ಬೆಂಗಳೂರು: ರಸ್ತೆ ಉದ್ದಕ್ಕೂ ರಾಶಿ ರಾಶಿ ಕಡಲೆಕಾಯಿ, ಹುರದಿದ್ದು, ಎರಡು ಬೀಜ, ಮೂರು ಬೀಜ ಅಷ್ಟೆ ಅಲ್ಲಾ, ಹಸಿ ಕಡಲೆಕಾಯಿ, ಬೇಯಿಸಿದ ಕಡಲೆಕಾಯಿ. ಹೀಗೆ ಎಂದೆಂದೂ ಸವಿಯದ ನಾನಾ ರೀತಿಯ ಕಡಲೆಕಾಯಿ ತಿನ್ನಬೇಕಿದ್ರೆ ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆಗೆ(Basavanagudi Kadlekai Parishe) ತಪ್ಪದೆ ಹಾಜರಾಗಬೇಕು. ಕಂಬಳಿ ಹೊದ್ದು ಮಲಗುವಂತಹ ಚುಮು ಚುಮು ಚಳಿಗೆ ಪರಿವಾರ, ಗೆಳೆಯರೊಂದಿಗೆ ಬಸವನಗುಡಿ ಸುತ್ತಾಡಿ ಬಡವರ ಬಾದಾಮಿ ಬಿಸಿ ಬಿಸಿ ಕಡಲೆಕಾಯಿ ಸವಿಯುವುದೇ ಒಂದು ಮರೆಯಲಾಗದ ಅದ್ಭುತ ಅನುಭವ. ಜೊತೆಗೆ ಸುತ್ತಲೂ ಬಣ್ಣ ಬಣ್ಣದ ಬಲೂನು, ಆಟಿಕೆ, ಬತಾಸು, ಸಿಹಿ ತಿನಿಸು, ಕಲಾಕೃತಿಗಳು, ಬೊಂಬೆಗಳು, ರಾಟೆ, ಉಯ್ಯಾಲೆಗಳು, ಜನಜಾತ್ರೆ ಎಲ್ಲವೂ ಹೊಸ ಪ್ರಪಂಚಕ್ಕೆ ಎಳೆದೊಯ್ಯುತ್ತವೆ.
ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ನಡೆಯುತ್ತದೆ. ಇದು ಸಾಮಾನ್ಯವಾಗಿ ನವೆಂಬರ್ ಕೊನೆಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಬರುತ್ತದೆ. ಬಸವನಗುಡಿಯ ಇತಿಹಾಸ ಪ್ರಸಿದ್ದ ದೊಡ್ಡಗಣಪತಿ ದೇವಾಲಯದಲ್ಲಿ ವಿಶೇಷಪೂಜೆ, ಹೂವಿನ ಅಲಂಕಾರವನ್ನು ಮಾಡಿ ಕಡಲೇಕಾಯಿಯಿಂದ ಅಭಿಷೇಕ ಮಾಡಿ ಭಕ್ತರಿಗೆ ಕಡಲೆಕಾಯಿಯನ್ನು ಪ್ರಸಾದವಾಗಿ ನೀಡಲಾಗುತ್ತೆ. ಈ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಅದರದೇ ಆದ ಇತಿಹಾಸ, ಮಹತ್ವವಿದೆ.
ಇದನ್ನೂ ಓದಿ: ಇಂದಿನಿಂದ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭ: ಸಂಜೆ ಸಿಎಂ ಬೊಮ್ಮಾಯಿ ಚಾಲನೆ
ಕಡಲೆಕಾಯಿ ಪರಿಷೆಯ ಇತಿಹಾಸ
ರಾಜರ ಕಾಲದಲ್ಲಿ ಸುಂಕೇನ ಹಳ್ಳಿ ಎಂದು ಕರೆಯಲಾಗುತ್ತಿದ್ದ ಬಸವನಗುಡಿಯ ಸುತ್ತ ಮುತ್ತಲಿನ ಹೊಸಕೆರೆ ಹಳ್ಳಿ, ಗುಟ್ಟಹಳ್ಳಿ, ಮಾವಳ್ಳಿ, ದಾಸರಹಳ್ಳಿ, ಮೊದಲಾದ ಹಳ್ಳಿಗಳಲ್ಲಿ ರೈತರು ಕಡಲೆಕಾಯಿ ಬೆಳೆಯುತ್ತಿದ್ದರು. ಪ್ರತಿ ಪೂರ್ಣಿಮೆಯಂದು ಬಸವ ಬಂದು ರೈತರು ಕಷ್ಟಪಟ್ಟು ಬೆಳೆಸಿದ ಕಡಲೆಕಾಯಿಯನ್ನು ತಿಂದು ಹೋಗುತ್ತಿತ್ತು. ಒಂದು ದಿನ ಕಾವಲಿದ್ದ ರೈತರು ಈ ಬಸವನನ್ನು ಹಿಡಿಯಲು ಪ್ರಯತ್ನಿಸಿ ಬಸವನ ಹಿಂದೆ ಓಡಿದರು. ಆ ಬಸವ ಬಹಳ ವೇಗವಾಗಿ ಓಡಿ ಒಂದು ಗುಹೆಯಲ್ಲಿ ಸೇರಿಕೊಂಡ. ಹಿಂಬಾಲಿಸಿ ಬಂದ ರೈತರು ಈ ಬಸವ ಗುಹೆಯಲ್ಲಿ ಸೇರಿಕೊಂಡದ್ದನ್ನು ಕಂಡರು. ಆಗ ರೈತರು ತಾವೇ ನಿನಗೆ ಆಹಾರ ನೀಡುವುದಾಗಿ ಹೇಳಿ ಇಲ್ಲೇ ಇರುವಂತೆ ಒಪ್ಪಂದ ಮಾಡಿಕೊಂಡರಂತೆ. ಇದರಿಂದ ಬಸವಣ್ಣ ಅಲ್ಲೇ ಐಕ್ಯನಾದ ಎಂಬ ಪ್ರತೀತಿಯಿದೆ. ಆ ನಂತರ ಅವರು ಬಸವ ಕಲ್ಲಾಗಿ ಬೆಳೆಯುತ್ತಿದ್ದನ್ನು ಕಂಡು ಆಶ್ಚರ್ಯ ಪಟ್ಟರು. ಈಶ್ವರನ ವಾಹನವಾದ ನಂದಿಯೇ ಆ ಬಸವನೆಂದು ತಿಳಿದು ಭಕ್ತಿಯಿಂದ ಅಡ್ಡ ಬಿದ್ದರು. ಈಶ್ವರನೇ ತಮ್ಮ ರಕ್ಷಣೆಗೆ ತನ್ನ ವಾಹನವನ್ನು ಕಳಿಸಿದ್ದಾನೆಂದು ತಿಳಿದರು. ಅವನನ್ನು ಪೂಜಿಸಲು ಪ್ರಾರಂಭಿಸಿದರು. ಬಸವನಿಗೆ ಪ್ರಿಯವಾದ ಕಡಲೆಕಾಯಿಯನ್ನು ತಿನ್ನುತ್ತಿದ್ದನೆಂದು ತಿಳಿದು, ಅದನ್ನು ತಪ್ಪಿಸಿದಕ್ಕಾಗಿ ಪಶ್ಚಾತ್ತಾಪ ಪಟ್ಟರು.
ಅದಕ್ಕಾಗಿ ಸುಂಕ ಕಟ್ಟಲು ಪ್ರಾರಂಭಿಸಿದರು. ತಾವು ಬೆಳೆಯುವ ಕಡಲೇಕಾಯಿ ಬೆಳೆಗೆ ಅವನೇ ಕಾವಲುಗಾರನೆಂದು ಆತನಿಗೆ ಎಲ್ಲ ಜವಾಬ್ದಾರಿ ವಹಿಸಿದರು. ಅಲ್ಲಿ ಅವನಿಗೆ ಒಂದು ಚಿಕ್ಕ ದೇವಸ್ಥಾನ ಕಟ್ಟಿಸಿದರು. ನಂತರ 1537ರಲ್ಲಿ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಬಸವನಗುಡಿ ಬೆಟ್ಟದ ಮೇಲೆ ದಕ್ಷಿಣ ಶೈಲಿಯಲ್ಲಿ ದೊಡ್ಡ ಬಸವ ದೇವಾಲಯವನ್ನು ಸ್ಥಾಪಿಸಿದರು. ಅದಕ್ಕಾಗಿ ಪ್ರತಿ ವರ್ಷ ಕಾರ್ತಿಕಮಾಸದ ಕಡೇ ಸೋಮವಾರ ತಾವು ಬೆಳೆದ ಕಡಲೇಕಾಯಿಯನ್ನು ಇಲ್ಲಿ ರಾಶಿ ಹಾಕುತ್ತಾರೆ ಮತ್ತು ಬಸವಣ್ಣನನ್ನು ಮನಸೋಇಚ್ಛೆ ತಿನ್ನೆಂದು ಪ್ರಾರ್ಥಿಸುತ್ತಾರೆ. ಈ ಸಂಪ್ರದಾಯ ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಅಂದು ಅಲ್ಲಿಗೆ ಬರುವ ಭಕ್ತರು ಸಹ ಕಡಲೆಕಾಯಿಯನ್ನು ಕೊಂಡು ಬಸವಣ್ಣನಿಗೆ ಅರ್ಪಿಸುತ್ತಾರೆ. ಆಗ ಕಲ್ಲಾದ ಬಸವ ಬೆಳೆಯುತ್ತಲೇ ಹೋದ. ಆತ ಇನ್ನು ಬೆಳೆದರೆ ಪೂಜಿಸಲು ಆಗುವುದಿಲ್ಲವೆಂದು ಆತನ ತಲೆಮೇಲೆ ದೊಡ್ಡ ಮೊಳೆ ಹೊಡೆದಿದ್ದಾರೆ. ಅಂದಿನಿಂದ ಅವನ ಬೆಳವಣಿಗೆ ನಿಂತಿದೆ. ಆ ಮೊಳೆ ತ್ರಿಶೂಲದ ರೂಪದಲ್ಲಿದೆ.
ಸಾಮಾನ್ಯವಾಗಿ ಪರಿಷೆಗೆ ರಾಮನಗರ, ಕನಕಪುರ, ದೊಡ್ಡಬಳ್ಳಾಪುರ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಹೀಗೆ ನಾನಾ ಭಾಗಗಳಿಂದ ಕಡಲೆ ಕಾಯಿಗಳನ್ನು ಹೊತ್ತು ರೈತರು ತರುತ್ತಾರೆ. ಅಷ್ಟೇ ಅಲ್ಲದೆ, ನೆರೆಯ ಆಂಧ್ರಪ್ರದೇಶ, ತಮಿಳುನಾಡಿನ ರೈತರು ಹಾಗೂ ವ್ಯಾಪಾರಿಗಳು ಕೂಡ ಪರಿಷೆಯಲ್ಲಿ ಭಾಗವಹಿಸುತ್ತಾರೆ. ಹೊರಗಿನ ಮಾರುಕಟ್ಟೆಗೆ ಹೋಲಿಸಿದರೆ ಕಡಲೆಕಾಯಿ ಪರಿಷೆಯಲ್ಲಿ ಮಾರಾಟವಾಗುವ ಕಡಲೆಕಾಯಿಗೆ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಇದು ನಮ್ಮ ಸಂಸ್ಕೃತಿಯ ಭಾಗವಾಗಿರುವುದರಿಂದ ಬಂದಿರುವ ಭಕ್ತರು ಕನಿಷ್ಠ ಒಂದು ಸೇರು ಕಡಲೆಕಾಯಿಯನ್ನಾದರೂ ಖರೀದಿಸಿ ಮನೆಗೆ ಒಯ್ಯುತ್ತಾರೆ. ಇದರಿಂದ ರೈತರಿಗೆ ಉತ್ತಮ ವ್ಯಾಪಾರಕ್ಕೆ ಮಾರುಕಟ್ಟೆ ದೊರೆಯುತ್ತದೆ.
Published On - 7:59 am, Sun, 20 November 22