Dasara
ಮೈಸೂರು ದಸರಾ
ನಾಡ ಹಬ್ಬ ಎಂದೇ ಮೈಸೂರು ದಸರಾ ವಿಶ್ವವಿಖ್ಯಾತಿ ಪಡೆದಿದೆ. ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ‘ವಿಜಯದಶಮಿ ಆಚರಣೆ’ಯನ್ನು ಮೊದಲ ಬಾರಿಗೆ 1610 ರಲ್ಲಿ ಆಚರಿಸಿದರು ಎಂಬುದು ಇತಿಹಾಸದಲ್ಲಿದೆ. ದಸರಾಗೆ ಇಡೀ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗತ ವೈಭವ ಮರುಕಳಿಸುತ್ತದೆ. ಭವ್ಯ ಅರಮನೆಯ ಮುಂದೆ ರಾಜ ಗಾಂಭೀರ್ಯದಲ್ಲಿ ಸಾಗುವ ಗಜಪಡೆ, ಚಾಮುಂಡಿ ತಾಯಿಯ ಮೆರವಣಿಗೆ ನೋಡಲು ಜನ ದೇಶ-ವಿದೇಶದಿಂದ ಬರುತ್ತಾರೆ.
ಮೈಸೂರು ದಸರಾ ಉತ್ಸವ 10 ದಿನಗಳ ಕಾಲ ನಡೆಯುತ್ತದೆ. ನವರಾತ್ರಿಯ ಸಂದರ್ಭದಲ್ಲಿ 9 ದಿನವೂ ಉತ್ಸವ ನಡೆಯುತ್ತದೆ. 10ನೇ ದಿನ ವಿಜಯ ದಶಮಿಯಂದು ದಸರಾ ಜಂಬೂ ಸವಾರಿ ಆಚರಿಸಲಾಗುತ್ತದೆ. ಇದು ದಸರಾದ ಪ್ರಮುಖ ಆಕರ್ಷಣೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾದ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಗಜಪಡೆ ನೋಡಲು ಲಕ್ಷಾಂತರ ಮಂದಿ ಸೇರುತ್ತಾರೆ.
ಚಾಮುಂಡೇಶ್ವರಿ ದೇವಿಯ ಪೂಜೆಯೊಂದಿಗೆ ದಸರಾ ಪ್ರಾರಂಭವಾಗುತ್ತದೆ. ಮೈಸೂರಿನ ರಾಜ ಮನೆತನದವರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಯಲ್ಲಿ ದರ್ಬಾರ್, ಆಯುಧ ಪೂಜೆ ಸೇರಿದಂತೆ ಇತರೆ ಎಲ್ಲಾ ಪೂಜೆಗಳನ್ನು ನೆರವೇರಿಸುತ್ತಾರೆ.