ರಾಜ್ಯ ರಾಜಕೀಯದಲ್ಲಿ ಸದ್ಯ ಕಾಂಗ್ರೆಸ್ ಗ್ಯಾರಂಟಿಗಳದ್ದೇ(Congress Guarantee) ಚರ್ಚೆ ನಡೆಯುತ್ತಿದೆ. ಜುಲೈ 1ರಿಂದ ಗೃಹಜ್ಯೋತಿ ಯೋಜನೆ ಜಾರಿ(Gruha Jyothi Scheme) ಹಿನ್ನೆಲೆ ಇಂದು ಶಕ್ತಿಭವನದಲ್ಲಿ ಸಿಎಂ ಸಿದ್ದರಾಮಯ್ಯನವರು(Siddaramaiah) ಇಂಧನ ಸಚಿವರು, ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಇನ್ನು ಮಹಿಳೆಯರು ತುದಿ ಕಾಲಿನಲ್ಲಿ ನಿಂತು ಕಾಯುತ್ತಿರುವ ಉಚಿತ ಬಸ್ ಸೇವೆಗೆ(Woman Free Bus) ಕೆಲವೇ ದಿನಗಳು ಬಾಕಿ ಇವೆ. ಇದರೆಲ್ಲದರ ನಡುವೆ, ಇಂದು ಬೆಂಗಳೂರಿನಲ್ಲಿ ಬಿಜೆಪಿ ಚುನಾವಣಾ ಅವಲೋಕನಾ ಸಭೆ ನಡೆಯಲಿದೆ. ಶಾಸಕರು, ಪರಾಜಿತ ಅಭ್ಯರ್ಥಿಗಳ ಜೊತೆ ಸಭೆ ನಡೆಯಲಿದೆ. ಇಂದಿನ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ಕಟೀಲು, ಮಾಜಿ ಸಿಎಂಗಳಾದ B.S.ಯಡಿಯೂರಪ್ಪ. ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾಗಿಯಾಗಲಿದ್ದಾರೆ. ರಾಜಕೀಯ ಹೊರತುಪಡಿಸಿ ಅರಬ್ಬಿ ಸಮುದ್ರದಲ್ಲಿ ಬಿಪೊರ್ಜೊಯ್ ಚಂಡಮಾರುತದ ಅಬ್ಬರ ಜೋರಾಗಿದ್ದು ಕರ್ನಾಟಕದ ಕರಾವಳಿ ಭಾಗದಲ್ಲಿ ಮೂರು ದಿನ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಕ್ಷಣ ಕ್ಷಣದ ಮಾಹಿತಿಗಾಗಿ ಡಿವಿ9 ಡಿಜಿಟಲ್ ಫಾಲೋ ಮಾಡಿ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಮಾಜದಲ್ಲಿ ಭೀತಿಯ ವಾತಾವರಣ ಸೃಷ್ಟಿಸುವವರು ಹಾಗೂ ಸಾಮಾಜಿಕ ಜಾಲತಾಣ ಮೂಲಕ ಸಾಮರಸ್ಯ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಇನ್ನು ಮುಂದೆ ರಾಜ್ಯದಲ್ಲಿ ಅನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ. ಸರ್ವಜನಾಂಗದ ಶಾಂತಿಯತೋಟವೆಂದು ಹೇಳಿದ್ದಾರೆ.
ಮಂಗಳೂರು: ಅಂತು ಇಂತು ಮಂಗಳೂರಿಗೆ ಮಳೆ ಬಂದೆ. ಕಡಲತಡಿ ಮಂಗಳೂರಿನ ಹಲವೆಡೆ ವರುಣನ ಸಿಂಚನವಾಗಿದೆ. ಕಡು ಬಿಸಿಲಿಗೆ ಕಂಗೆಟ್ಟಿದ್ದ ಕರಾವಳಿಗರು ಇಂದು ಮಳೆಯಿಂದಾಗಿ ಸಂತಸಗೊಂಡಿದ್ದಾರೆ.
ಕೊಪ್ಪಳ: ಭಾರೀ ಮಳೆ, ಬಿರುಗಾಳಿಗೆ ಮರ ಧರೆಗುರಿಳಿದ ಘಟನೆ ಕೊಪ್ಪಳ ಹೊರವಲಯದ ವಿಶ್ವತೇಜ ಮೋಟರ್ಸ್ ಬಳಿ ನಡೆದಿದೆ. ಸರ್ವಿಸ್ ಗಾಗಿ ನಿಲ್ಲಿಸಿದ್ದ ಕಾರ್ ಮೇಲೆ ಈ ಮರ ಬಿದ್ದಿದೆ.
ಕಾಂಗ್ರೆಸ್ನಲ್ಲಿದ್ದಾಗ 3 ಬಾರಿ ಗೆದ್ದಿದ್ದೆ, ಬಿಜೆಪಿಗೆ ಬಂದು 2 ಬಾರಿ ಸೋತೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿಗಳ ಸಭೆಯಲ್ಲಿ ಎಂಟಿಬಿ ನಾಗರಾಜ್ ಹೇಳಿಕೊಂಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮಾತಿಗೆ ಗೌರವ ನೀಡಿ ನಾನು ಬಿಜೆಪಿ ಸೇರಿದ್ದೆ. ಬಿಜೆಪಿ ಸೇರಿದ ನಂತರ 2 ಬಾರಿ ಸ್ಪರ್ಧಿಸಿ 2 ಬಾರಿಯೂ ಸೋತಿದ್ದೇನೆ. ಡಾ.ಕೆ.ಸುಧಾಕರ್ಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ನೀಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಆತನೂ ಸೋತ, ನಮ್ಮನ್ನೂ ಸೋಲಿಸಿದ. ಉಸ್ತುವಾರಿ ಸ್ಥಾನವನ್ನು ಡಾ.ಕೆ.ಸುಧಾಕರ್ ಸಮರ್ಥವಾಗಿ ನಿಭಾಯಿಸಲಿಲ್ಲ. ನನ್ನ, ಚಿಂತಾಮಣಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಡಾ.ಕೆ.ಸುಧಾಕರ್ ಕಾರಣ. 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಕೌಂಟರ್ ಅಟ್ಯಾಕ್ ಮಾಡಲಿಲ್ಲ. ನಾವು ಕೇವಲ ಸಿದ್ದರಾಮಯ್ಯಗೆ ಮಾತ್ರ ಬೈದೆವು. ಚುನಾವಣೆ ವೇಳೆ ಅಕ್ಕಿ ವಿತರಣೆ ಕಡಿಮೆ ಮಾಡಿದ್ದು ಪ್ರಮುಖ ಕಾರಣ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಸಚಿವರು ಗಣನೆಗೆ ತೆಗೆದುಕೊಳ್ಳಲಿಲ್ಲ. ಕಾರ್ಯಕರ್ತರ ಆಗುಹೋಗುಗಳನ್ನು ಉಸ್ತುವಾರಿ ಸಚಿವರು ಕೇಳಲೇ ಇಲ್ಲ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ಸೋಲಿನಿಂದ ಯಾರೂ ಧೃತಿಗೆಡಬೇಡಿ, ರಾಜ್ಯದಲ್ಲಿ 2 ಸ್ಥಾನದಿಂದ ಇಲ್ಲಿಯವರೆಗೆ ಪಕ್ಷ ಕಟ್ಟಿ ಬೆಳೆಸಿದ್ದೇನೆ ಎಂದು ಆತ್ಮಾವಲೋಕನ ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರ ಮಾತ್ರ ಇದ್ದೆವು. ಬಿಜೆಪಿ ಶಾಸಕರಾಗಿದ್ದ ವಸಂತ ಬಂಗೇರ ಪಕ್ಷ ಬಿಟ್ಟು ಹೋದರು. ಆಗ ನಾನು ಒಬ್ಬನೇ ಸದನದಲ್ಲಿ ನಿಂತು ಹೋರಾಟ ಮಾಡಿದ್ದೇನೆ. ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿ, ನರೇಂದ್ರ ಮೋದಿ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸಿ. ಕೇಂದ್ರದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರೋಣ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿಗಳ ಸಭೆಯಲ್ಲಿ ಕಿವಿಮಾತು ಹೇಳಿದರು.
ನಮ್ಮ ಸರ್ಕಾರ, ಸಚಿವರು ಇದ್ದಾಗ ಜನರಿಗೆ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿಗಳ ಆತ್ಮಾವಲೋಕನ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿ ಮುಖಂಡರು ಅಭ್ಯರ್ಥಿಗಳ ಮಾತಿಗೆ ಯಾವುದೇ ಬೆಲೆ ಕೊಡಲಿಲ್ಲ. ಸವದಿ ಬಿಜೆಪಿ ತೊರೆದಿದ್ದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೆಟ್ಟು ಬಿತ್ತು. ಬಿಜೆಪಿ ನಾಯಕರು ಮಾಡಿದ ತಪ್ಪಿನಿಂದ ನಾವು ಬಲಿಯಾದೆವು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಆಗಸ್ಟ್ 1 ರಂದು ಹಾಗೂ ಗೃಹ ಲಕ್ಷ್ಮಿ ಯೋಜನೆಗೆ ಆಗಸ್ಟ್ 17- 18 ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾಗಿ ಮುಖ್ಯಮಂತ್ರಿಯವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
ಚಾಮರಾಜನಗರ: ಪಠ್ಯ ಪುಸ್ತಕ ಪರಿಷ್ಕರಣೆಗೆ ಸಾಹಿತಿ ಕುಂ.ವೀರಭದ್ರಪ್ಪ ಬೆಂಬಲ ಸೂಚಿಸಿದ್ದಾರೆ. ಹಿಂದಿನ ಸರ್ಕಾರ ಪಠ್ಯ ಪುಸ್ತಕದಲ್ಲಿ ಭಾರಿ ಲೋಪ ಎಸಗಿದೆ. ಬಿಜೆಪಿ ಸರ್ಕಾರ ಹುಸಿ ದೇಶಭಕ್ತರನ್ನು ಬಿಂಬಿಸಲು ಯತ್ನಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿನ ತಪ್ಪನ್ನು ಸರಿಪಡಿಸಬೇಕು. ಹೊಸ ಪಠ್ಯ ಪುಸ್ತಕ ಜಾರಿಗೆ ತರಬೇಕು. ಬರಗೂರು ರಾಮಚಂದ್ರಪ್ಪ ಜಾರಿಗೆ ತಂದಿದ್ದ ಪುಸ್ತಕ ಮತ್ತೆ ಬರಬೇಕು. ಬಿಜೆಪಿಯವರು ಹೇಳುವುದು ಭಾರತೀಯತೆ ಅಲ್ಲ, ಹಿಂದೂಯತೆ. ದೇಶದ ಎಲ್ಲರ ಹಿತಾಸಕ್ತಿ ಕಾಪಾಡುವುದು ನಿಜವಾದ ಭಾರತೀಯತೆ. ಬಿಜೆಪಿಯವರು ಹೇಳುವ ಭಾರತೀಯತೆ ಒಪ್ಪುವುದಕ್ಕೆ ಸಾಧ್ಯವಿಲ್ಲ. ಬಿಜೆಪಿಯವರು ಹೇಳುವುದು ಆರ್ಎಸ್ಎಸ್ ಪ್ರಣೀತ ಭಾರತೀಯತೆ ಎಂದರು.
ಬಿಜೆಪಿ ಅವಲೋಕನ ಸಭೆಯಲ್ಲಿ ಸೋಲಿಗೆ ಕಾರಣಗಳನ್ನು ಪರಾಜಿತ ಅಭ್ಯರ್ಥಿಗಳು ಮುಂದಿಟ್ಟಿದ್ದಾರೆ. ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು, ಒಳ ಮೀಸಲಾತಿ ಹಂಚಿಕೆಯ ಒಳ ಏಟು, 40% ಕಮೀಷನ್ ಆರೋಪ ಸೇರಿ ಕೆಲವು ಭ್ರಷ್ಟಾಚಾರ ಆರೋಪ ಪ್ರಕರಣಗಳು, ಅಲ್ಲಲ್ಲಿ ಬೀಸಿದ ವಿರೋಧಿ ಅಲೆ, ಟಿಕೆಟ್ ಹಂಚಿಕೆಯಲ್ಲಿನ ವಿಳಂಬ, ಹೈಕಮಾಂಡ್ ಮೇಲಿನ ಹೆಚ್ಚಿನ ಅವಲಂಬನೆ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.
ಕಿಯೋನಿಕ್ಸ್ ಎಂಡಿ ಆಗಿದ್ದ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಡಿಐಜಿಪಿ (ಪೊಲೀಸ್ ಉಪ ಮಹಾನಿರೀಕ್ಷರಾಗಿ) ಆಗಿ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶಿಸಿದೆ.
ಗ್ಯಾರಂಟಿ ಯೋಜನೆಗಳ ಜಾರಿ ಕಾಂಗ್ರೆಸ್ಗೆ ಕಷ್ಟ ಆಗುತ್ತಿದೆ, ಸರ್ಕಾರದ ಖಜಾನೆ ಖಾಲಿ ಆಗುತ್ತಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಉಚಿತ ಕರೆಂಟ್ ಸಿಗುತ್ತದೆ ಅಂತ ನಂಬಿದ ಬಡವರಿಗೆ ಮೋಸ ಮಾಡಿದ್ದಾರೆ. ಇದನ್ನೆಲ್ಲಾ ಜನ ಗಮನಿಸುತ್ತಿದ್ದಾರೆ. ಗ್ಯಾರಂಟಿಗಳಲ್ಲಿ ಷರತ್ತುಗಳನ್ನು ಹಾಕಿದ್ದಾರೆ. ಇವರ ಗ್ಯಾರಂಟಿಗಳು ಜಾರಿಗೆ ಬರುವ ಲಕ್ಷಣ ಕಾಣಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಒಬ್ಬರು ಗೆಲುವು ಸಾಧಿಸಲಿಲ್ಲ. ಹೀಗಾಗಿ ಈ ಬಾರಿ ಜಿಲ್ಲೆಗೆ ಡಾ.ಜಿ ಪರಮೇಶ್ವರ್ ಉಸ್ತುವಾರಿ ಆಗುತ್ತಾರೆ ಎಂಬ ಮಾತು ಕಾಂಗ್ರೆಸ್ ಮೂಲಗಳಿಂದ ಕೇಳಿಬರುತ್ತಿದೆ.
ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯುತ್ತಿರುವ ಹುತಾತ್ಮ ಮೈಲಾರ ಮಹಾದೇವ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದ್ದಾರೆ. ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಹುತಾತ್ಮ ಮೈಲಾರ ಮಹಾದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾವೇರಿ ಆಯೋಜಿಸಿದ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮದಲ್ಲಿ ಅಹಿಂಸೆ ಪ್ರತಿಪಾದಕ ಹುತಾತ್ಮ ಮೈಲಾರ ಮಹದೇವ ಪುಸ್ತಕವನ್ನು ರಾಜ್ಯಪಾಲರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಎಚ್.ಕೆ. ಪಾಟೀಲ್, ಶಾಸಕ ಯು.ಬಿ. ಬಣಕಾರ್, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡೆ ಪಿ. ಕೃಷ್ಣ ಉಪಸ್ಥಿತರಿದ್ದರು.
ಸರ್ಕಾರ ಪ್ರಾರಂಭಿಕ ಹಂತದಲ್ಲಿ ಯಾವ ರೀತಿ ಬಿತ್ತನೆ ಇದೆ ಅಂತ ಗೊತ್ತಾಗುತ್ತಿದೆ, ಗ್ಯಾರಂಟಿಗಳಿಗೆ ಷರತ್ತು ವಿಧಿಸಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ದೋಸೆ ವಿಚಾರ ಚರ್ಚೆ ಆಗುತ್ತಿದೆ. ದೋಸೆ ಫ್ರೀ ಅಂತ ಬೋರ್ಡ್ ಹಾಕಿಕೊಂಡು ಚಟ್ನಿಗೆ ಹಣ ಕೇಳುವ ಕಥೆ ಇವರದ್ದು. ಸ್ವಚ್ಚ ಸರ್ಕಾರ ಇಲ್ಲಿ ಸಿಗುವುದಿಲ್ಲ. ಜನ ನಂಬಿಕೆ ಇಟ್ಟು ಮತ ಹಾಕಿದ್ದಾರೆ. ಇವರು ಮೂರು ನಾಮ ಎಳೀತಾ ಇದಾರೆ ಅಷ್ಟೆ. ನಾನು ಸುಮ್ನೆ ಜನರ ಮುಂದೆ ಹೋಗಲ್ಲ. ಜನರಿಗೆ ಏನು ಮೋಸ ಮಾಡಿದ್ದಾರೆ ಅಂತ ಇಟ್ಟುಕೊಂಡು ಹೋಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಪಠ್ಯ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಪಠ್ಯ ಪುಸ್ತಕ ಬಗ್ಗೆ ಈಗ ಮಾತಾಡುತ್ತಿದ್ದಾರೆ. ಕೋಟ್ಯಾಂತರ ಹಣ ಖರ್ಚು ಮಾಡು ಪ್ರಿಂಟ್ ಮಾಡಿದ್ದಾರೆ. ಯಾರ ದುಡ್ಡು ಅದು ಹಾಗಾದರೆ? ಮಕ್ಕಳಿಗೆ ಪರಿಶುದ್ಧ ವಾತಾವರಣ ಸೃಷ್ಟಿ ಮಾಡಬೇಕು. ಮಕ್ಕಳಿಗೆ ಒಳ್ಳೆಯ ಜ್ಞಾನ ತುಂಬಬೇಕು. ದ್ವಂದ್ವ ಹೇಳಿಕೆ ನೀಡೋ ಮೂಲಕ ಅವರ ಮೇಲೆ ಪರಿಣಾಮ ಬೀಳುವಂತೆ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.
ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಷರತ್ತು ವಿಚಾರವಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಒಂದು ಗ್ಯಾರಂಟಿಯಲ್ಲಿ ಅಲ್ಲ, 5 ಗ್ಯಾರಂಟಿಗಳಲ್ಲೂ ಗೊಂದಲಗಳಿವೆ. ಗ್ಯಾರಂಟಿ ಘೋಷಣೆ ಮಾಡುವಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಪರಿಜ್ಞಾನ ಇರಲಿಲ್ಲವಾ? ಎಂದು ಪ್ರಶ್ನಿಸಿದ್ದಾರೆ. ಇಂಧನ ಇಲಾಖೆ ಸಚಿವರು ಜಾರ್ಜ್ ಅವರಿಗೆ ಅರ್ಥ ಆಗಿಲ್ಲ ಅನ್ನಿಸುತ್ತಿದೆ. ಸಂಪೂರ್ಣ ಮಾಹಿತಿ ಅವರಿಗೆ ಇಲ್ಲ. ಹೆಬ್ಬಾಳ್ಕರ್ ಅವರಿಗೂ ಮಾಹಿತಿ ಇಲ್ಲ ಅನ್ನಿಸುತ್ತಿದೆ. ಚುನಾವಣೆ ಪೂರ್ವದಲ್ಲಿ ಏನು ಘೋಷಣೆ ಮಾಡಿದ್ದರು? ಈಗ ಸಬೂಬು ಏನು ಕೊಡುತ್ತಾ ಇದ್ದಾರೆ? ಎಂದು ಪ್ರಶ್ನಿಸಿದರು. ಅಲ್ಲದೆ, 15 ಲಕ್ಷ ಬಿಜೆಪಿ ಯವರು ಕೊಟ್ಟಿದ್ದಾರಾ ಅಂತ ಕೇಳುತ್ತಿದ್ದಾರೆ. ಅವರು ಕೊಟ್ಟಿಲ್ಲ ಅಂತ ನಾನು ಕೊಡಲ್ಲ ಅನ್ನೋದು ಎಷ್ಟು ಸರಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳ ಜೊತೆ ಬಿಜೆಪಿ ನಾಯಕರು ಅವಲೋಕನಾ ಸಭೆ ನಡೆಸುತ್ತಿದ್ದಾರೆ. ಬೆಂಗಳೂರು ನಗರದ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಭೆ ನಡೆಯುತ್ತಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂಗಳಾದ ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಹಣೆಯಲ್ಲಿ ತಿಲಕ ಇಡಬಾರದು ಅಂತಾ ನಾನು ಎಲ್ಲೂ ಹೇಳಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಪೊಲೀಸರಿಗೆ ತನ್ನದೇ ಆದ ನಿಯಮ ಇದೆ. ನಿಯಮಗಳ ವ್ಯಾಪ್ತಿಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಬಹುದು. ಹಣೆ ಮೇಲೆ ಕುಂಕುಮ ಇಡಬಾರದು ಎಂದು ಎಲ್ಲೂ ಸೂಚಿಸಿಲ್ಲ. ಬೊಟ್ಟು, ವಿಭೂತಿ ಏನು ಬೇಕಾದರೂ ಇಟ್ಟುಕೊಳ್ಳಬಹುದು. ಆದರೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಹೇಳಿದ್ದೇನೆ ಎಂದರು.
ಕೋಮುವಾದ, ಪ್ರಚೋದನೆ ತಡೆಗೆ ಇಲಾಖೆಯಲ್ಲಿ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಕೋಮುವಾದ ಅನ್ನೋದು ಒಂದು ಸಮುದಾಯಕ್ಕೆ ಸೇರಿದ್ದಲ್ಲ. ಎಲ್ಲಾ ಸಮುದಾಯಗಳಲ್ಲೂ ಕೋಮುವಾದ ಅನ್ನೋದು ಇದೆ. ಕೋಮುವಾದ ತಡೆಗೆ ಇಲಾಖೆಯಲ್ಲಿ ಪ್ರತ್ಯೇಕ ಘಟಕ ಸ್ಥಾಪಿಸುತ್ತೇವೆ, ಪ್ರತ್ಯೇಕ ಘಟಕವು ಪ್ರಚೋದನೆ ಮಾಡುವವರ ಬಗ್ಗೆ ಗಮನವಿಡುತ್ತದೆ. ಮಂಗಳೂರಿನಲ್ಲಿ ಘಟಕ ಸ್ಥಾಪನೆಗೆ ಬೇಡಿಕೆ ಬಂದಿದೆ, ಹೀಗಾಗಿ ಬೇರೆ ಕಡೆ ಘಟಕ ಸ್ಥಾಪಿಸುವ ಅಗತ್ಯತೆ ಬರುವುದಿಲ್ಲ ಎಂದು ಹೇಳಿದರು.
ಬೆಂಗಳೂರು: ಗೃಹಲಕ್ಷ್ಮೀ ಯೋಜನೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಿಎಂ ಜೊತೆಗಿನ ಸಭೆ ನಂತರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಆನ್ಲೈನ್ ಮತ್ತು ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿಯಲ್ಲಿ ನಮೂದಿಸಿರುವ ಕಾಲಂ ವಿಚಾರ ಸಿಎಂ ಗಮನಕ್ಕೆ ತಂದಿದ್ದೇವೆ. ವೋಟರ್ ಐಡಿ, ಪಾಸ್ ಬುಕ್ ಸಂಖ್ಯೆ ಬೇಡವೆಂದು ಸಿಎಂ ಹೇಳಿದ್ದಾರೆ. BPL ಕಾರ್ಡ್ ಇಲ್ಲದ ಮಹಿಳೆಯರಿಗೂ ಯೋಜನೆ ವಿಸ್ತರಣೆಗೆ ಚಿಂತನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಹಲವರು ಈಗ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅಧಿಕಾರಿಗಳು ಸುಖಾಸುಮ್ಮನೆ ಅರ್ಜಿ ತಿರಸ್ಕರಿಸುವಂತಿಲ್ಲ, ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.
ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಗೊಂದಲ ತಂದಿಟ್ಟಿದ್ದಾರೆ. ಮಕ್ಕಳು ತೆರಿಗೆ ಪಾವತಿ ಮಾಡಿದರೂ ಆ ಕುಟುಂಬಕ್ಕೆ ಯೋಜನೆ ಇಲ್ಲ. ಪತಿ, ಪತ್ನಿ ತೆರಿಗೆ ಇಬ್ಬರಲ್ಲಿ ಒಬ್ಬರು ತೆರಿಗೆ ಪಾವತಿ ಮಾಡಿದರೆ ಯೋಜನೆ ಅನ್ವಯ ಇಲ್ಲ ಅಂತ ಆದೇಶ ಹೊರಡಿಸಿದೆ. ಈಗ ಮಕ್ಕಳು ತೆರಿಗೆ ಪಾವತಿ ಮಾಡಿದರೂ ಆ ಕುಟುಂಬಕ್ಕೆ ಯೋಜನೆ ಇಲ್ಲ ಎಂದ ಸಚಿವರು ಹೇಳಿದ್ದಾರೆ.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ದ ಮಂಡ್ಯದ ಬಿಜೆಪಿ ವಕ್ತಾರ ಸಿ.ಟಿ ಮಂಜುನಾಥ್ ರಾಜ್ಯ ಪಾಲರಿಗೆ ದೂರು ಸಲ್ಲಿಸಿದ್ದಾರೆ. ಮಂಡ್ಯದ ಜಿಲ್ಲಾಧಿಕಾರಿಗಳ ಮುಖಾಂತರ ದೂರು ಸಲ್ಲಿಸಿದ್ದಾರೆ. ನಾಗಮಂಗಲದ ಕೃತಜ್ಞತಾ ಸಮಾರಂಭದ ವೇದಿಕೆ ಮೇಲೆ ನನಗೆ ಮತ ಹಾಕದವರಿಗೆ ಒಂದು ಸಹಿ ಕೂಡ ಮಾಡುವುದಿಲ್ಲವೆಂದು ಹೇಳಿಕೆ ನೀಡಿದ್ದ ಹಿನ್ನೆಲೆ ದೂರು ನೀಡಿದ್ದಾರೆ. ದ್ವೇಷ, ತಾರತಮ್ಯ ಮಾಡದೆ ಸಂವಿಧಾನದ ಆಶಯದಂತೆ ಕೆಲಸ ಮಾಡುವುದಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ತಾರತಮ್ಯದ ಮಾತು ಹಿನ್ನಲೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಪತ್ರದ ಮೂಲಕ ಮಂಜುನಾಥ್ ದೂರು ನೀಡಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು ನಗರ ಪ್ರದಕ್ಷಿಣೆ ಹಾಕುತ್ತಿದ್ದು ದಿವ್ಯಶ್ರೀ ರಾಜಕಾಲುವೆ ಒತ್ತುವರಿ ಬಗ್ಗೆ ಗರಂ ಆಗಿದ್ದಾರೆ. ಬೆಂಗಳೂರು ನಗರ ಪ್ರದಕ್ಷಿಣೆ ವೇಳೆ ಡಿಸಿಎಂ ಡಿಕೆ ಅಸಮಾಧಾನ ಹೊರ ಹಾಕಿದ್ರು. 12 ಮೀಟರ್ ರಾಜಕಾಲುವೆಯ ಜಾಗದಲ್ಲಿ 7 ಮೀಟರ್ ಒತ್ತುವರಿ ಮಾಡಿಕೊಳ್ಳಲಾಗಿದೆ. ಹೀಗೆ ಇದ್ದರೆ ಮಳೆ ವೇಳೆ ಪ್ರವಾಹ ಉಂಟಾಗಿ ಮತ್ತೆ ಸಮಸ್ಯೆ ಆಗುತ್ತೆ. ಕೂಡಲೇ ಒತ್ತುವರಿ ಜಾಗ ತೆರವುಗೊಳಿಸಿ ರಾಜಕಾಲುವೆ ನಿರ್ಮಿಸಿ ಎಂದು ಬಿಬಿಎಂಪಿ ಆಯುಕ್ತರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ಸೂಚನೆ ಕೊಟ್ಟಿದ್ದಾರೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೋಡಿಮಠದ ಸ್ವಾಮೀಜಿ(Kodi Math Swamiji) ನುಡಿದಿದ್ದ ಭವಿಷ್ಯ ನಿಜವಾಗಿದೆ. ಯಾವುದೇ ಪಕ್ಷಗಳು ಒಟ್ಟಾಗಿ ಹೋಗುವುದಿಲ್ಲ. ಪಕ್ಷಾಂತರಗಳು ಹೆಚ್ಚಲಿವೆ. ಆದ್ರೆ, ಒಂದೇ ಪಕ್ಷ ಅಧಿಕಾರವನ್ನು ಹಿಡಿಯಲಿದೆ ಎಂದು ಹೇಳಿದ್ದರು. ಅದರಂತೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಏಕಾಂಗಿಯಾಗಿ ಅಧಿಕಾರಕ್ಕೆ ಬಂದಿದೆ. ಇದರ ಮಧ್ಯೆ ಇದೀಗ ಕೋಡಿಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ಮತ್ತೊಂದು ಸ್ಫೋಟಕ ಭವಿಷ್ಯ (Prediction) ನುಡಿದಿದ್ದಾರೆ.
ಹೇಳಿದಂತೆ ಒಂದೇ ಪಕ್ಷ ಅಧಿಕಾರಕ್ಕೆ ಬಂದಿದೆ: ದೇಶಕ್ಕೆ ಇನ್ನೊಂದು ಗಂಡಾಂತರ ಕಾದಿದೆ, ಮತ್ತೊಂದು ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ#Kodimutt #predication #karnataka #india #KodiMuthSwamijihttps://t.co/FaMMRmgVAm
— TV9 Kannada (@tv9kannada) June 8, 2023
ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಜೆಗೆ ನಿಗದಿಯಾಗಿದ್ದ ಬಿಜೆಪಿ ಕೋರ್ ಕಮಿಟಿ ಸಭೆ ರದ್ದಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ನಗರ ಪ್ರದಕ್ಷಿಣೆ ಮಾಡಲಿದ್ದಾರೆ. ಯಮಲೂರು, ದೊಮ್ಮಲೂರು, ಬೆಳ್ಳಂದೂರು, ಸರ್ಜಾಪುರಕ್ಕೆ ಭೇಟಿ ನೀಡಲಿದ್ದಾರೆ. ರಾಜಕಾಲುವೆ ಒತ್ತುವರಿಯಾದ ಸ್ಥಳಗಳಿಗೆ ಭೇಟಿ ನೀಡಿ ಚರ್ಚೆ ನಡೆಸಲಿದ್ದಾರೆ. ಮುಂಗಾರು ಆರಂಭ ಹಿನ್ನೆಲೆ ಡಿಸಿಎಂ ಸಿಟಿ ರೌಂಡ್ಸ್ ಮಹತ್ವ ಪಡೆದುಕೊಂಡಿದೆ. ಬೆಂಗಳೂರು ಅಭಿವೃದ್ಧಿಗಾಗಿ ಸಮನ್ವಯತೆ ಮೂಡಿಸಲು ಡಿಸಿಎಂ ಸಭೆ ನಡೆಸಲಿದ್ದು ಸಭೆಯಲ್ಲಿ ಬಿಎಂಆರ್ಸಿಎಲ್, ಬಿಡಿಎ, ಬಿಬಿಎಂಪಿ ಅಧಿಕಾರಿಗಳು ಇರಲಿದ್ದಾರೆ.
ಬಿಡಿಎ ಅಧ್ಯಕ್ಷರಾಗಿ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಟಿ.ಬಿ.ಜಯಚಂದ್ರ, ಹ್ಯಾರಿಸ್, ಎಂ.ಕೃಷ್ಣಪ್ಪ, ಪ್ರಿಯಾಕೃಷ್ಣ ನಡುವೆ ಪೈಪೋಟಿ ಹಿನ್ನೆಲೆ ರಾಜಕಾರಣಿಗಳಿಗೆ ಮಣೆಹಾಕದೆ ಅಧ್ಯಕ್ಷರಾಗಿ IAS ಅಧಿಕಾರಿಯನ್ನು ಸರ್ಕಾರ ನೇಮಿಸಿದೆ. ಬಿಡಿಎ ಸೇರಿದಂತೆ ರಾಮನಗರ, ಗ್ರಾಮಾಂತರ ಸೇರಿ 10 ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರಾಗಿ IAS ಅಧಿಕಾರಿ ರಾಕೇಶ್ ಸಿಂಗ್ ನೇಮಿಸಿ ಸರ್ಕಾರ ಆದೇಶಿಸಿದೆ.
ಲೋಕಸಭಾ ಚುನಾವಣೆಗೆ ಹಲವು ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ವಿಚಾರಕ್ಕೆ ಸಂಬಂಧಿಸಿ ಟಿಕೆಟ್ ಇಲ್ಲ ಎಂಬ ವಿಚಾರ ಹರಿದಾಡುತ್ತಿದ್ದರೂ ಹೈಕಮಾಂಡ್ ಮೌನದ ಬಗ್ಗೆ ಹಿರಿಯ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವರಿಷ್ಠರ ಮಧ್ಯಪ್ರವೇಶಕ್ಕೆ ಬಹಿರಂಗವಾಗಿ ಸಂಸದ ಡಿ.ವಿ. ಸದಾನಂದ ಗೌಡ ಆಗ್ರಹಿಸಿದ್ದರೆ. ಮತ್ತೊಂದೆಡೆ ಚುನಾವಣಾ ನಿವೃತ್ತಿ ಪಡೆಯುವುದಾಗಿ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ. ಸಂಸದ ಸಂಗಣ್ಣ ಕರಡಿ ಕೂಡಾ ಆಪ್ತರ ಬಳಿ ಟಿಕೆಟ್ ಸಿಗದಿದ್ದಲ್ಲಿ ನಿವೃತ್ತಿಯ ಮಾತನಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಟಿಕೆಟ್ ಇಲ್ಲ ಎಂದು ವದಂತಿ ಹರಿದಾಡಿದರೆ ಇನ್ನೂ ಒಂದು ವರ್ಷ ಕ್ಷೇತ್ರದಲ್ಲಿ ಕೆಲಸ ಮಾಡುವುದು ಹೇಗೆ ಎಂಬ ಬಗ್ಗೆ ಸಂಸದರು ಆಕ್ಷೇಪ ಹೊಂದಿದ್ದಾರೆ. ಇಷ್ಟೆಲ್ಲಾ ಆದರೂ ಹೈ ಕಮಾಂಡ್ ಮೌನವಾಗಿದ್ದು ಇಂದು ನಡೆಯುವ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಇರಲಿದ್ದಾರೆ.
ಕಂದಾಯ, ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ‘ಗೃಹಲಕ್ಷ್ಮೀ’ ಜಾರಿ ಸಂಬಂಧ ಮಧ್ಯಾಹ್ನ 12.30ಕ್ಕೆ ಸಭೆ ನಡೆಸಲಿದ್ದಾರೆ. ಅತ್ತೆ ಅಥವಾ ಸೊಸೆ ಯಾರಿಗೆ ಹಣ ಕೊಡಬೇಕು ಎಂದು ಗೊಂದಲ ಬಗೆಹರಿಸಲು ಸಭೆ ನಡೆಸಲಾಗುತ್ತಿದೆ.
ಸರಿಯಾದ ಸಮಯಕ್ಕೆ ಸಾರಿಗೆ ಬಸ್ಗಳು ಬರದೇ ಇದಿದ್ದಕ್ಕೆ ಕೆಎಸ್ಆರ್ಟಿಸಿ ಬಸ್ ಗಳನ್ನ ತಡೆದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ. ರಾಮನಗರ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬಳಿ ರಾಮನಗರ-ಕನಕಪುರ ಮಾರ್ಗದ ಬಸ್ ಗಳನ್ನ ತಡೆದು ಆಕ್ರೋಶ ಹೊರ ಹಾಕಿದ್ದಾರೆ. ಜಿಲ್ಲಾ ಕೇಂದ್ರದ ಶಾಲಾ ಕಾಲೇಜುಗಳಿಗೆ ತೆರಳಲು ಸಮಯಕ್ಕೆ ಸರಿಯಾಗಿ ಬಸ್ಗಳು ಬರುತ್ತಿಲ್ಲ. ಹಲವು ಬಾರಿ ಮನವಿ ಮಾಡಿದ್ರು ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಿಲ್ಲ ಎಂದು ಆರೋಪಿಸಿದ್ದಾರೆ.
ಕೆಲವರು ನನ್ನ ಮುಂದಿನ ಸ್ಪರ್ಧೆ ಬಗ್ಗೆ ಮಾತಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಚುನಾವಣೆಗೆ ಸ್ಪರ್ಧಿಸಬೇಕೋ ಬೇಡವೋ ಅಂತಾ ಗೊಂದಲದಲ್ಲಿದ್ದೇನೆ ಎನ್ನುವ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ಡೌಟ್ ಎಂಬ ಬಗ್ಗೆ ಡಿಕೆ ಸುರೇಶ್ ಮಾಹಿತಿ ನೀಡಿದ್ದಾರೆ. ಮತದಾರರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಡಿಕೆ ಸುರೇಶ್, ರಾಜಕಾರಣದಲ್ಲಿ ಇರಬೇಕೋ ಬೇಡವೋ ಅಂತಾ ಗೊಂದಲದಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ನಿಮ್ಮ ಸಲಹೆ ಪಡೆದು ನಿರ್ಧಾರ ಕೈಗೊಳ್ಳುವೆ. ನನ್ನ ಗುರಿ ಇರೋದು ನಿಮ್ಮಗಳ ಸೇವೆ ಮಾಡೋದು. ಕುಣಿಗಲ್ ತಾಲೂಕನ್ನು ಮಾದರಿ ತಾಲೂಕು ಮಾಡುವುದು ನನ್ನ ಗುರಿ ಎಂದಿದ್ದಾರೆ.
ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯು ಭೌತಿಕ ಅರ್ಜಿ ಸಲ್ಲಿಕೆಯ ಮಾದರಿಯ ಗೃಹಲಕ್ಷ್ಮೀ ಯೋಜನೆ ಅರ್ಜಿ ಬಿಡುಗಡೆ ಮಾಡಿದೆ. ಸಿಎಂ, ಡಿಸಿಎಂ, ಮಹಿಳಾ & ಮಕ್ಕಳ ಕಲ್ಯಾಣ ಸಚಿವ ಸೇರಿಂತೆ ಮೂವರ ಭಾವಚಿತ್ರವಿರುವ ‘ಗೃಹಲಕ್ಷ್ಮೀ’ ಅರ್ಜಿ ನಮೂನೆ ಬಿಡುಗಡೆ ಮಾಡಲಾಗಿದೆ. ಅರ್ಜಿಯಲ್ಲಿ ಸರ್ಕಾರ ಪತಿಯ ಆಧಾರ್ ಕಾರ್ಡ್, ವೋಟರ್ ಐಡಿ ಕೇಳಲಾಗಿದೆ.
Published On - 9:56 am, Thu, 8 June 23