Karnataka Breaking Kannada News Highlights: ಸರ್ಕಾರದ ಹೊಸ ಘೋಷಣೆ, ನೌಕರರ ಸಂಬಳಕ್ಕಿಲ್ಲ ಗ್ಯಾರಂಟಿ

| Updated By: ವಿವೇಕ ಬಿರಾದಾರ

Updated on: Aug 13, 2023 | 7:32 AM

Breaking news today updates: ಬಿಬಿಎಂಪಿ(BBMP) ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಹಚ್ಚಿಕೊಂಡಿದ್ದು 9 ಜನರಿಗೆ ಗಾಯಗಳಾಗಿವೆ. ಈ ಬಗ್ಗೆ ಸೂಕ್ತ ತನಿಖೆಗೆ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಕರ್ನಾಟಕದ ರಾಜಕೀಯ, ಮಳೆ ಸೇರಿದಂತೆ ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್​ ಮೂಲಕ ಪಡೆಯಿರಿ.

Karnataka Breaking Kannada News Highlights: ಸರ್ಕಾರದ ಹೊಸ ಘೋಷಣೆ, ನೌಕರರ ಸಂಬಳಕ್ಕಿಲ್ಲ ಗ್ಯಾರಂಟಿ
ಬಿಜೆಪಿ ಮತ್ತು ಕಾಂಗ್ರೆಸ್

ಬಿಬಿಎಂಪಿ(BBMP) ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, 9 ಜನ ಬಿಬಿಎಂಪಿ ನೌಕರಿಗೆ ತೀವ್ರ ರೀತಿಯಲ್ಲಿ ಸುಟ್ಟ ಗಾಯಗಳಾಗಿವೆ. ಈ ಘಟನೆ ಸಂಬಂಧ ಮೂರು ಆಯಾಮಗಳಲ್ಲಿ ತನಿಖೆ ನಡೆಸುವಂತೆ ಡಿಕೆ ಶಿವಕುಮಾರ್(DK Shivakumar) ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಶಾಂಗ್ರೀಲಾ ಹೋಟೆಲ್​ಗೆ ಬಾಂಬ್​ ಇಟ್ಟಿರೋದಾಗಿ ದುಷ್ಕರ್ಮಿಗಳು ಮೇಲ್​ ಮೂಲಕ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಮೇಲ್​ ಬರ್ತಿದ್ದಂತೆ ಸಿಬ್ಬಂದಿ ಅಲರ್ಟ್ ಆಗಿ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಹೋಟೆಲ್​ನತ್ತ ಧಾವಿಸಿ ಪರಿಶೀಲನೆ ಮಾಡಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಟೊಮೆಟೊ ಯುಗ ಶುರುವಾಗಿತ್ತು. ಬೆಲೆ ಇಲ್ಲದೆ ರೈತರನ್ನು ಬೀದಿಗೆ ತಳ್ಳುತ್ತಿದ್ದ ಟೊಮೆಟೊ ಅನ್ನದಾತರನ್ನ ಕೊಟ್ಯಾಧಿಪತಿಗಳನ್ನಾಗಿ ಮಾಡಿತ್ತು. ಆಕಾಶಕ್ಕೆ ಏರಿದ್ದ ಟೊಮ್ಯಾಟೋ ಬೆಲೆ ಈಗ ನೆಲದತ್ತ ಮುಖ ಮಾಡಿದೆ. ಇದೆಲ್ಲದರ ನಡುವೆ ಹಾವೇರಿ ಜಿಲ್ಲೆಯಲ್ಲಿ ಈಗ ಮದ್ರಾಸ್​ ಐ ಕಾಟ ಶುರುವಾಗಿದೆ. ಕಳೆದೊಂದು ವಾರದಿಂದ ಮದ್ರಾಸ್​​ ಐ ಬಾಧೆಯ ಹಾವಳಿ ಹೆಚ್ಚಾಗಿದೆ. ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ

LIVE NEWS & UPDATES

The liveblog has ended.
  • 12 Aug 2023 11:07 PM (IST)

    Karnataka Breaking News Live: ವಿಹಂಗಮ ರೆಸಾರ್ಟ್ ಮೇಲೆ ತೀರ್ಥಹಳ್ಳಿ ಪೋಲಿಸರ ದಾಳಿ

    ಶಿವಮೊಗ್ಗ: ತೀರ್ಥಹಳ್ಳಿಯ ಭಾರತಿಪುರ ಬಳಿಯ ವಿಹಂಗಮ ರೆಸಾರ್ಟ್ ಮೇಲೆ ತೀರ್ಥಹಳ್ಳಿ ಪೋಲಿಸರು ದಾಳಿ ನಡೆಸಿದ್ದಾರೆ. ರೆವು ಪಾರ್ಟಿ ನಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿದು ತೀರ್ಥಹಳ್ಳಿ ಡಿವೈಎಸ್​ಪಿ ಗಜಾನನ ಸುತಾರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ  ರೆಸಾರ್ಟ್ ಮಾಲೀಕರಾದ ಕಾನನ ಕಡಿದಾಳ ಹಾಗೂ ದಯಾನಂದ ಕಡಿದಾಳ ಸೇರಿದಂತೆ ಎಲ್ಲರೂ ಪರಾರಿಯಾಗಿದ್ದಾರೆ. ದಾಳಿ ವೇಳೆ ಲಕ್ಷಾಂತರ ಮೌಲ್ಯದ ವಿದೇಶಿ ಮದ್ಯ ಹಾಗೂ ಜಿಂಕೆ ಕೊಂಬು, ಜಿಂಕೆ ಚರ್ಮ, ನಾಡ ಬಂದೂಕು, ಗುಂಡುಗಳು ಪತ್ತೆಯಾಗಿವೆ.

  • 12 Aug 2023 09:40 PM (IST)

    Karnataka Breaking News Live: ಬೈಕ್ ಹಾಗೂ ಲಾರಿ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

    ನೆಲಮಂಗಲ: ಬೈಕ್ ಹಾಗೂ ಲಾರಿ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ. ಕಲಬುರಗಿಯ ಸಂತೋಷ್‌ (30) ಮೃತ ದುರ್ದೈವಿ. ಮಾಗಡಿ ಮುಖ್ಯರಸ್ತೆಯಲ್ಲಿ ಸಂಭವಿಸಿರುವ ಅಪಘಾತ ಇದಾಗಿದೆ. ರಸ್ತೆ ಕಾಮಗಾರಿ ವಿಳಂಬದಿಂದ ಅಪಘಾತ ಹೆಚ್ಚಾಗಿರುವ ಆರೋಪ ಕೇಳಿಬಂದಿದ್ದು, ಮೃತ ಸವಾರನ ಶವ ಸಾಗಿಸದೇ ಸ್ಥಳಕ್ಕೆ ಯಲಹಂಕ ಶಾಸಕ ವಿಶ್ವನಾಥ್ ಆಗಮಿಸುವಂತೆ ಸ್ಥಳೀಯರು ಧರಣಿ ನಡೆಸಿದರು. ಬಳಿಕ ಪೊಲೀಸರು ಸ್ಥಳೀಯರ ಮನವೊಲಿಸಿ ಶವ ಸಾಗಿಸಿದರು.

  • 12 Aug 2023 08:46 PM (IST)

    Karnataka Breaking News Live: ಖ್ಯಾತ ನೇತ್ರ ತಜ್ಞ ಡಾ ಚಂದ್ರಪ್ಪ ರೇಷ್ಮೆ ನಿಧನ

    ಕಲಬುರಗಿ: ರಾಜ್ಯೋತ್ಸವ ಪ್ರಶಸ್ತಿ ವಿಜೇತ ಖ್ಯಾತ ನೇತ್ರ ತಜ್ಞ ಡಾ ಚಂದ್ರಪ್ಪ ರೇಷ್ಮೆ (90) ಅವರು ನಿಧನ ಹೊಂದಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಂದ್ರಪ್ಪ ರೇಷ್ಮೆ ಅವರು ಕಲಬುರಗಿಯ ಜಯನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
    ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್, ಟಾಟಾ ಸಮೂಹ ಸಂಸ್ಥೆಯ ಸಂಸ್ಥಾಪಕ ಜೆಆರ್​ಡಿ ಟಾಟಾ ಸೇರಿದಂತೆ ಅನೇಕ ಗಣ್ಯರಿಗೆ ನೇತ್ರ ಚಿಕಿತ್ಸೆ ಮಾಡಿದ್ದ ವೈದ್ಯ ಇವರಾಗಿದ್ದರು. ವಿಶ್ವದ ಮೂರನೇ ಉತ್ತಮ ಕಣ್ಣಿನ ಡಾಕ್ಟರ್ ಎಂದು ಪ್ರಖ್ಯಾತಿ ಪಡೆದಿದ್ದರು. ನಾಳೆ ಕಲಬುರಗಿ ಜಿಲ್ಲೆಯ ಚಿತ್ತಾಪುರದಲಿ ಅಂತ್ಯಕ್ರಿಯೆ ನೇರವೆರಲಿದೆ.

  • 12 Aug 2023 06:30 PM (IST)

    Karnataka Breaking News Live: ಕಟ್ಟೆಯಲ್ಲಿ ಕೈಕಾಲು ತೊಳೆಯಲು ಹೋಗಿದ್ದ ಯುವಕ ನೀರುಪಾಲು

    ಕಟ್ಟೆಯಲ್ಲಿ ಕೈಕಾಲು ತೊಳೆಯಲು ಹೋಗಿದ್ದ ಯುವಕ ನೀರುಪಾಲಾದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ಅಪ್ಪಗೆರೆ ಬಳಿ ನಡೆದಿದೆ. ಮರಗೆಲಸ ಮಾಡುತ್ತಿದ್ದ ಧನುಷ್ ಹೆಗ್ಗಡೆ (19) ನೀರುಪಾಲಾದ ಯುವಕ. ಚನ್ನಪಟ್ಟಣ ತಾಲೂಕಿನ ಹೊಸೂರುದೊಡ್ಡಿಯ ಮಂಜು ಹಾಗೂ ಸುಮಾ ದಂಪತಿಯ ಪುತ್ರನಾಗಿದ್ದು, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 12 Aug 2023 02:09 PM (IST)

    Karnataka Breaking News Live: ಬಿಬಿಎಂಪಿ ಬೆಂಕಿ ಪ್ರಕರಣ ಮೇಲ್ನೋಟಕ್ಕೆ ಆಕಸ್ಮಿಕ ಘಟನೆ ಎಂದು ಅಗ್ನಿಶಾಮಕ ದಳ ಹೇಳಿದೆ -ಸಚಿವ ಪ್ರಿಯಾಂಕ್ ಖರ್ಗೆ

    ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್​​ನಲ್ಲಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿ ಮೇಲ್ನೋಟಕ್ಕೆ ಇದು ಆಕಸ್ಮಿಕ ಘಟನೆ ಎಂದು ಅಗ್ನಿಶಾಮಕ ದಳ ಹೇಳಿದೆ. ಪ್ರಕರಣದ ಬಗ್ಗೆ ತನಿಖೆ ನಡೀತಿದೆ, ಏನು ವರದಿ ಬರುತ್ತೋ ನೋಡೋಣ ಎಂದು ಬೆಂಗಳೂರು ಉತ್ತರ ತಾಲೂಕಿನ ದೊಡ್ಡಜಾಲ ಗ್ರಾ.ಪಂ. ಕಚೇರಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

  • 12 Aug 2023 02:05 PM (IST)

    Karnataka Breaking News Live: ವಿಕ್ಟೋರಿಯಾ ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ

    ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್​​ನಲ್ಲಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

  • 12 Aug 2023 01:40 PM (IST)

    Karnataka Kannada News Live: ಶಿವರಾಮ್ ಕಾರಂತ ಬಡಾವಣೆಗೆ ಡಿಸಿಎಂ ಭೇಟಿ

    ಶಿವರಾಮ್ ಕಾರಂತ ಬಡಾವಣೆಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. 3562 ಎಕರೆ ಜಾಗದಲ್ಲಿ ಲೇಔಟ್ ನಿರ್ಮಾಣವಾಗುತ್ತಿದ್ದು, 9 ಪ್ಯಾಕೇಜ್​ಗಳಲ್ಲಿ ಅಭಿವೃದ್ಧಿಗೆ ಬಿಡಿಎ ಟೆಂಡರ್ ನೀಡಿದೆ. ಸ್ಥಳಕ್ಕೆ ಆಗಮಿಸಿ ಡಿಕೆಶಿ ಕಾಮಗಾರಿ ಪರಿಶೀಲನೆ ನಡೆಸಿದರು. ಲೇಔಟ್ ಮ್ಯಾಪ್ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

  • 12 Aug 2023 01:37 PM (IST)

    Karnataka Kannada News Live: ಗುತ್ತಿಗೆದಾರರ ಬಿಲ್ ಹಿಡಿದುಕೊಳ್ಳುವುದು ಬೇಡ -ವಿ.ಸೋಮಣ್ಣ

    ಗುತ್ತಿಗೆದಾರರ ಬಿಲ್ ಹಿಡಿದುಕೊಳ್ಳುವುದು ಬೇಡ. ಡಿ.ಕೆ.ಶಿವಕುಮಾರ್​​ ನನಗೆ ಬೇಕಾದಂತಹ ವ್ಯಕ್ತಿ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ, ಬಿಜೆಪಿ ನಾಯಕ ವಿ.ಸೋಮಣ್ಣ ಹೇಳಿಕೆ ನೀಡಿದರು. ಹಿಂದೆ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಅಂತಾ ನಾನೇ ಹೇಳಿದ್ದೆ. ಆದರೆ ರಾಜಕೀಯ ಬೇರೆ, ಡಿಕೆಶಿರನ್ನು ಬೇರೆಯವರಿಗೆ ಹೋಲಿಸಲ್ಲ. ಗುತ್ತಿಗೆದಾರರ ಕಾಮಗಾರಿ ಬಿಲ್​​​​​ ತಡೆಹಿಡಿಯುವುದು ಬೇಡ ಎಂದರು.

  • 12 Aug 2023 12:59 PM (IST)

    Karnataka Kannada News Live: ಬೈಕ್​ಗೆ ಬೊಲೆರೊ ವಾಹನ ಡಿಕ್ಕಿ, ಇಬ್ಬರು ವಿದ್ಯಾರ್ಥಿಗಳು ಸಾವು

    ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕಡಮಲಕುಂಟೆ ಬಳಿ ಬೈಕ್​ಗೆ ಬೊಲೆರೊ ವಾಹನ ಡಿಕ್ಕಿ ಹೊಡೆದಿದ್ದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ನಡೆದಿದೆ. ಈಶ್ವರ್(16) ಯಶ್ವಂತ್ (17) ಎಂಬ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಓರ್ವ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದೆ. ಪಾವಗಡದ ಶನಿ ಮಹಾತ್ಮ ದೇವಸ್ಥಾನಕ್ಕೆ ಹೊರಟ್ಟಿದ್ದ ವೇಳೆ ಅಪಘಾತ ಸಂಭವಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್‌ಗೆ ರವಾನಿಸಲಾಗಿದೆ. ವಿದ್ಯಾರ್ಥಿಗಳು ಆಂಧ್ರಪ್ರದೇಶದ ರೊದ್ದಂ ಮಂಡಲದ ಚಿನ್ನಿಕೊಡಿಪಲ್ಲಿ ಗ್ರಾಮದವರು ಎಂದು ತಿಳಿದು ಬಂದಿದೆ.

  • 12 Aug 2023 12:56 PM (IST)

    Karnataka Kannada News Live: ಬಿಜೆಪಿಯಿಂದ ‘ಪೇಸಿಎಸ್​’ ಅಭಿಯಾನಕ್ಕೆ ಜಗದೀಶ್ ಶೆಟ್ಟರ್ ವ್ಯಂಗ್ಯ

    ಬಿಜೆಪಿಯಿಂದ ‘ಪೇಸಿಎಸ್​’ ಅಭಿಯಾನಕ್ಕೆ ಜಗದೀಶ್ ಶೆಟ್ಟರ್ ವ್ಯಂಗ್ಯ ಮಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಕಾರ್ಬನ್ ಕಾಪಿ. ‘ಪೇ ಸಿಎಸ್’ಗೆ ಅರ್ಥವೇ ಇಲ್ಲ, ಜನ‌ರು ಇದನ್ನು ನಂಬುವುದಿಲ್ಲ. ಕಾಂಗ್ರೆಸ್​ನವರು ಮಾಡಿದ್ದನ್ನೇ ಕಾಪಿ ಮಾಡುವುದಕ್ಕೆ ಹೊರಟಿದ್ದಾರೆ. ಬಿಜೆಪಿ ಸರ್ಕಾರ ಬಂದ 4 ವರ್ಷ ಬಳಿಕ ಅಭಿಯಾನ ಆರಂಭವಾಗಿತ್ತು. ಆದರೆ 3 ತಿಂಗಳಲ್ಲಿ ಬಿಜೆಪಿಯವರು ಮಾಡ್ತಾರಂದ್ರೆ ಅದಕ್ಕೆ ಅರ್ಥ ಇಲ್ಲ. ಬಿಜೆಪಿಯಲ್ಲಿದ್ದಾಗ ಎಲ್ಲ‌ ವಿಷಯಗಳನ್ನು ಕೋರ್ ಕಮಿಟಿಯಲ್ಲಿ ಹೇಳಿದ್ದೆ. ಹೊರಗಡೆ ಹೇಳೋಕೆ ಆಗದ ವಿಷಯ ಹೇಳಿದ್ದೆ, ಅವರು ತಿಳಿದುಕೊಳ್ಳಲಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.

  • 12 Aug 2023 12:24 PM (IST)

    Karnataka Kannada News Live: ಬೆಂಕಿ ಅವಘಡ, ಬಿಬಿಎಂಪಿ ಎಇಇ ಆನಂದ್ ಮಾತಾಡಿರುವ ಆಡಿಯೋ ಬಿಡುಗಡೆ

    ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್​​ನಲ್ಲಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿ ಬಿಬಿಎಂಪಿ ಎಇಇ ಆನಂದ್ ಅವರು ಅಮೃತ್​ ರಾಜ್ ಜೊತೆ ಮಾತಾಡಿರುವ ಆಡಿಯೋ ಬಿಡುಗಡೆಯಾಗಿದೆ. ಬಿಬಿಎಂಪಿ ಎಇಇ ಆನಂದ್ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮೊದಲಿನಿಂದಲೂ ನಾವು ಲ್ಯಾಬ್ ಟೆಸ್ಟ್ ಮಾಡುತ್ತಿದ್ದೇವೆ. ಎಲ್ಲಾ ಸಾಂಪಲ್ ಕಲೆಕ್ಟ್ ಮಾಡಿ ಅಲ್ಲಿ ಟೆಸ್ಟ್ ಮಾಡುತ್ತೇವೆ. ಮೊದಲೇ ಅವರಿಗೆ ಟ್ರೈನಿಂಗ್ ಆಗಿದೆ. ಬೆಲ್ಜಿನ್‌ ಕೆಮಿಕಲ್‌ ಹಾಕಿ ಟೆಸ್ಟ್‌ ಮಾಡಿರುವಾಗ ಸೋರಿಕೆಯಾಗಿ ಈ ರೀತಿ ಘಟನೆಯಾಗಿದೆ ಎಂದು ಮಾಹಿತಿ ಇದೆ. ಬೆಲ್ಜಿನ್‌ ಹಾಕಿ ವಾಶ್ ಮಾಡುವಾಗ ಹೊರಗೆ ಹೋಗಿದೆ. ಹೋಗುವಾಗ ಲಿಂಕ್‌ ಆಗಿ ಬೆಂಕಿಯಾಗಿದೆ. ಕೆಲವೇ ಸೆಕಂಡ್‌ಗಳಲ್ಲಿ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ ಎಂದಿದ್ದಾರೆ.

  • 12 Aug 2023 11:34 AM (IST)

    Karnataka Kannada News Live: ನನಗೆ ಜನ್ಮ ದಿನಾಂಕ ಸರಿಯಾಗಿ ಗೊತ್ತಿಲ್ಲ, ಹೀಗಾಗಿ ಹುಟ್ಟಹಬ್ಬದ ಬಗ್ಗೆ ಆಸಕ್ತಿ ಇಲ್ಲ -ಸಿದ್ದರಾಮಯ್ಯ

    ತಮ್ಮ ಹುಟ್ಟಹಬ್ಬ ವಿಚಾರಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಆಗಸ್ಟ್ 3, ಆಗಸ್ಟ್ 12 ಎರಡೂ ಕೂಡ ತಪ್ಪು ದಿನಾಂಕಗಳು. ಒಂದು ನನ್ನ ಮೇಷ್ಟ್ರು ಬರೆಸಿರುವುದು. ಇನ್ನೊಂದು ನಮ್ಮ ಅಪ್ಪ ಯಾವುದೋ ಒಂದು ಡೇಟ್ ಬರೆಸಿರೋದು. ಹೀಗಾಗಿ ಎರಡು ದಿನಾಂಕವೂ ತಪ್ಪು. ಜನ್ಮ ದಿನಾಂಕ ಸರಿಯಾಗಿ ಗೊತ್ತಿಲ್ಲ. ಹೀಗಾಗಿ ನನಗೆ ಹುಟ್ಟಹಬ್ಬದ ಬಗ್ಗೆ ಯಾವ ಆಸಕ್ತಿ ಇಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

  • 12 Aug 2023 11:27 AM (IST)

    Karnataka Kannada News Live: ಗೃಹಲಕ್ಷ್ಮೀ ಯೋಜನೆಗೆ ಈವರೆಗೆ 1.6 ಕೋಟಿ ಜನ ನೋಂದಣಿ

    ಗೃಹಲಕ್ಷ್ಮೀ ಯೋಜನೆಗೆ ಈವರೆಗೆ 1.6 ಕೋಟಿ ಜನ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನೋಂದಣಿ ಕಾರ್ಯಕ್ಕೆ ಯಾವುದೇ ಸಮಯ ನಿಗದಿ ಇಲ್ಲ. ಈ ತಿಂಗಳಲ್ಲಿ ನೋಂದಣಿ ಮಾಡಿಸುವವರ ಸಂಖ್ಯೆ ಹೆಚ್ಚಬಹುದು. ಡಿಸೆಂಬರ್ ಅಥವಾ ಜನವರಿಯಲ್ಲಿ ಯುವನಿಧಿ ಯೋಜನೆ ಜಾರಿಯಾಗುತ್ತೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

  • 12 Aug 2023 11:26 AM (IST)

    Karnataka Kannada News Live: ರಾಜಕೀಯ ವೈಷಮ್ಯ, JDS ಮುಖಂಡ ಅಪ್ಪುಗೌಡ ಹತ್ಯೆಗೆ ಯತ್ನ

    ಮಂಡ್ಯ ಜಿಲ್ಲೆ ಮದ್ದೂರಿನ ಆಂಜನೇಯಸ್ವಾಮಿ ದೇಗುಲದಲ್ಲಿ JDS ಮುಖಂಡ ಅಪ್ಪುಗೌಡ ಹತ್ಯೆಗೆ ಯತ್ನ ನಡೆದಿದೆ. ರಾಜಕೀಯ ವೈಷಮ್ಯಕ್ಕೆ ಮದ್ದೂರು ಪುರಸಭೆ ಜೆಡಿಎಸ್​​ ಸದಸ್ಯೆ ಪ್ರಿಯಾಂಕಾ ಪತಿ ಅಪ್ಪುಗೌಡರ ಮೇಲೆ ಡ್ಯಾಗರ್​ನಿಂದ ಚುಚ್ಚಿ ಇಬ್ಬರು ದುಷ್ಕರ್ಮಿಗಳು ಕೊಲೆಗೆ ಯತ್ನಿಸಿದ್ದಾರೆ. ಗಾಯಗೊಂಡ JDS​​ ಮುಖಂಡ ಅಪ್ಪುಗೌಡ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ಮದ್ದೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • 12 Aug 2023 11:04 AM (IST)

    Karnataka Breaking News Live: ಕಡೂರು ಪೊಲೀಸ್ ಠಾಣೆ ಮಹಿಳಾ ಕಾನ್ಸ್​​ಟೇಬಲ್​​​ ಲತಾ ಸಸ್ಪೆಂಡ್

    ಚಿಕ್ಕಮಗಳೂರು ಜಿಲ್ಲೆ ಕಡೂರು ಕ್ಷೇತ್ರ ಕಾಂಗ್ರೆಸ್ ಶಾಸಕ ಆನಂದ್​​​ ವಿರುದ್ಧ ಸ್ಟೇಟಸ್​​​ ಹಾಕಿದ ಆರೋಪದ ಮೇಲೆ ಕಡೂರು ಪೊಲೀಸ್ ಠಾಣೆ ಮಹಿಳಾ ಕಾನ್ಸ್​​ಟೇಬಲ್​​​ ಲತಾ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಕಡೂರು MLA ಗೆ ನನ್ನ ಧಿಕ್ಕಾರ ಎಂದು ವಾಟ್ಸಪ್ ಸ್ಟೇಟಸ್ ಹಾಕಿದ್ದರು.

  • 12 Aug 2023 10:59 AM (IST)

    Karnataka Breaking News Live: ಪ್ಯಾರಾ ಒಲಂಪಿಕ್​ನಲ್ಲಿ ಕೋಲಾರದ ಕ್ರೀಡಾಪಟು ಸಾಧನೆ

    ಪ್ಯಾರಾ ಒಲಂಪಿಕ್​ನಲ್ಲಿ ಕೋಲಾರದ ಕ್ರೀಡಾಪಟು ಸಾಧನೆ. ಸಾಧಕ ಕ್ರೀಡಾಪಟು ನಾಗೇಶ್​ಗೆ ಜಿಲ್ಲಾಡಳಿತದಿಂದ ಅಭಿನಂದನೆ.

  • 12 Aug 2023 10:56 AM (IST)

    Karnataka Breaking News Live: ನಿಮ್ಮದು ಕಡತಗಳನ್ನು ರಕ್ಷಿಸಲು ಆಗದ ಸರ್ಕಾರವೇ? -ಶಾಸಕ ಯತ್ನಾಳ್​ ವಾಗ್ದಾಳಿ

    ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್​​​​​​ನಲ್ಲಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿ ನಿಮ್ಮ ಸರ್ಕಾರ, ನಿಮ್ಮ ಅಧಿಕಾರಿಗಳು ಹಾಗೂ ನಿಮ್ಮದೇ ಆಡಳಿತ. ಬೆಂಕಿ ಹಚ್ಚುವ ಕೆಲಸ ನಿಮ್ಮದೇ ಇರಬೇಕು ಎಂದು ಟ್ವೀಟ್​ ಮೂಲಕ ಕಾಂಗ್ರೆಸ್ ವಿರುದ್ಧ ಶಾಸಕ ಯತ್ನಾಳ್​ ವಾಗ್ದಾಳಿ ನಡೆಸಿದ್ದಾರೆ. ನಿಮ್ಮದು ಕಡತಗಳನ್ನು ರಕ್ಷಿಸಲು ಆಗದ ಸರ್ಕಾರವೇ? 40% ಆರೋಪ ಸಾಬೀತು ಮಾಡಲಾರದೆ, ನೀವೇ ಬೆಂಕಿ ಹಚ್ಚಿರಬೇಕು. ಬೆಂಕಿ ಬಿದ್ದಿದೆ ಎಂದರೆ ನಿಮ್ಮ ಕೈಲಾಗದ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ಟ್ವೀಟ್ ಮಾಡಿದ್ದಾರೆ.

  • 12 Aug 2023 10:54 AM (IST)

    Karnataka Breaking News Live: ಬೆಂಗಳೂರಲ್ಲಿ ನಟ, ನಿರ್ಮಾಪಕ ಸ್ವಯಂಕೃಷಿ ವೀರೇಂದ್ರ ಬಾಬು ಬಂಧನ

    ಬೆಂಗಳೂರಲ್ಲಿ ನಟ, ನಿರ್ಮಾಪಕ ಸ್ವಯಂಕೃಷಿ ವೀರೇಂದ್ರ ಬಾಬು ಬಂಧಿಸಲಾಗಿದೆ. ಮಹಿಳೆ ಮೇಲೆ ಅತ್ಯಾಚಾರ, ಜೀವಬೆದರಿಕೆ ಆರೋಪದಡಿ ಕೊಡಿಗೇಹಳ್ಳಿ ಪೊಲೀಸರು ಆರೋಪಿ ವೀರೇಂದ್ರ ಬಾಬು ಅವರನ್ನು ಬಂಧಿಸಿದ್ದಾರೆ. ಪ್ರಜ್ಞೆ ತಪ್ಪಿಸಿ ಅತ್ಯಾಚಾರವೆಸಗಿ ವಿಡಿಯೋ ಮಾಡಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.

  • 12 Aug 2023 10:40 AM (IST)

    Karnataka Breaking News Live: ವಿದ್ಯುತ್ ಪ್ರವಹಿಸಿ ದಂಪತಿ, ಮೊಮ್ಮಗಳು ಸ್ಥಳದಲ್ಲೇ ದುರ್ಮರಣ

    ಬೆಳಗಾವಿಯ ಶಾಹುನಗರದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ವಿದ್ಯುತ್ ಪ್ರವಹಿಸಿ ದಂಪತಿ, ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ಈರಪ್ಪ ರಾಠೋಡ(53), ಪತ್ನಿ ಶಾಂತವ್ವ ರಾಠೋಡ(45), ಮೊಮ್ಮಗಳು ಅನ್ನಪೂರ್ಣಾ ರಾಠೋಡ(13) ಮೃತ ದುರ್ದೈವಿಗಳು. ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಕ್ಯೂರಿಟಿ ಆಗಿದ್ದ ಈರಪ್ಪನವರು ಮೋಟರ್ ಆನ್​​ ಮಾಡಲು ಹೋಗಿದ್ದಾಗ ವಿದ್ಯುತ್​​ ಶಾಕ್​​ ಹೊಡೆದಿದೆ. ಈ ವೇಳೆ ವಿದ್ಯುತ್​ ಪ್ರವಹಿಸಿ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದ ಪತಿರ ರಕ್ಷಣೆಗೆ ಹೋದ ಪತ್ನಿ ಶಾಂತವ್ವ, ಮೊಮ್ಮಗಳು ಅನ್ನಪೂರ್ಣಾ ಸಹ ಮೃತಪಟ್ಟಿದ್ದಾರೆ.

  • 12 Aug 2023 09:52 AM (IST)

    Karnataka Breaking News Live: ಸಿಟಿ ರೌಂಡ್ಸ್​ ವೇಳೆ ಶಾಸಕ ಇಕ್ಬಾಲ್ ಹುಸೇನ್​ಗೆ ಮಹಿಳೆಯರಿಂದ ತರಾಟೆ

    ರಾಮನಗರ ಜಿಲ್ಲಾ ಕ್ರೀಡಾಂಗಣಕ್ಕೆ ನಿನ್ನೆ ದಿಢೀರ್ ಭೇಟಿ ನೀಡಿದ್ದ ಶಾಸಕ ಇಕ್ಬಾಲ್ ಹುಸೇನ್​ಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಕ್ರೀಡಾಂಗಣದಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ವಾಕಿಂಗ್ ಮಾಡುತ್ತಿದ್ದ ಮಹಿಳೆಯರ ಅಹವಾಲು ಸ್ವೀಕರಿಸಿದ್ರು. ವಾಕಿಂಗ್ ಮಾಡಲು ಸರಿಯಾದ ಸ್ಥಳವಿಲ್ಲ, ಯುವಕರು ಕ್ರಿಕೆಟ್ ಆಡ್ತಾರೆ ಎಂದು ಶಾಸಕರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡು. ಈ ವೇಲೆ ಕೆಲ ದಿನಗಳಲ್ಲಿ ಕ್ರಿಕೆಟ್ ಆಡುವುದಕ್ಕೆ ಪ್ರತ್ಯೇಕ ಸ್ಥಳ ಕಲ್ಪಿಸಲಾಗುವುದು ಎಂದು ವಾಯು ವಿಹಾರಿಗಳಿಗೆ ಭರವಸೆ ನೀಡಿದರು.

  • 12 Aug 2023 09:48 AM (IST)

    Karnataka Breaking News Live: ಆನೇಕಲ್​ನಲ್ಲಿ ಸರಣಿ ಕಳ್ಳತನ

    ಆನೇಕಲ್ ತಾಲೂಕಿನಲ್ಲಿ ಸರಣಿ ಕಳ್ಳತನ ಪ್ರಕರಣಗಳು ಮುಂದುವರೆದಿದೆ. ಚಂದಾಪುರದ ಸೂರ್ಯನಗರ ಪೊಲೀಸ್​​​ ಠಾಣೆ ಬಳಿಯೇ ಮೆಡಿಕಲ್ ಶಾಪ್​​ ಬೀಗ ಮುರಿದು ಹಣ, ಕಂಪ್ಯೂಟರ್​​ ಕಳ್ಳತನ ಮಾಡಲಾಗಿದೆ. ಕಳ್ಳರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳವು ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

  • 12 Aug 2023 09:46 AM (IST)

    Karnataka Breaking News Live: ಉಡುಪಿ ಕಾಲೇಜು ವಿಡಿಯೋ ಪ್ರಕರಣ ತನಿಖೆ ತೀವ್ರಗೊಳಿಸಿರುವ ಸಿಐಡಿ ಪೊಲೀಸರು

    ಉಡುಪಿ ಕಾಲೇಜು ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆರೋಪಿತ ಮೂವರು ವಿದ್ಯಾರ್ಥಿನಿಯರ ಮನೆಗೆ ತೆರಳಿ ಮಹಜರು ಮಾಡಲಾಗಿದೆ. ಈ ಕೃತ್ಯದ ಬಗ್ಗೆ ಏನಾದರೂ ದಾಖಲೆ ಇದೆಯೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಮಹಜರು ನಡೆಸಿದ್ದಾರೆ.

  • 12 Aug 2023 09:43 AM (IST)

    Karnataka Breaking News Live: ಬಿಬಿಎಂಪಿಯಲ್ಲಿ ಅಗ್ನಿ ಅವಘಡ, ತನಿಖೆ ಆರಂಭ

    ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿ ಮೂರು ಹಂತಗಳಲ್ಲಿ ತನಿಖೆ ಆರಂಭವಾಗಿದೆ. ಡಿಸಿಪಿ ನೇತೃತ್ವದಲ್ಲಿ ಪೊಲೀಸ್ ತನಿಖೆ ಆರಂಭವಾಗಿದೆ. ಎಲೆಕ್ಟ್ರಿಕಲ್ ಇಂಜಿನಿಯರ್ ನೇತೃತ್ವದಲ್ಲಿ ಮತ್ತೊಂದು ತನಿಖೆ ಹಾಗೂ ಬಿಬಿಎಂಪಿ ಪ್ರಧಾನ ಅಭಿಯಂತರರ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಬಿಬಿಎಂಪಿ ಕಾಮಗಾರಿಗಳ ಗುಣಮಟ್ಟ ತನಿಖೆಗೆ SIT ರಚಿಸಲಾಗಿದೆ.

  • 12 Aug 2023 09:40 AM (IST)

    Karnataka Breaking News Live: KSRTC ಬಸ್ ಅಡ್ಡಗಟ್ಟಿ ಯುವಕನ ಪುಂಡಾಟ

    ಮೈಸೂರು: ಬೆಂಗಳೂರು- ಮೈಸೂರು ರಸ್ತೆಯಲ್ಲಿ KSRTC ಬಸ್ ಅಡ್ಡಗಟ್ಟಿ ಯುವಕ ಪುಂಡಾಟ ಮೆರೆದಿದ್ದಾನೆ. ಓವರ್ ಟೇಕ್ ಮಾಡಿದ್ದಕ್ಕೆ ಕೋಪಗೊಂಡ ಯುವಕ ಬಸ್ ಅಡ್ಡಹಾಕಿ ಡ್ರೈವರ್​ಗೆ ಮನಸೋ ಇಚ್ಛೆ ಥಳಿಸಿದ್ದಾನೆ. ಸ್ಥಳಕ್ಕೆ ಬಂದ‌ ಪೊಲೀಸರು ಡ್ರೈವರ್ ರಕ್ಷಣೆ ಮಾಡಿದ್ದಾರೆ. ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 12 Aug 2023 09:37 AM (IST)

    Karnataka Breaking News Live: ಕಾರು-ಲಾರಿ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ದುರ್ಮರಣ

    ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರು-ಲಾರಿ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಕಾರಿನಲ್ಲಿದ್ದ ಬಿ.ಮನೋಹರ(38), ಪ್ರಿಯಾಂಕಾ(23) ಮೃತರು. ಗಾಯಾಳು ಮೊನಾಲಿಸಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಬಿ.ಮನೋಹರ, ಪ್ರಿಯಾಂಕಾ ಬೆಂಗಳೂರು ಮೂಲದವರು. ಬೆಂಗಳೂರಿನಿಂದ ಮುಂಬೈ ಕಡೆ ಕಾರಿನಲ್ಲಿ ತೆರಳ್ತಿದ್ದಾಗ ಅಪಘಾತ ಸಂಭವಿಸಿದೆ. ತಡಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • 12 Aug 2023 09:34 AM (IST)

    Karnataka Breaking News Live: ಕುತೂಹಲ ಮೂಡಿಸಿದ ಶಾಸಕ ರಾಯರೆಡ್ಡಿ ಔತಣಕೂಟ ಆಯೋಜನೆ

    ಕೊಪ್ಪಳ‌ದ ಮಹಾವೀರ ಭವನದಲ್ಲಿ ಆಪ್ತರಿಗೆ ಶಾಸಕ ಬಸವರಾಜ ರಾಯರೆಡ್ಡಿ ಔತಣಕೂಟ ಆಯೋಜನೆ ಮಾಡಿದ್ದಾರೆ. ಇದು ಕುತೂಹಲ ಮೂಡಿಸಿದೆ. ಇತ್ತೀಚಿಗೆ ಕೆಲವು ವಿಚಾರಗಳಿಂದ‌ ಮುನಿಸಿಕೊಂಡಿದ್ದ ಕೊಪ್ಪಳ ಜಿಲ್ಲೆ ಯಲಬುರ್ಗಾ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರು ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಔತಣಕೂಟ ಆಯೋಜನೆ ಮಾಡಿದ್ದಾರೆ.

  • 12 Aug 2023 09:32 AM (IST)

    Karnataka Breaking News Live: ತುಂಗಾ ನದಿಯಲ್ಲಿ ಯುವಕ ನಾಪತ್ತೆ

    ಶಿವಮೊಗ್ಗದ ಗಾಜನೂರು ಜಲಾಶಯದ ಬಳಿ ತುಂಗಾ ನದಿಯಲ್ಲಿ ಯುವಕ ನಾಪತ್ತೆಯಾಗಿದ್ದಾನೆ. ಶಿವಮೊಗ್ಗದ ಮಿಳ್ಳಘಟ್ಟ ನಿವಾಸಿ ಹರೀಶ್ ಪ್ರವಾಸಕ್ಕೆಂದು ತೆರಳಿದ್ದು ನಾಪತ್ತೆಯಾಗಿದ್ದಾನೆ. ಕಾಲು ಜಾರಿ ನದಿಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಮೀನುಗಾರರಿಂದ ಯುವಕನಿಗೆ ಶೋಧ ಕಾರ್ಯ ನಡೆಯುತ್ತಿದೆ.

  • 12 Aug 2023 09:30 AM (IST)

    Karnataka Breaking News Live: ಬಿಬಿಎಂಪಿ ಅವಘಡ ಸಂಬಂಧ ಸಿಎಂ ಪ್ರತಿಕ್ರಿಯೆ

    ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಬೆಂಕಿ ಪ್ರಕರಣ ಸಂಬಂಧ ಪಾಲಿಕೆಯ ಕ್ವಾಲಿಟಿ ಕಂಟ್ರೋಲ್ ರೂಂನಲ್ಲಿ ಘಟನೆ ಸಂಭವಿಸಿದೆ. ಎಂದಿನಂತೆ ಮೀಟಿಂಗ್ ನಡೆಸುವಾಗ ಅವಘಡ ಸಂಭವಿಸಿದೆ. ಕೆಳಗಡೆ ಕಿಮಿಕಲ್ ಲ್ಯಾಬ್‌ನಲ್ಲಿ ಟೆಸ್ಟಿಂಗ್‌ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಇಬ್ಬರು ಅಪರೇಟರ್ಸ್ ಕೆಳಗೆ ಬಂದಿದ್ದಾರೆ. ಕಟ್ಟಡದಿಂದ ಹೊರಗೆ ಬರುವಾಗ ಬೆಂಕಿ ತಗುಲಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಕೆಲವರಿಗೆ ಶೇ.25ರಷ್ಟು, ಮತ್ತೆ ಕೆಲವರಿಗೆ 35-40ರಷ್ಟು ಗಾಯಗಳಾಗಿವೆ. 48 ಗಂಟೆ ಅಬ್ಸರ್ವೇಷನ್‌ನಲ್ಲಿ ಇಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದರು.

  • 12 Aug 2023 09:23 AM (IST)

    Karnataka Breaking News Live: ತನಗೆ ಬಂದ ಪ್ರಶಸ್ತಿಯನ್ನು ತನ್ನ ಸಹೋದ್ಯೋಗಿಗೆ ನೀಡಿದ ಅಧಿಕಾರಿ

    ಮೈಸೂರಿನ ಜಿಲ್ಲಾ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಬಿ ಮಂಜುನಾಥ್ ಅವರು ತನಗೆ ಬಂದ ಪ್ರಶಸ್ತಿಯನ್ನು ತನ್ನ ಸಹೋದ್ಯೋಗಿಗೆ ನೀಡಿದ್ದಾರೆ. 2023ನೇ ಸಾಲಿನ ಅತ್ಯುತ್ತಮ ಡಿಜಿಟಲ್ ಓದುಗರ ನೋಂದಾಣಿ ಪ್ರಶಸ್ತಿಗೆ ಬಿ ಮಂಜುನಾಥ್ ಭಾಜನರಾಗಿದ್ದರು. ಆ ಪ್ರಶಸ್ತಿಯನ್ನು ತಮ್ಮ ಸಹೋದ್ಯೋಗಿ ಪರಮೇಶ್ ಅವರಿಗೆ ನೀಡುವಂತೆ ಸಾರ್ವಜನಿಕೆ ಗ್ರಂಥಾಲಯ ಇಲಾಖೆಗೆ ಪತ್ರ ಬರೆದಿದ್ದಾರೆ. ಮಂಜುನಾಥ್ ನಿರ್ಧಾರಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಬಿ ಮಂಜುನಾಥ್, ಪರಮೇಶ್

  • 12 Aug 2023 09:19 AM (IST)

    Karnataka Breaking News Live: ಕುಣಿಗಲ್​ನಲ್ಲಿ ಬೀದಿನಾಯಿಗಳ ಹಾವಳಿ, 4 ವರ್ಷದ ಮಗುವಿನ ಮೇಲೆ ದಾಳಿ

    ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ 17ನೇ ವಾರ್ಡ್​ನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಮನೆ ಮುಂದೆ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವಿನ ಮೇಲೆ ಬೀದಿನಾಯಿ ಏಕಾಏಕಿ ದಾಳಿ ನಡೆಸಿದೆ. ನಾಲ್ಕು ವರ್ಷದ ಮಗುವಿಗೆ ಗಂಭೀರ ಗಾಯಗಳಾಗಿವೆ. ನಾಯಿ ದಾಳಿಯ ದೃಶ್ಯ ಸಿಸಿಟಿವಿ‌ ಕ್ಯಾಮರಾದಲ್ಲಿ ಸೆರೆಯಾಗಿದೆ.

  • 12 Aug 2023 08:09 AM (IST)

    Karnataka Breaking News Live: ಲಿವಿಂಗ್‌ ಟು ಗೆದರ್​ನಲ್ಲಿದ್ದ ವ್ಯಕ್ತಿ ನೇಣಿಗೆ ಶರಣು

    ಲಿವಿಂಗ್‌ ಟು ಗೆದರ್​ನಲ್ಲಿದ್ದ ವ್ಯಕ್ತಿ ಕುಡಿದ ಮತ್ತಿನಲ್ಲಿ ನೇಣಿಗೆ ಶರಣಾದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗ್ರಾಮ ಬೈರೆಗೌಡನಹಳ್ಳಿಯಲ್ಲಿ ನಡೆದಿದೆ. ರಾಜು(30) ಮೃತ ದುರ್ದೈವಿ. ಕಳೆದ 6 ತಿಂಗಳ ಹಿಂದೆ ಬೈರೆಗೌಡನಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ನಾಗಶೆಟ್ಟಿಹಳ್ಳಿಯ ಮಮತ ಜೊತೆ ಲಿವಿಂಗ್‌ ಟು ಗೆದರ್​ನಲ್ಲಿದ್ದ ವ್ಯಕ್ತಿ ನೇಣಿಗೆ ಶರಣು.

  • 12 Aug 2023 08:01 AM (IST)

    Karnataka Breaking News Live: ಟೆಂಪೋ ಟಯರ್ ಅಡಿಗೆ ಸಿಲುಕಿ ಸೈಕಲ್‌ನಲ್ಲಿದ್ದ ಬಾಲಕ ಸಾವು

    ಮೈಸೂರಿನ ಅಭಿಷೇಕ್ ವೃತ್ತದಲ್ಲಿ ಭೀಕರ ಘಟನೆ ನಡೆದಿದೆ. ಟೆಂಪೋ ಟಯರ್ ಅಡಿಗೆ ಸಿಲುಕಿ ಸೈಕಲ್‌ನಲ್ಲಿದ್ದ ಬಾಲಕ ಮೃತಪಟ್ಟಿದ್ದು ಅದೃಷ್ಟವಶಾತ್ ಮತ್ತೊಬ್ಬ ಬಾಲಕ ಬಚಾವ್ ಆಗಿದ್ದಾನೆ. ವೇಗವಾಗಿ ಸೈಕಲ್‌ನಲ್ಲಿ ಬಂದ ಮಕ್ಕಳು ನಿಯಂತ್ರಿಸಲಾಗದೆ ಚಕ್ರದಡಿಗೆ ಸಿಕ್ಕಿದ್ದಾರೆ. ಮೂಲತಃ ಯಳಂದೂರಿನ ರಾಮಣ್ಣ ಅವರ ಪುತ್ರ ಬಾಲಾಜಿ ಅಲಿಯಾಸ್ ತಿರುಪತಿ ಮೃತ ಬಾಲಕ. ಮತ್ತೊಬ್ಬ ಬಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

  • 12 Aug 2023 08:01 AM (IST)

    Karnataka Breaking News Live: ಮೈಸೂರು ಮೃಗಾಲಯದ ವಾರದ ರಜೆ ರದ್ದು

    ಮಂಗಳವಾರ 77ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಮೈಸೂರು ಮೃಗಾಲಯದ ವಾರದ ರಜೆ ರದ್ದು ಮಾಡಲಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಮಂಗಳವಾರದ ವಾರದ ರಜೆ ರದ್ದು ಮಾಡಲಾಗಿದೆ. ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು ಎಂದು ಮೈಸೂರು ಮೃಗಾಲಯ ಪ್ರಾಧಿಕಾರದಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

  • 12 Aug 2023 08:01 AM (IST)

    Karnataka Breaking News Live: ಕೊನೆ ಕ್ಷಣದಲ್ಲಿ ಹೆಚ್​​ಡಿಕೆ ಬೆಂಗಳೂರು ಪ್ರಯಾಣ ರದ್ದು

    ಕೊನೆ ಕ್ಷಣದಲ್ಲಿ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಬೆಂಗಳೂರು ಪ್ರಯಾಣ ರದ್ದಾಗಿದೆ. ಹೆಚ್​​ಡಿಕೆ, ಸಾ.ರಾ.ಮಹೇಶ್ ಸೇರಿ ನಾಲ್ವರಿಗೆ ಕೌಲಾಲಂಪುರದಿಂದ ಬೆಂಗಳೂರಿಗೆ ಇಂದು ಫ್ಲೈಟ್​​​ ಟಿಕೆಟ್ ಬುಕ್ ಆಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಹೆಚ್​​ಡಿಕೆ ಬೆಂಗಳೂರು ಪ್ರಯಾಣ ರದ್ದಾಗಿಎದ. ಸದ್ಯ ಎಂಎಲ್​ಸಿ ಬಚ್ಚೇಗೌಡ, ರಮೇಶ್​​ಗೌಡ ಮಾತ್ರ ಬೆಂಗಳೂರಿಗೆ ವಾಪಸ್ ಆಗಿದ್ದು ಹೆಚ್​ಡಿಕೆ, ಸಾ.ರಾ.ಮಹೇಶ್ ​​​​​ಮಲೇಶಿಯಾದಲ್ಲೇ ಉಳಿದುಕೊಂಡಿದ್ದಾರೆ. ನಾಳೆ ಮಲೇಶಿಯಾದ ದೇಗುಲದಲ್ಲಿ ವಿಶೇಷ ಪೂಜೆ ಹಿನ್ನೆಲೆ ಪ್ರಯಾಣ ರದ್ದಾಗಿದೆ.

  • 12 Aug 2023 08:01 AM (IST)

    Karnataka Breaking News Live: ಬಿಬಿಎಂಪಿ ಅವಘಡ ಸಂಬಂಧ ಎಫ್​ಐಆರ್ ದಾಖಲು

    ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಮುಖ್ಯ ಇಂಜಿನಿಯರ್ ಕೆ.ಪ್ರಹ್ಲಾದ್​​​ದೂರು ದಾಖಲಿಸಿದ್ದಾರೆ. ಹಲಸೂರುಗೇಟ್ ಪೊಲೀಸ್​​​​​​ ಠಾಣೆಯಲ್ಲಿ ಐಪಿಸಿ ಸೆಕ್ಷನ್ 337, 338ರಡಿ ಎಫ್ಐಆರ್ ದಾಖಲಾಗಿದೆ. ಘಟನೆ ವೇಳೆ ಸ್ಥಳದಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Published On - 8:00 am, Sat, 12 August 23

Follow us on