ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಕುರಿತುಚರ್ಚೆ: ಪ್ರಧಾನಿ ಮೋದಿ ಭೇಟಿಗೆ ಸಮಯ ಕೋರಿದ ಸಿಎಂ ಡಿ.ಕೆ.ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳ ಕುರಿತು ಪ್ರಧಾನಿ ಮೋದಿ ಭೇಟಿಗೆ ಸಮಯ ಕೋರಿದ್ದಾರೆ. ರೈತರು ಹಾಗೂ ಕಾರ್ಖಾನೆ ಮಾಲೀಕರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಇದೇ ವೇಳೆ, ಡಿಸೆಂಬರ್ 31ರೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಸುಪ್ರೀಂ ಕೋರ್ಟ್ ಆದೇಶದಂತೆ ಸಿದ್ಧತೆಗಳನ್ನು ಚುರುಕುಗೊಳಿಸಲಾಗಿದೆ. ಶಾಸಕರು ಮತ್ತು ಸಚಿವರಿಗೆ ಸನ್ನದ್ಧರಾಗಿರಲು ಸೂಚಿಸಲಾಗಿದೆ.

ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಕುರಿತುಚರ್ಚೆ: ಪ್ರಧಾನಿ ಮೋದಿ ಭೇಟಿಗೆ ಸಮಯ ಕೋರಿದ ಸಿಎಂ ಡಿ.ಕೆ.ಶಿವಕುಮಾರ್
ಡಿಕೆ ಶಿವಕುಮಾರ್​ ಮತ್ತು ಪ್ರಧಾನಿ ಮೋದಿ
Image Credit source: Google
Edited By:

Updated on: Oct 20, 2026 | 3:11 PM

ಬೆಂಗಳೂರು, ಅ.20: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಸಕ್ಕರೆ ಕಾರ್ಖಾನೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಮಯ ಕೋರಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರು ಹಾಗೂ ಕಾರ್ಖಾನೆಗಳ ಮಾಲೀಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ಭೇಟಿಗೆ ಅಪಾಯಿಂಟ್‌ಮೆಂಟ್: ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿಗೆ ಸಮಯ ಕೇಳಲಾಗಿದೆ. ಸದ್ಯದಲ್ಲೇ ದಿನಾಂಕ ನಿಗದಿಯಾಗಲಿದ್ದು, ಆ ಬಳಿಕ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಕಬ್ಬು ಇದ್ದರೆ ಕಾರ್ಖಾನೆ ಉಳಿಯುತ್ತದೆ, ಕಾರ್ಖಾನೆ ನಷ್ಟವಾಗದಿದ್ದರೆ ಮಾತ್ರ ಮಾಲೀಕರು ಹಾಗೂ ಕಾರ್ಮಿಕರು ಉಳಿಯಲು ಸಾಧ್ಯ. ಇದು ಕೇವಲ ಒಬ್ಬರ ಸಮಸ್ಯೆಯಲ್ಲ, ಬದಲಾಗಿ ಎಲ್ಲರ ಬದುಕಿಗೆ ಸಂಬಂಧಿಸಿದ ಪ್ರಶ್ನೆಯಾಗಿದೆ ಎಂದರು. ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಬೇಕಿದೆ. ಈ ಕುರಿತು ಈಗಾಗಲೇ ಕಾರ್ಖಾನೆ ಮಾಲೀಕರಿಗೂ ಸೂಚನೆ ನೀಡಲಾಗಿದೆ ಎಂದರು.

ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಈ ಹಿಂದೆ ಮಾತು ಕೊಟ್ಟು ಬಂದಿದ್ದೆವು. ಈ ಸಭೆಗೆ ಕೇಂದ್ರ ಸಚಿವರು, ಸಂಸದರು ಹಾಗೂ ಆ ಭಾಗದ ಸಚಿವರಿಗೂ ಆಹ್ವಾನ ನೀಡಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು. ಯಾರೊಬ್ಬರ ಮೇಲಷ್ಟೇ ಜವಾಬ್ದಾರಿಯ ಹೊರೆ ಹೊರಿಸದೆ, ಎಲ್ಲರ ಸಹಕಾರದೊಂದಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಇನ್ನು ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಯುಧ ಪೂಜೆ ನಿಮಿತ್ತ ರಾಜ್ಯದ ಜನತೆಗೆ, ವಿಶೇಷವಾಗಿ ವಾಹನ ಚಾಲಕರು, ಮಾಲೀಕರು ಮತ್ತು ಪ್ರಯಾಣಿಕರಿಗೆ ಹಾರೈಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬ ಸಮೇತ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿ.ಕೆ. ಶಿವಕುಮಾರ್ ಅವರು, ಆಯುಧಗಳು ಮತ್ತು ವಾಹನಗಳಿಗೆ ಪೂಜೆ ಸಲ್ಲಿಸುವ ಮಹತ್ವದ ಕುರಿತು ಮಾತನಾಡಿದರು.

ಭಾರತದ ಸಂಸ್ಕೃತಿ ಮತ್ತು ಕರ್ನಾಟಕದ ಪರಂಪರೆಯಲ್ಲಿ ತಾಯಿ ಚಾಮುಂಡಿಯನ್ನು ಸ್ಮರಿಸುತ್ತಾ ಆಯುಧಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ಹಿರಿಯರು ಹಾಕಿ ಕೊಟ್ಟಿದ್ದಾರೆ ಎಂದು ಅವರು ಸ್ಮರಿಸಿದರು. ಅನೇಕರು ಈ ದಿನ ದೇವಾಲಯಗಳಿಗೆ ಭೇಟಿ ನೀಡಿ ತಮ್ಮ ವಾಹನಗಳಿಗೆ ಪೂಜೆ ಮಾಡಿಸುತ್ತಾರೆ. ರಾಜ್ಯದಲ್ಲಿ ಪ್ರಯಾಣಿಸುವ ಎಲ್ಲ ವಾಹನಗಳಿಗೆ ರಕ್ಷಣೆ ಸಿಗಬೇಕು, ಯಾವುದೇ ಸಮಸ್ಯೆ ಇಲ್ಲದೆ ಸುಖವಾಗಿ ಪ್ರಯಾಣ ಮಾಡಲು ಸಾಧ್ಯವಾಗಬೇಕು ಎಂದು ಡಿ.ಕೆ. ಶಿವಕುಮಾರ್ ಆಶಿಸಿದರು.

ವಿಡಿಯೋ ಇಲ್ಲಿದೆ ನೋಡಿ:

DK Shivakumar: ವಿಶೇಷವಾಗಿ ವಾಹನ ಚಾಲಕರಿಗೆ ಆಯುಧಪೂಜೆ ಶುಭಾಶಯ ತಿಳಿಸಿದ ಸಿಎಂ ಡಿಕೆಶಿ!| #TV9D

ಒಬ್ಬ ಪ್ರಜಾಸೇವಕನಾಗಿ ಮತ್ತು ಉಪಮುಖ್ಯಮಂತ್ರಿಯಾಗಿ, ಆ ತಾಯಿಯ ಶಕ್ತಿಯಿಂದ ಎಲ್ಲರಿಗೂ ಅನುಗ್ರಹವಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಅವರು ತಿಳಿಸಿದರು. ಆಟೋ, ಬಸ್, ಲಾರಿ, ಟ್ಯಾಕ್ಸಿ, ಖಾಸಗಿ ವಾಹನಗಳು, ಸರ್ಕಾರಿ ವಾಹನಗಳು ಹಾಗೂ ಕೈಗಾರಿಕಾ ವಾಹನಗಳು ಸೇರಿದಂತೆ ಎಲ್ಲ ರೀತಿಯ ವಾಹನಗಳ ಚಾಲಕರು, ಮಾಲೀಕರು ಮತ್ತು ಪ್ರಯಾಣಿಸುವ ಪ್ರತಿಯೊಬ್ಬರಿಗೂ ತಾಯಿ ಚಾಮುಂಡಿ ಹಾಗೂ ದುರ್ಗಾ ದೇವಿಯ ಆಶೀರ್ವಾದ ಸದಾ ಇರಲಿ, ಸುರಕ್ಷಿತ ಪ್ರಯಾಣವನ್ನು ಅನುಗ್ರಹಿಸಲಿ ಎಂದು ಡಿ.ಕೆ. ಶಿವಕುಮಾರ್ ಹಾರೈಸಿದರು.

ಇದನ್ನೂ ಓದಿ: ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್

ಡಿಸೆಂಬರ್ 31 ರೊಳಗೆ ಸ್ಥಳೀಯ ಸಂಸ್ಥೆ ಚುನಾವಣೆ

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಡಿಸೆಂಬರ್ 31 ರ ಗಡುವಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿದ್ಧತೆಗಳನ್ನು ಚುರುಕುಗೊಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ಯಾವಾಗ ಬೇಕಾದರೂ ಘೋಷಣೆಯಾಗಬಹುದು. ಈ ಹಿನ್ನೆಲೆಯಲ್ಲಿ ಸರ್ವ ಸನ್ನದ್ಧರಾಗಿರುವಂತೆ ಸಚಿವರು ಹಾಗೂ ಶಾಸಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಡಿಸೆಂಬರ್ 31 ರೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ನ ನಿರ್ದೇಶನವಿದೆ. ಚುನಾವಣಾ ಆಯೋಗವು ಯಾವುದೇ ಕ್ಷಣದಲ್ಲಾದರೂ ಜಿಬಿಎ (GBA) ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಬಹುದಾಗಿದ್ದು, ಬೆಂಗಳೂರು ನಗರದ ಶಾಸಕರು ಹಾಗೂ ಸಚಿವರು ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಬೇಕಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪಂಚಾಯಿತಿ ಮಟ್ಟದಲ್ಲಿ ರಸ್ತೆ ನಿರ್ಮಾಣ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಹಣ ಬಿಡುಗಡೆ ಮಾಡಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ತಮ್ಮ ಕ್ಷೇತ್ರಗಳಿಗೆ ಅಗತ್ಯವಿರುವ ಅನುದಾನದ ಕುರಿತು ತಕ್ಷಣವೇ ವರದಿ ಸಲ್ಲಿಸುವಂತೆ ಶಾಸಕರಿಗೆ ಕೋರಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:09 pm, Tue, 20 October 26

ಅನಿಲ್​ ಕಲ್ಕೆರೆ

ಅನಿಲ್ ಕಲ್ಕೆರೆ ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ 11 ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ರಾಜಕೀಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಸೆಂಟ್ರಲ್ ಕಾಲೇಜು) ದಲ್ಲಿ Msc (ಮಾಸ್ ಕಮ್ಯುನಿಕೇಷನ್) ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಸೃಜನಶೀಲ ಬರವಣಿಗೆ ಜೊತೆಗೆ ವಿಧಾನಸೌಧದ ಆಡಳಿತಾತ್ಮಕ ಸುದ್ದಿಗಳೂ ಸೇರಿದಂತೆ, ರಾಜಕೀಯ ಪಕ್ಷಗಳು ಹಾಗೂ ರಾಜಕೀಯದ ಪ್ರಸಕ್ತ ವಿದ್ಯಮಾನಗಳನ್ನ ಒಳಗೊಂಡಂತಹ ಸುದ್ದಿಗಳತ್ತ ಗಮನ ಹರಿಸುತ್ತಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವ ನಾಲ್ಕನೇ ಆಧಾರ ಸ್ತಂಭವಾಗಿ ಸಾಮಾನ್ಯಜನರ ಪರ ಧ್ವನಿಯಾಗಿ ಸರ್ಕಾರಕ್ಕೆ ಸಮಸ್ಯೆ ಮುಟ್ಟಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದಾರೆ.

Read More
Loading...
Unable to load recommendations.
Follow Us