ಬೆಂಗಳೂರು, ನ.09: ಸಿಲಿಕಾನ್ ಸಿಟಿಯಲ್ಲಿ ಕಳೆದ ಎರಡು-ಮೂರು ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ (Bengaluru Rains). ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಅನೇಕ ಕಡೆ ಅವಘಡಗಳು ಸಂಭವಿಸಿವೆ. ನಗರದ ಕೆಲ ಕಡೆ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮನೆ ಮುಂದೆ ನಿಲ್ಲಿಸಿದ ಕಾರು-ಬೈಕ್ಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿವೆ. ಯಲಹಂಕದ ಕೋಗಿಲೆ ಕ್ರಾಸ್ ಬಳಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ಸ್ಥಳಕ್ಕೆ ಬಾರದ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಪ್ರತಿ ಭಾರಿ ಮಳೆ ಬಂದಾಗಲೂ ಇದೇ ರೀತಿಯ ಸಮಸ್ಯೆಯಾಗುತ್ತೆ. ನೂರಾರು ಭಾರಿ ದೂರು ಕೊಟ್ಟರೂ ಪಾಲಿಕೆ ಕ್ಯಾರೇ ಅಂದಿಲ್ಲ ಎಂದು ಬಿಬಿಎಂಪಿ (BBMP) ವಿರುದ್ಧ ಸ್ಥಳೀಯರು ಗರಂ ಆಗಿದ್ದಾರೆ.
ರಾತ್ರಿ ಸುರಿದ ಮಳೆಯಿಂದಾಗಿ ಯಲಹಂಕದ ಕೋಗಿಲೆ ಕ್ರಾಸ್ ಬಳಿ ಬೃಹತ್ ಮಟ್ಟದಲ್ಲಿ ನೀರು ಹರಿಯುತ್ತಿದೆ. ಇದರಿಂದ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. ವಾಹನ ಸವಾರರು ಪರದಾಡುತ್ತಿದ್ಧಾರೆ. ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಬಂದಿಲ್ಲ. ಸಮಸ್ಯೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಪ್ರತಿ ಭಾರಿ ಮಳೆ ಬಂದಾಗಲೂ ಇದೇ ರೀತಿಯ ಸಮಸ್ಯೆಯಾಗುತ್ತೆ. ನೂರಾರು ಭಾರಿ ದೂರು ಕೊಟ್ರು ಕ್ಯಾರೇ ಅನ್ನುತ್ತಿಲ್ಲ. ರಸ್ತೆಗಳಲ್ಲಿ ಮಂಡಿಯಷ್ಟು ನೀರು ನಿಂತಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಪಾಲಿಕೆ ಆಯುಕ್ತರು ಸಹ ಬಂದು ಪರಿಶೀಲನೆ ಮಾಡಿದ್ರು. ಆದ್ರೆ ಹೆಸರಿಗೆ ಮಾತ್ರ ಬಂದು ನೋಡಿ ಜನರ ಪ್ರಶ್ನೆಗೆ ಉತ್ತರ ನೀಡದೆ ಹೋಗಿದ್ರು. ಇಲ್ಲಿ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸ್ಥಳೀಯರು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಮಳೆ ನೀರು ನುಗ್ಗಿ ಸಮಸ್ಯೆಯಾದ್ರು ಸಂಬಂಧ ಪಟ್ಟಂತಹ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆ ಸ್ಥಳೀಯ ಸಚಿವ ಕೃಷ್ಣ ಬೈರೇಗೌಡ ವಿರುದ್ದ ಜನ ಆಕ್ರೋಶ ಹೊರ ಹಾಕಿದ್ದಾರೆ. ಯಲಹಂಕದ ಬಿಬಿಎಂಪಿ ಅಫೀಸ್ ವರೆಗೆ ಕಾಲ್ನೆಡೆಗೆ ಮೂಲಕ ಬಂದು ಕೃಷ್ಣ ಬೈರೇಗೌಡ ಅವರಿಗೆ ದೂರು ನೀಡಲು ಮುಂದಾಗಿದ್ದಾರೆ. ಬಿಬಿಎಂಪಿ ಆಫೀಸ್ ನಲ್ಲಿ ಸಭಾ ಕಾರ್ಯಕ್ರಮ ನಡೆಯುತ್ತಿದ್ದು ಕಾರ್ಯಕ್ರಮದ ವೇದಿಕೆಯಲ್ಲಿ ಸಚಿವರು ಉಪಸ್ಥಿತರಿರಲಿದ್ದಾರೆ. ಹೀಗಾಗಿ ಜನ ರಸ್ತೆಯಲ್ಲಿಯೇ ನಿಂತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಸಮಸ್ಯೆಯನ್ನ ಆಲಿಸುವ ವರೆಗೂ ನಾವು ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: Karnataka Weather: ಬೆಂಗಳೂರು ಸೇರಿ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯೊಳಗೆ ಧಾರಾಕಾರ ಮಳೆ
ಸಹಕಾರ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಹೀಗಾಗಿ ಬಿಬಿಎಂಪಿ ವಿರುದ್ಧ ಘೋಷಣೆ ಕೂಗಿ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ರಸ್ತೆ ತಡೆದು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿ ಭಾರಿ ನೀರು ತುಂಬಿ ಅಪಾರ ಹಾನಿಯಾಗ್ತಿದೆ. ನಮ್ಮ ಪರಿಸ್ಥಿತಿಗೆ ಬಿಬಿಎಂಪಿ ಅಧಿಕಾರಿಗಳು ಸ್ಫಂದಿಸ್ತಿಲ್ಲ. ರಾಜಕಾಲುವೆ ಒತ್ತುವರಿ ತೆರವು ಮಾಡಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ. ಈ ಕೂಡಲೇ ಇಲ್ಲಿನ ಎಂಎಲ್ಎ ಸ್ಥಳಕ್ಕೆ ಬರಲೇ ಬೇಕು ಎಂದು ಘೋಷಣೆ ಕೂಗಿ ಸಹಕಾರ ನಗರದ ಜನರು ಆಕ್ರೋಶ ಹೊರ ಹಾಕಿದ್ದಾರೆ. ಮಳೆ ನೀರು ಸಾಗಲು ಸಮರ್ಪಕ ವ್ಯವಸ್ಥೆ ಮಾಡಲು ಆಗ್ರಹಿಸಿದ್ದಾರೆ. ಇನ್ನ ಎಷ್ಟು ವರ್ಷಗಳ ಕಾಲ ನಾವು ಇದೇ ರೀತಿ ಸಮಸ್ಯೆ ಅನುಭವಿಸಬೇಕು ಎಂದು ಪ್ರಶ್ನಿಸಿದ್ದಾರೆ.
ರಾಜ್ಯಾದ್ಯಂತ ಇನ್ನೂ ಮೂರು ದಿನಗಳ ಕಾಲ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬೆಂಗಳೂರು ನಗರದಲ್ಲಿ ಇಂದು, ನಾಳೆ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ ಸೇರಿದಂತೆ ಹಲವೆಡೆ ಮಳೆ ಆಗಲಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಮೈಸೂರು, ತುಮಕೂರು, ಶಿವಮೊಗ್ಗ, ವಿಜಯನಗರ ಜಿಲ್ಲೆಯಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ