ಬೆಂಗಳೂರು, ಜನವರಿ 25: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ (Whitefield) ನಿಗೂಢವಾಗಿ ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಪರಿಣವ್ ಎರಡು ದಿನಗಳ ನಂತರ, ಅಂದರೆ ಬುಧವಾರ ಹೈದರಾಬಾದ್‌ನ ನಾಂಪಲ್ಲಿ (Nampally) ಮೆಟ್ರೋ ನಿಲ್ದಾಣದಲ್ಲಿ ಪತ್ತೆಯಾಗಿ ಹೆತ್ತವರಲ್ಲಿ ನಿಟ್ಟುಸಿರು ಮೂಡಿಸಿದ್ದ. ಆದರೆ, ಪರಿಣವ್ನನ್ನು ಸುಲಭವಾಗಿ ಪತ್ತೆ ಮಾಡಲು ನೆರವಾಗಿದ್ದು ಬೆಂಗಳೂರಿನ ಮಹಿಳೆಯೊಬ್ಬರು ಎಂಬುದು ಈಗ ತಿಳಿದುಬಂದಿದೆ. ಅಷ್ಟಕ್ಕೂ ಮಹಿಳೆ ಆತನನ್ನು ಪತ್ತೆಹಚ್ಚಿದ ರೀತಿಯೇ ಕುತೂಹಲಕಾರಿಯಾಗಿದೆ.
ಕೆಲಸದ ನಿಮಿತ್ತ ಬುಧವಾರ ಬೆಳಗ್ಗೆ ಹೈದರಾಬಾದ್‌ಗೆ ಬಂದಿದ್ದ ಮಾಧ್ಯಮ ವೃತ್ತಿಪರರಾದ ವಂದನಾ ಮೆನನ್ ಎಂಬವರು ಪರಿಣವ್ನನ್ನು ಗಮನಿಸಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ವಂದನಾ ಕೂಡ ವೈಟ್‌ಫೀಲ್ಡ್‌ನವರೇ! ವಾಟ್ಸ್ಆ್ಯಪ್ ಮೂಲಕ ಪರಿಣವ್ ಹುಡುಕಾಟದ ಬಗ್ಗೆ ನಿರಂತರವಾಗಿ ಅವರಿಗೆ ಮಾಹಿತಿ ದೊರೆತಿತ್ತು.
ನಾನು ಗಚಿಬೌಲಿಗೆ ರೈಲಿನಲ್ಲಿ ಹೋಗಲು ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿದ್ದೆ. ಪರಿಣವ್ ಟಿಕೇಟ್ ಖರೀದಿಸಲು ಸಾಲಿನಲ್ಲಿ ನಿಂತಿರುವುದನ್ನು ನಾನು ಗಮನಿಸಿದೆ. ಆತ ಕಾಣೆಯಾದ ದಿನ ಅದೇ ಸಮವಸ್ತ್ರವನ್ನು ಧರಿಸಿದ್ದರಿಂದ ಮತ್ತು ಅದೇ ಉಡುಗೆಯನ್ನು ಧರಿಸಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದರಿಂದ ಆತನನ್ನು ಗುರುತಿಸಲು ನನಗೆ ನೆರವಾಯಿತು ಎಂದು ವಂದನಾ ಮೆನನ್ ತಿಳಿಸಿರುವುದಾಗಿ ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಆತನನ್ನು ಗುರುತಿಸಲು ನಾನು ಸ್ವಲ್ಪ ಸಮಯ ತೆಗೆದುಕೊಂಡೆ. ಆತನೊಂದಿಗೆ ಮಾತನಾಡಲು ಪ್ರಾರಂಭಿಸಿದೆ ಮತ್ತು ನಂತರ ಆತ ಬೆಂಗಳೂರಿನವ ಮತ್ತು ವೈಟ್‌ಫೀಲ್ಡ್ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ ಎಂಬುದು ತಿಳಿಯಿತು. ಆಗ, ನಾನು ಕೂಡ ಅದೇ ಏರಿಯಾದಲ್ಲಿ ವಾಸವಿರುವುದು ಎಂದು ಹೇಳಿದೆ. ನಂತರ ನನ್ನ ಪತಿಗೆ ಕರೆ ಮಾಡಿ ಆತನ ಪೋಷಕರಿಗೆ ಮಾಹಿತಿ ತಲುಪಿಸಲು ಸೂಚಿಸಿದೆ. ನಾನು ಮಲಯಾಳಂನಲ್ಲಿ ಮಾತನಾಡಿದ್ದರಿಂದ ಪರಿಣವ್‌ಗೆ ಸರಿಯಾಗಿ ಅರ್ಥವಾಗಲಿಲ್ಲ. ಆತ ಶಾಂತವಾಗಿಯೇ ಇದ್ದ. ನಂತರ ನಾನು ಮೆಟ್ರೋ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಅಷ್ಟೊತ್ತಿಗಾಗಲೇ ಆತನ ತಂದೆ-ತಾಯಿ ವಾಸ್ಟ್ಆ್ಯಪ್ ವಿಡಿಯೋ ಕಾಲ್ ಮಾಡಿ ಮಾತನಾಡಿದರು. ಹೈದರಾಬಾದ್ನಲ್ಲಿ ನೆಲೆಸಿದ್ದ ಅವನ ತಂದೆಯ ಸ್ನೇಹಿತ ಬಂದು ಅವನನ್ನು ಕರೆದುಕೊಂಡು ಹೋದರು ಎಂದು ವಂದನಾ ಮೆನನ್ ತಿಳಿಸಿದ್ದಾರೆ.
ಇದನ್ನೂ ಓದಿ: ಟ್ಯೂಷನ್ಗೆ ತೆರಳಿದ್ದ 12 ವರ್ಷದ ಬಾಲಕ ನಾಪತ್ತೆ! ವೈಟ್‌ಫೀಲ್ಡ್ ಠಾಣೆಯಲ್ಲಿ ಕೇಸ್ ದಾಖಲು
ಜನವರಿ 21ರ ಭಾನುವಾರದಂದು ವೈಟ್‌ಫೀಲ್ಡ್‌ನಲ್ಲಿ ಟ್ಯೂಷನ್ ತರಗತಿ ಮುಗಿಸಿ ಹಿಂತಿರುಗುತ್ತಿದ್ದಾಗ ಪರಿಣವ್ ನಾಪತ್ತೆಯಾಗಿದ್ದ. ತಂದೆ ತಡವಾಗಿ ಟ್ಯೂಷನ್ ತರಗತಿ ನಡೆಯತ್ತಿದ್ದಲ್ಲಿಗೆ ಬಂದಿದ್ದಾಗ ಬಾಲಕ ಅಲ್ಲಿಂದ ತೆರಳಿರುವುದು ಗೊತ್ತಾಗಿತ್ತು. ಅಂದಿನಿಂದ ಆತ ನಾಪತ್ತೆಯಾಗಿದ್ದ. ಮಾರತ್ತಹಳ್ಳಿ, ಯಮಲೂರು ಮತ್ತು ಮೆಜೆಸ್ಟಿಕ್‌ನಲ್ಲಿರುವ ವಿವಿಧ ಸಿಸಿಟಿವಿ ಕ್ಯಾಮೆರಾಗಳಲ್ಲಿ ಬಾಲಕನ ಚಲನವಲನಗಳು ಪತ್ತೆಯಾಗಿದ್ದವು. ಬಾಲಕ ನಗರ ತೊರೆದು ಬೇರೆಡೆ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಕಿಡ್ನ್ಯಾಪ್ ಮಾಡಿರುವ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿದ್ದವು. ಆದರೆ, ಬುಧವಾರ ಪ್ರಕರಣ ಸುಖಾಂತ್ಯವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ