ಸರ್ಕಾರದ ಸಹಾಯ ಇಲ್ಲದೇ ಮಾಡಾಳ್​​​ಗೆ ಹೇಗೆ ಬೇಲ್ ಸಿಗುತ್ತೆ? ಬಿಜೆಪಿ ವಿರುದ್ಧ ರಾಮಲಿಂಗಾರೆಡ್ಡಿ ವಾಗ್ದಾಳಿ

|

Updated on: Mar 08, 2023 | 12:48 PM

ಸರ್ಕಾರದ ಸಹಾಯ ಇಲ್ಲದೇ ಮಾಡಾಳ್​​​ಗೆ ಹೇಗೆ ಬೇಲ್ ಸಿಗುತ್ತೆ? ಒಂದೇ ದಿನಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು ಸಿಕ್ಕಿದೆ. ಈ ಪ್ರಕರಣ ಬಗ್ಗೆ ವಕೀಲರ ಸಂಘದವರು ಸಿಜೆಐಗೆ ಪತ್ರ ಬರೆದಿದ್ದಾರೆ ಎಂದು ರಾಮಲಿಂಗರೆಡ್ಡಿ ಆಕ್ರೋಶ ಹೊರ ಹಾಕಿದ್ದಾರೆ.

ಬೆಂಗಳೂರು: ಭ್ರಹ್ಮಾಂಡ ಬ್ರಷ್ಟಾಚಾರದ ಆರೋಪದಲ್ಲಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ(Madalu Veerupakshappa) ಮಧ್ಯಂತರ ಜಾಮೀನು ಸಿಕ್ಕಿದೆ. ಬೇಲ್‌ ಸಿಗುತ್ತಿದ್ದಂತೆ ಶಾಸಕ ಮಾಡಾಳ್ ದಾವಣಗೆರೆಯಲ್ಲೇ ಪ್ರತ್ಯಕ್ಷರಾಗಿದ್ದಾರೆ. ಬೆಂಬಲಿಗರು, ಕಾರ್ಯಕರ್ತರಿಂದ ಮಾಡಾಳ್ ಪರ ಜೈ ಘೋಷಣೆಗಳು ಮೊಳಗಿವೆ. ಸದ್ಯ ಈ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ(Ramalinga Reddy) ಆಕ್ರೋಶ ಹೊರ ಹಾಕಿದ್ದಾರೆ. ಸರ್ಕಾರದ ಸಹಾಯ ಇಲ್ಲದೇ ಮಾಡಾಳ್​​​ಗೆ ಹೇಗೆ ಬೇಲ್ ಸಿಗುತ್ತೆ? ಎಂದು ಪ್ರಶ್ನಿಸಿದ್ದಾರೆ.

ಒಂದೇ ದಿನಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು ಸಿಕ್ಕಿದೆ. ಈ ಪ್ರಕರಣ ಬಗ್ಗೆ ವಕೀಲರ ಸಂಘದವರು ಸಿಜೆಐಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ನ್ಯಾಯಾಂಗದ ಪ್ರಕ್ರಿಯೆ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. ಮಾಡಾಳ್​ಗೆ ಜಾಮೀನು ಕೊಡಿಸುವಲ್ಲಿ ಸರ್ಕಾರ ಸಹ ಶಾಮೀಲಾಗಿದೆ. ವಿರೋಧ ಪಕ್ಷದವರಿಗೆ ಜಾಮೀನಿಗಾಗಿ ತಿಂಗಳುಗಟ್ಟಲೇ ಅಲೆಯಬೇಕು. ಆದ್ರೆ ಬಿಜೆಪಿ ಶಾಸಕ ವಿರೂಪಾಕ್ಷಪ್ಪಗೆ ಒಂದೇ ದಿನದಲ್ಲಿ ಬೇಲ್ ಸಿಕ್ಕಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಭ್ರಷ್ಟಾಚಾರ ಆರೋಪಿ ಶಾಸಕನಿಗೆ ಅದ್ಧೂರಿ ಸ್ವಾಗತ

ಮಾಡಾಳ್ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ತಾವು ಅಧ್ಯಕ್ಷರಾಗಿರೋ ನಿಗಮದಲ್ಲೇ ಡೀಲ್‌ ನಡೆದಿದೆ. ಶಾಸಕರ ಪುತ್ರ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಜೈಲು ಸೇರಿದ್ದಾನೆ. ಇದೇ ಕೇಸ್‌ನಲ್ಲಿ ಎ1 ಆರೋಪಿಯಾಗಿರೋ ಬಿಜೆಪಿ ಶಾಸಕ ಮಾಡಾಳ್‌ ಇಷ್ಟು ದಿನ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಆದ್ರೆ ನಿನ್ನೆ(ಮಾರ್ಜ್ 07) ಬೇಲ್‌ ಸಿಗ್ತಿದ್ದಂತೆ ಶಾಸಕ ಮಾಡಾಳ್ ದಾವಣಗೆರೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಇದನ್ನೂ ಓದಿ:ಇಂದು ಅಥವಾ ನಾಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನವಾಗುತ್ತೆ: ಆಪ್ತನ ಬಗ್ಗೆ ಯಡಿಯೂರಪ್ಪ ಬಿಚ್ಚುಮಾತು 

ಕೆಎಸ್‌ಡಿಎಲ್‌ಗೆ ಕಚ್ಚಾ ವಸ್ತು ಪೂರೈಕೆ ಸಂಬಂಧ, ಟೆಂಡರ್‌ ಕೊಡಲು ಶಾಸಕರು ಲಂಚ ಕೇಳಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಇದೇ ಕೇಸ್‌ನ ಎ1 ಆರೋಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪನಿಗೆ ಹೈಕೋರ್ಟ್‌ ಏಕಸದಸ್ಯ ಪೀಠ ಮಧ್ಯಂತರ ಜಾಮೀನು ನೀಡಿದೆ. ಪೊಲೀಸರು ಐದಾರು ತಂಡ ಮಾಡಿಕೊಂಡು ಹುಡುಕಿದ್ರೂ ಸಿಗದ ಮಾಡಾಳ್‌, ಬೇಲ್‌ ಸಿಕ್ಕ ಕೆಲವೇ ಕ್ಷಣದಲ್ಲೇ ಹುಟ್ಟೂರಿನಲ್ಲೇ ಪ್ರತ್ಯಕ್ಷರಾಗಿದ್ರು.

ಜಾಮೀನು ಸಿಗುತ್ತಿದ್ದಂತೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಚನ್ನೇಶಪುರದಲ್ಲೇ ಮಾಡಾಳ್‌ ಪ್ರತ್ಯಕ್ಷವಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆರೋಪಿ ಶಾಸಕರನ್ನ ಅದ್ಧೂರಿಯಾಗಿ ಮೆರವಣಿಗೆ ಮಾಡಿದರು. ಬಿಜೆಪಿ ಧ್ವಜ ಹಿಡಿದೇ ಭರ್ಜರಿಯಾಗಿ ಶಾಸಕ ಮಾಡಾಳ್​ರನ್ನು ಸ್ವಾಗತಿಸಿದರು.

ಮಾಧ್ಯಮಗಳ ಮುಂದೆ ಗಳಗಳನೆ ಅತ್ತ ಮಾಡಾಳ್‌

ಇನ್ನು ಭ್ರಷ್ಟಾಚಾರ ಆರೋಪಿಯ ಮೆರವಣಿಗೆಯಾಗುತ್ತಿರುವುದು ಸುದ್ದಿಯಾಗುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌, ಮಾಡಾಳ್‌ಗೆ ಮೆರವಣಿಗೆ ನಿಲ್ಲಿಸುವಂತೆ ಸೂಚಿಸಿದರು. ಆ ಬಳಿಕ ಮಾಧ್ಯಮಗಳ ಮುಂದೆ ಬಂದ ಮಾಡಾಳ್‌, ಗಳಗಳನೆ ಕಣ್ಣೀರು ಹಾಕಿದರು. ಇನ್ನು ತಮ್ಮ ಮೇಲಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಮಾಡಾಳ್‌, ಅಡಕೆ ಮಾರಿದ ಹಣ, ಕ್ರಷರ್‌ನಿಂದ ಬಂದ ಹಣವನ್ನ ಮನೆಯಲ್ಲೇ ಇಟ್ಟುಕೊಂಡಿದ್ದೆ. ಅದೇ ಹಣವನ್ನ ಲೋಕಾಯುಕ್ತರು ಸೀಜ್‌ ಮಾಡಿದ್ದಾರೆ ಅಂತಾ ಹೇಳಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:46 pm, Wed, 8 March 23