
ಬೆಂಗಳೂರು, ನವೆಂಬರ್ 25: ದ್ವಿಚಕ್ರ ವಾಹನಗಳಲ್ಲಿ ಮಕ್ಕಳು ಹಿಂಬದಿ ಸವಾರರಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಗರಿಷ್ಠ ವೇಗದ ಮಿತಿ ನಿಗದಿಪಡಿಸುವ ಹಾಗೂ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಕೇಂದ್ರ ಮೋಟಾರು ವಾಹನ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ (Karnataka High Court) ಇತ್ತೀಚೆಗೆ ನಿರ್ದೇಶಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಟ್ರಾಫಿಕ್ ಪೊಲೀಸರು (Bengaluru Traffic Police), ಬೇಜವಾಬ್ದಾರಿಯುತವಾಗಿ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ (Two Wheeler) ಕರೆದೊಯ್ಯುವ ಪೋಷಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಮುಂದಿನ ಆರು ತಿಂಗಳ ಒಳಗಾಗಿ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ನಿಯಮಗಳನ್ನು ಪರಿಷ್ಕೃತಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಕುರಿತಾಗಿ ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದ್ದು, 9 ತಿಂಗಳಿನಿಂದ 4 ವರ್ಷದ ವಯೋಮಾನದ ಮಕ್ಕಳೂ ಕೂಡ ಹೆಲ್ಮೆಟ್ ಧರಿಸುವುದು ಅನಿವಾರ್ಯ. ಎಲ್ಲರ ಜೀವವೂ ಅತ್ಯಮೂಲ್ಯ. ಅಪಘಾತ ಯಾವಾಗ ಬೇಕಿದ್ದರೂ ಸಂಭವಿಸಬಹುದು, ಹೀಗಾಗಿ ನಿರ್ಲಕ್ಷ್ಯ ಬೇಡ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಹೆಲ್ಮೆಟ್ಗಳು ಲಭ್ಯವಿದ್ದು, ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಗ್ರಾಹಕರ ಕೈಗೆಟುಕುತ್ತಿವೆ ಎಂದೂ ಅವರು ಹೇಳಿದ್ದಾರೆ. ಮಕ್ಕಳಿಗೆ ಹೆಲ್ಮಟ್ ಕೊಡಿಸುವುದರಲ್ಲಿ ಬೆಂಗಳೂರಿನ ಪೋಷಕರು ಹಿಂದೆ ಉಳಿದಿದ್ದು, ಅನಾಹುತಗಳಿಗೆ ಮುನ್ನ ಮುಂಜಾಗ್ರತೆ ವಹಿಸುವುದು ಉತ್ತಮ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ಏತನ್ಮಧ್ಯೆ, ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಇತ್ತೀಚೆಗೆ ಹಲವು ಉಪಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ‘ಒಂದು ದಿನ ಪೊಲೀಸ್ ಆಗಿ’ ಎಂಬ ಉಪಕ್ರಮವನ್ನು ಇತ್ತೀಚೆಗಷ್ಟೇ ಹಮ್ಮಿಕೊಂಡಿದ್ದು, ಟ್ರಾಫಿಕ್ ಪೊಲೀಸರ ಕಷ್ಟ ಏನೆಂಬುದರ ಬಗ್ಗೆ ಸಾಮಾನ್ಯರಿಗೂ ಅರಿವು ಮೂಡಿಸಿ ಆ ಮೂಲಕ ಸಂಚಾರ ನಿಯಮಗಳ ಉಲ್ಲಂಘನೆ ತಡೆಯಲು ಪ್ರಯತ್ನಿಸಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ನಿವಾರಣೆಗೆ ಕೃತಕ ಬುದ್ಧಿಮತ್ತೆ ಮೊರೆ ಹೋಗಲಿದ್ದಾರೆ ಪೊಲೀಸರು: ಏನಿದರ ಪ್ರಯೋಜನ? ಇಲ್ಲಿದೆ ವಿವರ
‘ಟ್ರಾಫಿಕ್ ಬ್ಯಾರಿಕೇಡ್‌ನ ಇನ್ನೊಂದು ಬದಿಯಲ್ಲಿ ನಿಂತರೆ ಹೇಗಿರುತ್ತದೆ ಅಂತ ಎಂದಾದರೂ ಯೋಚಿಸಿದ್ದೀರಾ?’ ‘ಒಂದು ದಿನ ಪೊಲೀಸ್ ಆಗಿ’ ಎನ್ನುವ ಉಪಕ್ರಮವನ್ನು ನೀವೂ ಅನುಭವಿಸಿ, ಸರ್ಟಿಫಿಕೇಟ್ ಗಳಿಸಿ! ಈಗಲೇ BTP ASTraM ಆಪ್‌ನಲ್ಲಿ ನೋಂದಣಿ ಮಾಡಿ’ ಎಂದು ಕೆಲವು ದಿನಗಳ ಹಿಂದೆ ಬೆಂಗಳೂರು ಸಂಚಾರ ಪೊಲೀಸರು ಎಕ್ಸ್ ಮೂಲಕ ಮನವಿ ಮಾಡಿದ್ದರು.
ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು