ಕಾಂತಾರ ಸಿನಿಮಾ ಬೆನ್ನಲ್ಲೇ ಕರಾವಳಿಯಲ್ಲಿ ದಿನಕ್ಕೊಂದು ವಿವಾದ; ತುಳುನಾಡಿನ ಸೃಷ್ಟಿಯ ಬಗ್ಗೆ ಎದ್ದಿದೆ ವಾದ-ಪ್ರತಿವಾದ
ಕಾಂತಾರ ಬಿಡುಗಡೆ ವೇಳೆ ನಟ ರಿಷಬ್ ಶೆಟ್ಟಿ ಬಳಸಿದ್ದ ಆ ಒಂದು ಪದ ಬಾರಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.
ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದೆ. ಕಾಂತಾರ 50 ದಿನ ಪೂರೈಸಿದ್ದು, ಬಾಕ್ಸ್ಆಫೀಸ್ನಲ್ಲಿ ಧೂಳ್ ಎಬ್ಬಿಸಿದೆ. ಸದ್ಯ ಕಾಂತಾರ ಕೆಜಿಎಫ್ ಚಿತ್ರದ ಕಲೇಕ್ಷನ್ಗಿಂತಲೂ ಹೆಚ್ಚಿಗೆ ಗಳಿಸಿದೆ. ಕಾಂತಾರ ಸಿನಿಮಾ ಬಿಡುಗಡೆ ವೇಳೆ ಹಲವು ಬಾರಿ ನಟ ರಿಷಬ್ ಶೆಟ್ಟಿ ಹೇಳಿದ್ದ ಆ ಒಂದು ಮಾತು ಇದೀಗ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ತುಳುನಾಡು ಸೃಷ್ಟಿಸಿದ್ದು ಯಾರು ಎಂಬ ಗೊಂದಲ ಕರಾವಳಿಯಲ್ಲಿ ವಿವಾದದ ಕಿಡಿಯನ್ನು ಹೊತ್ತಿಸಿದೆ.
ತುಳುನಾಡಿನ ದೈವರಾಧನೆಯನ್ನು ಬಿಂಬಿಸಿದ್ದ ಕಾಂತಾರ ಸಿನಿಮಾ ಇಡೀ ವಿಶ್ವದೆಲ್ಲೆಡೇ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ ಮೇಳೈಸಿದ್ದ ತುಳುನಾಡಿನ ಸಂಸ್ಕೃತಿಯನ್ನು ಎಲ್ಲರೂ ಅಪ್ಪಿ ಒಪ್ಪಿಕೊಂಡಿದ್ದರು. ಆದರೆ ಈ ಸಿನಿಮಾ ಬಿಡುಗಡೆ ವೇಳೆ ನಟ ರಿಷಬ್ ಶೆಟ್ಟಿ ಬಳಸಿದ್ದ ಆ ಒಂದು ಪದ ಬಾರಿ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.
ಹೌದು ಕಾಂತಾರ ಸಿನಿಮಾದ ಬಿಡುಗಡೆ ವೇಳೆಯಲ್ಲಿ ರಿಷಬ್ ಶೆಟ್ಟಿ ತುಳುನಾಡು ಪರಶುರಾಮ ಸೃಷ್ಟಿ ಅಂತ ಹಲವು ಬಾರಿ ಉಲ್ಲೇಖಿಸಿದ್ದರು. ಆದರೆ ತುಳುನಾಡು ಪರಶುರಾಮ ಸೃಷ್ಟಿ ಎಂದು ಉಲ್ಲೇಖ ಮಾಡಿರೋದಕ್ಕೆ ಇದೀಗ ಅಪಸ್ವರ ಕೇಳಿಬಂದಿದೆ. ತುಳುನಾಡು ಪರಶುರಾಮ ಸೃಷ್ಟಿಯೇ ಅಲ್ಲ ಅಂತ ಹೊಸ ವಾದ ಉದ್ಭವವಾಗಿದೆ. ತುಳುನಾಡು ಪರಶುರಾಮ ಸೃಷ್ಟಿಯಲ್ಲ, ತುಳುನಾಡು ಬೆರ್ಮೆರ್ ಸೃಷ್ಟಿ ಎಂಬ ವಾದ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ವನಾಧಿಪತಿಯಾದ ಒಂದು ಅದ್ಭುತ ದೈವ ಶಕ್ತಿ ಬೆರ್ಮೆರ್. ತುಳುನಾಡಿನ ದೈವಾರಾಧನೆಯಲ್ಲಿ ಬರುವ ಬೆರ್ಮೆರ್ ಶಕ್ತಿಯಿಂದಲೇ ತುಳುನಾಡು ಸೃಷ್ಟಿ ಆಗಿದೆ ಎಂದು ವಾದ ಮಾಡಲಾಗುತ್ತಿದೆ. ಸಾಮಾಜಿಕ ತಾಣಗಳಲ್ಲಿ ಪರಶುರಾಮ ವರ್ಸಸ್ ಬೆರ್ಮೆರ್ ಸೃಷ್ಟಿ ಎಂಬ ವಾದ ಪರ ವಿರೋಧ ಚರ್ಚೆಗೆ ವೇದಿಕೆಯಾಗಿದೆ.
ತುಳುನಾಡನ್ನು ಪರಶುರಾಮ ಸೃಷ್ಟಿ ಎಂದೇ ನಂಬಲಾಗಿತ್ತು. ಪರಶುರಾಮ ಸಮುದ್ರಕ್ಕೆ ಕೊಡಲಿ ಎಸೆದು ಸೃಷ್ಟಿಯಾದ ಭೂಭಾಗವೇ ತುಳುನಾಡು ಎಂದು ನಂಬಲಾಗಿತ್ತು. ಆದರೆ ತುಳುನಾಡು ಪರಶುರಾಮ ಸೃಷ್ಟಿ ಅಲ್ಲ, ಬೆರ್ಮೆರ್ ಸೃಷ್ಟಿ ಎಂಬ ವಾದ ಇದೀಗ ಹೆಚ್ಚೆಚು ಕೇಳಿಬಂದಿದೆ. ದೈವಗಳ ಹೆಸರುಗಳನ್ನೂ ವೈದಿಕತೆ ಮೂಲಕ ಬದಲಿಸಲಾಗಿದೆ ಎಂಬ ಆಕ್ಷೇಪವು ಇದರ ಜೊತೆಯಿದೆ. ತುಳುನಾಡಿನ ಎಲ್ಲಾ ಶುಭಕಾರ್ಯಕ್ಕೆ ಬೆರ್ಮೆರ್ ಶಕ್ತಿಯೇ ಉನ್ನತ ಶಕ್ತಿ ಅಂತ ವಾದ ಮಾಡಲಾಗುತ್ತಿದೆ. ತುಳುವರ ಆದಿಮೂಲದ ದೈವವಾದ ಬೆರ್ಮೆರ್‌ರಿಂದಲೇ ತುಳುನಾಡು ಸೃಷ್ಟಿ ಆಗಿದೆ ಅಂತ ವಾದಿಸಲಾಗುತ್ತಿದೆ. ಹೀಗಾಗಿ ಕರಾವಳಿಯಲ್ಲಿ ವಿವಾದದ ಕಿಡಿ ಹೊತ್ತಿಸಿರೋ ಈ ಸೃಷ್ಟಿಯ ಗೊಂದಲ ಹಲವು ಇತಿಹಾಸಕಾರರು, ದೈವಾರಾಧಕರು, ಅರ್ಚಕರು ಹಾಗೂ ಜನರ ಮಧ್ಯೆ ಚರ್ಚೆಗೆ ಕಾರಣವಾಗಿದೆ.
ವೈದಿಕ-ಅವೈದಿಕದ ಹೆಸರಲ್ಲಿ ಕರಾವಳಿ ಸೃಷ್ಟಿಯ ಬಗ್ಗೆ ಈ ಹೊಸ ವಿವಾದ ಶುರುವಾಗಿದೆ. ಪರಶುರಾಮ ಸೃಷ್ಟಿ ಅಲ್ಲ ಎನ್ನುವವರು ಪ್ರಚಾರಕ್ಕಾಗಿ ಮಾಡ್ತಾ ಇದಾರೆ ಅಂತ ಆರೋಪವು ಕೇಳಿ ಬಂದಿದೆ. ಒಟ್ಟಿನಲ್ಲಿ ಕಾಂತಾರ ಬೆನ್ನಲ್ಲೇ ಕಡಲ ತಡಿಯಲ್ಲಿ ವೈದಿಕ-ಅವೈದಿಕ ಚರ್ಚೆ ಶುರುವಾಗಿರೋದು ಮಾತ್ರ ಸುಳ್ಳಲ್ಲ.
ಅಶೋಕ್ ಟಿ.ವಿ 9 ಮಂಗಳೂರು