ಬಾಲಕ ಮಿಸ್ಸಿಂಗ್ ಕೇಸ್ ಬೆನ್ನಲ್ಲೇ BMTC ಅಧಿಕಾರಿಗಳು ಅಲರ್ಟ್; ಅಪ್ರಾಪ್ತರ ಮೇಲೆ ನಿಗಾ
ಬೆಂಗಳೂರಿನ ವೈಟ್‌ಫೀಲ್ಡ್‌ನ ನಿವಾಸಿಯಾಗಿರುವ ಗುಂಜೂರಿನ ದೀನ್ಸ್ ಅಕಾಡೆಮಿಯ ವಿದ್ಯಾರ್ಥಿ ಪರಿಣವ್ ಇತ್ತೀಚೆಗೆ ನಾಪತ್ತೆಯಾಗಿದ್ದ ಪ್ರಕರಣ ನಡೆದಿತ್ತು. ಬಳಿಕ ಈತನನ್ನು ಹೈದರಾಬಾದ್ನಲ್ಲಿ ಪತ್ತೆಹಚ್ಚಿ ಮನೆಗೆ ಕರೆತರಲಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ ಅಧಿಕಾರಿಗಳು, ಬಸ್ನಲ್ಲಿ ಪ್ರಯಾಣಿಸುವ ಅಪ್ರಾಪ್ತರ ಮೇಲೆ ನಿಗಾ ಇರಿಸಲಿದ್ದಾರೆ.
ಬೆಂಗಳೂರು, ಜ.25: ಇತ್ತೀಚೆಗೆ ಟ್ಯೂಷನ್ಗೆ ತೆರಳಿದ್ದ ವೈಟ್‌ಫೀಲ್ಡ್‌ನ ನಿವಾಸಿ 12 ವರ್ಷದ ಬಾಲಕ ಪರಿಣವ್ ನಾಪತ್ತೆಯಾಗಿದ್ದನು. ಬಳಿಕ ಈತನನ್ನು ಹೈದರಾಬಾದ್ನಲ್ಲಿ ಪತ್ತೆಹಚ್ಚಿ ನಿನ್ನೆ ಬೆಂಗಳೂರಿಗೆ ಕರೆತರಲಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ (BMTC) ಅಧಿಕಾರಿಗಳು, ಬಸ್ನಲ್ಲಿ ಪ್ರಯಾಣಿಸುವ ಅಪ್ರಾಪ್ತರ ಮೇಲೆ ನಿಗಾ ಇರಿಸಲು ಮುಂದಾಗಿದ್ದಾರೆ.
ಒಂಟಿಯಾಗಿ ಸಂಚರಿಸುವ ಅಪ್ರಾಪ್ತರ ಮೇಲೆ ನಿಗಾ ಇರಿಸಲು ಮುಂದಾದ ಬಿಎಂಟಿಸಿ ಅಧಿಕಾರಿಗಳು, ಅನುಮಾನಾಸ್ಪದ ಓಡಾಟ ಕಂಡು ಬಂದರೆ ಮಕ್ಕಳ ಸಹಾಯವಾಣಿಗೆ ತಿಳಿಸುವಂತೆ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ನಾಪತ್ತೆಯಾಗಿದ್ದ ವೈಟ್‌ಫೀಲ್ಡ್ ಬಾಲಕನ ಹೈದರಾಬಾದ್ನಲ್ಲಿ ಪತ್ತೆಹಚ್ಚಿದ್ದು ಬೆಂಗಳೂರಿನ ಮಹಿಳೆ! ಹೇಗೆಂದು ಗೊತ್ತೇ?
ಶಾಲಾ ಸಮವಸ್ತ್ರದಲ್ಲಿರುವ ಮಕ್ಕಳನ್ನ ಹೊರತು ಪಡಿಸಿ ಬಸ್ಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಒಬ್ಬಂಟಿಯಾಗಿ ಪ್ರಯಾಣಿಸುತ್ತಿರುವ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇರಿಸಬೇಕು. ಮಕ್ಕಳ ಹಾವ-ಭಾವದಲ್ಲಿ ಗೊಂದಲಗಳಿದಲ್ಲಿ ಅಥವಾ ಅನುಮಾನಸ್ಪದವಾಗಿ ಪ್ರಯಾಣಿಸುತ್ತಿವುದು ಕಂಡುಬಂದಲ್ಲಿ ಅಂತಹ ಮಕ್ಕಳನ್ನ ಗುರುತಿಸಿ ಅವರ ಬಳಿ ಮಾತನಾಡಿ ಪೋಷಕರ ಬಗ್ಗೆ ಮಾಹಿತಿಯನ್ನ ಪಡೆಯಬೇಕು. ಮಕ್ಕಳು ಗೊಂದಲದ ಉತ್ತರವನ್ನ ನೀಡಿದಲ್ಲಿ, ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಬೇಕು. ಹತ್ತಿರದ ಪೊಲೀಸ್ ಠಾಣೆಗೆ ಅಂತಹ ಮಕ್ಕಳ ಕರೆದೊಯ್ಯುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕ ಹೈದರಾಬಾದ್ನಲ್ಲಿ ಪತ್ತೆ
ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಪರಿಣವ್ ಎರಡು ದಿನಗಳ ನಂತರ, ಅಂದರೆ ಬುಧವಾರ ಹೈದರಾಬಾದ್‌ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಪತ್ತೆಯಾಗಿದ್ದನು. ಈತನ ಪತ್ತೆಗೆ ಮಾಧ್ಯಮ ವೃತ್ತಿಪರರಾದ ವೈಟ್‌ಫೀಲ್ಡ್ ನಿವಾಸಿ ವಂದನಾ ಮೆನನ್ ಎಂಬವರು ಸಹಕರಿಸಿದ್ದರು.
ವಂದನಾ ಅವರು ಸಾಮಾಜಿಕ ಮಾಧ್ಯಗಳಲ್ಲಿ ಬಾಲಕನ ಫೋಟೋ ಹರಿದಾಡುತ್ತಿರುವುದನ್ನು ಕಂಡಿದ್ದರು. ಕೆಲಸದ ಪ್ರಯುಕ್ತ ಬುಧವಾರ ಬೆಳಗ್ಗೆ ಹೈದರಾಬಾದ್‌ಗೆ ಬಂದಿದ್ದ ವಂದನಾ ಅವರು ಮೆಟ್ರೋ ನಿಲ್ದಾಣದಲ್ಲಿ ಬಾಲಕ ಟಿಕೆಟ್ ಪಡೆಯಲು ಲೈನ್ನಲ್ಲಿ ನಿಂತಿದ್ದಾಗ ನೋಡಿದ್ದಾರೆ. ಬಳಿಕ ಬಾಲಕನ್ನು ವಿಚಾರಿಸಿ ತನ್ನ ಪತಿಯ ಮೂಲಕ ಬಾಲಕನ ಪೋಷಕರಿಗೆ ಮಾಹಿತಿ ನೀಡಿದ್ದರು. ಹೈದರಾಬಾದ್ನಲ್ಲಿ ನೆಲೆಸಿದ್ದ ಬಾಲಕನ ತಂದೆಯ ಸ್ನೇಹಿತರೊಬ್ಬರು ಬಂದು ಆತನನ್ನು ಕರೆದುಕೊಂಡು ಹೋಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ