ಬೆಂಗಳೂರಿನಲ್ಲಿರುವ ಮಲಯಾಳಿಗರಿಗೆ ಕನ್ನಡ ಕಲಿಸಲು ಆರಂಭವಾಗಲಿದೆ ತರಗತಿ!

|

Updated on: Jul 24, 2024 | 9:09 AM

ಒಂದೆಡೆ ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆ ವಿಚಾರವಾಗಿ ವಿವಾದಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಇದೀಗ ಬೆಂಗಳೂರಿನಲ್ಲಿರುವ ಮಲಯಾಳಂ ಭಾಷಿಕರಿಗೆ ಕನ್ನಡ ಕಲಿಸಲು ಹೊರಟಿದೆ. ಆದರೆ, ಇದು ಮಲಯಾಳಿ ಭಾಷಿಕರ ಮನವಿಯ ಮೇರೆಗೆ ಎಂಬುದು ಗಮನಾರ್ಹ. ಬೆಂಗಳೂರಿನಲ್ಲಿ ಯಾವಾಗ ಕನ್ನಡ ತರಗತಿಗಳು ಆರಂಭವಾಗಲಿವೆ ಮತ್ತು ರೂಪುರೇಷೆ ಹೇಗಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಬೆಂಗಳೂರಿನಲ್ಲಿರುವ ಮಲಯಾಳಿಗರಿಗೆ ಕನ್ನಡ ಕಲಿಸಲು ಆರಂಭವಾಗಲಿದೆ ತರಗತಿ!
ಕನ್ನಡ ಅಭಿವೃದ್ಧಿ ಪ್ರಾಧಿಕಾರ
Image Credit source: Kannada Development Authority
Follow us on

ಬೆಂಗಳೂರು, ಜುಲೈ 24: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದ ಜನ ಜೀವನ ಮಾಡುತ್ತಿದ್ದಾರೆ. ಅದರಲ್ಲಿಯೂ ನೆರೆಯ ಕೇರಳ ರಾಜ್ಯದ ಮಲಯಾಳ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಕನ್ನಡ ಕಲಿಸಲು ಇದೀಗ ರಾಜ್ಯ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ವಿಶೇಷ ಯೋಜನೆ ರೂಪಿಸಿದೆ. ಬೆಂಗಳೂರಿನಲ್ಲಿ ಮಲಯಾಳಂ ಭಾಷಿಕರಿಗೆ ಕನ್ನಡ ಕಲಿಕೆ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗುರುವಾರ ಚಾಲನೆ ನೀಡಲಿದೆ.

ವಿಕಾಸ ಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ಯುಟಿ ಖಾದರ್ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಭಾಗವಹಿಸಲಿದ್ದಾರೆ.

ಬೆಂಗಳೂರಿನಲ್ಲಿ 20 ಕಲಿಕಾ ಕೇಂದ್ರ

ಈ ಉಪಕ್ರಮವು ಅನ್ಯಭಾಷಿಕರಿಗೆ ಭಾಷೆಯನ್ನು ಕಲಿಸಲು ನೆರವಾಗಲಿದೆ. ಇದಕ್ಕಾಗಿ ಬೆಂಗಳೂರು ನಗರದಾದ್ಯಂತ 20 ಕನ್ನಡ ಕಲಿಕಾ ಕೇಂದ್ರಗಳನ್ನು ಸ್ಥಾಪಿಸುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವಿಶಾಲ ಯೋಜನೆಯ ಭಾಗವಾಗಿದೆ.

ಉದ್ಘಾಟನಾ ಸಂದರ್ಭದ ತರಗತಿಗಳು ಮಲಯಾಳಂ ಮಿಷನ್, ಕೇರಳ ಸರ್ಕಾರದ ಸದಸ್ಯರನ್ನು ಒಳಗೊಂಡಿರುತ್ತವೆ. ಅವರು ಬೆಂಗಳೂರಿನಲ್ಲಿ ಮಲಯಾಳಂ ಮಾತನಾಡುವ ಸಮುದಾಯಕ್ಕೆ ಕನ್ನಡ ಶಿಕ್ಷಣವನ್ನು ಕೊಡುವಂತೆ ಮೊದಲು ವಿನಂತಿಸಿದವರು ಎನ್ನಲಾಗಿದೆ.

ವಿವಿಧ ವೃತ್ತಿಪರರಿಗೆ ಅವಕಾಶ ಕಲ್ಪಿಸಲು ವಾರಕ್ಕೆ ಮೂರು ಬಾರಿ ಸಂಜೆ 6 ರಿಂದ 7 ರವರೆಗೆ ತರಗತಿಗಳು ಮೂರು ತಿಂಗಳ ಕಾಲ ನಡೆಯಲಿವೆ ಎಂದು ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಈ ಹಿಂದೆಯೇ ತಿಳಿಸಿದ್ದರು ಎಂಬುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಆಗಸ್ಟ್ ಎರಡನೇ ವಾರದಲ್ಲಿ ನಿಯಮಿತ ತರಗತಿಗಳು ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಮಲಯಾಳಂ ಮಿಷನ್ ಮತ್ತು ಕನ್ನಡ ಕಲಿಕೆ ತರಗತಿಗಳ ಸಂಚಾಲಕ ಟಾಮಿ ಜೆ ಅಲುಂಕಲ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಬೆಂಗಳೂರು-ಕಾರವಾರ ಮಧ್ಯೆ ವಿಶೇಷ ರೈಲು

ಕಲಿಕಾ ಕಾರ್ಯಕ್ರಮದ ಉದ್ಘಾಟನೆಯ ನಂತರ ತರಗತಿಗಳಿಗೆ ಸಂಬಂಧಿಸಿದ ವಿವರವಾದ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ