ಇಂದಿನಿಂದ(ಆ.01) ದುನಿಯಾ ದುಬಾರಿ ಆಗಲಿದೆ. ಟೊಮೆಟೊ ದರ(Tomato Rate) ಏರಿಕೆಗೆ ಬೇಸತ್ತ ಜನರಿಗೆ ಮತ್ತೊಂದು ಶಾಕ್ ಸಿಗಲಿದೆ. ಈಗಾಗಲೇ ಕೆಜಿ ಟೊಮೆಟೊ ದರ 140-160 ರೂ. ಇದ್ದು ಟೊಮೆಟೊ ಖರೀದಿಸಲು ಜನ ಹಿಂಜರಿಯುವಂತಾಗಿದೆ. ಇದರ ನಡುವೆ ಇದೀಗ ನಂದಿನಿ ಹಾಲಿನ(Milk Rate Hike) ಮೇಲೆ ಮೂರು ರೂಪಾಯಿ ದರ ಏರಿಕೆಯಾಗ್ತಿದೆ. ಜೊತೆಗೆ ಹೋಟೆಲ್ ಊಟ ತಿಂಡಿ ಕಾಫಿ ಟೀ ಮೇಲೆ(Hotel Food Rate) ಹತ್ತರಷ್ಟು ದರ ಏರಿಕೆಯಾಗ್ತಿದೆ. ಇನ್ನು ಇಂದಿನಿಂದ ಗೃಹ ಜ್ಯೊತಿ ಯೋಜನೆ (Gruha Jyothi Scheme) ಫಲಾನುಭವಿಗಳಿಗೆ ಶೂನ್ಯ ದರದ ಬಿಲ್ ಸಿಗಲಿದೆ. ಜುಲೈ 1 ರಿಂದ ಬಳಸಿದ ವಿದ್ಯುತ್‌ಗೆ ಗೃಹಜ್ಯೋತಿ ಯೋಜನೆಯಡಿ ಶುಲ್ಕ ವಿನಾಯಿತಿ ಮಾಡಲಾಗುತ್ತೆ. ಇಂದು ಉಡುಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಭೇಟಿ ನೀಡಲಿದ್ದಾರೆ. ಉಡುಪಿಯಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಚಿತ್ರೀಕರಣ ಕೇಸ್ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಮತ್ತೊಂದೆಡೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ(Bengaluru Mysuru Expressway) ಹೊಸ ನಿಯಮ ಜಾರಿಯಾಗಿದ್ದು ಟ್ರ್ಯಾಕ್ಟರ್, ಆಟೋ, ಬೈಕ್ಗೆ ಪ್ರವೇಶವಿಲ್ಲ. ನಿಯಮ ಮೀರಿ ಹೆದ್ದಾರಿ ಬಳಸಿದರೆ 500 ರೂ. ದಂಡ ಹಾಕಲಾಗುತ್ತೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.
ದೆಹಲಿ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲಾನಾಥ್ ಅವರನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿಯಾದರು. ಮುಂಬರುವ ಮಧ್ಯಪ್ರದೇಶ ಚುನಾವಣೆ ಹಿನ್ನೆಲೆ ದೆಹಲಿಯಲ್ಲಿ ಇಬ್ಬರು ನಾಯಕರು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಭೇಟಿ ವೇಳೆ ರಾಜ್ಯಸಭಾ ಸಂಸದರಾದ ಜಿ ಸಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಚಿತ್ರದುರ್ಗ: ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ ಪ್ರಕರಣ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ಕಾರು ತಡೆದು ಜನರು ಆಕ್ರೋಶ ಹೊರಹಾಕಿದರು. ಅಲ್ಲದೆ, ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು. ಜಿಲ್ಲಾಸ್ಪತ್ರೆ ಬಳಿ ಈ ಘಟನೆ ನಡೆದಿದೆ. ಘಟನೆ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಸೂಕ್ತ ಪರಿಹಾರ ಕೊಡಿಸುವುದಾಗಿ ಸಚಿವರು ಭರವಸೆ ನೀಡಿದರು. ಸ್ಥಳದಲ್ಲೇ ಪರಿಹಾರ ಘೋಷಿಸುವಂತೆ ಸಚಿವ ಡಿ.ಸುಧಾಕರ್ಗೆ ಆಗ್ರಹಿಸಿದರಲ್ಲದೆ, ಸುಧಾಕರ್ ದಲಿತ ವಿರೋಧಿ ಎಂದು ಧಿಕ್ಕಾರ ಕೂಗಿದರು.
ಕೊಪ್ಪಳ: ಸಚಿವ ಸ್ಥಾನ ಸಿಕ್ಕಿಲ್ಲ ಅಂತ ನನಗೇನು ಬೇಜಾರಗಿಲ್ಲ. ಸಚಿವ ಸ್ಥಾನದ ಅವಶ್ಯಕತೆಯೂ ಇಲ್ಲ, ಮುಂದೆ ಮಂತ್ರಿ ಮಾಡೋದು ಕೂಡ ಬೇಡ. ಈ ಬಗ್ಗೆ ಬೇಕಾದರೆ ಬರೆದುಕೊಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಸಿಎಂ ಅವರೇ ನಂಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡೋಕೆ ರೆಡಿಯಾಗಿದ್ದರು. ನಾನೇ ಬೇಡ ಅಂದಿದ್ದೇನೆ, ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ನೀಡುತ್ತೇನೆ ಅಂದಿದ್ದರು. ನಮಗೆ ಯಾವುದೇ ಬೇಜಾರಿಲ್ಲ. ಪತ್ರ ಬರೆದಿದ್ದು ಶಾಸಕರು- ಸಚಿವರ ಮಧ್ಯೆ ಸಮನ್ವಯ ಆಗಲಿ ಅಂತ. ಕಲಬುರ್ಗಿಯಲ್ಲಿ ಬಿ.ಆರ್.ಪಾಟೀಲ್ ಪ್ರಿಯಾಂಕ್ ಖರ್ಗೆ ಮಧ್ಯೆ ಸಮನ್ವಯ ಕೊರತೆಯಾಗಿರಬಹುದು ಅದು ನಂಗೆ ಗೊತ್ತಿಲ್ಲ. ಅಲ್ಲಿನ ಶಾಸಕ ಅಜಯ್ ಸಿಂಗ್ ಕೂಡಾ ಸಹಿ ಮಾಡಿದ್ದರು. ಆದರೆ ಅವರಿಗೆ ಮುನಿಸಿದೆ ಎನ್ನೋದು ಗೊತ್ತಿಲ್ಲ. ಬಿ.ಆರ್.ಪಾಟೀಲ್ ಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತ ಬೇಜಾರಿಲ್ಲ. ಅವರಿಗೆ ಗೌರವ ಸಿಕ್ತಿಲ್ಲ ಅಂತ ಬೇಜಾರಿದೆ ಎಂದರು.
ಮಂಗಳೂರು: ದಕ಼್ಷಿಣ ಕನ್ನಡದ ಕಡಲು ಕೊರೆತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಈ ವೇಳೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸ್ಥಳೀಯರು ಕಾಯುತ್ತಿದ್ದರು. ಆದರೆ ಭೇಟಿಗೆ ಅವಕಾಶ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ನಾವು ಸಿಎಂ ಬರುತ್ತಾರೆ ಅಂತಾ ಬೆಳಿಗ್ಗೆಯಿಂದ ಕಾದಿದ್ದೇವೆ. ಕಡಲು ಕೊರೆತವಾಗಿ ಮನೆ ಕುಸಿಯುತ್ತಿದೆ. ನಮ್ಮ ಸಮಸ್ಯೆ ಬಗ್ಗೆ ಸಿಎಂಗೆ ಹೇಳಲೂ ಅವಕಾಶ ನೀಡಲಿಲ್ಲವಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಬಂದಾಗ ರಾತ್ರಿ ಆಗಿತ್ತು ಆದರೂ ಜನರ ಜೊತೆ ಮಾತನಾಡಿದ್ದರು. ಆದರೆ ಇವರು ಹಾಗೆ ಬಂದು ಹೀಗೆ ಹೋಗುತ್ತಾರಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರ ಎದುರು ಅಸಮಾಧಾನ ಹೊರ ಹಾಕಿದ್ದಾರೆ.
ಮಂಗಳೂರು: ಬಟ್ಟಪಾಡೆ ಕಡಲತೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿದರು. ಈ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ಕಡಲ್ಕೊರೆತ ಆಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪರಿಶೀಲಿಸುತ್ತಿದ್ದೇವೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಸ್ಯೆ ಇದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಚಿಕ್ಕೋಡಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಕೋಲ್ಡ್ವಾರ್ ಇದ್ದ ಬಗ್ಗೆ ಒಪ್ಪಿಕೊಂಡ ಸಚಿವ ಸತೀಶ್ ಜಾರಕಿಹೊಳಿ, ರಾಜಕೀಯದಲ್ಲಿ ಎಲ್ಲಾ ಕಡೆ ಇದ್ದದ್ದೆ. ಎಲ್ಲಾ ಪಕ್ಷಗಳಲ್ಲೂ ಕೋಲ್ಡ್ವಾರ್, ಹಾಟ್ವಾರ್ ಇದ್ದೇ ಇರುತ್ತದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಚರ್ಚೆ ಆಗಬೇಕು. ಚುನಾವಣೆಗೆ ಸ್ಪರ್ಧಿಸುವವರಿಗೆ ಆಸಕ್ತಿಬೇಕು, ನಾವು ಹೇಳಕ್ಕಾಗಲ್ಲ ಎಂದರು.
ಬೆಲೆ ಏರಿಕೆಯಿಂದ ಜನರ ಮೇಲೆ 75,000 ಕೋಟಿ ರೂ. ಬರೆ ಬೀಳುತ್ತಿದೆ ಎಂದು ಮಾಜಿ ಸಚಿವ ಗೋವಿಂದ ಎಂ ಕಾರಜೋಳ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇವತ್ತಿಂದ 6ನೇ ಗ್ಯಾರಂಟಿ ಬೆಲೆ ಏರಿಕೆ ಆರಂಭವಾಗಿದೆ. ಉಚಿತ ಪ್ರಯಾಣದ ಟಿಕೆಟ್ಗೆ ಎಸ್ಸಿ, ಎಸ್ಟಿ ಹಣ ಬಳಕೆ ಆಗುತ್ತಿದೆ. ಉಚಿತ ವಿದ್ಯುತ್ ಕೊಡುತ್ತೇವೆ ಅಂತಾ ಅದಕ್ಕೂ SC, ST ಹಣ ಬಳಕೆ ಮಾಡುತ್ತಿದ್ದಾರೆ. ಮಹದೇವಪ್ಪ ಆ ಹಣ ಬೇರೆ ಕಡೆ ಬಳಕೆ ಆಗುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಉಡುಪಿ: ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸಿಎಂ ಸಿದ್ದರಾಮಯ್ಯ ಅವರು ಮಂಗಳೂರಿಗೆ ತೆರಳಿದರು. ಇಲ್ಲಿ ಪ್ರತಿಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ.
ದೇವನಹಳ್ಳಿ: ದೆಹಲಿಗೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, ದೆಹಲಿಯ ನನ್ನ ಕಛೇರಿಯನ್ನ ಮುಚ್ಚಿದ್ದೇನೆ. ಹೀಗಾಗಿ ಸಿಬ್ಬಂದಿಗೆ ಧನ್ಯವಾದ ತಿಳಿಸಲು ಹೋಗುತ್ತಿದ್ದೇನೆ. ಹಾಗೆ ಕೆಲ ಸಹೋದ್ಯೋಗಿಗಳನ್ನು ಸಹ ಬೇಟಿಯಾಗಿ ಮೂರು ನಾಲ್ಕು ದಿನಗಳಲ್ಲಿ ಬರುತ್ತೇನೆ. ಯಾರಿಗೆ ಬೇಕಾದರೂ ರಾಜ್ಯಾಧ್ಯಕ್ಷ ಸ್ಥಾನ ಕೊಡಲಿ ನಮ್ಮದೇನು ತಕರಾರಿಲ್ಲ. ಯಾವಾಗ ಮಾಡುತ್ತಾರೆ ಅನ್ನೂದು ನನಗೆ ಗೊತ್ತಿಲ್ಲ ಎಂದರು.
ಮಾಜಿ ಶಾಸಕ ಸಿ.ಟಿ.ರವಿ ಅವರಿಗೆ ಹೈಕಮಾಂಡ್ನಿಂದ ತುರ್ತು ಬುಲಾವ್ ನೀಡಿದೆ. ಹೀಗಾಗಿ ಸಿಟಿ ರವಿ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದಾರೆ. 2 ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಮಾಜಿ ಶಾಸಕ ಸಿ.ಟಿ.ರವಿ, ಇದೀಗ ಮತ್ತೆ ದೆಹಲಿ ಪ್ರಯಾಣ ಕೈಗೊಂಡಿದ್ದಾರೆ. ಆ.2ರಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಘೋಷಣೆ ಸಾಧ್ಯತೆಯೂ ಇದೆ.
ಕಾಂಗ್ರೆಸ್ MLC ಜಗದೀಶ್ ಶೆಟ್ಟರ್ ದೆಹಲಿಗೆ ತೆರಳುವ ವಿಚಾರಕ್ಕೆ ಸಂಬಂಧಿಸಿ ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. 3-4 ದಿನಗಳ ಹಿಂದೆ ಎಐಸಿಸಿ ಕಚೇರಿಯಿಂದ ಕರೆ ಬಂದಿತ್ತು. ಶಾಸಕರ ಅಸಮಾಧಾನಕ್ಕೂ ದೆಹಲಿ ಸಭೆಗೂ ಸಂಬಂಧ ಇಲ್ಲ. ಶಾಸಕಾಂಗ ಸಭೆಗೂ ಮುನ್ನವೇ ದೆಹಲಿಗೆ ಬರಲು ಕರೆ ಬಂದಿತ್ತು. ಲೋಕಸಭೆ ಚುನಾವಣೆ, ಸಂಘಟನೆ ದೃಷ್ಟಿಯಿಂದ ಸಭೆ ಕರೆದಿದ್ದಾರೆ. ಕಾಂಗ್ರೆಸ್ ನಾಯಕರ ಸಭೆಗೆ ದೆಹಲಿಗೆ ಹೋಗುತ್ತಿದ್ದೇನೆ ಎಂದರು.
ಮಂಗಳೂರಿನ ಪಾಲಿಕೆ ಕಚೇರಿಯಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ನೇತೃತ್ವದಲ್ಲಿ ಸ್ಮಾರ್ಟ್ಸಿಟಿ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿದೆ. ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ಪಾಲಿಕೆ ಮೇಯರ್ ಜಯಾನಂದ್, ಮಹಾನಗರ ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ಎಂಡಿ ಉಪಸ್ಥಿತರಿದ್ದಾರೆ.
ಉಡುಪಿಯ ಬನ್ನಂಜೆಯಲ್ಲಿರುವ ಸರ್ಕಾರಿ ಹಾಸ್ಟೆಲ್ಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದರು. ಗೃಹಲಕ್ಷ್ಮೀ ಯೋಜನೆ ಬಗ್ಗೆ ವಿದ್ಯಾರ್ಥಿನಿಯರ ಜೊತೆ ಮಾತನಾಡಿದರು. ನಿನಗೆ ಹಣ ಸಿಗಲ್ಲ, ನಿನ್ನ ಅಮ್ಮನಿಗೆ ಹಣ ಸಿಗುತ್ತೆ. ಡಿಗ್ರಿ ಪಾಸಾದ ಮೇಲೆ ಕೆಲಸ ಸಿಗುವ ತನಕ ಯುವನಿಧಿ ನೀಡ್ತೇವೆ. ನಿಮ್ಮ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.
ಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಂಡಿರುವುದು ಇಂದು, ನಿನ್ನೆಯ ವಿಚಾರವಲ್ಲ. ಕಳೆದ ಒಂದೂವರೆ ವರ್ಷದ ಹಿಂದೆಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿರುಪತಿಗೆ ತುಪ್ಪ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಮಾನ್ಯ ಸಂಸದ ನಳೀನ್ ಕಟೀಲ್ ಕುಮಾರ್ ಅವರೇ ಈಗ ಹೇಳಿ, ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಂದೂ ಧಾರ್ಮಿಕ ಶ್ರದ್ಧಾ ಭಕ್ತಿಯ ವಿರೋಧಿಯೋ? ಅಥವಾ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಮಾತ್ರ ಹಿಂದೂ ವಿರೋಧಿಯೋ? ಎಂದು ಸಿಎಂ ಸಿದ್ದರಾಮಯ್ಯನವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಮತಿಘಟ್ಟ ಗ್ರಾಮದಲ್ಲಿ ಮಳೆಯಿಂದಾಗಿ ಶಾಲಾ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದಿದೆ. ಕಟ್ಟಡ ದುರಸ್ತಿ ಮಾಡದೆ ಮಕ್ಕಳನ್ನು ಹೊರಗೆ ಕೂರಿಸಿ ಪಾಠ ಮಾಡಲಾಗುತ್ತಿದೆ. ಕಟ್ಟಡ ದುರಸ್ತಿಗೆ ಆಗ್ರಹಿಸಿ ಶಾಲೆ ಎದುರು ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಲೆಯಲ್ಲಿ ಕಲಿಯುತ್ತಿರುವ 40 ಮಕ್ಕಳು ನಿತ್ಯ ಆತಂಕದಲ್ಲಿ ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ.
ಆ.5ರಂದು ಕಲಬುರಗಿಯಲ್ಲಿ ಗೃಹಜ್ಯೋತಿ ಉದ್ಘಾಟನಾ ಸಮಾರಂಭ ಸಂಬಂಧ ಬೆಂಗಳೂರಿನಲ್ಲಿ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್ ಮಾತನಾಡಿದ್ದಾರೆ. ‘ಗೃಹಜ್ಯೋತಿ’ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ. ಉದ್ಘಾಟನಾ ಕಾರ್ಯಕ್ರಮದಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ಸೇರಿ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ತಾರೆ. ಗೃಹಜ್ಯೋತಿ ಯೋಜನೆಗೆ 1.43 ಕೋಟಿ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. 200 ಯೂನಿಟ್ಯೊಳಗೆ ವಿದ್ಯುತ್ ಬಳಸಿದ್ರೆ ಬಿಲ್ ಪಾವತಿಸುವಂತಿಲ್ಲ. ಒಂದು ವರ್ಷದ ಸರಾಸರಿ ವಿದ್ಯುತ್ ಬಿಲ್ ಪರಿಗಣಿಸಿ ಉಚಿತ ವಿದ್ಯುತ್ ನೀಡಲಾಗುತ್ತೆ. 200 ಯೂನಿಟ್ನಿಂತ ಹೆಚ್ಚು ಬಳಸಿದರೆ ಅರ್ಜಿ ರಿಜೆಸ್ಟ್ ಆಗಲಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ಮಂಗಳೂರು ವಿಮಾನ ನಿಲ್ದಾಣದಲ್ಲಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಇದನ್ನು ಅನೈತಿಕ ಪೊಲೀಸ್ ಗಿರಿ ಅಂತಾ ಕರೆಯಬೇಕಾಗುತ್ತದೆ. ಕಾನೂನನ್ನು ಕೈಗೆ ತೆಗೆದುಕೊಳ್ಳೋದು, ಹಲ್ಲೆ ಮಾಡೋದು, ಭಯ ಸೃಷ್ಠಿಸೋದನ್ನು ದಬ್ಬಾಳಿಕೆ ಸಹಿಸಲು ಸಾಧ್ಯವಿಲ್ಲ. ಪೊಲೀಸರಿಗೆ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದರು.
ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಚಿಕಿತ್ಸೆ ಫಲಿಸದೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮಂಜುಳಾ(21) ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥಗೊಂಡವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ನೀರಿನ ಟ್ಯಾಂಕ್ ತೊಳೆಯುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದು ನಗರಸಭೆ ಅಧಿಕಾರಿಗಳ ವಿರುದ್ಧ ಕವಾಡಿಗರಹಟ್ಟಿ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಲೋಕಸಭೆ ಚುನಾವಣೆ ಬಗ್ಗೆ ದೆಹಲಿಯಲ್ಲಿ ಸಭೆ ನಡೆಯುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿದೆಯಾ? ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಚರ್ಚೆ ಮಾಡ್ತೇವೆ. ಸಭೆಗೆ ಹಿರಿಯ ನಾಯಕರು, ಸಂಸದರು, ಶಾಸಕರಿಗೂ ಆಹ್ವಾನಿಸಲಾಗಿದೆ. ಮೂರು ಹಂತದಲ್ಲಿ ಚರ್ಚೆಯಾಗಲಿದೆ. ದೆಹಲಿ ಭೇಟಿ ವೇಳೆ ಕೇಂದ್ರ ಸಚಿವರನ್ನೂ ಭೇಟಿ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೀದರ್ನಲ್ಲಿ ಕಲುಷಿತ ನೀರು ಸೇವಿಸಿ 21 ಜನ ಅಸ್ವಸ್ಥ ಪ್ರಕರಣಕ್ಕೆ ಸಂಬಂಧಿಸಿ ಬೀದರ್ ತಾ.ಪಂ. ಇಒ ಮಾಣಿಕ್ ರಾವ್ ಪಾಟೀಲ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಕಲುಷಿತ ನೀರು ಸೇವನೆ ಪ್ರಕರಣ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳಿಗೆ ವರದಿ ನೀಡದ ಆರೋಪ ಹಿನ್ನೆಲೆ ಅಮಾನತು ಮಾಡಲಾಗಿದೆ.
8ನೇ ಎಸಿಎಂಎ ಕೋರ್ಟ್ ಆದೇಶದ ಮೇಲೆ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ರಿಚ್ಮಂಡ್ ರಸ್ತೆಯ ಕೇಝ್ ಹೋಟೆಲ್ ನಲ್ಲಿ ನಡೆದಿದ್ದ ಗಲಾಟೆ ಸಂಬಂಧ ಎಫ್ಐಆರ್ ದಾಖಲಾಗಿದೆ. ರಿಕ್ಕಿ ರೈ ಹಾಗೂ ಸಹಚರರಿಂದ ಅವಾಚ್ಯ ಶಬ್ಧದಿಂದ ನಿಂದಿಸಿ ಶ್ರೀನಿವಾಸ್ ನಾಯ್ಡು ಎಂಬುವರಿಗೆ ಹಲ್ಲೆ ಮಾಡಿದ್ದ ಆರೋಪ ಕೇಳಿ ಬಂದಿತ್ತು. ನಂತರ ರಿಕ್ಕಿ ರೈ ಆಪ್ತ ವಕೀಲ ನಾರಾಯಣ ಸ್ವಾಮಿಯಿಂದ ಶ್ರೀನಿವಾಸ್ ನಾಯ್ಡು ಗೆ ಬೆದರಿಕೆ ಹಾಕಲಾಗಿದೆ. ಪೊಲೀಸ್ ಠಾಣೆಗೆ ಹೋದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಂತೆ. ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
ಮಾಜಿ ಶಾಸಕ ಸಿ.ಟಿ.ರವಿಗೆ ಬಿಜೆಪಿ ಹೈಕಮಾಂಡ್ ಬುಲಾವ್ ಕೊಟ್ಟಿದ್ದು ಬಿಜೆಪಿ ನಾಯಕ ಸಿ.ಟಿ.ರವಿ ಇಂದು ನವದೆಹಲಿಗೆ ತೆರಳಲಿದ್ದಾರೆ. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕೆಂಪೇಗೌಡ ಏರ್ಪೋರ್ಟ್ನಿಂದ ದೆಹಲಿಯತ್ತ ಹಾರಲಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮಂಗಳೂರು ಏರ್ಪೋರ್ಟ್ಗೆ ಆಗಮಿಸಲಿರುವ ಸಿಎಂ ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಉಡುಪಿಗೆ ತೆರಳಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಉಡುಪಿ ಡಿಸಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ ಮಧ್ಯಾಹ್ನ 3.30ಕ್ಕೆ ಉಡುಪಿಯಿಂದ ಮಂಗಳೂರಿಗೆ ತೆರಳಿ ಸಂಜೆ 4.15ಕ್ಕೆ ಮಂಗಳೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮೆಣಸಿಗನಹಳ್ಳಿ ಸಮೀಪ ಚಾಕುವಿನಿಂದ ಇರಿದು ಯುವಕನ ಹತ್ಯೆ ಮಾಡಲಾಗಿದೆ. ಹೇಮಂತ್(24)ಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿದ್ದ ಹೇಮಂತ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಹೇಮಂತ್ ಮೃತಪಟ್ಟಿದ್ದಾನೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿಂಗರೆಡ್ಡಿಹಳ್ಳಿಯಲ್ಲಿ ನಿಖಿಲ್ ಗೌಡ (18) ಎಂಬ ಯುವಕ ಮೊಬೈಲ್ ಚಾರ್ಜರ್ ಕೊಡಲಿಲ್ಲ ಎಂದು ನೇಣಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಆಶಾ ಕಾರ್ಯಕರ್ತೆಯಾಗಿರುವ ವರಲಕ್ಷ್ಮಮ್ಮ ಪುತ್ರ ನಿಖಿಲ್ ಗೌಡ ಪಾವಗಡ ಪಟ್ಟಣದ ಶಾಂತಿ ಎಸ್ಎಸ್ ಕೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ. ಭಾನುವಾರ ರಜೆ ಇದ್ದ ಕಾರಣ ಮನೆಯಲ್ಲಿಯೇ ಇದ್ದ. ಈ ವೇಳೆ ನನಗೆ ಅದು ಕೊಡಿಸಿಲ್ಲ, ಇದು ಕೊಡಿಸಿಲ್ಲ ಎಂದು ತಾಯಿಯೊಂದಿಗೆ ಗಲಾಟೆ ಮಾಡುತ್ತಿದ್ದ. ಬಳಿಕ ತಾಯಿಯ ಬಳಿ ನನಗೆ ಮೊಬೈಲ್ ಚಾರ್ಜರ್ ಕೊಡು ಎಂದಿದ್ದಾನೆ. ಆಗ ನನ್ನ ಹತ್ತಿರ ಮೊಬೈಲ್ ಚಾರ್ಜರ್ ಇಲ್ಲವೆಂದು ಹೇಳಿದ್ದಾರೆ. ಈ ವೇಳೆ ಘಟನೆ ನಡೆದಿದೆ.
ಮಂಗಳವಾರ ಅಧಿಕ ಮಾಸದ ಹುಣ್ಣಿಮೆ ಹಿನ್ನೆಲೆ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತಸಾಗರ ಹರಿದು ಬಂದಿದೆ. ಮಂಗಳವಾರ ದೇವಿ ವಾರ ಇರುವುದರಿಂದ ಕೊಪ್ಪಳ ತಾಲೂಕಿನ ಹುಲಗಿಯಲ್ಲಿರೋ ಪುರಾಣ ಪ್ರಸಿದ್ದ ಹುಲಿಗೆಮ್ಮ ದೇವಿ ದರ್ಶನಕ್ಕೆ ಭಕ್ತರು ಆಗಮನಿಸುತ್ತಿದ್ದಾರೆ. ಸಾಲುಗಟ್ಟಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಭಕ್ತರು ಆಗಮಿಸುತ್ತಿದ್ದಾರೆ. ಪ್ರತಿ ಹುಣ್ಣಿಮೆ ದಿನ ಹಾಗೂ ಮಂಗಳವಾರ, ಶುಕ್ರವಾರ ಹುಲಗಿ ದೇವಸ್ಥಾನಕ್ಕೆ ಲಕ್ಷಾಂತರ ಜನ ಭಕ್ತರು ಬರುತ್ತಾರೆ.
ಚಿಕ್ಕಮಗಳೂರಿನ N.R ಪುರ ತಾಲೂಕಿನ ಮಧುಗುಣಿ ಕೆಸುವಿನಮನೆ ಗ್ರಾಮದಲ್ಲಿ ನಿರಂತರವಾಗಿ ಕಾಡಾನೆ ದಾಳಿಯಾಗುತ್ತಿದೆ. ಕಾಡಾನೆ ದಾಳಿಗೆ 600ಕ್ಕೂ ಅಧಿಕ ಅಡಿಕೆ ಗಿಡ ನಾಶವಾಗಿದೆ. ಕಾಡಾನೆ ಉಪಟಳಕ್ಕೆ ಲಕ್ಷಾಂತರ ಮೌಲ್ಯದ ಕಾಫಿ ಮೆಣಸು, ಅಡಿಕೆ, ಬಾಳೆ ನಾಶವಾಗಿದೆ. ಕಾಡಾನೆ ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಕ್ರಮ ಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ತುಮಕೂರು ತಾಲೂಕಿನ ಬೆಳ್ಳಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಅಂಗನವಾಡಿಯಲ್ಲಿರುವ ಪಾತ್ರೆಯ ಹಿಂಬದಿ ಸೇರಿಕೊಂಡಿದ್ದ ನಾಗರಹಾವು ಕಂಡು ಭಯಭೀತರಾಗಿದ್ದು ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಮಕ್ಕಳು ಇದ್ದಿದ್ದರೆ ಅಪಾಯ ಗ್ಯಾರಂಟಿ. ಸ್ಥಳಕ್ಕೆ ಉರಗ ಸಂರಕ್ಷಕ ದಿಲೀಪ್ ನಾಗರಹಾವು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಹೊಸ ಮನೆ ಕಟ್ಟುವವರಿಗೆ ಬೆಲೆ ಏರಿಕೆಯ ಶಾಕ್. ರಾಜ್ಯ ಸರ್ಕಾರದ ಬಜೆಟ್ನಲ್ಲಿ ರಾಜಸ್ವ ಏರಿಕೆ ಹಿನ್ನೆಲೆ ಇಂದಿನಿಂದ ಮರಳು, ಜಲ್ಲಿ, ಗ್ರಾನೈಟ್, ಕಬ್ಬಿಣ ಮತ್ತಷ್ಟು ದುಬಾರಿಯಾಗಲಿದೆ. ಮರಳು, ಎಂ-ಸ್ಯಾಂಡ್, ಜಲ್ಲಿಕಲ್ಲು, ಗ್ರಾನೈಟ್ ಬಂಡೆ, ಕಬ್ಬಿಣ ಮನೆ ನಿರ್ಮಾಣದ ಇನ್ನಿತರ ವಸ್ತುಗಳ ಪರಿಷ್ಕೃತ ದರ ಜಾರಿಯಾಗಿದ್ದು ಇಂದಿನಿಂದ ಮನೆ ನಿರ್ಮಾಣದ ವಸ್ತುಗಳು ದುಬಾರಿಯಾಗಲಿವೆ. ಜೊತೆಗೆ ಮನೆ ನಿರ್ಮಾಣದ ವಸ್ತುಗಳ ಸಾಗಾಣಿಕೆ ದರ ಕೂಡ ದುಬಾರಿಯಾಗಲಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2023ಕ್ಕೆ ಉದ್ಘಾಟನೆ, ಜಂಬೂಸವಾರಿ ಮುಹೂರ್ತ ಬಹುತೇಕ ಅಂತಿಮವಾಗಿದೆ. ಅ.15ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅ.15ರ ಬೆಳಗ್ಗೆ 10.15ರಿಂದ 10.36ಕ್ಕೆ ವೃಚ್ಚಿಕ ಲಗ್ನದಲ್ಲಿ ಚಾಲನೆ ಸಿಗಲಿದ್ದು ಅ.24ರಂದು ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ನಡೆಯಲಿದೆ.
ಇಂದಿನಿಂದ ಹೋಟೆಲ್ ತಿಂಡಿ, ಆಹಾರದ ಮೇಲೆ ಶೇ.10ರಷ್ಟು ದರ ಏರಿಕೆಯಾಗಲಿದೆ. ಹಾಲು, ವಿದ್ಯುತ್, ಅಗತ್ಯ ವಸ್ತುಗಳ ದರ ಏರಿಕೆ ಹಿನ್ನೆಲೆ ಹೋಟೆಲ್ ತಿಂಡಿ, ಊಟ, ಟೀ, ಕಾಫಿ, ಆಹಾರಗಳ ದರ ಏರಿಕೆ ಮಾಡಲಾಗುತ್ತಿದೆ. ಇಂದಿನಿಂದ ಹೋಟೆಲ್ ಆಹಾರದ ಪರಿಷ್ಕೃತ ದರ ಜಾರಿಯಾಗಲಿದೆ.
ಇಂದಿನಿಂದ ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳವಾಗಲಿದೆ. ಟೋನ್ಡ್ ಹಾಲಿನ ಹಿಂದಿನ ದರ 39 ರೂ., ಪರಿಷ್ಕೃತ ದರ 42 ರೂ. ಆಗಲಿದೆ. ಹೋಮೋಜಿನೈಸ್ಡ್ ಹಾಲಿನ ಹಿಂದಿನ ದರ 40 ರೂ., ಪರಿಷ್ಕೃತ ದರ 43 ರೂ. ಹಸುವಿನ ಹಾಲು(ಹಸಿರು ಪೊಟ್ಟಣ) ಹಿಂದಿನ ದರ 43, ಪರಿಷ್ಕೃತ ದರ 46 ರೂ. ಶುಭಂ ಹಾಲಿನ ಹಿಂದಿನ ದರ 45 ರೂಪಾಯಿ, ಪರಿಷ್ಕೃತ ದರ 48 ರೂ. ಮೊಸರು ಪ್ರತಿ ಲೀಟರ್‌ಗೆ ಹಿಂದಿನ ದರ 47 ರೂ., ಪರಿಷ್ಕೃತ ದರ 50 ರೂ. ಮಜ್ಜಿಗೆ 200ml ಹಿಂದಿನ ದರ 8 ರೂಪಾಯಿ, ಪರಿಷ್ಕೃತ ದರ 9 ರೂ. ಆಗಲಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಅಪಘಾತ ತಡೆಯಲು ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆಯಿಂದ ಹೊಸ ನಿಯಮ ಜಾರಿಯಾಗಿದ್ದು ಬೆಂ-ಮೈ ಎಕ್ಸ್ಪ್ರೆಸ್ ವೇನಲ್ಲಿ ಇಂದಿನಿಂದ ಆಟೋ, ಟ್ರ್ಯಾಕ್ಟರ್, ಬೈಕ್ಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಹೆದ್ದಾರಿ ಮೇಲೆ ಸಂಚಾರಕ್ಕೆ ಅರ್ಹ ಅಲ್ಲದ ವಾಹನಗಳಿಗೂ ನಿರ್ಬಂಧ ಹೇರಲಾಗಿದೆ. ನಿಯಮ ಮೀರಿ ಹೆದ್ದಾರಿ ಬಳಸಿದರೆ 500 ರೂ. ದಂಡ ಹಾಕಲಾಗುತ್ತೆ. ಬೆಂ-ಮೈ ಎಕ್ಸ್ಪ್ರೆಸ್ ವೇನ 9 ಕಡೆ ಹಾಘೂ ಹೆದ್ದಾರಿಯ ಎಂಟ್ರಿ ಌಂಡ್ ಎಕ್ಸಿಟ್ ಪಾಯಿಂಟ್ಗಳಲ್ಲಿ ಚೆಕಿಂಗ್ ಇಡಲಾಗಿದೆ.
ಉಡುಪಿಯಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಚಿತ್ರೀಕರಣ ಕೇಸ್ ಸಂಬಂಧ ಇಂದು ಉಡುಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಪ್ರಕರಣ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಪೂರ್ಣ ಮಾಹಿತಿ ಪಡೆದು ಉನ್ನತಮಟ್ಟದ ತನಿಖೆಗೆ ಆದೇಶ ನೀಡುವ ಸಾಧ್ಯತೆ ಇದೆ. ಪ್ರಕರಣ ಸಂಬಂಧ ಗೃಹ ಸಚಿವರಿಂದಲೂ ಸಿಎಂ ಮಾಹಿತಿ ಪಡೆದಿದ್ದಾರೆ.
Published On - 7:58 am, Tue, 1 August 23