ಎಸಿಬಿಗೆ ಕಳಂಕಿತ ಅಧಿಕಾರಿಗಳನ್ನು ನೇಮಿಸದಂತೆ ಸರ್ಕಾರಕ್ಕೆ ಹೈಕೋರ್ಟ್​​ ಸೂಚನೆ

| Updated By: ವಿವೇಕ ಬಿರಾದಾರ

Updated on: Jul 11, 2022 | 4:47 PM

ಎಸಿಬಿಗೆ ಕಳಂಕಿತ ಅಧಿಕಾರಿಗಳನ್ನು ನೇಮಿಸದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಎಸಿಬಿಗೆ ಕಳಂಕಿತ ಅಧಿಕಾರಿಗಳನ್ನು ನೇಮಿಸದಂತೆ ಸರ್ಕಾರಕ್ಕೆ ಹೈಕೋರ್ಟ್​​ ಸೂಚನೆ
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಎಸಿಬಿಗೆ (ACB) ಕಳಂಕಿತ ಅಧಿಕಾರಿಗಳನ್ನು ನೇಮಿಸದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ (Government Chief Secretary) ಅವರಿಗೆ ಹೈಕೋರ್ಟ್ (High Court) ಸೂಚನೆ ನೀಡಿದೆ. ಎಸಿಬಿಗೆ ಅಧಿಕಾರಿ ನೇಮಿಸುವಾಗ ಸಾರ್ವಜನಿಕ ಹಿತಾಸಕ್ತಿ ಗಮನಿಸಬೇಕು. ಭ್ರಷ್ಟಾಚಾರ (Corruption) ತಡೆಯಲೆಂದೇ ಎಸಿಬಿಯನ್ನು ರಚಿಸಲಾಗಿದೆ. ಎಸಿಬಿಗೆ ಅಧಿಕಾರಿಯಾಗುವವರಿಗೆ ವಿಶ್ವಾಸಾರ್ಹತೆ ಇರಬೇಕು. ಎಸಿಬಿ ಘನತೆಯನ್ನು ಉನ್ನತ ಹಂತಕ್ಕೆ ಒಯ್ಯುವ ಕ್ಷಮತೆ ಇರಬೇಕು. ಸರ್ವಿಸ್ ರೆಕಾರ್ಡ್, ಅಧಿಕಾರಿಯ ಸಮಗ್ರತೆಯನ್ನು ಪರಿಗಣಿಸಬೇಕು ಎಂದು ಸೂಚಿಸಿದೆ.

ಡಿಪಿಎಆರ್‌ ಕಾರ್ಯದರ್ಶಿ ಈ ಮಾಹಿತಿ ಒದಗಿಸಬೇಕು. ಯಾವುದೇ ಒತ್ತಡಕ್ಕೆ ಒಳಗಾಗದಂತೆ ನೇಮಕ ನಡೆಸಬೇಕು. ಅಧಿಕಾರಿ ನೇಮಕ ಹಿಂದೆ ಆಂತರಿಕ, ಬಾಹ್ಯ ಪ್ರಭಾವ ಇರಬಾರದು. ಅಧಿಕಾರಿ ವಿರುದ್ಧ ಎಸಿಬಿ, ಲೋಕಾಯುಕ್ತ ತನಿಖೆ ನಡೆಯುತ್ತಿರಬಾರದು. ಅವರ ಕುಟುಂಬದವರ ವಿರುದ್ಧವೂ ತನಿಖೆ ನಡೆಯುತ್ತಿರಬಾರದು. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ, DPAR ಕಾರ್ಯದರ್ಶಿಗೆ ಹೈಕೋರ್ಟ್​ ಸೂಚನೆ ನೀಡಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ವಿರುದ್ಧದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ನಲ್ಲಿ ಸೋಮವಾರ (ಜುಲೈ 11) ವಿಚಾರಣೆ ನಡೆಯಿತು. ಈ ವೇಳೆ ನ್ಯಾಯಮೂರ್ತಿಗಳ ಎದುರು ವಾದ ಮಂಡಿಸಿದ ಸಿಬಿಐ ಪರ ವಕೀಲ ಪ್ರಸನ್ನ, ಅಧಿಕಾರಿಗಳ ವಿರುದ್ಧ ತನಿಖೆಗೆ ಸಿಬಿಐ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು ನಿಜ. ಆದರೆ ತನಿಖೆ ನಡೆಸಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಇಲ್ಲ ಎಂದರು. ಹೈಕೋರ್ಟ್ ಏಕಸದಸ್ಯಪೀಠದಲ್ಲಿ ಮಂಜುನಾಥ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಿತು.

ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಆರೋಪಗಳಿರುವ ಹಿನ್ನೆಲೆಯಲ್ಲಿ ಸಿಬಿಐ ಪರ ವಕೀಲ ಪ್ರಸನ್ನಕುಮಾರ್​ ಮೆಮೊ ದಾಖಲಿಸಿದರು. ಸೀಮಂತ್ ಕುಮಾರ್ ಸಿಂಗ್ ವಿರುದ್ಧ ದಾಳಿ ನಡೆಸಲಾಗಿತ್ತೆ ಎಂದು ಸಿಬಿಐ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನೆ ಕೇಳಿತು. ಅಧಿಕಾರಿಗಳ ವಿರುದ್ಧ ತನಿಖೆಗೆ ಮನವಿ ಮಾಡಲಾಗಿತ್ತು ಎಂದಷ್ಟೇ ಸಿಬಿಐ ವಕೀಲರು ಪ್ರತಿಕ್ರಿಯಿಸಿದರು. ಜುಲೈ 13ಕ್ಕೆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.  

ಏನಿದು ಪ್ರಕರಣ?

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮಾಜಿ ಜಿಲ್ಲಾಧಿಕಾರಿ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದ ಅಧಿಕಾರಿಗಳು ‘ಜಿಲ್ಲಾಧಿಕಾರಿ ಸೂಚನೆ ಮೇರೆ ಲಂಚ ಪಡೆದಿದ್ದೇವೆ’ ಎಂದು ಹೇಳಿಕೊಂಡಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಆಗ ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಮಂಜುನಾಥ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು.

ಪ್ರಭಾವಕ್ಕೆ ಒಳಗಾಗಿ ಎಸಿಬಿ ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಹೈಕೋರ್ಟ್ ಚಾಟಿ ಬೀಸಿತ್ತು. ಅನಂತರವೇ ಮಂಜುನಾಥ್ ಅವರನ್ನು ಬಂಧಿಸಲಾಯಿತು. ಈ ವೇಳೆ ನ್ಯಾಯಮೂರ್ತಿ ಸಂದೇಶ್ ಅವರು ಆಡಿದ್ದ ಮಾತುಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದವು.

Published On - 4:47 pm, Mon, 11 July 22