
ಬೆಂಗಳೂರು, ನವೆಂಬರ್ 17: ಉದ್ಯಮಗಳ ಬೆಳವಣಿಗೆಗೆ ಪೂರಕವಾದ ನೀತಿಗಳು, ಬಲಿಷ್ಠ ಸಂಶೋಧನಾ ಕೇಂದ್ರಗಳು, ಸಮೃದ್ಧವಾಗ ನವೋದ್ಯಮ ಪರಿಸರ ವ್ಯವಸ್ಥೆ, ಕೌಶಲ್ಯಯುತ ಮಾನವ ಸಂಪನ್ಮೂಲದೊಂದಿಗೆ ಕರ್ನಾಟಕ ರಾಜ್ಯವು ಎಐ, ಡೀಪ್ ಟೆಕ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಜಾಗತಿಕ ಕೇಂದ್ರವಾಗುವ ಗುರಿ ಹೊಂದಿದೆ ಎಂದು ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಂದಿನಿಂದ 3 ದಿನಗಳ ಕಾಲ ಮಾದಾವರ ಬಳಿಯ ಬಿಐಇಸಿಯಲ್ಲಿ ನಡೆಯಲಿರುವ 29ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ವಿಶ್ವದ ಅತಿ ದೊಡ್ಡ ತಂತ್ರಜ್ಞಾನದ ಕ್ಲಸ್ಟರ್ಗಳಲ್ಲಿ ಒಂದಾಗಿದೆ. ಅತ್ಯುತ್ತಮ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಆಧುನಿಕ ಕೈಗಾರಿಕೆ ಹಾಗೂ ತಂತ್ರಜ್ಞಾನಕ್ಕೆ ಕರ್ನಾಟಕ ಬುನಾದಿ ಹಾಕಿದೆ. ಜಾಗತಿಕ ಸಂಸ್ಥೆಗಳು ನಮ್ಮ ಮೇಲೆ ಅಪಾರ ವಿಶ್ವಾಸವನ್ನು ಸಾಫ್ಟ್ವೇರ್ ಮತ್ತು ಸೇವೆಗಳ ರಫ್ತಿನ ಮೂಲಕ ಭಾರತ ಗಳಿಸುವ ಪ್ರತಿ ಐದು ಡಾಲರ್ಗಳಲ್ಲಿ ಎರಡು ಡಾಲರ್ ಕರ್ನಾಟಕದಿಂದಲೇ ಬರುತ್ತಿದ್ದು, ಕಳೆದ ವರ್ಷ ಇದು ಅಂದಾಜು 173 ಬಿಲಿಯನ್ ಅಮೆರಿಕನ್ ಡಾಲರ್ಗಳಷ್ಟಿತ್ತು. ಇದು ಅನೇಕ ರಾಷ್ಟ್ರಗಳ ಆರ್ಥಿಕತೆಗಿಂತ ಹೆಚ್ಚಾಗಿದೆ. ಕರ್ನಾಟಕ ಇತ್ತೀಚಿನ ದಿನಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಮುಂಚೂಣಿಯಲ್ಲಿದೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಸಿಎಂ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ರಸ್ತೆ, ಚರಂಡಿ ಅಭಿವೃದ್ಧಿಗೆ ₹6,000 ಕೋಟಿ: 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ
2025-26ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕರ್ನಾಟಕವು 9.4 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆಯನ್ನು (FDI) ಪಡೆದಿದ್ದು, ಇದು ಆ ಅವಧಿಯಲ್ಲಿ ಭಾರತದ ಒಟ್ಟು ಒಳಹರಿವಿನ ಶೇ. 26.7ರಷ್ಟಿದೆ. 1,000ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC) ಬೆಂಗಳೂರನ್ನು ತಮ್ಮ ನೆಲೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು, 2025ರ ಒಂದೇ ವರ್ಷದಲ್ಲಿ 30ಕ್ಕೂ ಹೆಚ್ಚು ಹೊಸ ಜಿಸಿಸಿಗಳು ರಾಜ್ಯಕ್ಕೆ 1 ಬಿಲಿಯನ್ ಡಾಲರ್ಗೂ ಅಧಿಕ ಹೂಡಿಕೆಯನ್ನು ತಂದಿವೆ ಎಂದು ಅವರು ಹೇಳಿದ್ದಾರೆ.
ತಂತ್ರಜ್ಞಾನದಲ್ಲಿ ಯಾರು ಮೊದಲು ಹೆಜ್ಜೆ ಇಡುತ್ತಾರೋ ಅವರು ಮುನ್ನಡೆ ಸಾಧಿಸುತ್ತಾರೆ. ಕರ್ನಾಟಕ ಸದಾ ಈ ವಿಚಾರದಲ್ಲಿ ಮುಂದಿದೆ. ನಮ್ಮ ರಾಜ್ಯ ದೇಶದಲ್ಲೇ ಮೊದಲ ಐಟಿ ನೀತಿಯನ್ನು 1997ರಲ್ಲೇ ರಚಿಸಿತು. 2001ರಲ್ಲಿ ಎಸ್. ಎಂ. ಕೃಷ್ಣ ಅವರ ಕಾಲದಲ್ಲಿ ಜೈವಿಕ ತಂತ್ರಜ್ಞಾನ ನೀತಿ ರಚಿಸಲಾಯಿತು. 2024ರಲ್ಲಿ ಜಾಗತಿಕ ಕೇಂದ್ರವನ್ನು ಸ್ಥಾಪಿಸಲಾಯಿತು. ಇದರೊಂದಿಗೆ ಕರ್ನಾಟಕ ಜಾಗತಿಕ ನಾಯಕತ್ವ ವಹಿಸಿದೆ. ಕರ್ನಾಟಕವು 24,000 ಅಧಿಕೃತ ನವೋದ್ಯಮಗಳ ನೆಲೆಯಾಗಿದ್ದು, ಪ್ರತಿ 5 ಭಾರತೀಯ ಪ್ರಮುಖ ಕಂಪನಿಗಳಲ್ಲಿ 2 ಕಂಪನಿಗಳು ಬೆಂಗಳೂರಿನಲ್ಲಿ ಆರಂಭವಾಗಿವೆ. ಜಾಗತಿಕ ನವೋದ್ಯಮ ವ್ಯವಸ್ಥೆಯಲ್ಲಿ ಕರ್ನಾಟಕ 8ನೇ ಸ್ಥಾನ ಹಾಗೂ ಏಷ್ಯಾದಲ್ಲಿ 2ನೇ ಸ್ಥಾನ ಪಡೆದಿದೆ. ಬೆಂಗಳೂರು 4.4 ಬಿಲಿಯನ್ ಡಾಲರ್ ತಂತ್ರಜ್ಞಾನ ಹೂಡಿಕೆಯನ್ನು ಆಕರ್ಷಿಸಿದೆ. ಕರ್ನಾಟಕದ ಸ್ಟಾರ್ಟ್ಅಪ್ಗಳು ಒಟ್ಟಾರೆಯಾಗಿ ಸುಮಾರು 79 ಬಿಲಿಯನ್ ಡಾಲರ್ ಬಂಡವಾಳವನ್ನು ಸಂಗ್ರಹಿಸಿದ್ದು, ಬೆಂಗಳೂರಿನ ಮಹಿಳಾ ಸಂಸ್ಥಾಪಕರು 13.4 ಬಿಲಿಯನ್ ಡಾಲರ್ ಹೂಡಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಸಿಎಂ ವಿವರಿಸಿದ್ದಾರೆ.
ಐಐಐಟಿ ರಾಯಚೂರಿನಲ್ಲಿ ಸ್ಥಾಪಿಸಲಾಗುವ ಹೆಚ್ಚುವರಿ ಉತ್ಕೃಷ್ಟತಾ ಕೇಂದ್ರವು (Centre of Excellence) ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಸಣ್ಣ ಉದ್ಯಮಗಳಿಗೆ ಪೂರಕವಾದ ಎಐ ಅನ್ವಯಿಕೆಗಳನ್ನು ಉತ್ತರ ಕರ್ನಾಟಕದ 13 ಜಿಲ್ಲೆಗಳಿಗೆ ವಿಸ್ತರಿಸಲಿದೆ. 300 ಕೋಟಿ ರೂ. ವೆಚ್ಚದ ‘ನಿಪುಣ ಕರ್ನಾಟಕ’ ಕೌಶಲ್ಯ ಮರುತರಬೇತಿ ಅಭಿಯಾನದ ಅಡಿಯಲ್ಲಿ, ಸರ್ಕಾರವು ರಾಜ್ಯದ ಉದ್ಯೋಗಿಗಳನ್ನು ಉದಯೋನ್ಮುಖ ತಂತ್ರಜ್ಞಾನದ ಅಗತ್ಯಗಳಿಗೆ ಸಜ್ಜುಗೊಳಿಸುತ್ತಿದೆ. ಪ್ರಮುಖ ಜಾಗತಿಕ ತಂತ್ರಜ್ಞಾನ ಕಂಪನಿಗಳ ಸಹಭಾಗಿತ್ವದ ಮೂಲಕ, ವೃತ್ತಿಜೀವನದ ವಿರಾಮದ ನಂತರ ಮತ್ತೆ ಕೆಲಸಕ್ಕೆ ಮರಳುತ್ತಿರುವ ಮಹಿಳೆಯರು ಸೇರಿದಂತೆ 33,000ಕ್ಕೂ ಹೆಚ್ಚು ಜನರು ಈಗಾಗಲೇ ಉದ್ಯಮಕ್ಕೆ ಸಿದ್ಧರಾಗಿದ್ದಾರೆ.
ಕರ್ನಾಟಕವು 100ಕ್ಕೂ ಹೆಚ್ಚು ಫ್ಯಾಬ್ಲೆಸ್ ಚಿಪ್ ಕಂಪನಿಗಳಿಗೆ ನೆಲೆಯಾಗಿದ್ದು, ಭಾರತದ ಸೆಮಿಕಂಡಕ್ಟರ್ ಸಾಮರ್ಥ್ಯ ಕೇಂದ್ರಗಳಲ್ಲಿ ಕೆಲಸ ಮಾಡುವ ಪ್ರತಿ ಐದು ಎಂಜಿನಿಯರ್ಗಳಲ್ಲಿ ಮೂವರು ಬೆಂಗಳೂರಿನಲ್ಲಿದ್ದಾರೆ. ಭಾರತದ ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ರಾಜ್ಯವು ಐದನೇ ಒಂದು ಭಾಗದಷ್ಟು ಪಾಲನ್ನು ಹೊಂದಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿರುವ ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಉತ್ಪಾದನಾ ಘಟಕಗಳಲ್ಲಿ ಜಾಗತಿಕ ಕಂಪನಿಗಳು 23,000 ಕೋಟಿ ರೂ.ಗೂ ಅಧಿಕ ಹೂಡಿಕೆ ಮಾಡುತ್ತಿವೆ. ಇಂತಹ ಮಹತ್ವದ ತೀರ್ಮಾನ ಕೈಗೊಂಡಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಡಿಕೆಶಿ ಹೇಳಿದ್ದಾರೆ.
ಕಳೆದ ವರ್ಷ ಬೆಂಗಳೂರು ಟೆಕ್ ಸಮಿಟ್ ನಲ್ಲಿ 67 ದೇಶಗಳು ಭಾಗಿಯಾಗಿದ್ದು, ಈ ವರ್ಷ 75ಕ್ಕೂ ಹೆಚ್ಚು ದೇಶಗಳು ಭಾಗವಹಿಸಿವೆ. 1500 ಎಕ್ಸಿಬಿಟರ್ಗಳು, 150 ಸೆಷನ್ ಗಳಲ್ಲಿ 500ಕ್ಕೂ ಹೆಚ್ಚು ಜನ ಚರ್ಚೆ ಮಾಡಲಿದ್ದಾರೆ. 50,000 ಉದ್ಯಮಿಗಳು ಭಾಗವಹಿಸಲಿದ್ದಾರೆ. ನಾವು ನಿಮ್ಮೊಂದಿಗಿದ್ದು, ಬಂಡವಾಳ ಹೂಡಿಕೆದಾರರು, ಸಂಶೋಧಕರೊಂದಿಗೆ ಜತೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚೆಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಾನು ಹೇಳುತ್ತೇನೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ, ಆಮೂಲಕ ತಂತ್ರಜ್ಞಾನದ ಮೂಲಕ ಭಾರತ ಹಾಗೂ ವಿಶ್ವದ ಸೇವೆ ಮಾಡೋಣ ಎಂದು ಸಿಎಂ ಡಿಕೆ ಶಿವಕುಮಾರ್ ಕರೆನೀಡಿದ್ದಾರೆ. ಕಾರ್ಯಕ್ರಮದಲ್ಲಿ ಡಿಸಿಎಂ ಪರಮೇಶ್ವರ್, ಸಚಿವರಾದ ಪ್ರಿಯಾಂಕ್, ಅಜಯ್ ಸಿಂಗ್, ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಸೇರಿ ಹಲವರು ಉಪಸ್ಥಿತರಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.