ಸಿಎಂ ಮುಂದೆ ಸಮಸ್ಯೆಗಳ ಮಹಾಪೂರ; ಜನತಾ ದರ್ಶನ ವೇಳೆ ಸಿಎಂ ಬಳಿ ಸಮಸ್ಯೆ ಹೇಳಿಕೊಂಡ ಜನರಿಗೆ ಕೂತಲ್ಲೆ ಪರಿಹಾರ

| Updated By: ಆಯೇಷಾ ಬಾನು

Updated on: Nov 27, 2023 | 3:45 PM

ಜನರ ಬಳಿ ಆಡಳಿತ.. ಜನರ ಕಷ್ಟಗಳನ್ನ ಪರಿಹರಿಸೋದೇ ನಮ್ಮ ಕಾಯಕ ಇದೇ ದ್ಯೇಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಇದೀಗ ಆಡಳಿತ ಯಂತ್ರವನ್ನ ಜನರ ಬಳಿಗೆ ಕೊಂಡೊಯ್ಯುತ್ತಿದೆ. ಸಿಎಂ ಸಿದ್ದರಾಮಯ್ಯ ಇಂದು ಮೆಗಾ ಜನತಾ ದರ್ಶನ ಮಾಡ್ತಿದ್ದಾರೆ. ಬೆಳಗ್ಗೆಯಿಂದ ಜನರ ಅಹವಾಲು ಆಲಿಸ್ತಿದ್ದು, ಸಿಎಂ ಗೃಹ ಕಚೇರಿಗೆ ಕೃಷ್ಣಾಗೆ ಸಾವಿರಾರು ಜನರು ಹರಿದು ಬಂದಿದ್ದಾರೆ.

ಸಿಎಂ ಮುಂದೆ ಸಮಸ್ಯೆಗಳ ಮಹಾಪೂರ; ಜನತಾ ದರ್ಶನ ವೇಳೆ ಸಿಎಂ ಬಳಿ ಸಮಸ್ಯೆ ಹೇಳಿಕೊಂಡ ಜನರಿಗೆ ಕೂತಲ್ಲೆ ಪರಿಹಾರ
ಸಿಎಂ ಜನತಾ ದರ್ಶನ
Follow us on

ಬೆಂಗಳೂರು, ನ.27: ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ್ಮೇಲೆ, ಆಗಾಗ ಜನತಾ ದರ್ಶನ ನಡೆಸ್ತಾ ಇದ್ರು. ಆದರೆ ಇವತ್ತು ಮೊದಲ ಬಾರಿ ಪೂರ್ಣಾವಧಿ ಜನತಾ ದರ್ಶನ (Janatha Darshana) ನಡೆಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರು ಇಡೀ ದಿನ ಜನರ ಸಮಸ್ಯೆ, ಅಹವಾಲು ಆಲಿಸುತ್ತಿದ್ದಾರೆ. ಇಂದು ಬೆಳಗ್ಗೆಯಿಂದಲೆ ಜನಸ್ಪಂದನಾ ಹೆಸರಿನಲ್ಲಿ, ಸಿಎಂ ಸಿದ್ದರಾಮಯ್ಯರ ಗೃಹ ಕಚೇರಿ ಕೃಷ್ಣಾದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸಾವಿರಾರು ಜನ ಸಿಎಂ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಕೆಲವರಿಗೆ ಸಿಎಂ ಅವರು ಕೂತಲ್ಲೇ ಪರಿಹಾರ ನೀಡಿ ಸ್ಪಂದಿಸುತ್ತಿದ್ದಾರೆ. ಮಗ ಆಸ್ತಿ ಬರೆಸಿಕೊಂಡು ಮನೆಯಿಂದ ಹೊರಹಾಕಿದ್ದಾನೆಂದು ಸಿಎಂಗೆ ದೂರು ನೀಡಿದ ಘಟನೆಯೂ ನಡೆದಿದೆ.

ಜನತಾ ದರ್ಶನಕ್ಕಾಗಿ ವಿಶೇಷ ಚೇತನರು, ಹಿರಿಯ ನಾಗರಿಕರು ಸೇರಿದಂತೆ 20 ಕೌಂಟರ್​ಗಳನ್ನ ಮಾಡಲಾಗಿದೆ. 1000ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆ. ಇಂದು, ಮೊದಲಿಗೆ ವಿಶೇಷ ಚೇತನರ ಕೌಂಟರ್​ ಬಳಿ ತೆರಳಿದ ಸಿಎಂ ಸಿದ್ದರಾಮಯ್ಯ ಅಲ್ಲಿ ಸಮಸ್ಯೆ ಆಲಿಸಿ, ಅಹವಾಲು ಸ್ವೀಕರಿಸಿದ್ರು. 148 ಮಂದಿ ವಿಶೇಷ ಚೇತನರು ಮೂರು ಚಕ್ರ ವಾಹನಕ್ಕೆ ಬೇಡಿಕೆ ಸಲ್ಲಿಸಿದ್ರು. ಬಳಿಕ ಸಿಎಂ ಸಿದ್ದರಾಮಯ್ಯ ತ್ರಿಚಕ್ರ ವಾಹನ ಕೊಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾತ್ ಅವರಿಗೆ ಖಡಕ್ ಸೂಚನೆ ನೀಡಿದ್ರು. ಇನ್ನು ಬಸವರಾಜ್ ಅನ್ನೋ ಕಿಡ್ನಿ ರೋಗಿಗೆ ಸ್ಥಳದಲ್ಲೇ ಸಿಎಂ ಪರಿಹಾರ ನಿಧಿಯಿಂದ 1 ಲಕ್ಷ ರೂಪಾಯಿ ನೀಡಲು ಸೂಚನೆ ನೀಡಿದರು. ಕಾಡುಗೊಲ್ಲ ಸರ್ಟಿಫಿಕೇಟ್ ಕೊಡ್ತಾ ಇಲ್ಲ ಎಂದು ಸಿಎಂಗೆ ಗೊಲ್ಲ ಸಮುದಾಯದ ಮುಖಂಡರು ದೂರು ನೀಡದ್ದಾರೆ. ಈ ವೇಳೆ ರೆವೆನ್ಯು ಸೆಕ್ರೆಟರಿಗೆ ಪರಿಶೀಲನೆ ನಡೆಸುವಂತೆ ಸಿಎಂ ಸೂಚನೆ ನೀಡಿದ್ರು.

ಮಗ ಆಸ್ತಿ ಬರೆಸಿಕೊಂಡು ಮನೆಯಿಂದ ಹೊರಹಾಕಿದ್ದಾನೆಂದು ಸಿಎಂಗೆ ದೂರು

ಜನತಾದರ್ಶನ ಕಾರ್ಯಕ್ರಮದಲ್ಲಿ ಮಗ ಆಸ್ತಿ ಬರೆಸಿಕೊಂಡು ಮನೆಯಿಂದ ಹೊರಹಾಕಿದ್ದಾನೆಂದು ತಿಪಟೂರು ತಾಲೂಕಿನ ಮಹದೇವಮ್ಮ ಅವರು ಸಿಎಂಗೆ ದೂರು ನೀಡಿದರು. ಈ ವೇಳೆ ಜನರ ಅಹವಾಲು ಸ್ಪೀಕರಿಸಿ ಸಮಸ್ಯೆ ಪರಿಹಾರಕ್ಕೆ ಸಿಎಂ ಸೂಚನೆ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ್​ ಮೂಲಕ ತುಮಕೂರು ಡಿಸಿ ಗಮನಕ್ಕೆ ತಂದಿದ್ದು ಪ್ರಕರಣ ಎಸಿ ಕೋರ್ಟ್​ನಲ್ಲಿದೆ, ಇದರ ಬಗ್ಗೆ ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ. ಅಂಧರ ಶಾಲೆಗೆ ಸಿಎಂ ಸೈಟ್​ಗೆ ಹಣ ನೀಡುವ ಸಂಬಂಧ ಸಿಎಂಗೆ ದೂರು ನೀಡಿದ್ದು ಸಮಸ್ಯೆ ಬಗೆಹರಿಸುವಂತೆ ರಾಯಚೂರು ಡಿಸಿಗೆ ಸಿಎಂ ಸೂಚನೆ ನೀಡಿದ್ದಾರೆ.

ಮನೆ ಕಟ್ಟಲು ಮಂಜೂರಾತಿ ನೀಡುವಂತೆ ಮಹಿಳೆ ಮನವಿ

ಇನ್ನು ಹುಣಸೂರಿನ‌ ಕಲ್ಲಹಳ್ಳಿ ಪಂಚಾಯ್ತಿಯ ಲಕ್ಷ್ಮೀಬಾಯಿ ಎನ್ನುವವರು ಅಲೆಮಾರಿ ಡೋಂಗ್ರಿ ಗೆರೆಸಿಯಾ ಸಮುದಾಯದವರಿಗೆ 40 ಮನೆಗಳು ಮಂಜೂರಾಗಿವೆ. ಇವರಿಗೆ ಮನೆ ಕಟ್ಟಲು ಮಂಜೂರಾತಿ ನೀಡುವಂತೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಸಿಎಂ ಅಲೆಮಾರಿ ಅಭಿವೃದ್ಧಿ ನಿಗಮದ ಎಂಡಿ ಅವರನ್ನು ಕರೆದು, ಅರ್ಜಿಯನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸಿ ತಮಗೆ ವರದಿ ನೀಡಬೇಕು ಎಂದು ಸೂಚಿಸಿದರು.

ಜನತಾ ದರ್ಶನ ವೇಳೆ ಕಣ್ಣೀರು ಹಾಕಿದ ಮಹಿಳೆ, 2 ಲಕ್ಷ ಪರಿಹಾರ

ಗದಗದಿಂದ ಬೆಂಗಳೂರಿಗೆ ಕುಟುಂಬ ಸಮೇತ ಆಗಮಿಸಿದ ದಂಪತಿ ಮಗುವಿನ ಸಮಸ್ಯೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಸೊಂಟದ ಸ್ವಾಧೀನ ಕಳೆದುಕೊಂಡಿರುವ 7 ತಿಂಗಳ ಮೇಘಾಶ್ರೀಗೆ ಹೃದಯದಲ್ಲಿ 2 ರಂಧ್ರ ಇರುವುದರಿಂದ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು  ಮೇಘಶ್ರೀ ತಾಯಿ ಅಂಜಲಿ ವೀರೇಶ್ ಅಳಲು ತೋಡಿಕೊಂಡಿದ್ದು ಸಿಎಂ ಸಿದ್ದರಾಮಯ್ಯ 2 ಲಕ್ಷ ಪರಿಹಾರ ಘೋಸಿದ್ದಾರೆ. ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಘೋಷಿಸಿದ್ದಾರೆ.  ಇನ್ನು ಸ್ಕ್ಯಾನಿಂಗ್ ವೇಳೆ ಗದಗ ಆಸ್ಪತ್ರೆ ವೈದ್ಯರು ಯಾವುದೇ ಮಾಹಿತಿ ನೀಡಿಲ್ಲ. ಈವರೆಗೆ 2 ಶಸ್ತ್ರಚಿಕಿತ್ಸೆ ಆಗಿದೆ, ಇನ್ನೂ ಎರಡು ಆಪರೇಷನ್ ಆಗಬೇಕಿದೆ. ಈವರೆಗೆ ಶಸ್ತ್ರಚಿಕಿತ್ಸೆಗೆ 3 ಲಕ್ಷ ಹಣ ಖರ್ಚಾಗಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ, ಆಪರೇಷನ್​​ಗೆ ಹಣ ಬೇಕಿದೆ ಎಂದು ಟಿವಿ9 ಮುಂದೆ ಮಹಿಳೆ ಕಣ್ಣೀರು ಹಾಕಿದರು.

ಮಗನಿಗೆ ಕಿಡ್ನಿ ಸಮಸ್ಯೆ ಇದೆ, ವರ್ಗಾವಣೆ ಮಾಡಿ ಎಂದು ಮನವಿ

ಮಗನ ಜೊತೆ ಬಂದು ಶಾಲಾ ಶಿಕ್ಷಕರೊಬ್ಬರು ವರ್ಗಾವಣೆಗೆ ಮನವಿ ಮಾಡಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕನಕಪುರ ಮೂಲದ ಹೈಸ್ಕೂಲ್ ಶಿಕ್ಷಕರೊಬ್ಬರು ಮಗನನ್ನು ಎತ್ತಿಕೊಂಡು ಬಂದು ಸಿಎಂ ಬಳಿ ಕಣ್ಣೀರು ಹಾಕಿದ್ದಾರೆ. ಮಗನಿಗೆ ಕಿಡ್ನಿ ಸಮಸ್ಯೆ ಇದೆ ಹೀಗಾಗಿ ಕನಕಪುರಕ್ಕೆ ವರ್ಗಾವಣೆ ಮಾಡಿ ಎಂದು ಮನವಿ ಮಾಡಿದ್ದಾರೆ. ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗೆ ಸಿಎಂ ಸೂಚನೆ ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

 

 

Published On - 1:45 pm, Mon, 27 November 23