ಕಾಂಗ್ರೆಸ್ ಸರ್ಕಾರ(Congress Government) ಜುಲೈ 1ರಿಂದ ಅನ್ನಭಾಗ್ಯ ಯೋಜನೆ(Anna Bhagya) ಜಾರಿ ಮಾಡಲು ಮುಂದಾಗಿತ್ತು. ಆದ್ರೆ ಕೇಂದ್ರ ಸರ್ಕಾರ(Central Government) ಇದಕ್ಕೆ ಅಡ್ಡಗಾಲು ಹಾಕ್ತಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡ್ತಿಲ್ಲ ಅಂತಾ ಕಾಂಗ್ರೆಸ್ ಗಂಭೀರ ಆರೋಪ ಮಾಡ್ತಿದೆ. ಮೋದಿ ಸರ್ಕಾರ ಅಕ್ಕಿ ಕೊಡ್ಲಿ, ಬಿಡ್ಲಿ. ಕೊಟ್ಟ ಮಾತಿನಂತೆ ಅನ್ನಭಾಗ್ಯ ಯೋಜನೆ ಜಾರಿ ಮಾಡಿಯೇ ಶತಸಿದ್ಧ ಅಂತ ಕಾಂಗ್ರೆಸ ಸವಾಲು ಹಾಕಿದೆ. ಹೀಗಾಗಿ ಕರ್ನಾಟಕ ಸಿಎಂ ಸಿದ್ದರಾಮಯ್ಯನವರು(Siddaramaiah) ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಬಳಿ ಅಕ್ಕಿ ಅವಶ್ಯಕತೆ ಬಗ್ಗೆ ಮಾತನಾಡಿದ್ದಾರೆ. ಹಾಗೂ ತೆಲಂಗಾಣಕ್ಕೆ ಅಧಿಕಾರಿಗಳನ್ನು ಕಳಿಸಿದ್ದಾರೆ. ಇದರ ಜೊತೆಗೆ ಇತರೆ ಗ್ಯಾರಂಟಿಗಳ ಜಾರಿಗಾಗಿ ಸಿದ್ಧತೆಗಳು ನಡೆದಿವೆ. ಮತ್ತೊಂದೆಡೆ ಕೆಆರ್ಎಸ್ ಜಲಾಶಯದಲ್ಲಿ(KRS Dam) ನೀರಿನ ಮಟ್ಟ ಕುಸಿದಿದ್ದು ಮುಂದಿನ ಮೂರು ತಿಂಗಳು ಬೆಂಗಳೂರಿಗೆ ಜಲಗಂಡಾಂತರ ಭೀತಿ ಎದುರಾಗಿದೆ. ರಾಜಕೀಯ ಹಾಗೂ ಮಳೆಗೆ ಸಂಬಂಧಿಸಿದ ಇಂದಿನ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಬೆಂಗಳೂರು: ಪಠ್ಯ-ಪುಸ್ತಕ ತಿದ್ದುಪಡಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದೆ.
ಆನೆಕಲ್: ನಿವೇಶನ ಕೊಡುವುದಾಗಿ ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ಹೆಬ್ಬಗೋಡಿ ಪೊಲೀಸರು ಬಿಜೆಪಿ ಮುಖಂಡ, ಶಾಂತಿಪುರ ಗ್ರಾಮ ಪಂಚಾಯಿತಿ ಸದಸ್ಯ ಜಯಕುಮಾರ್ ಅವರನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು: ಬ್ರಾಂಡ್ ಬೆಂಗಳೂರು ಕಟ್ಟಲು ಇಂದು (ಜೂ.17) ಮೊದಲ ಸಭೆ ಮಾಡಿದ್ದೇವೆ. ಮುಂದಿನ ಮಂಗಳವಾರ ಮತ್ತೊಂದು ಸಭೆ ನಡೆಸಲಿದ್ದೇವೆ. ಇದಾದ ಬಳಿಕ ಸಾರ್ವಜನಿಕರ ಸಲಹೆಗಳನ್ನು ಪಡೆಯಲಾಗುತ್ತೆ. ಇದಕ್ಕೆ ಒಂದು ವೆಬ್ ಸೈಟ್ ಮಾಡಿ ಅಲ್ಲಿ ಜನರಿಂದ ಸಲಹೆ ಪಡೆಯಲಾಗುವುದು. ಇಂದು ಅನೇಕ ಉದ್ಯಮಿಗಳು ನಮ್ಮನ್ನು ಬೆಂಗಳೂರು ಕಟ್ಟಲು ಬಳಸಿಕೊಳ್ಳಿ ಎಂದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಜಯಪುರ: ಮರಳು ಸಾಗಣೆ ಟ್ರ್ಯಾಕ್ಟರ್ ಹರಿಸಿ ಹೆಡ್ಕಾನ್ಸ್ಟೇಬಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಬಜೆಟ್ ಪೂರ್ವಭಾವಿ ಸಭೆ ಮುಂದುವರೆದಿದೆ. ನಗರದ ರೇಸ್‌ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ ಸಭೆ ನಡೆದಿದ್ದು, ಆಹಾರ ಇಲಾಖೆ ಸಚಿವ ಮತ್ತು ಅಧಿಕಾರಿಗಳೊಂದಿಗೆ
ಅಕ್ಕಿ ದರ, ಸಾಗಾಣಿಕೆ ವೆಚ್ಚ ಸೇರಿ ಇತರೆ ಅಂಶಗಳ ಬಗ್ಗೆ ಚರ್ಚೆ ನಡೆಯುತ್ತಿದೆ.
ಚಿಕ್ಕಮಗಳೂರು: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಮತ್ತಷ್ಟು ವಿಳಂಬ ಆಗುತ್ತೆ. ಬಹಳ ಸರಳವಾಗಿ ಗೃಹಲಕ್ಷ್ಮೀ ಯೋಜನೆ ಜನರಿಗೆ ತಲುಪಬೇಕೆಂದು ಯೋಜನೆಯಲ್ಲಿ ಕೆಲವು ಬದಲಾವಣೆಳಗಳನ್ನು ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ಕೆಲ ಬದಲಾವಣೆ ಮಾಡಲು ಸೂಚನೆ ನೀಡಿದ್ದೇವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಂಗಳೂರು: ಅನ್ನಭಾಗ್ಯ ಯೋಜನೆಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿ ವಿಚಾರವಾಗಿ ಆಹಾರ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಂಜೆ 5.30ಕ್ಕೆ ಬೆಂಗಳೂರಿನ ಶಕ್ತಿಭವನದಲ್ಲಿ ಸಭೆ ನಡೆಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಈಗಾಗಲೇ ಅಧಿಕಾರಿಗಳಿಂದ ಪ್ರಾಥಮಿಕ ಮಾಹಿತಿ ಪಡೆದಿದ್ಧಾರೆ. ಸಭೆಯಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಆಹಾರ ಇಲಾಖೆ ಪ್ರಧಾನ ಕಾರ್ಯದರ್ಶಿ, ಇತರೆ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಬೆಂಗಳೂರು: ರಾಜ್ಯಕ್ಕೆ ಅಕ್ಕಿ ಕೊಡುವುದರಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ. ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಜೂನ್ 12ರಂದು ರಾಜ್ಯಕ್ಕೆ ಅಕ್ಕಿ ಕೊಡುವುದಾಗಿ ಎಫ್ಸಿಐ ಹೇಳಿತ್ತು. ಜೂನ್ 13ರಂದು ಅಕ್ಕಿ ಕೊಡಲು ಆಗುವುದಿಲ್ಲವೆಂದು FCI ಹೇಳಿದೆ. ಬಡವರಿಗೆ ನೀಡುವ ಅಕ್ಕಿಯಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಬೆಂಗಳೂರಿನಲ್ಲಿ ಆಹಾರ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ವಾಗ್ದಾಳಿ ಮಾಡಿದರು.
ಬೆಂಗಳೂರು: ತೆಲಂಗಾಣದಲ್ಲಿ ಅಕ್ಕಿ ದಾಸ್ತಾನು ಇಲ್ಲವೆಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ತಿಳಿಸಿದ್ದಾರೆ. ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಅವರ ಜೊತೆ ನಾನೆ ಮಾತನಾಡಿದ್ದೇನೆ. ಆಂಧ್ರ ಸರ್ಕಾರದ ಜೊತೆ ಚರ್ಚಿಸುವಂತೆ ಸಿಎಸ್ಗೆ ಹೇಳಿದ್ದೇನೆ. ಛತ್ತೀಸ್ಗಢದವರು 1.5 ಲಕ್ಷ ಟನ್ ಅಕ್ಕಿ ಕೊಡಲು ಸಮ್ಮತಿಸಿದ್ದಾರೆ. ಆದರೆ ದರ ಸ್ವಲ್ಪ ದುಬಾರಿ ಇದೆ, ಸಾಗಣೆ ವೆಚ್ಚವೂ ಹೆಚ್ಚಾಗಲಿದೆ ಎಂದು ಬೆಂಗಳೂರಿನ ಶಕ್ತಿಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು: ಗೃಹ ಲಕ್ಷ್ಮಿ ಯೋಜನೆ ಜಾರಿಯಿಂದ ಕುಟುಂಬಗಳಲ್ಲಿ ಒಡಕು ಉಂಟಾಗಿದೆ. ಮುಸ್ಲಿಮರಿಗೆ ಎರಡು ಮೂರು ಹೆಂಡತಿಯರಿರುತ್ತಾರೆ. ಆಗ ಯಾರನ್ನು ಮನೆಯ ಯಜಮಾನಿ ಎಂದು ಗುರುತಿಸುತ್ತೀರಾ ? ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ. ಪ್ರತಾಪ್ ಸಿಂಹಗೆ ಆಸೆ ಇದ್ದರೆ ಇನ್ನೊಂದು ಮದುವೆಯಾಗಿ ಅದರ ಅನುಭವವನ್ನು ನಮಗೆ ಬಂದು ಹೇಳಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ಬಿಬಿಎಂಪಿ ಸಿಬ್ಬಂದಿ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಒತ್ತುವರಿ ತೆರವು ಸಂಬಂಧ ಬೆಂಗಳೂರು ಉತ್ತರ ತಹಶೀಲ್ದಾರ್ ನೋಟಿಸ್ಗೆ ನಿವಾಸಿಗಳು ಕೋರ್ಟ್ನಿಂದ ತಡೆ ತಂದಿದ್ದು ಈ ಬಗ್ಗೆ ತಹಶೀಲ್ದಾರ್ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ಸದ್ಯ ವಿಷಯ ತಿಳಿದಿದ್ದು ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ತಡೆಯಾಜ್ಞೆ ಬಗ್ಗೆ ಪರಿಶೀಲಿಸಿ ಸೋಮವಾರ ತೆರವು ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಚಾವುಂಡರಾಯ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮಕ್ಕೆ ತಡವಾಗಿ ಬಂದ ಸಚಿವ ಶಿವರಾಜ ತಂಗಡಗಿ ಅವರನ್ನು ಡಾ.ಪರಮೇಶ್ವರ್ ಭಾಷಣ ವೇಳೆ ರೇಗಿಸಿದ ಪ್ರಸಂಗ ನಡೆಯಿತು. ಡಾ.ಪರಮೇಶ್ವರ್ ಭಾಷಣ ವೇಳೆ ಶಿವರಾಜ ತಂಗಡಗಿ ಆಗಮಿಸಿದರು. ಈ ವೇಳೆ ತಂಗಡಗಿಗೆ ಸಮಯದ ಪಾಠ ಮಾಡಿದ್ರು. ಕಾರ್ಯಕ್ರಮಕ್ಕೆ ಯಾಕಪ್ಪಾ ಇಷ್ಟೊಂದು ತಡವಾಗಿ ಬರುತ್ತೀಯಾ? ಕಾರ್ಯಕ್ರಮಗಳಿಗೆ ಸರಿಯಾದ ಸಮಯಕ್ಕೆ ಬರಬೇಕು. ಇಲ್ಲದಿದ್ದರೆ ಜನರು ಸಚಿವರ ಬಗ್ಗೆ ಲಘುವಾಗಿ ಮಾತನಾಡಿಕೊಳ್ಳುತ್ತಾರೆ. ಸಚಿವರೇ ತಡವಾಗಿ ಕಾರ್ಯಕ್ರಮಕ್ಕೆ ಬರುತ್ತಾರೆಂದು ಮಾತನಾಡುತ್ತಾರೆ ಎಂದರು. ಆಗ ಸಚಿವ ತಂಗಡಗಿ ನಗುತ್ತಲೇ ತಲೆಯಾಡಿಸಿ ವೇದಿಕೆ ಮೇಲೆ ಆಸೀನರಾದರು.
ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿ ನಾವು ಉಚಿತವಾಗಿ ಅಕ್ಕಿ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಕೇಳ್ತಿಲ್ಲ. ಕೇಂದ್ರದ ದರ ಏನಿದೆ ಆ ಪ್ರಕಾರ ಅಕ್ಕಿ ಕೊಡಿ ಎಂದು ಕೇಳ್ತಿದ್ದೇವೆ. ಕೇಂದ್ರ ಸರ್ಕಾರದ ಬಳಿ ಸಾಕಷ್ಟು ಪ್ರಮಾಣದ ಅಕ್ಕಿ ದಾಸ್ತಾನು ಇದೆ. ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ. ಬಡವರು, ಸಾಮಾನ್ಯ ಜನರ ಆರ್ಥಿಕ ಹೊರೆ ಕಡಿಮೆ ಮಾಡಬೇಕು. ಆ ನಿಟ್ಟಿನಲ್ಲಿ ಹೆಚ್ಚುವರಿವಾಗಿ 5 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದೇವೆ. ಕಾಂಗ್ರೆಸ್ಗೆ ಮತ ಹಾಕಿದವರಿಗೂ ಉಚಿತವಾಗಿ ಅಕ್ಕಿ ಸಿಗಲಿದೆ. ಬಿಜೆಪಿ ಹಾಗೂ ಜೆಡಿಎಸ್ಗೆ ಮತ ಹಾಕಿದವರಿಗೂ ಅಕ್ಕಿ ಸಿಗುತ್ತೆ. ಕೇಂದ್ರ ಸರ್ಕಾರ ಬಡವರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ಅಕ್ಕಿ ವಿತರಣೆ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಸಂಸದ ಡಿಕೆ ಸುರೇಶ್ ಆಕ್ರೋಶ ಹೊರ ಹಾಕಿದ್ರು.
ಒತ್ತುವರಿ ತೆರವು ವಿಚಾರದಲ್ಲಿ ಬಿಬಿಎಂಪಿಗೆ ಮತ್ತೊಂದು ಹಿನ್ನಡೆಯಾಗಿದೆ. ಬೆಂಗಳೂರು ಉತ್ತರ ತಹಶೀಲ್ದಾರ್ ನೋಟಿಸ್ಗೆ ನಿವಾಸಿಗಳು ಸೆಪ್ಟೆಂಬರ್ನಲ್ಲಿ ತಡೆ ತಂದಿದ್ದಾರೆ. ಆದ್ರೆ ಈ ವಿಚಾರವನ್ನು ತಹಶೀಲ್ದಾರ್ BBMP ಗಮನಕ್ಕೆ ತಂದಿಲ್ಲ. ಕೋರ್ಟ್ ತಡೆಯಾಜ್ಞೆ ಬಗ್ಗೆ ಬಿಬಿಎಂಪಿ ಗಮನಕ್ಕೆ ತಾರದ ತಹಶೀಲ್ದಾರ್. ಈ ಬಗ್ಗೆ ಜೂನ್ 15ರಂದು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿತ್ತು. ತಡೆಯಾಜ್ಞೆ ಬಗ್ಗೆ ಶಾಸಕರ ಸಭೆಯಲ್ಲೂ ತಹಶೀಲ್ದಾರ್ ಮಾಹಿತಿ ನೀಡಿಲ್ಲ. ತಹಶೀಲ್ದಾರ್ ಎಡವಟ್ಟಿನಿಂದ ಬಿಬಿಎಂಪಿ ಅಧಿಕಾರಿಗಳು ಮುಜುಗರಕ್ಕೀಡಾದಂತಾಗಿದೆ.
ಸರ್ಕಾರಿ ಬಸ್ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದ್ದು ಜೂ.16ರಂದು 55.09 ಲಕ್ಷ ಮಹಿಳೆಯರು ಬಸ್‌ನಲ್ಲಿ ಪ್ರಯಾಣಿಸಿದ್ದಾರೆ/ KSRTC ಬಸ್‌ನಲ್ಲಿ ನಿನ್ನೆ 16,34,991 ಮಹಿಳೆಯರು ಪ್ರಯಾಣಿಸಿದ್ದು ಬಿಎಂಟಿಸಿ ಬಸ್‌ನಲ್ಲಿ ಒಟ್ಟು 17,93,861 ಮಹಿಳೆಯರು ಪ್ರಯಾಣಿಸಿದ್ದಾರೆ. ಇನ್ನು ವಾಯವ್ಯ ಸಾರಿಗೆ ಬಸ್‌ನಲ್ಲಿ 13,56,319 ಮಹಿಳೆಯರು ಪ್ರಯಾಣಿಸಿದ್ದು ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 7,24,599 ಮಹಿಳೆಯರು ಪ್ರಯಾಣಿಸಿದ್ದಾರೆ. ನಿನ್ನೆ ಸಾರಿಗೆ ಬಸ್ಗಳಲ್ಲಿ ಓಡಾಡಿರುವ ಒಟ್ಟು ಮಹಿಳೆಯರ ಸಂಖ್ಯೆ 55,09,770 ಇದ್ದು ಟಿಕೆಟ್ ವೆಚ್ಚ 12,45,19,262 ಆಗಿದೆ.
ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ. ಒಂದು ನಿಮಿಷದ ಪೀಠಿಕೆಯು ಸಮಾನತೆಯ ಬದುಕು ಕಲಿಸುತ್ತದೆ ಎಂದು ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿಕೆ ನೀಡಿದ್ದಾರೆ. ಸಂವಿಧಾನದ ಪೀಠಿಕೆ ಮೂಲಕ ಮಕ್ಕಳಲ್ಲಿ ಸಮಾನತೆ ಮೂಡಿಸಬಹುದು. ಇದು ದೇಶದ 140 ಕೋಟಿ ಜನರಿಗೂ ಅನ್ವಯವಾಗುತ್ತಿದೆ. ಸಂವಿಧಾನದ ತಿದ್ದುಪಡಿಗೆ ಅವಕಾಶವಿದೆ, ಆದ್ರೆ ತಿರುಚಲು ಅವಕಾಶವಿಲ್ಲ ಎಂದರು.
ಜನರಿಗೆ ಹೆಚ್ಚು ಸಮಯ ಕೊಡದ ಕಾರಣ ಕಳೆದ ಬಾರಿ ಸೋಲು ಕಂಡಿದ್ದೆ ಎಂದು ಸಂವಾದ ಕಾರ್ಯಕ್ರಮದಲ್ಲಿ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ರು. ಚುನಾವಣೆಯಲ್ಲಿ 6 ಬಾರಿ ಗೆದ್ದಿದ್ದೇನೆ, ಮೂರು ಬಾರಿ ಸೋತಿದ್ದೇನೆ. ಮೂರು ಬಾರಿಯೂ ನನ್ನಿಂದ ನಾನೇ ಸೋತಿದ್ದೇನೆ. ಗೆದ್ದಾಗ ಮಂತ್ರಿ ಆಗುತ್ತಿದ್ದೆ, ಜನರಿಗೆ ಹೆಚ್ಚು ಸಮಯ ಕೊಡುತ್ತಿರಲಿಲ್ಲ. ಕಾರ್ಯಕರ್ತರಿಂದ ದೂರವಾಗಿದ್ದ ಕಾರಣ ಸೋಲಾಯಿತು ಅಷ್ಟೇ. ಸೋತಾಗ ಕುಗ್ಗಿಲ್ಲ, ಗೆದ್ದಾಗ ಬೀಗಿಲ್ಲ. ಯಾವತ್ತೂ ಟಿಕೆಟ್ ಕೇಳಿಲ್ಲ, ನನ್ನ ಹೋರಾಟ ನೋಡಿ ಟಿಕೆಟ್ ನೀಡಿದ್ದಾರೆ. ನಾನು ತೆರೆದ ಪುಸ್ತಕ, ಯಾರು ಬೇಕಾದರೂ ನೋಡಬಹುದು. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ, ಆದರೆ ಪ್ರಚಾರ ಮಾಡಿಕೊಳ್ಳಲಿಲ್ಲ. ದುರಾದೃಷ್ಟವಶಾತ್ ಕಾಂಗ್ರೆಸ್ಸಿಗರು ನನ್ನ ಕೆಲಸದ ಪ್ರಚಾರ ಮಾಡಲಿಲ್ಲ. ನನ್ನ ಅವಧಿಯಲ್ಲಿ ಎಲ್ಲವನ್ನೂ ಕ್ರೋಡೀಕರಿಸಿ ಉತ್ತಮ ದಸರಾ ಮಾಡಿದ್ದೇನೆ. ನಿಜವಾದ ವೈಚಾರಿಕತೆ ಹಾಗೂ ಸಾಂವಿಧಾನಿಕ ದಸರಾ ಆಚರಣೆ ಮಾಡಿದ್ದೇನೆ ಎಂದು ಮೈಸೂರಿನಲ್ಲಿ ಸಮಾಜಕಲ್ಯಾಣ ಸಚಿವ ಡಾ.H.C.ಮಹದೇವಪ್ಪ ಹೇಳಿದ್ರು.
ರಾಜ್ಯಾದ್ಯಂತ ಮಳೆಗಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮದಲ್ಲಿ ಚಂಡಿಕಾಯಾಗ ಮಾಡಿಸಲಾಗುತ್ತಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸುಧಾಕರ್, ಚಿಕ್ಕಮಗಳೂರು ಜಿಲ್ಲೆಯ ಶಾಸಕರು ಚಂಡಿಕಾಯಾಗದಲ್ಲಿ ಭಾಗಿಯಾಗಿದ್ದಾರೆ. ವಿನಯ್ ಗುರೂಜಿ ನೇತೃತ್ವದಲ್ಲಿ ಮುಂಜಾನೆ 5 ಗಂಟೆಯಿಂದ ಚಂಡಿಕಾಯಾಗ ನಡೆಯುತ್ತಿದೆ.
ಪಠ್ಯ ಪುಸ್ತಕದಲ್ಲಿ ಕೆಲ ಪಾಠ ತೆಗೆಯಲು ಸರ್ಕಾರ ನಿರ್ಧಾರ ವಿಚಾರಕ್ಕೆ ಸಂಬಂಧಿಸಿ ಮೈಸೂರಿನ ಕುಕ್ಕರಹಳ್ಳಿಯಲ್ಲಿ ಗೀತಾ ಶಿವರಾಜ್ಕುಮಾರ್ ಪ್ರತಿಕ್ರಿಯೆ ನೀಡಿದ್ದು ಮಕ್ಕಳ ಅನುಕೂಲಕ್ಕೆ ಪಠ್ಯ ಪರಿಷ್ಕರಣೆ ಮಾಡಿದರೆ ತಪ್ಪೇನು? ಎಂದು ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡಿದ್ದಾರೆ. ಪಠ್ಯ ಪುಸ್ತಕಗಳಲ್ಲಿ ಒಳ್ಳೆಯ ವಿಚಾರಗಳು ಮಾತ್ರ ಇರಬೇಕು. ಹೀಗಾಗಿ ಶಾಲಾ ಪಠ್ಯ ಪುಸ್ತಕದಲ್ಲಿ ಬದಲಾವಣೆಯಾದರೆ ಒಳ್ಳೆಯದು ಎಂದಿದ್ದಾರೆ.
ಬೆಂಗಳೂರಿನಲ್ಲಿ ರಾಜಕಾಲುವೆ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಈ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ನಾವು ಹಲವು ವರ್ಷಗಳಿಂದ ಇಲ್ಲಿ ವಾಸವಿದ್ದೀವಿ. ಆದ್ರೆ ಏಕಾಏಕಿ ಈಗಿನ ಮಾರ್ಕ್ ಮಾಡಿ ತೆರವುಗೊಳಿಸ್ತಿದ್ದಾರೆ. ಇಂದು ಅಧಿಕಾರಿಗಳು ಸಭೆ ಕರೆದಿದ್ದಾರೆ. ಸೋಮವಾರ ಮತ್ತೆ ತೆರವುಗೊಳಿಸೋ ಸೂಚನೆ ನೀಡಿದ್ದಾರೆ. ನಮ್ಮ ಬಳಿಯೂ ದಾಖಲೆಗಳಿವೆ. ಆದ್ರೆ ಈಗ ಹಳೆಯ ದಾಖಲೆ ಪರಿಶೀಲಿಸಿ ತೆರವುಗೊಳ್ತಿದ್ದೀವಿ ಅಂತ ಕಾರಣ ಕೊಡ್ತಿದ್ದಾರೆ ಎಂದು ಸ್ಥಳೀಯರ ಅಳಲು ತೋಡಿಕೊಂಡಿದ್ದಾರೆ.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನೀರಿನ ಅಭಾವ ಶುರುವಾಗಿದೆ. ಅದರಂತೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕಲಕೇರಿ ಗ್ರಾಮದಲ್ಲಿ ರೈತ ಮಹಿಳೆಯರು ಕಪ್ಪೆಗಳ ಮದುವೆ (Frogs Marriage) ಮಾಡಿ, ಮಳೆರಾಯನ ಹಾಡು ಹೇಳುತ್ತ, ಮಳೆಗಾಗಿ ಪಾರ್ಥನೆ ಮಾಡಿದ್ದಾರೆ. ಕಪ್ಪೆಗಳನ್ನ ವಿಶೇಷ ಅಲಂಕೃತ ಬುಟ್ಟಿಯಲ್ಲಿ ಇರಿಸಿ, ತಲೆ ಮೇಲೆ ಹೊತ್ತು, ಹುಯ್ಯೋ ಹುಯ್ಯೋ ಮಳೆರಾಯ ಎಂದು ಹಾಡು ಹೇಳಿ ಪ್ರಾರ್ಥಿಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ ರೈತರಿಗೆ ಕಂಟಕ ಎದುರಾಗಿದೆ. ಬೆಳಗಾವಿ ರೈತರು ಕಾದು ಕಾದು ಸುಸ್ತಾಗಿ ಟ್ಯಾಂಕರ್ ನೀರು ಮೊರೆ ಹೋಗಿದ್ದಾರೆ. ಟ್ಯಾಂಕರ್ ಮೂಲಕ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ.
ವಿದ್ಯುತ್ ದರ ಹೆಚ್ಚಳ ಹಿನ್ನಲೆ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ವಿದ್ಯುತ್ ದರ ಇಳಿಸುವಂತೆ ಕೋರಿ ಇಂಧನ ಸಚಿವ ಕೆ.ಜೆ ಜಾರ್ಜ್ಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದು, ಪ್ರಮುಖ 6 ಅಂಶಗಳ ವಿಚಾರ ಸರ್ಕಾರದ ಗಮನಕ್ಕೆ ತಂದಿದ್ದಾರೆ.
ನಿನ್ನೆಯಷ್ಟೇ ಕರ್ನಾಟಕದ ನೂತನ ಮುಖ್ಯಮಂತ್ರಿಗಳ ಫೋನ್ ಬಂದಿತ್ತು. ಚಂದ್ರಶೇಖರ್ ರಾವ್ ಸರ್ ಅವರೇ ನನಗೆ 27 ಲಕ್ಷ ಟನ್ ನಷ್ಟು ಅಕ್ಕಿಯ ಅವಶ್ಯಕತೆ ಇದೆ. ನಿಮ್ಮ ಬಳಿ ಇದ್ಧರೆ ಬೆಲೆ ಎಷ್ಟು ಅಂತ ತಿಳಿಸಿ, ನಾವು ಖರೀದಿ ಮಾಡುತ್ತೇವೆ ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆ ಜಾರಿ ಮಾಡಲು ಅಕ್ಕಿಯ ಸಮಸ್ಯೆ ಎದುರಾಗಿದ್ದು ಈ ಬಗ್ಗೆ ಇಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯ ಆಹಾರ ಇಲಾಖೆ ಪಂಜಾಬ್, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ಛತ್ತಿಸ್ ಗಡ್, ಮಧ್ಯಪ್ರದೇಶ ರಾಜ್ಯಗಳನ್ನ ಸಂಪರ್ಕ ಮಾಡಿದ್ದು ದೂರವಾಣಿ ಮೂಲಕ ಮಾಹಿತಿ ಪಡೆದಿದೆ. ಅಧಿಕಾರಿಗಳು ಅಕ್ಕಿಯ ದರ ಹಾಗೂ ಎಕ್ಸಸ್, ಟ್ರಾನ್ಸ್ ಪೋರ್ಟ್ ಚಾರ್ಜ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯಗೆ ಮಾಹಿತಿ ನೀಡಿದ್ದಾರೆ.
Published On - 8:53 am, Sat, 17 June 23