ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ (CS Vandita Sharma) ಅವರೊಂದಿಗಿನ ಸಭೆಯ ನಂತರವೂ 7ನೇ ವೇತನ ಆಯೋಗದ (7th Pay Commission) ವರದಿ ಜಾರಿಗೆ ಪಟ್ಟು ಹಿಡಿದಿರುವ ರಾಜ್ಯ ಸರ್ಕಾರಿ ನೌಕರರು ಮುಷ್ಕರ (Karnataka government employees Protest) ಮುಂದುವರಿಸಲು ನಿರ್ಧರಿಸಿದ್ದಾರೆ. ಮುಷ್ಕರದಿಂದ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಸರ್ಕಾರ ಯಾವಾಗ ಸಭೆಗೆ ಕರೆದರೂ ಭಾಗವಹಿಸುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಕ್ಷರಿ ಹೇಳಿದ್ದಾರೆ. ಅದರಂತೆ ನಾಳೆ (ಮಾರ್ಚ್ 1) ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ಸರ್ಕಾರಿ ನೌಕರರು ಕಚೇರಿಗಳಿಗೆ ತೆರಳದೆ ಮುಷ್ಕರ ನಡೆಸಲಿದ್ದಾರೆ. ಅದರಂತೆ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಬಂದ್ ಆಗುವ ಸಾಧ್ಯತೆ ಇದೆ. ಆಸ್ಪತ್ರೆಗಳಲ್ಲಿ ತುರ್ತು ಸೇವೆ ಇರಲಿದ್ದು, ಉಳಿದಂತೆ ಯಾವುದೇ ಸೇವೆ ನೀಡದಿರಲು ನಿರ್ಧರಿಸಿದಂತಿದೆ.
ಮುಷ್ಕರದ ಬಗ್ಗೆ ಮಾಹಿತಿ ನೀಡಿದ ರಾಯಚೂರಿನಲ್ಲಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಬಿರಾದಾರ, ರಾಯಚೂರು ಜಿಲ್ಲೆಯಲ್ಲಿ ಎಲ್ಲಾ ಶಾಲಾ-ಕಾಲೇಜುಗಳು ಬಂದ್ ಆಗುತ್ತವೆ. ಪದವಿ, ತಾಂತ್ರಿಕ ಕಾಲೇಜು ಸೇರಿದಂತೆ ಎಲ್ಲವೂ ಕೂಡ ಬಂದ್ ಆಗಲಿವೆ. ಆರೋಗ್ಯ, ಶಿಕ್ಷಣ, ಕಂದಾಯ, ನಿಗಮ ಮಂಡಳಿ ಕಚೇರಿಯೂ ಬಂದ್ ಆಗಲಿವೆ. ಈ ಬಗ್ಗೆ ಜಿಲ್ಲೆಯ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಕಾಲಕಾಲಕ್ಕೆ ವೇತನ ಪರಿಷ್ಕರಣೆ ಮಾಡಿದರೆ ಪ್ರತಿಭಟನೆ ಮಾಡುತ್ತಿರಲಿಲ್ಲ ಎಂದರು. ಎಸ್ಮಾ ಜಾರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಸ್ಮಾ ಜಾರಿ ಮಾಡಬಹುದು, ಆದರೆ ಇದು ಇದು ಒಬ್ಬರ ಬೇಡಿಕೆ ಅಲ್ಲ,ನಾವು ಯಾವುದೇ ಎಸ್ಮಾಗೂ ಜಗ್ಗುವುದಿಲ್ಲ. ನಾವು 10 ಲಕ್ಷ ನೌಕರರು ಇದ್ದೇವೆ. ಎಲ್ಲಾ ಸರ್ಕಾರಿ ನೌಕರರ ವಿರುದ್ಧ ಎಸ್ಮಾ ಜಾರಿ ಮಾಡಲು ಸಾಧ್ಯವಿಲ್ಲ. ನಾಳೆ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆಗೆ ಹಾಜರ್ ಆಗುತ್ತೇವೆ ಎಂದರು.
ಬಳ್ಳಾರಿ ನೌಕರರು ಕೂಡ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, 6 ಲಕ್ಷ ಸರ್ಕಾರಿ ನೌಕರರ ಬೇಡಿಕೆಗಳನ್ನ ಈಡೇರಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಭಾಜಿ ರಾವ ಹೇಳಿದರು. ಕಳೆದೊಂದು ವರ್ಷದಿಂದ ಸೌಹರ್ದಯುತವಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ ನಮ್ಮ ಬೇಡಿಕೆಗಳು ಬಜೆಟ್ನಲ್ಲಿ ಜಾರಿಯಾಗಿಲ್ಲ. ನಾಳೆಯಿಂದ ನಾವೂ ಅನಿರ್ದಿಷ್ಟ ಕಾಲ ಕರ್ತವ್ಯಕ್ಕೆ ಹಾಜರಾಗುತ್ತೇವೆ. ಈ ಕುರಿತು ಈಗಾಗಲೇ ನಾವೂ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ನಾಳೆ ಸರ್ಕಾರಿ ನೌಕರರ ಮುಷ್ಕರ; ಇಂದು ರಾತ್ರಿ ತುರ್ತು ಸಭೆ ಕರೆದ ಸಿಎಂ ಬೊಮ್ಮಾಯಿ
ಮಾತ್ರವಲ್ಲದೆ, ಶಾಲಾ ಕಾಲೇಜುಗಳ ಪರೀಕ್ಷೆ ಹಾಗೂ ಆಸ್ಪತ್ರೆಯಲ್ಲಿ ಓಪಿಡಿ ಸೇವೆಗೆ ನಾವು ಹಾಜರಾಗಲ್ಲ. ನಮಗೆ ನೀಡಿದ ಭರವಸೆ ಈಡೇರದ ಪರಿಣಾಮ ನಾಳೆಯಿಂದ ಉಗ್ರ ಹೋರಾಟ ನಡೆಸುತ್ತೇವೆ. ಮಾನವೀಯತೆ ದೃಷ್ಟಿಯಿಂದ ತುರ್ತು ಚಿಕಿತ್ಸೆ, ಹೆರಿಗೆ ವಿಭಾಗದ ಸಿಬ್ಬಂದಿಗಳು ಮಾತ್ರ ಸೇವೆಗೆ ಹಾಜರಾಗುತ್ತಾರೆ. ಕರ್ತವ್ಯದ ವೇಳೆ ಕಪ್ಪುಬಟ್ಟೆ ಧರಿಸಿಯೇ ಹೋರಾಟ ನಡೆಸುತ್ತೇವೆ. NPS ರದ್ದು ಪಡಿಸಿ, OPC ಜಾರಿ ಮಾಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಜೊತೆಗೆ ಸಾರ್ವಜನಿಕರು ಸಹ ಹೋರಾಟಕ್ಕೆ ಬೆಂಬಲ ನೀಡಿ ನಮಗೆ ಸಹಕರಿಸಬೇಕು ಎಂದರು.
ನಾಳೆ ಸರಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಶಿವಮೊಗ್ಗ ಜಿಲ್ಲೆಯ ನೌಕರರ ಬೆಂಬಲ ಸೂಚಿಸಿದ್ದು, ರಾಜ್ಯ ಸರಕಾರದ ಅಡಿಯಲ್ಲಿ ಬರುವ ಎಲ್ಲ ಇಲಾಖೆಯ ಕಚೇರಿಗೆ ನೌಕರರು ಮತ್ತು ಅಧಿಕಾರಿಗಳು ಗೈರಾಗಲು ನಿರ್ಧರಿಸಿದ್ದಾರೆ. ನಾಳೆ ಸರಕಾರಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಇರುವುದಿಲ್ಲ. ಕೇವಲ ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ ಇದ್ದು, ಜಿಲ್ಲೆಯ ಸರಕಾರಿ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಕರ್ತವ್ಯಕ್ಕೆ ಗೈರಾಗಲಿದ್ದಾರೆ.
ಮುಷ್ಕರಕ್ಕೆ ಧಾರವಾಡ ಜಿಲ್ಲಾ ಸರ್ಕಾರಿ ನೌಕರರು ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರಾಗಲು ನಿರ್ಧಾರಿಸಲಾಗಿದೆ. ಜಿಲ್ಲೆಯ 22 ಸಾವಿರ ಸರ್ಕಾರಿ ನೌಕರರು ಕಚೇರಿಗೆ ಹೋಗದಿರಲು ನಿರ್ಧಾರ ಮಾಡಲಾಗಿದೆ ಎಂದು ಟಿವಿ9 ಗೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸಿದ್ದನಗೌಡ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Government Employees Strike: ಪಟ್ಟು ಬಿಡದ ಸರ್ಕಾರಿ ನೌಕರರು; ಸಂಧಾನ ಮಾತುಕತೆ ವಿಫಲ, ಮುಷ್ಕರ ಅಚಲ
ಮುಷ್ಕರಕ್ಕೆ ಯಾದಗಿರಿ ಜಿಲ್ಲಾ ಸರ್ಕಾರಿ ನೌಕರರು ಕೂಡ ಬೆಂಬಲ ವ್ಯಕ್ತಪಡಿಸಿದ್ದು, ನೌಕರರ ಸಂಘದಿಂದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಎಸ್ಪಿಗೆ ಭೇಟಿಯಾಗಿ ಮುಷ್ಕರಕ್ಕೆ ಬೆಂಬಲಿಸುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ಟಿವಿ9ಗೆ ಮಾಹಿತಿ ನೀಡಿದ ಸರ್ಕಾರಿ ನೌಕರರ ಸಂಘದ ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಆರ್‌ಎಂ ನಾಟೇಕಾರ್, ಸಾಮೂಹಿಕವಾಗಿ ನಾಳೆ ಕೆಲಸಕ್ಕೆ ಗೈರಾಗಲು ನಿರ್ಧಾರ ಮಾಡಲಾಗಿದೆ. ಜಿಲ್ಲೆಯ 7800 ಸರ್ಕಾರಿ ನೌಕರರು ನಾಳೆ ಕೆಲಸಕ್ಕೆ ಗೈರಾಗಲಿದ್ದಾರೆ. ನಾಳೆ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು ಮುಷ್ಕರಕ್ಕೆ ಸಾಥ್ ನೀಡಲಿದ್ದೇವೆ ಎಂದರು.
ನಾಳಿನ ಮುಷ್ಕರಕ್ಕೆ ಕಲಬುರಗಿ ಜಿಲ್ಲಾ ಸರ್ಕಾರಿ ನೌಕರರು ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾಹಿತಿ ಹಂಚಿಕೊಂಡ ಕಲಬುರಗಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ರಾಜು ಲೆಂಗಟಿ, ನಾಳೆ ಸಾಮೂಹಿಕ ಕರ್ತವ್ಯಕ್ಕೆ ಗೈರಾಗಲು ನಿರ್ಧಾರ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ 28 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರು ಕೆಲಸಕ್ಕೆ ಗೈರಾಗಲಿದ್ದಾರೆ. ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇರಲು ನಿರ್ಧಾರ ಮಾಡಲಾಗಿದೆ ಎಂದರು.
ಅದಾಗ್ಯೂ, ನಾಳೆ ಮುಷ್ಕರ ಕೈಗೊಂಡ ಹಿನ್ನಲೆ ಇಂದು ರಾತ್ರಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ರಾತ್ರಿ 9.30ಕ್ಕೆ ಅಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಕೈಗೊಳ್ಳುವ ಅಂತಿಮ ನಿರ್ಧಾರ ಮೇಲೆ ಮುಷ್ಕರ ನಿಂತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:21 pm, Tue, 28 February 23