AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಲಸಿಗರ ಶೆಡ್​ಗೆ ನುಗ್ಗಿ ಬೆದರಿಕೆ: ಪುನೀತ್​ ಕೆರೆಹಳ್ಳಿಗೆ ಜಾಮೀನು; ಹೋರಾಟ ಆರಂಭವೆಂದ ಹಿಂದೂ ಕಾರ್ಯಕರ್ತ

ಅಕ್ರಮ ಬಾಂಗ್ಲಾ ವಲಸಿಗರ ದಾಖಲೆ ಪರಿಶೀಲಿಸಿದ್ದ ಆರೋಪದಡಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಆನೇಕಲ್‌ನಲ್ಲಿ ಬಂಧಿಸಲಾಗಿತ್ತು. ಆದರೆ ಬಂಧನ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ಬೆನ್ನಲ್ಲೇ ಇದೀಗ ಪುನೀತ್‌ಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ಬಿಡುಗಡೆಯ ಬಳಿಕವೂ ಬಾಂಗ್ಲಾ ವಲಸಿಗರ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.

ವಲಸಿಗರ ಶೆಡ್​ಗೆ ನುಗ್ಗಿ ಬೆದರಿಕೆ: ಪುನೀತ್​ ಕೆರೆಹಳ್ಳಿಗೆ ಜಾಮೀನು; ಹೋರಾಟ ಆರಂಭವೆಂದ ಹಿಂದೂ ಕಾರ್ಯಕರ್ತ
ಪುನೀತ್​ ಕೆರೆಹಳ್ಳಿ
ರಾಮು, ಆನೇಕಲ್​
| Edited By: |

Updated on: Jan 17, 2026 | 9:34 PM

Share

ಆನೇಕಲ್, ಜನವರಿ 17: ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಪೌರತ್ವ ದಾಖಲೆಗಳನ್ನು ಪಡೆದು ಪರಿಶೀಲಿಸಿ ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದ ಆರೋಪದ ಹಿನ್ನೆಲೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನ (Puneeth Kerehalli) ಪೊಲೀಸರು ಬಂಧಿಸಿದ್ದರು. ಕೆರೆಹಳ್ಳಿ ಬಂಧನದ ಬಳಿಕ ಠಾಣೆ ಮುಂದೆ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಈ ಬೆನ್ನಲ್ಲೇ ಇದೀಗ ಪುನೀತ್ ಕೆರೆಹಳ್ಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಮತ್ತವರ ತಂಡ ಕಳೆದ ಕೆಲ ದಿನಗಳಿಂದ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಬಿಂಗೀಪುರ ಗ್ರಾಮದಲ್ಲಿ ಶಂಕಿತ ಬಾಂಗ್ಲಾ ವಲಸಿಗರು ಇರುವ ಬಗ್ಗೆ ಪುನೀತ್ ಕೆರೆಹಳ್ಳಿ ತಂಡ ತೆರಳಿದ್ದರು. ಅಲ್ಲಿದ್ದ ವಲಸೆ ಕಾರ್ಮಿಕರ ದಾಖಲೆಗಳನ್ನ ಪರಿಶೀಲನೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದಿಂದ ಬರೋ ರೈಲುಗಳಲ್ಲೇ ಬರ್ತಾರಾ ಬಾಂಗ್ಲಾ ಅಕ್ರಮ ವಲಸಿಗರು? ಬೆಂಗಳೂರಿನ ಭದ್ರತೆಗೆ ಭಾರಿ ಆತಂಕ

ಇದಾದ ಬಳಿಕ ಜಾಗದ ಮಾಲೀಕ ಸಿದ್ದೇಶ್ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ, ಡಾ.ನಾಗೇಂದ್ರಪ್ಪ ಸೇರಿದಂತೆ ಇತರರ ವಿರುದ್ಧ ವಲಸೆ ಕಾರ್ಮಿಕರ ಸ್ಥಳಗಳಿಗೆ ಅಕ್ರಮವಾಗಿ ಪ್ರವೇಶಿಸಿ, ಅವರ ಪೌರತ್ವ ಹಾಗೂ ಗುರುತಿನ ದಾಖಲೆಗಳನ್ನು ಕೇಳಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಬನ್ನೇರುಘಟ್ಟ ಪೊಲೀಸರು ತಡರಾತ್ರಿ ಪುನೀತ್ ಕೆರೆಹಳ್ಳಿಯನ್ನ ಬಂಧಿಸಿ ಠಾಣೆಗೆ ಕರೆತಂದಿದ್ದರು. ವಿಷಯ ತಿಳಿಯುತ್ತಿದ್ದಂತೆ ಠಾಣೆ ಬಳಿ ಹಿಂದೂ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿ ಬಾಂಗ್ಲಾ ವಲಸಿಗರಿಗೆ ಇರಲು ಸ್ಥಳ ನೀಡಿದ ಜಾಗದ ಮಾಲೀಕನ ಮೇಲೆ ಕ್ರಮವಾಗಬೇಕೆಂದು ಒತ್ತಾಯಿಸಿದರು.

ಇನ್ನು ಪುನೀತ್ ಕೆರೆಹಳ್ಳಿಯನ್ನ ವಿಚಾರಣೆ ನಡೆಸಿದ ಬನ್ನೇರುಘಟ್ಟ ಪೊಲೀಸರು ತದನಂತರ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸದ್ಯ ಪುನೀತ್ ಕೆರೆಹಳ್ಳಿಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು ತಲಾ 10 ಸಾವಿರ ರೂ ನಗದು ಶ್ಯೂರಿಟಿ ಹಾಗೂ ಪರ್ಸನಲ್ ಬಾಂಡ್ ಷರತ್ತು ವಿಧಿಸಲಾಗಿದೆ.

ಬಾಂಗ್ಲಾ ವಲಸಿಗರ ವಿರುದ್ಧ ನಮ್ಮ ಹೋರಾಟ ಹೋರಾಟ: ಪುನೀತ್ ಕೆರೆಹಳ್ಳಿ

ಜಾಮೀನು ಪಡೆದು ಕೋರ್ಟ್​​ನಿಂದ ಹೊರಬರುತ್ತಿದ್ದಂತೆ ಕಾರ್ಯಕರ್ತರು ಘೋಷಣೆ ಕೂಗಿ ಸಂಭ್ರಮಿಸಿದರು. ಇನ್ನೂ ಜಾಮೀನು ಸಿಕ್ಕ ಬಳಿಕ ಮಾತನಾಡಿದ ಪುನೀತ್ ಕೆರೆಹಳ್ಳಿ, ಬಾಂಗ್ಲಾ ವಲಸಿಗರ ವಿರುದ್ಧ ನಮ್ಮ ಹೋರಾಟ ಅಂತ್ಯ ಅಲ್ಲ, ಇಂದಿನಿಂದಲೇ ಹೋರಾಟ ಆರಂಭವಾಗಿದೆ. ಕಾಂಗ್ರೆಸ್ ಸರ್ಕಾರ ಅಕ್ರಮ ಬಾಂಗ್ಲಾ ವಲಸಿಗರ ಪರವಾಗಿದೆ, ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ ಹಚ್ಚುವ ಕೆಲಸ ಮಾಡಿದ್ದೇವೆ. ಎಡಪಂಥೀಯರ ಒತ್ತಡಕ್ಕೆ ಮಣಿದು ಸರ್ಕಾರ ರಾತ್ರಿ ವೇಳೆ ಬಂಧಿಸಿದೆ. ಠಾಣೆಯಲ್ಲೇ ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳಿವೆ, ಅದ್ರೂ ಕೂಡ ಬಂಧನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಉಪವಿಭಾದಲ್ಲಿ 34 ಮಂದಿ ಬಾಂಗ್ಲಾ ಅಕ್ರಮ ವಲಸಿಗರು ಪತ್ತೆ

ಸದ್ಯ ಪುನೀತ್ ಕೆರೆಹಳ್ಳಿ ಮತ್ತವರ ತಂಡಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಬಾಂಗ್ಲಾ ವಲಸಿಗರ ವಿರುದ್ಧ ಹೋರಾಟ ನಿಲ್ಲುವುದಿಲ್ಲ ಎಂದಿದ್ದಾರೆ. ಇನ್ನೊಂದೆಡೆ ವಲಸೆ ಕಾರ್ಮಿಕರಿಗೆ ಪುನೀತ್ ಕೆರೆಹಳ್ಳಿ ತಂಡ ಬೆದರಿಕೆ ಹಾಕುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬಂದಿವೆ. ಇದಕ್ಕೆ ಸರ್ಕಾರ ಮತ್ತು ಪೊಲೀಸರು ಯಾವ ರೀತಿ ಕ್ರಮಕೈಗೊಳ್ಳುತ್ತಾರೆ ಎನ್ನುವುದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.