ಎತ್ತಿನೊಂದಿಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಟೆಕಿ ಕಾಲ್ನಡಿಗೆ; ಮಂಜುನಾಥನಿಗೆ ಹೀಗೊಂದು ಹರಕೆ
ಅಕ್ಟೋಬರ್ 2ರಂದು ಶ್ರೇಯಾಂಶ ಮತ್ತು ಭೀಷ್ಮ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಕಾಲ್ನಡಿಗೆಯ ಪಯಣ ಆರಂಭಿಸುತ್ತಾರೆ. 36 ದಿನಗಳ ಬಳಿಕ, ಅಂದರೆ ನವೆಂಬರ್ 6ರಂದು ಧರ್ಮಸ್ಥಳಕ್ಕೆ ತಲುಪಿದ್ದಾರೆ.
ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ (Horanadu) ಸಾಫ್ಟ್ವೇರ್ ಉದ್ಯೋಗಿ ಶ್ರೇಯಾಂಶ ಕೆ.ಡಿ. ಎಂಬವರು ಗಿರ್ ತಳಿಯ ಎತ್ತಿನ (Gyr Bull) ಜತೆ ಸತತ 36 ದಿನಗಳ ಕಾಲ ಬೆಂಗಳೂರಿನಿಂದ (Bengaluru) ಕಾಲ್ನಡಿಗೆಯಲ್ಲಿ ಧರ್ಮಸ್ಥಳಕ್ಕೆ (Dharmasthala) ತೆರಳಿ ಭಕ್ತರ ಗಮನ ಸೆಳೆದಿದ್ದಾರೆ. ಇವರ ಈ ಸಾಹಸಕ್ಕೆ, ತಾನು ಖರೀದಿಸಿದ ದನದ ಮೊದಲ ಕರುವನ್ನು ಧರ್ಮಸ್ಥಳದ ಮಂಜುನಾಥ ದೇವರಿಗೆ ಸಮರ್ಪಣೆ ಮಾಡುತ್ತೇನೆ ಎಂದು ಹೊತ್ತುಕೊಂಡಿದ್ದ ಹರಕೆಯೇ ಕಾರಣ.
ಗಿರ್ ತಳಿಯ ಬೆನ್ನತ್ತಿ…
ಗಿರ್ ತಳಿಯ ದನವೊಂದನ್ನು ಸಾಕಬೇಕು ಎಂಬುದು ಶ್ರೇಯಾಂಶ ಆಸೆಯಾಗಿತ್ತು. ಅದರಂತೆ ಗುಜರಾತ್ನಿಂದ 2020ರಲ್ಲಿ 5 ವರ್ಷ ವಯಸ್ಸಿನ ದನವೊಂದನ್ನು 1.9 ಲಕ್ಷ ರೂ.ಗೆ ಖರೀದಿಸಿ ರೈಲಿನಲ್ಲಿ ಬರಮಾಡಿಕೊಳ್ಳುತ್ತಾರೆ. ದೊಡ್ಡಬಳ್ಳಾಪುರಕ್ಕೆ ಬಂದ ದನ ‘ಪಾರ್ವತಿ’ ಮತ್ತು ಅದರ ಕರು ‘ಭೀಷ್ಮ’ನನ್ನು ಬೆಂಗಳೂರಿಗೆ ಕರೆತರುತ್ತಾರೆ. ‘ಭೀಷ್ಮ’ ಜನಿಸಿ ಆಗ ಕೇವಲ ನಾಲ್ಕು ದಿನಗಳಾಗಿತ್ತಷ್ಟೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿರುವ ಶ್ರೇಯಾಂಸ್ ಪಕ್ಕದ ಖಾಲಿ ಸೈಟಿನ ಮಾಲೀಕರನ್ನು ಸಂಪರ್ಕಿಸಿ ದನ ಹಾಗೂ ಕರುವನ್ನು ಕಟ್ಟಿಹಾಕಲು ಜಾಗ ಮಾಡಿಕೊಳ್ಳುತ್ತಾರೆ. ಬಳಿಕ ಅದರ ಮಾಲೀಕರಿಗೆ ಅದಕ್ಕಾಗಿ ಬಾಡಿಗೆಯನ್ನೂ ಪಾವತಿಸುತ್ತಾರೆ. ಆ ಸಂದರ್ಭದಲ್ಲಿ ಶ್ರೇಯಾಂಸ್ ಕರುವನ್ನು ಧರ್ಮಸ್ಥಳದ ಮಂಜುನಾಥ ದೇವರಿಗೆ ಹರಕೆ ಒಪ್ಪಿಸುವುದಾಗಿ ನಂಬಿಕೊಂಡಿರುತ್ತಾರೆ. ಅದರಂತೆ ಭೀಷ್ಮನಿಗೆ 1 ವರ್ಷ 10 ತಿಂಗಳಾಗುವಾಗ ಧರ್ಮಸ್ಥಳಕ್ಕೆ ಕರೆದೊಯ್ಯಲು ನಿರ್ಧರಿಸಿದ್ದಾರೆ.
ಶುರುವಾಯ್ತು 36 ದಿನಗಳ ಪಯಣ
ಅಕ್ಟೋಬರ್ 2ರಂದು ಶ್ರೇಯಾಂಶ ಮತ್ತು ಭೀಷ್ಮ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಕಾಲ್ನಡಿಗೆಯ ಪಯಣ ಆರಂಭಿಸುತ್ತಾರೆ. ಸಾಮಾನ್ಯ ಮಾರ್ಗವನ್ನು ಬಿಟ್ಟು ಭೀಷ್ಮನಿಗೆ ಮೇವು, ನೀರಿಗೆ ಕೊರತೆಯಾಗದಂತೆ ಕರೆದೊಯ್ಯಲು ಹಾಸನ, ಬೇಲೂರು, ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ ಮೂಲಕ ಧರ್ಮಸ್ಥಳಕ್ಕೆ ಪಯಣಿಸುತ್ತಾರೆ. 36 ದಿನಗಳ ಬಳಿಕ, ಅಂದರೆ ನವೆಂಬರ್ 6ರಂದು ಧರ್ಮಸ್ಥಳಕ್ಕೆ ತಲುಪುತ್ತಾರೆ. ಅಂದು ವಿಶ್ರಮಿಸಿ ಮರುದಿನ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಭೀಷ್ಮನನ್ನು ಮಂಜುನಾಥನಿಗೆ ಸಮರ್ಪಿಸುತ್ತಾರೆ.
ಒಂದು ಲ್ಯಾಪ್ಟಾಪ್, ಚಾರ್ಜರ್, ಒಂದು ಜತೆ ಹೆಚ್ಚುವರಿ ಬಟ್ಟೆಯೊಂದಿಗೆ ಶ್ರೇಯಾಂಶ ಮತ್ತು ಭೀಷ್ಮನ ಧರ್ಮಸ್ಥಳ ಪಯಣ ನಡೆಯುತ್ತದೆ. ದಾರಿಯಲ್ಲಿ ನೆರವಾದ ಎಲ್ಲರನ್ನೂ ಶ್ರೇಯಾಂಸ್ ಪ್ರೀತಿಯಿಂದ ಸ್ಮರಿಸಿಕೊಂಡಿರುವುದಾಗಿ ‘ನ್ಯೂಸ್ 18 ಇಂಗ್ಲಿಷ್’ ತಾಣ ವರದಿ ಮಾಡಿದೆ. ಕೆಲವರು ನಮ್ಮನ್ನು ಮನೆಗೆ ಕರೆದು ಊಟ ಮಾಡಿ ಜಾಗ ಕೊಟ್ಟರು. ನಾವು ಸಾಮಾನ್ಯವಾಗಿ ಶಾಲೆಯ ಮೈದಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆವು ಎಂದು ಶ್ರೇಯಾಂಶ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:02 pm, Sat, 19 November 22