ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣ: ಪೊಲೀಸರಿಂದ ಶಂಕಿತನ ಗುರುತು ಪತ್ತೆ

| Updated By: Digi Tech Desk

Updated on: Nov 21, 2022 | 11:48 AM

ಮೈಸೂರು ಲೋಕನಾಯಕ ನಗರದ 10ನೇ ಕ್ರಾಸ್‌ನಲ್ಲಿ ಶಂಕಿತ ವ್ಯಕ್ತಿಯು ಕೊಠಡಿಯನ್ನು ಬಾಡಿಗೆಗೆ ಪಡೆದುಕೊಂಡಿದ್ದ.

ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣ: ಪೊಲೀಸರಿಂದ ಶಂಕಿತನ ಗುರುತು ಪತ್ತೆ
ಮಂಗಳೂರು ಬಾಂಬ್ ಸ್ಪೋಟ ಪ್ರಕರಣ‌; ಬಾಂಬ್ ತಯಾರಿಸುವ ವೇಳೆ ಮೊಬೈಲ್ ಟ್ರೈನಿಂಗ್ ಪಡೆದ ಆರೋಪಿ
Follow us on

ಮಂಗಳೂರು: ಮಂಗಳೂರು ಕಂಕನಾಡಿ ಸಮೀಪ ಆಟೊದಲ್ಲಿ ಕುಕ್ಕರ್ ಒಂದು ಸ್ಫೋಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಂಕಿತನ ಗುರುತು ಪತ್ತೆ ಮಾಡಿದ್ದಾರೆ. ಮೈಸೂರು ಲೋಕನಾಯಕ ನಗರದ 10ನೇ ಕ್ರಾಸ್‌ನಲ್ಲಿ ಶಂಕಿತ ವ್ಯಕ್ತಿಯು ಮೋಹನ್ ಕುಮಾರ್ ಅವರ ಕಟ್ಟಡದಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದುಕೊಂಡಿದ್ದ. ಬಾಡಿಗೆ ಪಡೆಯಲು ಮಾಡಿಕೊಂಡಿದ್ದ ಕರಾರು ಪತ್ರದಲ್ಲಿ ತನ್ನ ಹೆಸರನ್ನು ಪ್ರೇಮ್ ರಾಜ್ ಎಂದು ನಮೂದಿಸಿದ್ದ. ತನ್ನ ಮೂಲ ಊರು ಮತ್ತು ವಿಳಾಸವಾಗಿ ಹುಬ್ಬಳ್ಳಿಯ ಪ್ರದೇಶವೊಂದನ್ನು ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಠಡಿ ಪ್ರವೇಶಿಸಿದ ಪೊಲೀಸರಿಗೆ ಸ್ಫೋಟಕ್ಕೆ ಬಳಸುವ ಹಲವು ವಸ್ತುಗಳು ಸಿಕ್ಕಿವೆ ಎಂದು ಮೂಲಗಳು ಹೇಳಿವೆ. ಸರ್ಕೀಟ್ ಬೋರ್ಡ್, ಸ್ಮಾಲ್ ಬೋಲ್ಟ್, ಬ್ಯಾಟರಿ, ಮೊಬೈಲ್, ಮರದಹೊಟ್ಟು, ಅಲ್ಯುಮಿನಿಯಂ, ಮಲ್ಟಿಮೀಟರ್, ವೈರ್​ಗಳು, ಮಿಕ್ಸರ್ ಜಾರ್​ಗಳು, ಪ್ರೆಶರ್ ಕುಕ್ಕರ್ ಸೇರಿದಂತೆ ಹಲವು ಸ್ಪೋಟಕಗಳು ಪತ್ತೆಯಾಗಿವೆ. ಒಂದು ಮೊಬೈಲ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್, ಒಂದು ಫಿನೋ ಡೆಬಿಟ್ ಕಾರ್ಡ್ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಯಾಣಿಕನ ಹೇಳಿಕೆಯಿಂದ ಹೆಚ್ಚಾದ ಅನುಮಾನ

ಮಂಗಳೂರು ಆಟೋರಿಕ್ಷಾದಲ್ಲಿ ಸಂಭವಿಸಿದ ನಿಗೂಢ ಸ್ಪೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪರಿಶೀಲನೆ ವೇಳೆ ಆಟೊದಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಎರಡು ಬ್ಯಾಟರಿ, ನಟ್​ ಬೋಲ್ಟ್​​, ಸರ್ಕೀಟ್ ಮಾದರಿಯಲ್ಲಿ ವೈರಿಂಗ್ ಮಾಡಿರುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಟೊದಲ್ಲಿ ಸಿಕ್ಕ ವಸ್ತುಗಳನ್ನು ಎಫ್​ಎಸ್​ಎಲ್ ತಂಡದ ಪರೀಕ್ಷೆಗಾಗಿ ಕಳಿಸಲಾಗಿದೆ.

ಆಟೊದಲ್ಲಿದ್ದ ಪ್ರಯಾಣಿಕನ ಬಗ್ಗೆಯೂ ಅನುಮಾನ ಹೆಚ್ಚಿದೆ. ಈತ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಬರುತ್ತಿದ್ದ ಆಟೊ ಹತ್ತಿದ್ದ. ಘಟನಾ ಸ್ಥಳದ 1 ಕಿಮೀ ದೂರದ ನಾಗುರಿ ಬಳಿ ಆಟೊ ಹತ್ತಿದ್ದು ಸ್ಪೋಟದ ತೀವ್ರತೆಗೆ ಪ್ರಯಾಣಿಕನ ದೇಹದ ಅರ್ಧ ಭಾಗ ಸುಟ್ಟಿದೆ. ಕೈ, ಎದೆ, ಮುಖದ ಭಾಗಕ್ಕೆ ಗಾಯವಾಗಿದ್ದು ಸದ್ಯ ಗಂಭೀರ ಸ್ಥಿತಿಯಲ್ಲಿರುವ ಪ್ರಯಾಣಿಕನಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈತ ಹಿಂದಿ ಭಾಷೆ ಮಾತನಾಡುತ್ತಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ ಆಟೊ ಪ್ರಯಾಣಿಕನ ತನಿಖೆ ವೇಳೆ ಅಸ್ಪಷ್ಟ ಮಾಹಿತಿ ಸಿಕ್ಕಿದೆ. ಈತ ಪೊಲೀಸರ ಎದುರು ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡಿ ಗೊಂದಲ ಮೂಡಿಸುತ್ತಿದ್ದಾನೆ. ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಹೇಳಿದ್ದು, ಅಣ್ಣ ಬಾಬುರಾವ್ ಗೆ ಕರೆ ಮಾಡಿ ಎಂದು ನಂಬರ್ ಒಂದನ್ನು ನೀಡಿದ್ದ. ಆ ನಂಬರ್​ಗೆ ಕರೆ ಮಾಡಿದಾಗ ಆತ ತನ್ನ ಸಂಬಂಧಿಕನೇ ಅಲ್ಲ. ನನ್ನ ರೂಮ್​ನಲ್ಲಿದ್ದುದು ನಿಜ. ಬೆಂಗಳೂರಿಗೆ ಹೋಗುತ್ತೇನೆಂದು ಹೋಗಿದ್ದ. ಆತನ ಬಗ್ಗೆ ಬೇರೇನೂ ಗೊತ್ತಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಎನ್ಐಎ ತಂಡ

ಪ್ರಕರಣದ ತನಿಖೆಗಾಗಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಇಂದು ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ನಿರೀಕ್ಷೆಯಿದೆ. ಸಿಎಂ ಬೊಮ್ಮಾಯಿ ಮಂಗಳೂರು ಭೇಟಿಯ ಬೆನ್ನಲ್ಲೇ ಸ್ಫೋಟ ಸಂಭವಿಸಿರುವುದನ್ನು ಗೃಹ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಬೆಂಗಳೂರಿನಿಂದ ಮತ್ತಷ್ಟು ಬಾಂಬ್ ತಜ್ಞರ ತಂಡವೂ ಮಂಗಳೂರಿಗೆ ತೆರಳಲಿದ್ದು, ಸದ್ಯಕ್ಕೆ ಮಂಗಳೂರು ಪೊಲೀಸರು ಇಡೀ ಘಟನೆ ಬಗ್ಗೆ ಕೂಲಂಕುಶ ತನಿಖೆ ಆರಂಭಿಸಿದ್ದಾರೆ.

Published On - 12:07 pm, Sun, 20 November 22