ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ 7 ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಲಾಗುವುದು. ಐಐಟಿ ಮಾದರಿಯಲ್ಲಿ ಕೆಐಟಿ ಸ್ಥಾಪನೆ ಮಾಡಲಾಗುವುದು. ಉನ್ನತ ಶಿಕ್ಷಣಕ್ಕೆ ಉಚಿತ ಆನ್ಲೈನ್ ಕೋಚಿಂಗ್ ಯೋಜನೆ ನೀಡಲಾಗುವುದು ಎಂದು ಶಿಕ್ಷಣ ಕ್ಷೇತ್ರದ ವಿಶೇಷ ಯೋಜನೆಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಇಂದು (ಮಾರ್ಚ್ 4) ಚೊಚ್ಚಲ ಕರ್ನಾಟಕ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳನ್ನಾಗಿ ರಾಜ್ಯದ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣ ಮಾಡಲಾಗುವುದು. ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಲಾಗುವುದು. ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ವಿನೂತನ ಮಾದರಿಯ ಏಳು ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.
ನೋಡಿ ಕಲಿ, ಮಾಡಿ ಕಲಿ ಕಲ್ಪನೆಯಡಿ ಕಿಟ್ ವಿತರಣೆ ಮಾಡಲಾಗುವುದು. 169 ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳಿಗೆ ಕಿಟ್ ವಿತರಿಸಲಾಗುವುದು. ಲ್ಯಾಬ್ ಇನ್ ಎ ಕಿಟ್ ವಿತರಣೆ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ ನೀಡಲಾಗಿದೆ. ಆಯ್ದ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ಆದ್ಯತೆ ಕೊಡಲಾಗಿದೆ. ಸರ್ಕಾರಿ ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಪೀಠೋಪಕರಣ ಒದಗಿಸಲು 100 ಕೋಟಿ ರೂಪಾಯಿ ಘೋಷಿಸಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮಾರ್ಗಸೂಚಿಯಂತೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ, ಶಿಕ್ಷಕರ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಕ್ಷೇತ್ರಗಳಿಗೆ ನೂತನ ಪಠ್ಯಕ್ರಮ ರಚನೆ ಮಾಡಲಾಗುವುದು. ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳಾಗಿ ಮೂಲಭೂತ ಸೌಕರ್ಯವಿರುವ ಶಾಲೆಗಳ ಉನ್ನತೀಕರಣ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಯುವಜನ ಮತ್ತು ಕ್ರೀಡೆ: ಕುಸ್ತಿ ಕ್ರೀಡಾಪಟುಗಳಿಗೆ ನೀಡುತ್ತಿರುವ ಮಾಸಾಶನ 1000 ರೂಗಳಿಗೆ ಹೆಚ್ಚಳ
ಯುವಕರ ಸ್ವ-ಉದ್ಯೋಗ, ಆರ್ಥಿಕ ಚಟುವಟಿಕೆ ಪ್ರೋತ್ಸಾಹಕ್ಕೆ ನಿರ್ಧಾರ ಮಾಡಲಾಗಿದೆ. ಪ್ರತೀ ಗ್ರಾ.ಪಂನಲ್ಲಿ ಸ್ವಾಮಿ ವಿವೇಕಾನಂದ ಯುವಕರ ಸ್ವಸಹಾಯ ಗುಂಪು, ಜಿಲ್ಲಾ ಮಟ್ಟದಲ್ಲಿ ಕ್ರೀಡಾಂಗಣ ಉನ್ನತೀಕರಣಕ್ಕೆ 100 ಕೋಟಿ ರೂಪಾಯಿ ನೀಡಿಕೆ, ಗ್ರಾಮೀಣ ಹಾಗೂ ದೇಸಿ ಕ್ರೀಡೆಗಳ ಉತ್ತೇಜನಕ್ಕೆ ಕ್ರೀಡಾ ಅಂಕಣ ಸ್ಥಾಪನೆ ಮಾಡಲಾಗುವುದು ಎಂದು ಹೇಳಲಾಗಿದೆ. ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 504 ಕೋಟಿ ವೆಚ್ಚದಲ್ಲಿ ಸ್ಥಾಪನೆ ಮಾಡಲಾಗುವುದು. ಸಾಹಸ ಕ್ರೀಡೆಗೆ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ನವೀಕರಣ ಮಾಡಲಾಗುವುದು ಹಾಗೂ ಬೆಂಗಳೂರಿನಲ್ಲಿ ಖೇಲೋ ಇಂಡಿಯಾ ವಿವಿ ಗೇಮ್ಸ್ 2021 ಆಯೋಜನೆ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ.
ಕೇಂದ್ರದ ಪ್ರಾಯೋಜಕತ್ವದಲ್ಲಿ NSDF ಯೋಜನೆಅಡಿ ಕ್ರೀಡಾ ಅಕಾಡೆಮಿ ಸ್ಥಾಪನೆ ಮಾಡಲಾಗುವುದು. ಶಿವಮೊಗ್ಗದಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸಲು 20 ಕೋಟಿ ರೂ ಅನುದಾನ ನೀಡಲಾಗುವುದು. ಅಮೃತ ಕ್ರೀಡಾ ದತ್ತು ಯೋಜನೆ ಅಡಿ ಒಟ್ಟು 75 ಕ್ರೀಡಾಪಟುಗಳಿಗೆ ನೆರವು ನೀಡಲಾಗುವುದು. 2024ರ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ ಗೆ 75 ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುವುದು. 75 ಕ್ರೀಡಾಪಟುಗಳನ್ನು ತಯಾರಿ ಮಾಡಲು 10 ಲಕ್ಷ ರೂಪಾಯಿ ಮೀಸಲು ಇಡಲಾಗುವುದು. ಅಲ್ಲದೆ, ಕುಸ್ತಿ ಕ್ರೀಡಾಪಟುಗಳಿಗೆ ನೀಡುತ್ತಿರುವ ಮಾಸಾಶನ 1000 ರೂಗಳಿಗೆ ಹೆಚ್ಚಳ ಮಾಡಿ ಘೋಷಿಸಲಾಗಿದೆ.
ಇದನ್ನೂ ಓದಿ: Karnataka Budget 2022: ಕರ್ನಾಟಕದ ಅಭಿವೃದ್ಧಿಗೆ ಪಂಚಸೂತ್ರಗಳ ಆಧಾರದಲ್ಲಿ ಬಜೆಟ್; ಯಾವ ಇಲಾಖೆಗೆ ಎಷ್ಟು ಅನುದಾನ?
Published On - 2:02 pm, Fri, 4 March 22