ಅಕ್ರಮ ವಲಸಿಗರನ್ನ ತೋರಿಸಿದ್ರೂ ಕೇಸ್ ಹಾಕ್ತೀರಿ: ಪೊಲೀಸರಿಗೆ ಕೋರ್ಟ್ ಕ್ಲಾಸ್, ಪುನೀತ್ ಕೆರೆಹಳ್ಳಿಗೆ ರಿಲೀಫ್

ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಪ್ರಶ್ನಿಸಿದ್ದ ಪುನೀತ್ ಕೆರೆಹಳ್ಳಿ ಮೇಲಿನ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ. ಸರ್ಕಾರ ಅಕ್ರಮ ವಲಸಿಗರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಏಕಸದಸ್ಯ ಪೀಠ ಪ್ರಶ್ನಿಸಿದೆ. ಮತ್ತೊಂದೆಡೆ, ಕೋಗಿಲು ಬಡಾವಣೆಯಲ್ಲಿನ ಅಕ್ರಮ ವಸತಿ ತೆರವು ಪ್ರಕರಣದಲ್ಲಿ, ಪುನರ್ವಸತಿ ಕುರಿತು ವರದಿ ನೀಡಲು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಅಕ್ರಮ ವಲಸಿಗರನ್ನ ತೋರಿಸಿದ್ರೂ ಕೇಸ್ ಹಾಕ್ತೀರಿ: ಪೊಲೀಸರಿಗೆ ಕೋರ್ಟ್ ಕ್ಲಾಸ್, ಪುನೀತ್ ಕೆರೆಹಳ್ಳಿಗೆ ರಿಲೀಫ್
ಹೈಕೋರ್ಟ್
Image Credit source: Wikimedia
Edited By:

Updated on: Feb 04, 2026 | 3:36 PM

ಬೆಂಗಳೂರು, ಫೆಬ್ರವರಿ 04: ಅಕ್ರಮ ಬಾಂಗ್ಲಾ ವಲಸಿಗರ ವಿಚಾರವಾಗಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ (Puneeth Kerehalli) ವಿರುದ್ಧ ಎರಡೆರಡು ಕೇಸ್​ಗಳು ದಾಖಲಾಗಿದ್ದವು. ಇದೀಗ ಹೈಕೋರ್ಟ್ ಏಕಸದಸ್ಯ ಪೀಠ ಪುನೀತ್ ಕೆರೆಹಳ್ಳಿ ವಿರುದ್ಧದ ಒಂದು ಪ್ರಕರಣಕ್ಕೆ ತಡೆ ನೀಡಿದ್ದು, ಮತ್ತೊಂದು ಪ್ರಕರಣದಲ್ಲಿ ಬಲವಂತದ ಕ್ರಮಕೈಗೊಳ್ಳದಂತೆ ಆದೇಶ ಹೊರಡಿಸಿದೆ. ಆ ಮೂಲಕ ಹಿಂದೂ ಕಾರ್ಯಕರ್ತನಿಗೆ ಕೊಂಚ್​​ ರಿಲೀಫ್ ಸಿಕ್ಕಂತಾಗಿದೆ.

ಹೈಕೋರ್ಟ್ ಏಕಸದಸ್ಯ ಪೀಠ ಇಂದು ಪ್ರಕರಣದ ವಿಚಾರಣೆ ಮಾಡಿದ್ದು, ಎಲ್ಲೆಡೆ ಅಕ್ರಮ ವಲಸಿಗರು ಬಂದು ಸೇರಿದ್ದಾರೆ. ಅಕ್ರಮ ವಲಸಿಗರಿದ್ದಾರೆಂದು ತೋರಿಸಿದರೂ ಕೇಸ್ ಹಾಕುತ್ತೀರಿ ಎಂದು ಪೊಲೀಸರನ್ನ ತರಾಟೆ ತೆಗೆದುಕೊಂಡ ಪೀಠ ವಲಸಿಗರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಾ ತಿಳಿಸಿ ಎಂದು ಸರ್ಕಾರವನ್ನ ಪ್ರಶ್ನಿಸಿದೆ. ಸರ್ಕಾರದ ಪ್ರತಿಕ್ರಿಯೆಗಾಗಿ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಲಾಗಿದೆ.

ಇದನ್ನೂ ಓದಿ: ವಲಸಿಗರ ಶೆಡ್​ಗೆ ನುಗ್ಗಿ ಬೆದರಿಕೆ: ಪುನೀತ್​ ಕೆರೆಹಳ್ಳಿಗೆ ಜಾಮೀನು; ಹೋರಾಟ ಆರಂಭವೆಂದ ಹಿಂದೂ ಕಾರ್ಯಕರ್ತ

ಕಳೆದ ಕೆಲ ದಿನಗಳ ಹಿಂದೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಬಿಂಗೀಪುರ ಗ್ರಾಮದಲ್ಲಿ ಶಂಕಿತ ಬಾಂಗ್ಲಾ ವಲಸಿಗರು ಇರುವ ಜಾಗಕ್ಕೆ ಪುನೀತ್ ಕೆರೆಹಳ್ಳಿ ತಂಡ ತೆರಳಿದ್ದರು. ಅಲ್ಲಿದ್ದ ವಲಸೆ ಕಾರ್ಮಿಕರ ದಾಖಲೆಗಳನ್ನ ಪರಿಶೀಲನೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದರು. ಇದಾದ ಬಳಿಕ ಜಾಗದ ಮಾಲೀಕ ಸಿದ್ದೇಶ್ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ, ಡಾ.ನಾಗೇಂದ್ರಪ್ಪ ಸೇತಿದಂತೆ ಇತರರ ವಿರುದ್ಧ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು.

ಪ್ರಕರಣ ದಾಖಲು ಮಾಡಿಕೊಂಡಿದ್ದ ಬನ್ನೇರುಘಟ್ಟ ಪೊಲೀಸರು ತಡರಾತ್ರಿ ಪುನೀತ್ ಕೆರೆಹಳ್ಳಿಯನ್ನ ಬಂಧಿಸಿದ್ದರು. ಬಳಿಕ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಆ ಬೆನ್ನಲ್ಲೇ ಷರತ್ತುಬದ್ಧ ಜಾಮೀನು ಪಡೆದಿದ್ದರು. ಸದ್ಯ ಇದೇ ಪ್ರಕರಣಕ್ಕೆ ತಡೆ ನೀಡಲಾಗಿದೆ.

ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ

ಇನ್ನು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಪತ್ತೆ ಕಾರ್ಯಾಚರಣೆಗೆ ಮುಂದಾಗಿದ್ದಾಗ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದರು. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಏಕಸದಸ್ಯ ಪೀಠ ಸೂಚನೆ ನೀಡಿ ಆದೇಶ ಹೊರಡಿಸಿದೆ.

ಪುನರ್ವಸತಿ ಬಗ್ಗೆ ವರದಿ ನೀಡಲು ಸೂಚನೆ

ಇನ್ನು ಕೋಗಿಲು ಬಡಾವಣೆಯಲ್ಲಿ ಅಕ್ರಮ ವಸತಿಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುನರ್ವಸತಿ ಮತ್ತು ಪರಿಹಾರ ಕೋರಿ ಇತ್ತೀಚೆಗೆ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇಂದು ವಿಚಾರಣೆ ನಡೆದಿದೆ.

ಇದನ್ನೂ ಓದಿ: ಕೋಗಿಲು ಅಕ್ರಮ ವಸತಿ ತೆರವು ಪ್ರಕರಣ: ಹೈಕೋರ್ಟ್​​ಗೆ ಪಿಐಎಲ್ ಸಲ್ಲಿಕೆ; ಬೇಡಿಕೆಗಳೇನು?

ಈ ವೇಳೆ 7 ಜನರಿಗೆ ನಿವೇಶನ ಮಂಜೂರಾದ ಬಗ್ಗೆ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ಅವರಲ್ಲಿ ನಾಲ್ವರಿಗೆ ನಿವೇಶನ ಮಂಜೂರಾದ ದಾಖಲೆ ಇಲ್ಲ. ಮೂವರಿಗೆ ವಿವಾದಿತ ಜಾಗದಲ್ಲಿ ನಿವೇಶನ ಮಂಜೂರಾಗಿಲ್ಲ ಹಾಗೂ ಪುನರ್ವಸತಿ ಕೇಂದ್ರಗಳಿಗೆ ಜನರು ಬರುತ್ತಿಲ್ಲವೆಂದು ಹೈಕೋರ್ಟ್​ಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಸದ್ಯ ಪ್ರಕರಣದಲ್ಲಿ ಅಮೈಕಸ್ ಕ್ಯೂರಿಯಾಗಿ ಬಿ.ವಿ.ವಿದ್ಯುಲ್ಲತಾರನ್ನು ನೇಮಿಸಿದ ಹೈಕೋರ್ಟ್, ಪುನರ್ವಸತಿ ಬಗ್ಗೆ ವರದಿ ನೀಡಲು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:32 pm, Wed, 4 February 26