ಇಂದು ಅಥವಾ ನಾಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನವಾಗುತ್ತೆ: ಆಪ್ತನ ಬಗ್ಗೆ ಯಡಿಯೂರಪ್ಪ ಬಿಚ್ಚುಮಾತು
ಮಗನ ಲಂಚ ಹಾಗೂ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನದ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಇಂದು ಅಥವಾ ನಾಳೆ ಬಂಧನವಾಗುತ್ತೆ ಎಂದಿದ್ದಾರೆ.
ಕಲಬುರಗಿ: ಲಂಚ ಹಾಗೂ ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿಂತೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನನ್ನು ಲೋಕಾಯುಕ್ತ ಬಂಧಿಸಿದೆ. ಇದರ ಬೆನ್ನಲ್ಲೇ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಲೋಕಾಯುಕ್ತ ಮೂರು ವಿಶೇಷ ತಂಡ ರಚಿಸಿದೆ. ಇನ್ನು ತಮ್ಮ ಆಪ್ತ ತಲೆಮರೆಸಿಕೊಂಡಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಇಂದು ಅಥವಾ ನಾಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನವಾಗುತ್ತೆ ಎಂದು ಹೇಳಿದ್ದಾರೆ.
ಇಂದು(ಮಾ.06) ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಮಾತನಾಡಿದ ಯಡಿಯೂರಪ್ಪ, ಇಂದು ಅಥವಾ ನಾಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನವಾಗುತ್ತೆ. ಭ್ರಷ್ಟಾಚಾರ ಯಾರೇ ಮಾಡಿದ್ದರೂ ಅದು ಅಕ್ಷಮ್ಯ ಅಪರಾಧ. ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು. ನಮ್ಮ ಪಕ್ಷ ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡಿಲ್ಲ. ವಿರೂಪಾಕ್ಷಪ್ಪರನ್ನು ಬಂಧಿಸಿ ಕ್ರಮಕೈಗೊಳ್ಳಬೇಕು. ಭ್ರಷ್ಟಾಚಾರ ಮಾಡಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಾಡಾಳ್ ವಿರೂಪಾಕ್ಷಪ್ಪ ಬಿಎಸ್ವೈ ಆಪ್ತ
ಹೌದು..ದಾವಣಗೆರೆಯ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರು ಮಾಜಿ ಸಿಎಂ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ವಿರೂಪಾಕ್ಷಪ್ಪಗೆ ಕೆಎಸ್ಡಿಎಲ್ ನಿಗಮ ಮಂಡಳಿ ಸಿಗುವುದರಲ್ಲಿ ಬಿಎಸ್ವೈ ಪಾತ್ರ ಇದೆ. ಈ ಪ್ರಕರಣ ಬಿಜೆಪಿ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಇದಕ್ಕೆ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಚುನಾವಣೆ ಹೊತ್ತಲ್ಲೇ ಈ ರೀತಿ ಡ್ಯಾಮೇಜ್ ಬಗ್ಗೆ ಕೇಂದ್ರ ನಾಯಕರು ಗರಂ ಆಗಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.
ಹಿರಿಯ ನಾಯಕರ ಮೇಲೆ ಬಿಜೆಪಿ ಲೋಕಾಯುಕ್ತ ಅಸ್ತ್ರ ಪ್ರಯೋಗಿಸುತ್ತಿದ್ದ, ಯಡಿಯೂರಪ್ಪ ಆಪ್ತರು, ಬೆಂಗಲಿಗರು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವ ಚರ್ಚೆ ರಾಜ್ಯ ರಾಜಕಾರಣದಲ್ಲಿ ನಡೆದಿದೆ. ಬಿಜೆಪಿಯನ್ನು ಕಟ್ಟಿಹಾಕಲು ಇದೇ ವಿಚಾರವನ್ನೇ ಕಾಂಗ್ರೆಸ್ ಮತ್ತೊಂದು ಅಸ್ತ್ರವಾಗಿ ಪ್ರಯೋಗಿಸುತ್ತಿದೆ. ಹಿರಿಯ ನಾಯಕರ ಮೇಲೆ ಬಿಜೆಪಿ ಲೋಕಾಯುಕ್ತ ಅಸ್ತ್ರ ಪ್ರಯೋಗಿಸುತ್ತಿದೆ. ಅದರಲ್ಲೈ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತರು ಮತ್ತು ಬೆಂಬಲಿಗರನ್ನೇ ಗುರಿ ಮಾಡಲಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ದಾವಣಗೆರೆ ಬಿಜೆಪಿ ಸಂಸದ ಜಿ.ಎಂ ಸಿದ್ದೇಶ್ವರ್ ಅವರೇ ವಿರೂಪಾಕ್ಷಪ್ಪ ಮೇಲೆ ಲೋಕಾಯುಕ್ತ ದಾಳಿ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕ್ರಪ್ಪ ಗಂಭೀರ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.