
ಬೆಂಗಳೂರು, ಏಪ್ರಿಲ್ 20: ಇತ್ತೀಚಿನ ಕಾಲಘಟ್ಟದ ಪತ್ರಿಕೋದ್ಯಮ ಅಧ್ಯಯನಶೀಲ ಕೊರತೆಯಿಂದ ಬಳಲುತ್ತಿದೆ ಎಂದು ಹಿರಿಯ ಪತ್ರಕರ್ತ ಕೆ.ಎಸ್.ರಾಜನ್ (KS Rajan) ಅಭಿಪ್ರಾಯಪಟ್ಟಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಸದ್ಯ ವಿಶ್ರಾಂತ ಜೀವನದಲ್ಲಿರುವ 77 ವಸಂತ ತುಂಬಿದ ಕೆ.ಎಸ್.ರಾಜನ್ ಅವರನ್ನು ಜೆ.ಪಿ.ನಗರ ಅವರ ಮನೆಯಲ್ಲಿಯೇ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಸನ್ಮಾನಿಸಿದ ಸಂದರ್ಭದಲ್ಲಿ ಮಾತನಾಡಿದರು. ನಮ್ಮ ಕಾಲದಲ್ಲಿದ್ದಂತೆ ಲೈಬ್ರರಿಗೆ ಹೋಗಿ ಅಧ್ಯಯನ ಮಾಡಬೇಕಾದ ಸ್ಥಿತಿ ಇಲ್ಲ. ಮೊಬೈಲ್‌ನಲ್ಲಿಯೇ ಎಲ್ಲಾ ಮಾಹಿತಿ ಸಿಗುವ ಕಾಲವಿದೆ. ಪ್ರತಿ ವಿಷಯದ ಬಗ್ಗೆ ಅಧ್ಯಯನಶೀಲತೆ ಪತ್ರಕರ್ತರಿಗೆ ಮುಖ್ಯವಾದರೆ ಮಾತ್ರ ಅವರಲ್ಲಿ ಪರಿಪಕ್ವವಾದ ಪತ್ರಕರ್ತ ರೂಪುಗೊಳ್ಳಬಲ್ಲ ಎಂದರು.
ಕನ್ನಡ ಭಾಷೆಯ ಬಗ್ಗೆ ಬಹಳ ಜವಾಬ್ದಾರಿಯಿಂದ ನಾವುಗಳು ಹೆಜ್ಜೆ ಇಡಬೇಕು. ಕನ್ನಡದೊಳಗೆ ಇಂಗ್ಲಿಷ್ ಭಾಷೆ ಬಳಕೆ ಕಡಿಮೆ ಮಾಡಬೇಕು. ಈ ನಿಟ್ಟಿನಲ್ಲಿ ಹೊಸ ತಲೆಮಾರಿನ ಪತ್ರಕರ್ತರಿಗೆ ತರಬೇತಿಯೂ ಬಹಳ ಮುಖ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದ್ವಾರಕೀಶ್ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿ ಸ್ಥಾಪನೆಗೆ ಮುಂದೆ ಬಂದ ಶಾಸಕ: ಶಿವಾನಂದ ತಗಡೂರು ಅಭಿನಂದನೆ
1967ಲ್ಲಿ ಕನ್ನಡ ಪ್ರಭ ಪತ್ರಿಕೆ ಪ್ರಾರಂಭ ಮಾಡುವ ಸಂದರ್ಭದಲ್ಲಿ ಗೋಕುಲ ಪತ್ರಿಕೆ ಬಿಟ್ಟು ಅಲ್ಲಿಗೆ ಹೋದೆ. ಪ್ರೂಪ್ ರೀಡರ್ ಹುದ್ದೆಯಿಂದ ಸುದ್ದಿಸಂಪಾದಕನಾಗುವ ತನಕ 36 ವರ್ಷಗಳ ಕಾಲ ಒಂದೇ ಪತ್ರಿಕೆಯಲ್ಲಿ ಕೆಲಸ ಮಾಡಿದೆ. ವೃತ್ತಿ ಬದ್ದತೆಯೇ ನನ್ನನ್ನು ಎತ್ತರಕ್ಕೆ ಬೆಳೆಸಿದೆ. ಒಂದು ದಿನವೂ ನಾನು ಯಾರ ಜೊತೆಗೂ ಜಗಳವಾಡಲಿಲ್ಲ. ಆ ರೀತಿಯಲ್ಲಿ ನನ್ನ ವೃತ್ತಿ ಜೀವನ ಮುಗಿಸಿದ್ದು ನನಗೆ ತೃಪ್ತಿಯಿದೆ ಎಂದು ವೃತ್ತಿ ಜೀವನವನ್ನು ಮೆಲುಕು ಹಾಕಿದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸುದ್ದಿ ಮನೆಯಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಾ ಬಂದ ರಾಜನ್ ಅವರ ಕ್ರೀಯಾಶೀಲತೆಯೇ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿದೆ ಎಂದಿದ್ದಾರೆ.
ಐಎಡಬ್ಲೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ರಾಜನ್ ಮತ್ತು ನಾನು ಕಾಲೇಜು ದಿನಗಳಿಂದಲೂ ಒಡನಾಡಿಯಾಗಿದ್ದೆವು. ಕನ್ನಡ ಪ್ರಭ ಪತ್ರಿಕೆಯಲ್ಲಿ ಒಟ್ಟಿಗೆ ಕೆಲಸ ಮಾಡುವ ಅವಕಾಶ ನಮಗೆ ಸಿಕ್ಕಿತ್ತು. ತಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಬರುತ್ತಿದ್ದ ಸೌಜನ್ಯದ ವ್ಯಕ್ತಿತ್ವ ಅವರದಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ: KUWJ ವಾರ್ಷಿಕ ಪ್ರಶಸ್ತಿ:TV9 ಕನ್ನಡ ಡಿಜಿಟಲ್ನ ಡೆಪ್ಯೂಟಿ ಎಡಿಟರ್ ಜಗದೀಶ್ ಬೆಳ್ಳಿಯಪ್ಪಗೆ ರವಿ ಬೆಳಗೆರೆ ಪ್ರಶಸ್ತಿ
ಇದೇ ಸಂದರ್ಭದಲ್ಲಿ ಕೆ.ಎಸ್.ರಾಜನ್, ಪತ್ನಿ ಶ್ರೀದೇವಿ ಅವರನ್ನು ಸನ್ಮಾನಿಸಲಾಯಿತು. ಪುತ್ರ ನವೀನ್, ಸೊಸೆ ಸ್ವತಿ ಶ್ರೀವಾತ್ಸವ ಇದ್ದರು. ಕೆಯುಡಬ್ಲೂೃಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಸ್ವಾಗತಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದೇವರಾಜು, ಬೆಂಗಳೂರು ನಗರ ಘಟಕದ ಶಿವರಾಜು ಮತ್ತು ಶರಣುಬಸಪ್ಪ ಹಾಜರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:09 pm, Sat, 20 April 24