ಬೆಂಗಳೂರು: 12 ಬಾಂಗ್ಲಾ ಮೂಲದವರ ಆಧಾರ್(Aadhaar) ದಾಖಲೆ ಪರಿಶೀಲನೆಗೆ ಹೈಕೋರ್ಟ್(High Court) ಅನುಮತಿ ನೀಡಿದೆ. ದಾಖಲೆ ಪರಿಶೀಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ನ್ಯಾ. ಕೃಷ್ಣ ಎಸ್. ದೀಕ್ಷಿತ್ ರವರಿದ್ದ ಏಕಸದಸ್ಯ ಪೀಠ ಅನುಮತಿ ನೀಡಿದೆ. ಬಾಂಗ್ಲಾ ಮೂಲದ 12 ಜನರು ಆಧಾರ್ ಕಾರ್ಡ್ ಪಡೆದಿದ್ದರು. ಆಧಾರ್‌ಗಾಗಿ ನಕಲಿ ದಾಖಲೆ ಸಲ್ಲಿಸಿರುವುದಾಗಿ NIA ಆರೋಪ ಮಾಡಿತ್ತು. ಅಲ್ಲದೆ ಎನ್ಐಎಗೆ ದಾಖಲೆ ನೀಡುವುದಕ್ಕೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರಕ್ಕೆ (ಯುಐಡಿಎಐ) ನಿರಾಕರಿಸಿತ್ತು. ಹೀಗಾಗಿ ಎನ್ಐಎ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು ಹೈಕೋರ್ಟ್ ಪರಿಶೀಲನೆಗೆ ಅಸ್ತು ಎಂದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬಾಂಗ್ಲಾ ಮೂಲದವರು
ಆಧಾರ್ ಕಾರ್ಡ್ ಪಡೆಯಲು 12 ಬಾಂಗ್ಲಾದೇಶಿ ಪ್ರಜೆಗಳು ಸಲ್ಲಿಸಿದ ದಾಖಲೆಗಳು ಎನ್‌ಐಎಗೆ ನೀಡುವಂತೆ ಕರ್ನಾಟಕ ಹೈಕೋರ್ಟ್ ಬುಧವಾರ ಯುಐಡಿಎಐ ನಿರ್ದೇಶನ ನೀಡಿದೆ. ಎಲ್ಲಾ 12 ಆರೋಪಿಗಳು ಪ್ರಸ್ತುತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠವು ತನ್ನ ತೀರ್ಪಿನಲ್ಲಿ, 12 ಬಾಂಗ್ಲಾದೇಶಿ ಪ್ರಜೆಗಳು ಆಧಾರ್ ಕಾರ್ಡ್ ಪಡೆಯಲು ವಂಚನೆ, ಫೋರ್ಜರಿ ಮಾಡಿದ್ದಾರೆ. ನಕಲಿ ದಾಖಲೆ ಸಲ್ಲಿಸಿದ್ದಾರೆ ಎಂಬ ಆರೋಪವಿರುವುದರಿಂದ, ಅರ್ಜಿದಾರರು ಕೋರಿರುವ ಮಾಹಿತಿ, ದಾಖಲೆಗಳನ್ನು ಯುಐಡಿಎಐ ನೀಡಬೇಕು.”ಆಧಾರ್ ಪಡೆಯಲು ಸಲ್ಲಿಸಿದ ಮೂಲ ಅಥವಾ ಇತರ ದಾಖಲೆಗಳನ್ನು ಎನ್ಐಎಗೆ ನೀಡಬೇಕು, ಇದನ್ನು ಎರಡು ವಾರಗಳಲ್ಲಿ ಮಾಡಬೇಕಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಏಪ್ರಿಲ್ 22 ರಂದು, ಯುಐಡಿಎಐ ಆಧಾರ್ ಕಾಯಿದೆಯ ಸೆಕ್ಷನ್ 33 ಅನ್ನು ಉಲ್ಲೇಖಿಸಿ ಕೇಂದ್ರ ಏಜೆನ್ಸಿಗೆ ದಾಖಲೆಗಳನ್ನು ನೀಡಲು ನಿರಾಕರಿಸಿತ್ತು. ಯುಐಡಿಎಐ ವಿಭಾಗವು ‘ಕೆಲವು ಸಂದರ್ಭಗಳಲ್ಲಿ ಮಾಹಿತಿಯ ಬಹಿರಂಗಪಡಿಸುವಿಕೆಯನ್ನು’ ನಿರ್ಬಂಧಿಸುತ್ತದೆ. ಹೀಗಾಗಿ ದಾಖಲೆ ನೀಡಲು ನಿರಾಕರಿಸಿತ್ತು. ಸದ್ಯ ಈಗ ಕೋರ್ಟ್ ಆದೇಶ ಹಿನ್ನೆಲೆ ದಾಖಲೆ ನೀಡಬೇಕಾಗಿದೆ.
ಇನ್ನು ಎನ್‌ಐಎ ವಕೀಲ ಪಿ ಪ್ರಸನ್ನ ಕುಮಾರ್ ಅವರು ತಮ್ಮ ವಾದದಲ್ಲಿ, ಸೆಕ್ಷನ್ 33 ರ ನಿರ್ಬಂಧವು “ಚೀನಾದ ಮಹಾಗೋಡೆಯಲ್ಲ” ಎಂದು ವಾದ ಮಂಡಿಸಿದ್ದಾರೆ. ಆದಾಗ್ಯೂ, ಯುಐಡಿಎಐನಿಂದ ಅಂತಹ ದಾಖಲೆಗಳನ್ನು ಪಡೆಯಲು ಹೈಕೋರ್ಟ್‌ನ ಅನುಮತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ವಾದಿಸಿದ್ದಾರೆ. ಯುಐಡಿಎಐ ಪರ ವಾದ ಮಂಡಿಸಿದ ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಶಾಂತಿ ಭೂಷಣ್ ಎಚ್, ಹೈಕೋರ್ಟ್‌ನ ಅನುಮತಿಯನ್ನು ಎನ್‌ಐಎ ತೆಗೆದುಕೊಳ್ಳಬೇಕೇ ಹೊರತು ಯುಐಡಿಎಐ ಅಲ್ಲ ಎಂದಿದ್ದಾರೆ.
ಘಟನೆ ಹಿನ್ನೆಲೆ
ಬಾಂಗ್ಲಾದೇಶದ ಮಹಿಳೆಯನ್ನು ಕೆಲಸ ಕೊಡಿಸುವುದಾಗಿ ಕರೆತಂದು ಸಾಮೂಹಿಕ ಅತ್ಯಾಚಾರ ನಡೆಸಿ ವೇಶ್ಯಾವಾಟಿಕೆಗೆ ತಳ್ಳಿದ ಆರೋಪ
ಅಶ್ರಫುಲ್ ಇಸ್ಲಾಂ ಸೇರಿದಂತೆ 12 ಜನರ ಮೇಲಿತ್ತು. ಕೃತ್ಯಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ರಾಮಮೂರ್ತಿ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ನಂತರ ತನಿಖೆ ಕೈಗೆತ್ತಿಕೊಂಡ ಎನ್ಐಎ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಬಾಂಗ್ಲಾದೇಶ ಮೂಲದ 12 ಆರೋಪಿಗಳು ಆಧಾರ್ ಕಾರ್ಡ್ ಪಡೆದಿರುವುದೂ ಬೆಳಕಿಗೆ ಬಂದಿತ್ತು. ಆಧಾರ್ ಕಾರ್ಡ್ ಪಡೆಯಲು ಈ ದುಷ್ಕರ್ಮಿಗಳು ಸಲ್ಲಿಸಿದ್ದ ದಾಖಲೆ ನೀಡುವಂತೆ ಯುನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ – ಯುಐಡಿಎಐ ಗೆ ಎನ್ಐಎ ಮನವಿ ಮಾಡಿತ್ತು. ಆದರೆ ಆಧಾರ್ ಕಾಯ್ದೆಯ ಸೆ.33 ರಡಿ ಗೌಪ್ಯತೆ ನಿಯಮ ಉಲ್ಲೇಖಿಸಿದ್ದ ಯುಐಡಿಎಐ ದಾಖಲೆ ನೀಡಲು ನಿರಾಕರಿಸಿತ್ತು. ಹೀಗಾಗಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದ ಎನ್ಐಎ ಯುಐಡಿಎಐ ಗೆ ದಾಖಲೆ ನೀಡುವಂತೆ ನಿರ್ದೇಶನ ನೀಡಲು ಮನವಿ ಮಾಡಿತ್ತು. ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ರವರಿದ್ದ ಏಕಸದಸ್ಯ ಪೀಠ ಯುಐಡಿಎಐ ಬಳಿ ಇರುವ ದಾಖಲೆ ಪರಿಶೀಲಿಸಲು ಎನ್ಐಎಗೆ ಅನುಮತಿ ನೀಡಿದೆ. ಎರಡು ವಾರದಲ್ಲಿ ದಾಖಲೆ ಪರಿಶೀಲಿಸಲು ಅವಕಾಶ ನೀಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:50 pm, Wed, 10 August 22