯಾಗಿದ್ದು, ಗದಗ ಬೆಟಗೇರಿ ಅವಳಿ ನಗರದಲ್ಲಿ ಅರ್ಥಗಂಟೆಯಿಂದ ಮಳೆಯಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ನಾಳೆ ನಡೆಯುವ ಚುನಾವಣಾ ಪ್ರಕ್ರಿಯೆಗೂ ಮಳೆರಾಯ ಅಡ್ಡಿಯಾಗುವ ಆತಂಕ ಎದುರಾಗಿದೆ.
ಹುಬ್ಬಳ್ಳಿಯಲ್ಲಿ ಭಾರೀ ಮಳೆ, ಏನಾಯ್ತು ಗೊತ್ತಾ?
ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ವರುಣನ ಅವಾಂತರ ಒಂದೆಡೆಯಾದರೆ, ಇನ್ನೊಂದು ಕಡೆ ಯುವಕನಿಂದ ಪೂಜೆ ನಡೆಯಿತು. ಹುಬ್ಬಳ್ಳಿಯಲ್ಲಿ ಮಳೆ ಬಂದ ಖುಷಿಗೆ ಯುವಕನೊಬ್ಬ ಪೂಜೆ ಮಾಡಿ ಕಾಯಿ ಒಡೆದಿದ್ದಾನೆ. ಆದರೆ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ನಾಲಾ ನೀರು ಹರಿದು ಬರಲು ಆರಂಭವಾಗಿದೆ. ಇದಕ್ಕೂ ಯುವಕ ಆಕ್ರೋಶ ಹೊರಹಾಕಿದ್ದಾನೆ.
ಹುಬ್ಬಳ್ಳಿಯ ವರುಣನ ಅವಾಂತರಕ್ಕೆ ಬೈಕ್ಗಳು ಕೊಚ್ಚಿ ಹೋಗಿವೆ. ಮಧ್ಯಾಹ್ನದಿಂದಲೇ ಭಾರೀ ಮಳೆಯಾಗಲು ಆರಂಭವಾದ ಹಿನ್ನೆಲೆ ದಾಜಿಬಾನ್ ಪೇಟೆಯಲ್ಲಿ ನಿಲ್ಲಿಸಿದ್ದ ಬೈಕ್ಗಳು ನೀರಿನಲ್ಲಿ ತೇಲಿಹೋಗಿವೆ. ಕೂಡಲೇ ಎಚ್ಚೆತ್ತ ಬೈಕ್ ಸವಾರರು ಹಗ್ಗ ಕಟ್ಟಿ ಬೈಕ್ಗಳನ್ನು ತಡೆದಿದ್ದಾರೆ. ಇನ್ನೊಂದೆಡೆ, ಹುಬ್ಬಳ್ಳಿಯ ಕೇಶ್ವಾಪುರ ರಸ್ತೆಯಲ್ಲಿ ಮರಗಳು ಧರೆಗುರುಳಿವೆ. ಇದರಿಂದಾಗಿ ಸಂಚಾರದಲ್ಲಿ ವ್ಯತ್ಯಯವಾಗಿದೆ. ಬೀಸಿದ ಗಾಳಿಗೆ ಲ್ಯಾಮಿಂಗ್ಟನ್ ಶಾಲೆಯಲ್ಲಿ ಮತಯಂತ್ರ ವಿತರಣೆಗಾಗಿ ಹಾಕಿದ್ದ ಪೆಂಡಾಲ್ ಕೂಡ ಕುಸಿದುಬಿದ್ದಿದೆ.
ಬೆಳಗಾವಿಯಲ್ಲಿ ಸಿಡಿಲಿನ ಬಡಿತಕ್ಕೆ ಓರ್ವ ಸಾವು
ಬೆಳಗಾವಿಯಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆಯಾಗಿದ್ದು, ರಾಮದುರ್ಗ ತಾಲೂಕಿನ ಓಬಳಾಪುರ ಗ್ರಾಮದಲ್ಲಿ ಸಿಡಿಲು ಬಡಿದು ರೈತರೊಬ್ಬರು ಸಾವನ್ನಪ್ಪಿದ್ದಾರೆ. ಪಾರ್ಲೇಷ್ ರಾಠೋಡ ಮೃತ ದುರ್ದೈವಿ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ರಾಮದುರ್ಗ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಆರಂಭ
ಬೆಂಗಳೂರು ನಗರದಲ್ಲಿ ಮುಂದಿನ 4 ದಿನಗಳ ಕಾಲ ಭಾರಿ ಮಳೆ ಸಾಧ್ಯತೆ ಇದ್ದು, ಇಂದು ಸಂಜೆ ಕೆಲವೆಡೆ ಮಳೆ ಸುರಿಯಲು ಆರಂಭವಾಗಿದೆ. ಹಲವೆಡೆ ಮೋಡಕವಿದ ವಾತಾವರಣ ಇದೆ. ಸಂಜೆ ನಂತರ ಗುಡುಗು ಸಹಿತ ಮಳೆಯಾಗುವ ಸಾಧ್ಯಾತೆ ಇದೆ. ಹೀಗಾಗಿ ತಗ್ಗು ಪ್ರದೇಶದ ಜನರು ಹಾಗೂ ರಾಜಾಕಾಲುವೆ ಅಕ್ಕಪಕ್ಕ ವಾಸಿಸುವ ಜನರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಮುನ್ಸೂನೆ ನೀಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Tue, 9 May 23