Karnataka Breaking Kannada News Live Updates: ಸರ್ಕಾರ ಅಧಿಕಾರಕ್ಕೆ ಬಂದಾಯ್ತು, ಸಿಎಂ ಆಗಿ ಸಿದ್ದರಾಮಯ್ಯ(Siddaramaiah), ಡಿಸಿಎಂ ಆಗಿ ಡಿಕೆ ಶಿವಕುಮಾರ್(DK Shivakumar) ಆಯ್ಕೆ ಆಗಿದ್ದಾರೆ. ಆದ್ರೆ ಸಂಪುಟಕ್ಕೆ ಸೇರಿರೋದು ಮಾತ್ರ ಕೇವಲ 8 ಸಚಿವರು. ಹೀಗಾಗಿ ದೆಹಲಿಯಲ್ಲಿ ಆಕಾಂಕ್ಷಿಗಳ ಕಸರತ್ತು ಜೋರಾಗಿದೆ. ಒಂದ್ಕಡೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತಮ್ಮ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ಪೈಪೋಟಿ ನಡೆಸ್ತಿದ್ರೆ, ಇನ್ನೊಂದೆಡೆ ದಂಡು ದಂಡು ಶಾಸಕರು ದೆಹಲಿ ತಲುಪಿ ಲಾಬಿ ನಡೆಸ್ತಿದ್ದಾರೆ. ಈ ರಾಜಕೀಯ ಬೆಳವಣಿಗೆಗಳ ಜೊತೆಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ(Bengaluru Rain). ಟಿವಿ9 ಡಿಜಿಟಲ್ ಲೈವ್ ಮೂಲಕ ರಾಜಕೀಯ ಹಾಗೂ ಮಳೆಯ ಕ್ಷಣ ಕ್ಷಣದ ಅಪ್ಡೇಟ್ಸ್ ಪಡೆಯಿರಿ.
ನೂತನ ಸಂಸತ್ ಭವನದ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರು ಭಾನುವಾರದಂದು ನವದೆಹಲಿಗೆ ತೆರಳಲಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ನವದೆಹಲಿಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ. ರಾತ್ರಿ 12.45ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ಡಿ.ಕೆ.ಶಿವಕುಮಾರ್, ನಾಳೆ ಬೆಳಗ್ಗೆ ಮತ್ತೆ ನವದೆಹಲಿಗೆ ತೆರಳಲಿದ್ದಾರೆ.
ಹಿರಿಯರ ಸಂಪುಟ ಸೇರ್ಪಡೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಒಮ್ಮತ ಮೂಡಿಬಂದಿಲ್ಲ. ಆರ್.ವಿ.ದೇಶಪಾಂಡೆ ಸೇರಿ ಹಲವು ಹಿರಿಯರ ಸೇರ್ಪಡೆಗೆ ಡಿಕೆ ಶಿವಕುಮಾರ್ ಅವರು ವಿರೋಧ ವ್ಯಕ್ತಪಡಿಸುತ್ತಿದ್ದು, ಮಧು ಬಂಗಾರಪ್ಪ, ಬಿ.ಕೆ.ಹರಿಪ್ರಸಾದ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ ಒಂದೇ ಸಮುದಾಯದ ಮಧು, ಹರಿಪ್ರಸಾದ್ ಸೇರ್ಪಡೆಗೆ ಸಿದ್ದರಾಮಯ್ಯ ಅವರು ಅಸಮ್ಮತಿ ಸೂಚಿಸಿದ್ದಾರೆ. ಇದೇ ರೀತಿ 4-5 ಸಚಿವ ಆಕಾಂಕ್ಷಿಗಳ ವಿಚಾರದಲ್ಲಿ ಇನ್ನೂ ಒಮ್ಮತ ಮೂಡಿಬಂದಿಲ್ಲ. ಇಂದು ತಡರಾತ್ರಿಯೂ ಮತ್ತೊಂದು ಸುತ್ತಿನ ಸಭೆ ನಡೆಯುವ ಸಾಧ್ಯತೆ ಇದೆ.
ಮೇ 27ರಂದು ಬೆಳಗ್ಗೆ 11.45ಕ್ಕೆ ನೂತನ ಸಚಿವರ ಪದಗ್ರಹಣ ನಡೆಯಲಿದೆ. ಒಟ್ಟು 24 ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಸರ್ಕಾರದ ಮನವಿ ಮೇರೆಗೆ ಪದಗ್ರಹಣ ಕಾರ್ಯಕ್ರಮಕ್ಕೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ.
ದೆಹಲಿಯ ಜಿಆರ್‌ಜಿ ರಸ್ತೆಯ ಕಾಂಗ್ರೆಸ್ ವಾರ್ ರೂಮ್‌ನಲ್ಲಿ ನಡೆಯುತ್ತಿದ್ದ ಕರ್ನಾಟಕ ಸಚಿವ ಸಂಪುಟ ರಚನೆ ಬಗ್ಗೆ ಕಾಂಗ್ರೆಸ್ ನಾಯಕರು ನಡೆಸುತ್ತಿದ್ದ ಸಭೆ ಮುಕ್ತಾಯಗೊಂಡಿದೆ. ಆದರೆ ಸಚಿವರ ಪಟ್ಟಿ ಇನ್ನೂ ಅಂತಿಮವಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಸನ್ನೆ ಮೂಲಕ ತಿಳಿಸಿದ್ದಾರೆ. ಹೀಗಾಗಿ ಇಂದು ಸಿದ್ದರಾಮಯ್ಯ ಅವರು ದೆಹಲಿಯಲ್ಲೇ ಉಳಿದುಕೊಳ್ಳುವ ಸಾಧ್ಯತೆ ಇದೆ.
ಜೆಡಿಎಸ್ ಪಕ್ಷದ ವಿಸರ್ಜನೆ ಯಾವಾಗ ಎಂದು ಕರ್ನಾಟಕ ಕಾಂಗ್ರೆಸ್ ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲಾಗಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದರು. ನಾವು ಅರ್ಹ ಫಲಾನುಭವಿಗಳಿಗೆ ನಮ್ಮ ಗ್ಯಾರಂಟಿಗಳನ್ನು ಜಾರಿಗೊಳಿಸುವುದು ನಿಶ್ಚಿತ
ಕುಮಾರಸ್ವಾಮಿಯವರೇ, ಆ ಚಿಂತೆ ಬಿಡಿ. ಜೆಡಿಎಸ್ ಪಕ್ಷದ ವಿಸರ್ಜನಾ ಕಾರ್ಯಕ್ರಮದ ಮುಹೂರ್ತ ಯಾವಾಗ ಹೇಳಿ!? ಎಂದು ಟ್ವೀಟ್ ಮಾಡಿದೆ.
ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಬೇಸರ ವ್ಯಕ್ತಪಡಿಸಿದ ಹೆಚ್ಡಿ ದೇವೇಗೌಡರು ಬೇಸರ ವ್ಯಕ್ತಪಡಿಸಿದರು. ಹಣ ಚುನಾವಣೆ ಗೆಲ್ಲಿಸಲ್ಲ, ಬದ್ಧತೆ ಇರಬೇಕು. ಪಕ್ಷ ನಿಷ್ಠೆ ಇದ್ದರೆ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎಂದರು. ಹಣ ಕೊಟ್ಟು ಕಳಿಸಿದ್ರಿ ಗೆದ್ರಾ? ಅವರು ಇಂದು ಈ ಸಭೆಗೆ ಬಂದಿದ್ದಾರಾ? ಪಕ್ಷದ ನಿಷ್ಠಾವಂತರು ಇಂದು ಬಂದಿದ್ದಾರೆ, ಬರದಿರುವವರನ್ನು ಬಿಟ್ಟುಬಿಡಿ. ಪಕ್ಷದಿಂದ ಲಾಭ ಪಡೆಯುವವರು ಬೇಡವೆಂದು ಹೇಳಿದರು. ಕೊನೆಯುಸಿರು ಇರುವವರೆಗೂ ಪಕ್ಷಕ್ಕಾಗಿ ದುಡಿಯುವವರನ್ನು ಹುಡುಕಿ, ಉತ್ತರ ಕರ್ನಾಟಕ ಭಾಗದಲ್ಲಿ ನಾಯಕತ್ವದ ಕೊರತೆಯಿದೆ. ರಾಯಚೂರು ಸೇರಿದಂತೆ ರಾಜ್ಯಾದ್ಯಂತ ನಾನೇ ಪ್ರವಾಸ ಮಾಡುತ್ತೇನೆ. ಕಡೂರು ಕ್ಷೇತ್ರದಲ್ಲಿ ವೈಎಸ್ವಿ ದತ್ತಾ ಪಾದಯಾತ್ರೆ ಮಾಡುವುದು ಬೇಡ, ನಿಮ್ಮ ಸೇವೆ ಪಕ್ಷಕ್ಕೆ ಬೇಕಾಗಿದೆ ಎಂದರು.
ದಾವಣಗೆರೆ: ರಾಜ್ಯ ಸರ್ಕಾರ ಐದು ಗ್ಯಾರೆಂಟಿ ಕೊಟ್ಟಿರುವುದನ್ನು ಈಡೇರಿಸಬೇಕು. ಇಲ್ಲದಿದ್ದರೆ ವಚನ ಭ್ರಷ್ಟ ಸರ್ಕಾರ ಆಗುತ್ತದೆ ಎಂದು ಹೊನ್ನಾಳಿ ತಾಲೂಕಿನ ಮುಕ್ತೇನಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ಸರ್ಕಾರ ಬಂದ 1 ಘಂಟೆ ಒಳಗಾಗೀ 5 ಗ್ಯಾರೆಂಟಿ ಅನುಷ್ಠಾನ ಮಾಡುವುದಾಗಿ ಹೇಳಿದ್ದರು. ಆದರೇ ಇದೂವರೆಗೂ ಅದು ಕಾರ್ಯಗತವಾಗಿಲ್ಲ. ಚುನಾವಣೆ ಹಾಗೂ ಅಧಿಕಾರಕ್ಕಾಗಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ನಾವು ಸ್ವಲ್ಪ ದಿನ ಕಾದು ನೋಡುತ್ತೇವೆ. ಗಾಗಲೇ ಹಳ್ಳಿಗಳಲ್ಲಿ ಮಹಿಳೆಯರು ಕರಂಟ್ ಬಿಲ್ ಕೇಳಿದರೆ ಪೊರಕೆ ಸೇವೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಯಾರು ಕರೆಂಟ್ ಬಿಲ್ ಕಟ್ಟಬಾರದೆಂದು ಮನವಿ ಮಾಡುತ್ತೇವೆ. ಸ್ವಲ್ಪ ದಿನ ನಾವು ಕಾದು ನೋಡುತ್ತೇವೆ, ಒಂದು ವೇಳೆ ಬರವಸೆ ಈಡೇರಿಸದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಮಂಗಳೂರು: ‘ಸಿದ್ದರಾಮಯ್ಯ 24 ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿದ್ದಾರೆ’ ಎಂದು ಹೇಳಿಕೆ ನೀಡಿದ್ದಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾಂಗ್ರೆಸ್ ದೂರು ದಾಖಲಿಸಿತ್ತು. ಇದೀಗ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧಾರ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಹರೀಶ್ ಪೂಂಜಾ ಚುನಾವಣೆ ಗೆಲ್ಲಲು 40% ಕಮಿಷನ್ ಹಣ ಹಂಚಿದ್ದಾರೆ. ಬೆಳ್ತಂಗಡಿಯಲ್ಲಿ ಚುನಾವಣೆ ಗೆಲ್ಲಲು ಹಣದ ಹೊಳೆ ಹರಿಸಿದ್ದಾರೆ. ಸುಮಾರು 30 ರಿಂದ 40 ಕೋಟಿ ರೂಪಾಯಿ ಹಣ ಚುನಾವಣೆಯಲ್ಲಿ ಹರೀಶ್ ಪೂಂಜಾ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಈಗ ನಮ್ಮ ಸರಕಾರ ಇದೆ ಪೂಂಜಾ ವಿರುದ್ದ ತನಿಖೆ ನಡೆಸುತ್ತೇವೆ ಎಂದರು. ಸಿದ್ದರಾಮಯ್ಯ 24 ಹಿಂದೂ ಕಾರ್ಯಕರ್ತರ ಕೊಲೆ ಮಾಡಿದ್ದಾರೆ ಎಂದು ಪೂಂಜಾ ಹೇಳಿದ್ದಾರೆ. ಮೂರೂವರೆ ವರ್ಷ ಇವರದ್ದೇ ಬಿಜೆಪಿ ಸರಕಾರ ಇತ್ತು. ಆಗ ಯಾಕೆ ಈ ಕೊಲೆಗಳ ಬಗ್ಗೆ ತನಿಖೆ ನಡೆಸಲಿಲ್ಲ? ಎಂದು ಪ್ರಶ್ನಿಸಿ ಶಾಸಕ ಪೂಂಜಾ ವಿರುದ್ದ ನಾವು ಮಾನನಷ್ಟ ಮೊಕದ್ದಮೆ ಹೂಡುತ್ತೇವೆ. ತಯಾರಿ ನಡೆಸುತ್ತಿದ್ದೇವೆ ಎಂದರು.
ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟ ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಕೊಡಗು ಜಿಲ್ಲೆಗೆ ಯಾವುದೇ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಯಾವುದೇ ಸರ್ಕಾರವಾದ್ರೂ ಕೊಡಗು ಜಿಲ್ಲೆಯನ್ನು ಪರಿಗಣಿಸಬೇಕು. ಕೊಡುಗು ಜಿಲ್ಲೆಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಪರಿಗಣಿಸಬೇಕು ಎಂದರು.
ಸಂಭವನೀಯ ಸಚಿವರ ಪಟ್ಟಿಯ ಭವಿಷ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ನಿಂತಿದೆ. ಖರ್ಗೆ ಭೇಟಿ ನಂತರ 3-4 ಹೆಸರು ಬದಲು ಸಾಧ್ಯತೆ ಇದೆ. ಡಾ.ಶರಣ ಪ್ರಕಾಶ್ ಪಾಟೀಲ್, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ, ಬಿ.ಕೆ.ಹರಿಪ್ರಸಾದ್ ಹೆಸರು ಸೇರ್ಪಡೆಯಾಗುವ ಸಾಧ್ಯತೆ ಇದೆ. ಇಂದು ಸಂಜೆ 5 ಗಂಟೆಗೆ ಸಿದ್ದರಾಮಯ್ಯ ಅವರು ಖರ್ಗೆ ಅವರನ್ನು ಭೇಟಿಯಾಗಲಿದ್ದಾರೆ.
18 ಶಾಸಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ನಾಳೆ ಅಥವಾ ನಾಡಿದ್ದು ಸಚಿವ ಪ್ರಮಾಣವಚನ ಸಾಧ್ಯತೆ ಇದೆ. ಸದ್ಯ ಟಿವಿ9ಗೆ ಸಂಭವನೀಯ ಸಚಿವರ ಪಟ್ಟಿ ಲಭ್ಯವಾಗಿದ್ದು, ಈಶ್ವರ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಶರಣಬಸಪ್ಪ ದರ್ಶನಾಪುರ
ಬಸವರಾಜ ರಾಯರೆಡ್ಡಿ, ಡಾ.ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, S.S.ಮಲ್ಲಿಕಾರ್ಜುನ, ಶಿವರಾಜ ತಂಗಡಗಿ, ಭೈರತಿ ಸುರೇಶ್, ಕೃಷ್ಣ ಭೈರೇಗೌಡ, ರಹೀಂ ಖಾನ್, ಡಾ.ಅಜಯ್ ಸಿಂಗ್, ಸಿ.ಪುಟ್ಟರಂಗಶೆಟ್ಟಿ, ಪಿ.ಎಂ.ನರೇಂದ್ರಸ್ವಾಮಿ, ಎಂ.ಸಿ.ಸುಧಾಕರ್, ಡಿ.ಸುಧಾಕರ್, ಹೆಚ್.ಕೆ.ಪಾಟೀಲ್, ಎನ್.ಚಲುವರಾಯಸ್ವಾಮಿ, ಕೆ.ಎನ್.ರಾಜಣ್ಣ ಅಥವಾ ಬಿ.ನಾಗೇಂದ್ರಗೆ ಸಚಿವಸ್ಥಾನ ಸಾಧ್ಯತೆ ಇದೆ.
ಒಬ್ಬ ಪೊಲೀಸ್ ಅಧಿಕಾರಿಯೂ ಕೇಸರಿ ಬಟ್ಟೆ ಧರಿಸಿ ಬಂದಿಲ್ಲ, ಕೇಸರೀಕರಣ ಮಾಡ್ತಿದ್ದೀರಾ ಅಂತ ಡಿಸಿಎಂ ಪ್ರಶ್ನೆ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಮೊದಲು ತಮ್ಮ ಗ್ಯಾರಂಟಿ ಕಾರ್ಡ್ ಘೋಷಣೆಯ ಹಣ ಕೊಡಲಿ, ಆಮೇಲೆ ಪೊಲೀಸ್ ಇಲಾಖೆ ಕೇಸರೀಕರಣ ಆಗಿದೆಯೋ ಇಲ್ಲವೋ ನೋಡೋಣ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ತಿರುಗೇಟು ನೀಡಿದರು. ಈಗ ನಿಮ್ಮ ಸರ್ಕಾರ ಬಂದಿದೆ ಪೊಲೀಸರು ಕೆಲಸ ಮಾಡುತ್ತಾರೆ. ಆಗ ನಮ್ಮ ಸರ್ಕಾರ ಇತ್ತು, ಆಗಲೂ ಕೆಲಸ ಮಾಡಿದ್ದಾರೆ. ನಮ್ಮ ಇಬ್ಬರು ಶಾಸಕರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಭಯೋತ್ಪಾದಕ, ನಕ್ಸಲ್ ಬೆಂಬಲಿಗರ ಪರವಾಗಿ ನಿಂತಿದ್ದೀರಾ? ಟಿಪ್ಪು ಜಯಂತಿ ಬೇಡ ಅಂತ ಹೇಳಿದ್ದಕ್ಕೆ ನಮ್ಮವರ ಮೇಲೆ ಎಫ್ಐಆರ್ ಹಾkಉತ್ತೀರಾ? ಬಂಟ್ವಾಳದಲ್ಲಿ ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡುವವರ ಮೇಲೆ ಎಫ್ಐಆರ್ ಹಾಕಿಲ್ಲ, ಧರ್ಮ ರಕ್ಷಣೆ ಮಾಡುವ ನಮ್ಮ ಶಾಸಕರು, ಕಾರ್ಯಕರ್ತರ ಮೇಲೆ ಎಫ್ಐಆರ್ ಹಾಕುತ್ತೀರಾ ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ಬ್ಯಾನ್ ಮಾಡ್ತೀನಿ ಅಂತ ಹೇಳಿದ್ದಾರೆ. ಅವರಿನ್ನೂ ಮಗು ಅಂತ ಕಾಣುತ್ತದೆ. ಅವರು ಕೂಪ ಮಂಡೂಕ ತರಹ ಕಾಣ್ತಿದ್ದಾರೆ. ಆರ್ ಎಸ್ ಎಸ್ ಬಡವರ, ಸಂಕಷ್ಟಕ್ಕೆ ಸಿಲುಕಿದವರ ಪರ ಕೆಲಸ ಮಾಡುವ ಸಂಘಟನೆ. ಭಯೋತ್ಪಾದನೆಗೆ ಬೆಂಬಲ ಕೊಡುವ ಸಂಘಟನೆಗಳನ್ನು ನಿಷೇಧಿಸುವ ತಾಕತ್ತು ನಿಮಗಿಲ್ಲ. ದಿನನಿತ್ಯ ಶಾಖೆ ನಡೆಸುವ ಸಂಘಟನೆ ಬ್ಯಾನ್ ಮಾಡುತ್ತೀರಾ? ಇಂದಿರಾ ಗಾಂಧಿ ಸೇರಿದಂತೆ ಹಲವರು ಆರ್ ಎಸ್ ಎಸ್ ಬ್ಯಾನ್ ಮಾಡಲು ಮುಂದಾಗಿದ್ದರು. ಖರ್ಗೆ ಅವರೇ ನಿಮ್ಮ ಹಿರಿಯರನ್ನು ಕೇಳಿ ಬ್ಯಾನ್ ಮಾಡಿದ್ರೆ ಏನಾಗುತ್ತದೆ ಅಂತ, ನಿಮಗೆ ಹುಚ್ಚು ಹಿಡಿದಿದೆ ಎಂದರು.
ಬಿಜೆಪಿ ನಾಯಕರ ಟಾರ್ಗೆಟ್ ಪ್ರಾರಂಭವಾಗಿದೆ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ. ಅಶ್ವಥ್ ನಾರಾಯಣ್, ಹರೀಶ್ ಪೂಂಜ ಮೇಲೆ ಹಿಂದಿನ ವಿಚಾರಕ್ಕೆ ಎಫ್ಐಆರ್ ಹಾಕಿದ್ದಾರೆ. ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಾ? ಕಾರ್ಯಕರ್ತರನ್ನು, ಮುಖಂಡರನ್ನು ಧಮ್ಕಿ ಹಾಕಿ ಬಾಯಿ ಮುಚ್ಚಿಸುತ್ತೀರಾ? ಇಷ್ಟಕ್ಕೇ ಹೆದರಿಸಲು ಸಾಧ್ಯವಾ? ಕೆಲವು ರೌಡಿಗಳು ಪೊಲೀಸರಿಗೆ ಧಮ್ಕಿ ಹಾಕೋದನ್ನು ನೋಡಿದ್ದೇವೆ. ಅನುಭವಿ ಅಧಿಕಾರಿಗಳಿಗೆ ಧಮಕಿ ಹಾಕುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ಕೇಸರೀಕರಣ ಅಂತಿದ್ದೀರಿ. ಅವರು ಎಂದಾದ್ರೂ ಕೇಸರಿ ಡ್ರೆಸ್ ಹಾಕೋದನ್ನು ನೋಡಿದ್ದೀರಾ? ಪೊಲೀಸರ ಮೇಲೆ ಹಗೆತನ ತೋರುವುದು ಸರಿಯಲ್ಲ. ನೀವು ಜನರನ್ನು ವಂಚಿಸಿ, ತೇಜೋವಧೆ ಮಾಡಿ ಮತ ಪಡೆಯುವ ಕೆಲಸ ಮಾಡಿದ್ದೀರಿ ಎಂದು ಆರೋಪಿಸಿದರು.
ನಾಲ್ಕೈದು ತಿಂಗಳಲ್ಲಿ ರಾಜ್ಯದ ರಾಜಕೀಯ ಚಿತ್ರಣ ಬದಲಾವಣೆಯಾಗಲಿದೆ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಸರ್ಕಾರ ಹೋಗುವಂತ ದಾರಿ ನೋಡಿದರೆ ಬಹಳ ದಿನ ನಡೆಯಲ್ಲ. ಬಿಜೆಪಿ ನಾಯಕರು, ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ನವರಿಗೆ ನಮ್ಮ ಕಾರ್ಯಕರ್ತರು ತಲೆಬಾಗುವ ಪ್ರಶ್ನೆ ಇಲ್ಲ. ನಾವು ನಮ್ಮ ಹಣದಿಂದ ರಾಜಕೀಯ ಮಾಡುತ್ತಿದ್ದೇವೆ. ನಾವು ತಂದ ಜನಪರ ಕಾನೂನು ರದ್ದುಪಡಿಸಲು ಹೊರಟಿದ್ದಾರೆ. ಎಲ್ಲೋ ಅಲ್ಪಸ್ವಲ್ಪ ವ್ಯತ್ಯಾಸ ಆಗಿದಕ್ಕೆ ನಾವು ಸೋತಿರಬಹುದು. ಆದರೆ ನಾವು ಸ್ವಾಭಿಮಾನ ಕಳೆದುಕೊಂಡಿಲ್ಲ. ಮೋದಿಯವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸುತ್ತೇವೆ. ರಾಜ್ಯದಲ್ಲಿ ಮತ್ತೆ 25ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದರು.
ಹುಬ್ಬಳ್ಳಿ: PFI, SDPI ಜೊತೆ ಬಜರಂಗದಳ, ಆರ್ಎಸ್ಎಸ್ ಹೋಲಿಸಿ ಅನಗತ್ಯವಾಗಿ ಮೈಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ ಎಂದು ಹುಬ್ಬಳ್ಳಿ ಧಾರವಾಡ ಕೇಂದ್ರ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆಗೆ ವಿರುದ್ಧ ಶಾಸಕರು ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ರಾಜ್ಯದ ಜನತೆ ನಿಮಗೆ ಬಹುಮತ ಕೊಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀವು ನೀಡಿರುವ ಗ್ಯಾರಂಟಿ ಬಗ್ಗೆ ಮಾತಾಡಿ. 10 ಕೆಜಿ ಅಥವಾ 15 ಕೆಜಿ ಅಕ್ಕಿ ಕೊಡುತ್ತೀರೋ, ವಿದ್ಯುತ್ ಕೊಡುತ್ತೀರೋ ಹೇಳಿ. ಗ್ಯಾರಂಟಿ ಜಾರಿ ಮಾಡದೆ ವಿಷಯಾಂತರ ಮಾಡಲು ಪ್ರಯತ್ನಿಸಬೇಡಿ. ಬಜರಂಗದಳ, ಆರ್ಎಸ್ಎಸ್ ನಿಷೇಧಿಸುತ್ತೇವೆ ಅನ್ನೋದು ಸರಿಯಲ್ಲ. ರಾಜ್ಯದ ಜನ ನಿಮಗೆ ನೀಡಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು.
ಮಂಗಳೂರು: ರಸ್ತೆ ಕಾಮಗಾರಿ ಅವ್ಯವಸ್ಥೆ ಹಿನ್ನೆಲೆ ಅಧಿಕಾರಿಗಳಿಗೆ ಕಾಂಗ್ರೆಸ್ ಶಾಸಕ ಅಶೋಕ್ ರೈ ತರಾಟೆಗೆ ತೆಗೆದುಕೊಂಡಿದ್ದಾರೆ. ಉಪ್ಪಿನಂಗಡಿ-ಪುತ್ತೂರು ರಸ್ತೆ ಕಾಮಗಾರಿ ವಿಳಂಬ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಸ್ಥಳೀಯರ ಸಮಸ್ಯೆ ಆಲಿಸಿದರು. ಮೂರು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದರೂ ಅವ್ಯವಸ್ಥೆಗೆ ಶಾಸಕರು ಆಕ್ರೋಶ ಹೊರಹಾಕಿದ್ದು, ಎಷ್ಟು ದಿನದಲ್ಲಿ ಕೆಲಸ ಮುಗಿಸುತ್ತೀರಿ ಅಂತ ಹೇಳಿ ಎಂದು ತರಾಟೆ ತೆಗೆದುಕೊಂಡರು. ನನ್ನನ್ನ ಸಮಾಧಾನ ಮಾಡಲು ನೀವು ಹೇಳೋದು ಬೇಡ, ಅಶೋಕ್ ರೈಗೆ ವೋಟ್ ಹಾಕಿ ಸಮಸ್ಯೆ ಆಯ್ತು ಅಂತ ಜನ ಹೇಳಬಾರದು. ನಿಮಗೆ ಆಗುತ್ತಾ ಇಲ್ವಾ ಹೇಳಿ, ಯಾವಾಗ ಮುಗಿಸುತ್ತೀರಾ ಹೇಳಿ ಅಂತ ಪ್ರಶ್ನಿಸಿದರು.
ದೆಹಲಿಯ ಜಿಆರ್‌ಜಿ ರಸ್ತೆಯಲ್ಲಿರುವ ಕಾಂಗ್ರೆಸ್ ವಾರ್ ರೂಮ್‌ನಲ್ಲಿ ಬೆಳಗ್ಗೆ 11.30ರಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆ ಸಭೆ ನಡೆಸುತ್ತಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರು ಭೋಜನ ವಿರಾಮಕ್ಕಾಗಿ ಹೊರಬಂದಿದ್ದಾರೆ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗುತ್ತಿದೆ.
ನಿಮ್ಮ ಜೊತೆ ಕಾಲ ಕಳೆಯಲು ಆಗಿಲ್ಲಾ, ಅದಕ್ಕೆ ದೇವರು ಸ್ವಲ್ಪ ವಿಶ್ರಾಂತಿ ಕೊಟ್ಟಿದ್ದಾನೆ. ಅಂತಹ ಶಕ್ತಿ ನಿಮ್ಮಲ್ಲಿ ಇದೆ, ಅಲ್ಲಿ ಬೇಡ ಇಲ್ಲಿಗೆ ಬನ್ನಿ ಎಂದು ಕರೆಯಿಸಿಕೊಂಡಿದ್ದೀರಾ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾಸ್ಯ ಮಾಡಿದರು. ಈ ಬಾರಿ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೇನೆ ಅನ್ನುವುದಕ್ಕಿಂತ ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತ ಸ್ವತಃ ಸ್ಪರ್ಧೆ ಮಾಡಿರುವ ಹಾಗೆ ಚುನಾವಣೆ ನಡೆಸಿದ್ದೀರಿ. ನಿಮ್ಮನ್ನು ನೀವು ಈ ಚುನಾವಣೆಯಲ್ಲಿ ಗೆಲ್ಲಿಸಿಕೊಂಡಿದ್ದೀರಿ ಎಂದು ಹೇಳಿದರು.
ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಹಿನ್ನೆಲೆ ಮತ್ತೆ ಮೈಸೂರಿನಲ್ಲಿ ಮಹಿಷಾ ದಸರಾಕ್ಕೆ ಚಾಲನೆ ವಿಚಾರ ಮುನ್ನಲೆಗೆ ಬಂದಿದೆ. ಈ ವಿಚಾರವಾಗಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸರ್ಕಾರ ಯಾರದ್ದೇ ಇರಬಹುದು. ಆದರೆ ನಾನು ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ನಡೆಯುವುದಕ್ಕೆ ಬಿಡಲ್ಲ ಎಂದು ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಶಾಸಕ ಮಹೇಶ್ ಟೆಂಗಿನಕಾಯಿ ತಿರುಗೇಟು ನೀಡಿದ್ದಾರೆ. ಬಜರಂಗದಳ, RSS, ಹಿಂದೂ ಸಂಘಟನೆಗಳ ಬಗ್ಗೆ ಮಾತಾಡಿದ್ದಾರೆ. ನೀವು PFI SDPI ಸಂಘಟನೆಗಳ ಜೊತೆ ಬಜರಂಗದಳ RSS ಹೋಲಿಸಬೇಡಿ. ಈ ರೀತಿ ಅನಾವಶ್ಯಕ ಸಮಸ್ಯೆ ಮೈಮೇಲೆ ಎಳೆದುಕೊಳ್ಳಬೇಡಿ. ನಿಮಗೆ ಜನ ಬಹುಮತ ಕೊಟ್ಟಿದ್ದಾರೆ. ಮೊದಲು ನೀವು ಕೊಟ್ಟ ಗ್ಯಾರಂಟಿ ಬಗ್ಗೆ ಮಾತಾಡಿ. ಹತ್ತು ಕೆಜಿ ಅಕ್ಕಿ ಕೊಡ್ತಿರೋ 15 ಕೊಡ್ತಿರೋ,ವಿದ್ಯುತ್ ಕೊಡ್ತಿರೋ ಅದರ ಬಗ್ಗೆ ಮಾತಾಡಿ. ಗ್ಯಾರಂಟಿ ಕೊಡೋ ಸ್ಪಷ್ಟತೆ ಇರಲಿ ಎಂದು ಮಹೇಶ್ ಟೆಂಗಿನಕಾಯಿ ವಾಗ್ದಾಳಿ ಮಾಡಿದರು.
ದೆಹಲಿಯ ಕಾಂಗ್ರೆಸ್ ವಾರ್ ರೂಮ್‌ನಲ್ಲಿ ಸಭೆ ಮುಂದುವರಿದಿದೆ. ಕಳೆದ 2 ಗಂಟೆಯಿಂದ ನಾಯಕರು ಸಮಾಲೋಚನೆ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಚರ್ಚೆ ನಡೆಸುತ್ತಿದ್ದಾರೆ. ಇಂದು ಸಂಜೆ ಸಚಿವರ ಪಟ್ಟಿ ಫೈನಲ್ ಮಾಡುವ ಸಾಧ್ಯತೆ ಇದೆ. ವಾರ್ರೂಮ್ನಲ್ಲಿ ಸಭೆ ಬಳಿಕ ನಾಯಕರು ಖರ್ಗೆ ಭೇಟಿಯಾಗಲಿದ್ದಾರೆ.
ಕಾಂಗ್ರೆಸ್ ಸರ್ಕಾರದ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ 5 ವರ್ಷಗಳ ಕಾಲ ಇರುತ್ತೊ ಇಲ್ವೋ ಗೊತ್ತಿಲ್ಲ. ಈ ಸರ್ಕಾರದ ಭವಿಷ್ಯ ಲೋಕಸಭಾ ಚುನಾವಣೆ ಮೇಲೆ ನಿಂತಿದ್ದೆ. ನಾನು ಭವಿಷ್ಯ ಹೇಳ್ತಿಲ್ಲ, ರಾಜಕೀಯ ಸ್ಥಿತಿಗತಿ ನೋಡಿ ಹೇಳುತ್ತಿದ್ದೇನೆ ಎಂದರು.
ನಾನು ನಂಬಿದವರು ನಮಗೆ ಮೋಸ ಮಾಡಿದ್ರು. ಬೆನ್ನಿಗೆ ಚೂರಿ ಹಾಕಿದ್ರು. ಅದ್ದರಿಂದ ನಾನು ನಿಮಗೆ ಹಣ ಸಹಾಯ ಮಾಡಲು ಆಗಲಿಲ್ಲ. ನಾನು ಬಹಿರಂಗವಾಗಿ ಕ್ಷಮೆ ಹೇಳುತ್ತೆನೆ. ನಮಗೆ ಕುಟುಂಬ ರಾಜಕಾರಣ ಅಂತ ಟೀಕೆ ಮಾಡುತ್ತಾರೆ. ಅದಕ್ಕೆ ನೀವು ಮುಂದೆ ಬಂದು ಪಕ್ಷ ಸಂಘಟನೆ ಮಾಡಿ. ನಿಮ್ಮ ಬೆನ್ನಿಗೆ ನಾನು ನಿಲ್ಲುತ್ತೆನೆ. ಸಿದ್ದರಾಮಯ್ಯ ಅವರ 17 ವರ್ಷದ ಮೊಮ್ಮಗನನ್ನು ರಾಜಕೀಯಕ್ಕೆ ತರುತ್ತೆನೆ ಅನ್ನುತ್ತಾರೆ. ಅದು ಕುಟುಂಬ ರಾಜಕಾರಣ ಅಲ್ವಾ?ಅದರ ಬಗ್ಗೆ ಯಾರು ಟೀಕೆ ಮಾಡಲ್ಲ ಎಂದು ಹೆಚ್ಡಿ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದರು.
–
ಕಾಂಗ್ರೆಸ್ ಮಾಜಿ ಶಾಸಕನಿಂದ ಮಾಜಿ ಸಿಎಂ ಬೊಮ್ಮಾಯಿಗೆ ಸನ್ಮಾನ ಮಾಡಲಾಗಿದೆ. ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೆ ಕಾಂಗ್ರೆಸ್ನಿಂದ ಉಚ್ಛಾಟಣೆಗೊಂಡಿದ್ದ ಖಾದ್ರಿ ಶಿಗ್ಗಾಂವಿಯ ಚೆನ್ನಮ್ಮ ಸರ್ಕಲ್ನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಮಾಲಾರ್ಪಣೆ ಮಾಡಿ ಸನ್ಮಾನ ಮಾಡಿದ್ದಾರೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ನಿಮ್ಮಿಂದ ಇನ್ನಷ್ಟು ಅಭಿವೃದ್ಧಿ ಆಗಲಿ. ನಮ್ಮ ರಾಜಕೀಯ ಕೇವಲ ಚುನಾವಣೆಗೆ ಸೀಮಿತವಾಗಿದ್ದು. ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸಹಕಾರ ಯಾವಾಗಲೂ ಇದೆ ಎಂದು ಖಾದ್ರಿ ಹೇಳಿದರು. ಆಗ ಕಳೆದ 15 ವರ್ಷಗಳಿಂದ ನಿಮ್ಮ ಸಹಕಾರದಿಂದಲೇ ಅಭಿವೃದ್ಧಿ ಆಗಿದೆ. ಮುಂದಿನ ದಿನಗಳಲ್ಲಿಯೂ ನಿಮ್ಮ ಸಹಕಾರ ಅಗತ್ಯ ಎಂದು ಬೊಮ್ಮಾಯಿ ಹೇಳಿದ್ರು.
ಸಿಎಂ ಸಿದ್ದರಾಮಯ್ಯಗೆ ಈಗಲೂ ಬಿಜೆಪಿಯಿಂದ ಜೀವಬೆದರಿಕೆ ಇದೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ ಮಾಡಿದ್ದಾರೆ. ಜೀವಬೆದರಿಕೆ ಇರುವುದರಿಂದಲೇ ಕ್ರಮಕ್ಕೆ ಒತ್ತಾಯ ಮಾಡುತ್ತಿದ್ದೇವೆ. ಅಶ್ವತ್ಥ್ ನಾರಾಯಣ ವಿರುದ್ಧ ನೀಡಿದ್ದ ದೂರಿನ ಬಗ್ಗೆ ಕ್ರಮಕ್ಕೆ ಆಗ್ರಹಿಸಿದ್ದೇವೆ. ‘ಉರಿಗೌಡ, ನಂಜೇಗೌಡ ಟಿಪ್ಪು ಸುಲ್ತಾನ್ ಹೊಡೆದು ಹಾಕಿದಂತೆ’ ‘ಸಿದ್ದರಾಮಯ್ಯನನ್ನು ಹೊಡೆದು ಹಾಕಬೇಕು ಎಂದಿದ್ದ ಅಶ್ವತ್ಥ್ ನಾರಾಯಣ’ ಮಂಡ್ಯ ತಾಲೂಕಿನ ಸಾತನೂರಲ್ಲಿ ಹೇಳಿಕೆ ನೀಡಿದ್ದರು. ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ. ಇದರಿಂದ ಸಿದ್ದರಾಮಯ್ಯ ಮೇಲೆ ಮತ್ತೆ ದಾಳಿಯಾಗುವ ಸಾಧ್ಯತೆಯಿದೆ. ಸಿಎಂ ಸಿದ್ದರಾಮಯ್ಯಗೆ ಏನೇ ಆದರೂ ಅದಕ್ಕೆ ಬಿಜೆಪಿ, ಅಶ್ವತ್ಥ್ ಹೊಣೆ. ಈ ಕೂಡಲೇ ಡಾ.ಅಶ್ವತ್ಥ್ ನಾರಾಯಣನನ್ನು ಪೊಲೀಸರು ಬಂಧಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ಸಿಎಂ ಆದ ಹಿನ್ನೆಲೆ ಬಾಗಲಕೋಟೆ ಜಿಲ್ಲೆ ಬೀಳಗಿಯ ಯುವಕರು ಸೈಕಲ್ ಮೇಲೆ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಮುತ್ತಪ್ಪ ಕೊಂಡ್ರಿ ಹಾಗೂ ಬಸಪ್ಪ ಕುರಿ ಎಂಬ ಯುವಕರು ಸಿದ್ದರಾಮಯ್ಯ ಹಾಗೂ ಪುನೀತ್ ರಾಜಕುಮಾರ ಭಾವಚಿತ್ರ ಹಿಡಿದುಕೊಂಡು 570 ಕಿಮೀ ಸೈಕಲ್ ಮೇಲೆ ಪ್ರಯಾಣಿಸಲಿದ್ದಾರೆ. ಕಾಂಗ್ರೆಸ್ ಸರಕಾರ ಬರಬೇಕು. ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಈ ಯುವಕರು ಹರಕೆ ಹೊತ್ತಿದ್ದರು.
ಸಂಪುಟ ವಿಸ್ತರಣೆ ವೇಳೆ ಲಿಂಗಾಯತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ದೆಹಲಿಯಲ್ಲಿ ಟಿವಿ9ಗೆ ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಹೇಳಿಕೆ ನೀಡಿದ್ದಾರೆ. ಲಿಂಗಾಯತರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬ ಅನಿಸಿಕೆ ಇದೆ. ಇದನ್ನು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಇಂದು ಸಂಜೆ ವೇಳೆಗೆ ಎಲ್ಲವೂ ತೀರ್ಮಾನ ಆಗುತ್ತದೆ. ಬೇರೆ ಸಮುದಾಯಗಳು ಬೇಡಿಕೆ ಇಡುವುದರಲ್ಲಿ ಯಾವುದೇ ತಪ್ಪಿಲ್ಲ. ಎಸ್ಟಿ ಸಮುದಾಯ ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿರುವುದು ತಪ್ಪಲ್ಲ ಎಂದರು.
ಸಂಪುಟ ವಿಸ್ತರಣೆ, ಖಾತೆ ಹಂಚಿಕೆಗೆ ಸಂಧಾನ ಸೂತ್ರ ಎಂಬುದಿಲ್ಲ. ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಬಗ್ಗೆ ಚಿಂತಿಸುತ್ತಿದ್ದೇವೆ ಎಂದು ದೆಹಲಿಯಲ್ಲಿ ಟಿವಿ9ಗೆ ನೂತನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಕೆಲವೊಂದು ಸಿಕ್ಕುಗಳಿವೆ, ಸಿಕ್ಕು ಗಂಟು ಬಿಡಿಸುವ ಕೆಲಸವಾಗುತ್ತಿದೆ. ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವುದರಿಂದ ಒಂದಷ್ಟು ಸಿಕ್ಕು. ಒಂದಷ್ಟು ದಂಡು, ಸಿಕ್ಕುಗಳಾಗುವುದು ಸಹಜ. ಎಲ್ಲವನ್ನೂ ಚಿಂತಿಸಿಯೇ ಸುಸೂತ್ರವಾಗಿ ಬಗೆಹರಿಸುವ ಕೆಲಸವಾಗುತ್ತಿದೆ ಎಂದರು.
ದೆಹಲಿಯ ರಾಜಾಜಿ ಮಾರ್ಗ್ 10ರಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಸಚಿವರು, ಶಾಸಕರು ಭೇಟಿ ನೀಡಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ, ಹಿರಿಯ ಶಾಸಕ ದೇಶಪಾಂಡೆ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಕರ್ನಾಟಕ ಭವನದಿಂದ ನಿರ್ಗಮಿಸಿದ್ದು ಕೆ.ಸಿ.ವೇಣುಗೋಪಾಲ್ ನಿವಾಸಕ್ಕೆ ತೆರಳಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಚಿವರಾದ ಜಮೀರ್, ಮಾಜಿ ಶಾಸಕ ಯತೀಂದ್ರ ಜತೆ ಪ್ರಯಾಣಿಸಿದ್ದಾರೆ.
ಹಿರೇಕೆರೂರ ಕ್ಷೇತ್ರದಿಂದ ಯು.ಬಿ.ಬಣಕಾರ ಗೆಲುವು ಸಾಧಿಸಲೆಂದು ಹರಕೆ ಹೊತ್ತಿದ್ದ ಅಭಿಮಾನಿ ಪಾದಯಾತ್ರೆ ಮೂಲಕ ಹಳ್ಳೂರು ರಂಗನಾಥ ಸ್ವಾಮಿಗೆ ಹರಕೆ ತಿರಿಸಿದ್ದಾನೆ. ಹಿರೇಕೆರೂರ ವಿಧಾನಸಭಾ ಕ್ಷೇತ್ರದ ಅಂಗರಗಟ್ಟಿ ಗ್ರಾಮದ ಶಿವಮೂರ್ತಪ್ಪ ತೋಟದ ಎಂಬ ಅಭಿಮಾನಿ ಸುಮಾರು 90 ಕಿ.ಮೀ ಪಾದಯಾತ್ರೆ ಮೂಲಕ ಹರಕೆ ತಿರಿಸಿದ್ದಾನೆ. ಪಾದ ರಕ್ಷೆ ಧರಿಸದೆ ಉರಿ ಬಿಸಿಲಿನಲ್ಲಿ ಪಾದಯಾತ್ರೆ ಮಾಡಿದ್ದಾರೆ. ಶಿವಮೂರ್ತಪ್ಪ ತಮ್ಮ ಮನೆಯಿಂದ ರಂಗನಾಥ ದೇವಸ್ಥಾನದ ವರೆಗೆ ಪಾದಯಾತ್ರೆ ಮಾಡಿದ್ರು. ಅಭಿಮಾನಿಯ ಅಭಿಮಾನಕ್ಕೆ ಧನ್ಯವಾದ ತಿಳಿಸಿದ ಶಾಸಕ ಬಣಕಾರ.
ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತೆ ಅಂತಾ ಗೊತ್ತಿದೆ. ರಾಜ್ಯ ಸರ್ಕಾರದಿಂದ ಮತ್ತೊಮ್ಮೆ ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ಗೆ ಅಧಿಕಾರ ಇದೆ, ಏನು ಮಾಡುತ್ತಾರೆ ನೋಡೋಣ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು. ಸಾರ್ವತ್ರಿಕವಾಗಿ ಜನರಿಗೆ ಅನ್ಯಾಯವಾದ್ರೆ ಹೋರಾಟ ಮಾಡ್ತೀವಿ. ಕಾನೂನಾತ್ಮಕವಾಗಿ, ರಾಜಕೀಯವಾಗಿ ಹೋರಾಟ ಮಾಡುತ್ತೇವೆ. ಎಲ್ಲವನ್ನೂ ಬದಲಾಯಿಸುತ್ತೇವೆ ಅನ್ನೋದು ದುರಹಂಕಾರದ ಮಾತು. ಇದು ರಿವರ್ಸ್ ಗೇರ್ ಸರ್ಕಾರ. ಗ್ಯಾರಂಟಿಯಲ್ಲೂ ಕಾಂಗ್ರೆಸ್ ಸರ್ಕಾರ ರಿವರ್ಸ್ ಹೋಗುತ್ತಿದೆ. ನಾವು ಮಾಡಿದ ಜನಪರ ಕಾನೂನಿನಲ್ಲಿ ರಿವರ್ಸ್ ಹೋಗುತ್ತಿದ್ದಾರೆ. ಇದರ ಪರಿಣಾಮ ಜನರಿಗೆ ಕೂಡಲೇ ಗೊತ್ತಾಗಿದೆ. ರಿವರ್ಸ್ ಗೇರ್ ಸರ್ಕಾರ ಅಷ್ಟೇ ಅಲ್ಲ, ಸೇಡಿನ ಕ್ರಮ ಮಾಡ್ತಿದೆ ಎಂದರು.
ಇಂದು ನೂತನ ಸಚಿವರ ಪಟ್ಟಿ ಅಂತಿಮಗೊಳಿಸುವ ಸಾಧ್ಯತೆ ಇದೆ. ಎಲ್ಲಾ ಕಮಿಟಿಯವರಿಗೂ ಪ್ರಾಧಾನ್ಯತೆ ಕೊಡುವ ನಿಟ್ಟಿನಲ್ಲಿ ತಡೆ ಇದೆ. ನನಗೆ ಯಾವುದೇ ಖಾತೆ ಕೊಟ್ರು ನಾನು ನಿಭಾಯಿಸುತ್ತೇನೆ ಎಂದು ದೆಹಲಿಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಆರ್.ಬಿ.ತಿಮ್ಮಾಪುರ ಹೇಳಿಕೆ ನೀಡಿದರು.
ಬೆಳಗ್ಗೆ 10 ಗಂಟೆಗೆ ಸಭೆಯಿದೆ, ಅದರಲ್ಲಿ ಎಲ್ಲವೂ ಬಗೆಹರಿಯಲಿದೆ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಸುಸೂತ್ರವಾಗಿ ನಡೆಯಲಿದೆ ಎಂದು ದೆಹಲಿಯಲ್ಲಿ ಟಿವಿ9ಗೆ ನೂತನ ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದಾರೆ. ಪ್ರಾದೇಶಿಕವಾರು, ಸಮುದಾಯವಾರು ಪ್ರಾತಿನಿಧ್ಯ ದೊರೆಯಬೇಕು. ಸಿಎಂ, ಡಿಸಿಎಂ, ಎಐಸಿಸಿ ಅಧ್ಯಕ್ಷರು ಚರ್ಚಿಸಿ ಫೈನಲ್ ಮಾಡ್ತಾರೆ. ಯಾವುದೇ ಸಮಸ್ಯೆಯಿಲ್ಲದೆ ಸಂಪುಟ ವಿಸ್ತರಣೆಯಾಗಲಿದೆ ಎಂದರು.
ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ಸಂಜೆ ಸುರಿದ ಮಳೆಗೆ ಬೆಳೆ ಹಾನಿಯಾಗಿದೆ. ಬಿರುಗಾಳಿ, ಮಳೆ ರಭಸಕ್ಕೆ ದಾಳಿಂಬೆ, ನಿಂಬೆ ಬೆಳೆ ನೆಲಕಚ್ಚಿದೆ. ವಿಜಯಪುರ ತಾಲೂಕಿನ ಆಹೇರಿ, ಜಂಬಗಿ ಗ್ರಾಮಗಳಲ್ಲಿ ಹಾನಿಯಾಗಿದೆ. ತೋಟಗಾರಿಕೆ ಬೆಳೆ ನೆಲಕಚ್ಚಿದ್ದರಿಂದ ನೂರಾರು ರೈತರು ಕಂಗಾಲಾಗಿದ್ದಾರೆ. ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
ಕಾಫಿನಾಡ ಬಯಲುಸೀಮೆ ಭಾಗದಲ್ಲಿ ಕಳೆದ ರಾತ್ರಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಆಲಿಕಲ್ಲು ಮಳೆಗೆ ಬಯಲುಸೀಮೆ ಜನ ಬೆಚ್ಚಿ ಬಿದ್ದಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಅಗಲೇರಿ ಗ್ರಾಮದಲ್ಲಿ ಆಲಿಕಲ್ಲು ಮಳೆಯಿಂದ ಮೂರು ಮನೆಗಳು ಡ್ಯಾಮೇಜ್ ಆಗಿವೆ. ಮಂಗಳಮ್ಮ, ರತ್ನಮ್ಮ, ರಂಗಣ್ಣ ಅವರ ಮನೆಗಳಿಗೆ ಹಾನಿಯಾಗಿದೆ. ಆಲಿಕಲ್ಲು ಮಳೆಯಿಂದ ಮನೆಯ ಹೆಂಚು, ಸೀಟು ಡ್ಯಾಮೇಜ್ ಆಗಿದೆ.
ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ನಾಯಕರಿಂದ ಕಸರತ್ತು ನಡೆಯುತ್ತಿದ್ದು ಇಂದು ಬೆಳಗ್ಗೆ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಬಗ್ಗೆ ದೆಹಲಿಯ ಲೋಧಿ ಎಸ್ಟೇಟ್‌ನಲ್ಲಿರುವ ಕೆ.ಸಿ.ವೇಣುಗೋಪಾಲ್ ನಿವಾಸದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.
Published On - 9:14 am, Thu, 25 May 23