ಬೆಂಗಳೂರು: ಬಿಡಿಎ (BDA) ಆಯುಕ್ತ ಎಂ.ಬಿ.ರಾಜೇಶ್ ಗೌಡರನ್ನು ವರ್ಗಾವಣೆ ಮಾಡಿ ಸರ್ಕಾರ (Government) ಆದೇಶ ಹೊರಡಿಸಿದೆ. ಸುಪ್ರೀಂಕೋರ್ಟ್ (Supreme Court) ತರಾಟೆ ಬೆನ್ನಲ್ಲೇ ರಾಜೇಶ್ ಗೌಡರನ್ನು ಎತ್ತಂಗಡಿ ಮಾಡಲಾಗಿದೆ. ಬಿಡಿಎ ನೂತನ ಆಯಕ್ತರಾಗಿ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯ್ಕ್ ಅವರನ್ನು ನೇಮಕ ಮಾಡಲಾಗಿದೆ.
ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಬಹು ಜನರಿಗೆ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದ ಕಾರಣಕ್ಕೆ (ಬಿಡಿಎ) ಆಯುಕ್ತ ಎಂ.ಬಿ.ರಾಜೇಶ ಗೌಡ ಅವರನ್ನು ಗುರುವಾರ (ಆ 25) ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ಕೋರ್ಟ್ ಆದೇಶದ ಬಗ್ಗೆ ಅವಿಧೇಯತೆ ತೋರಿದ್ದಕ್ಕೆ ರಾಜೇಶ ಗೌಡ ಅವರನ್ನು ಪ್ರಾಧಿಕಾರದಿಂದ ವರ್ಗಾವಣೆ ಮಾಡಬೇಕು ಎಂದೂ ಸುಪ್ರಿಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಸಂಬಂಧ ಸರ್ಕಾರ ಎಂ.ಬಿ.ರಾಜೇಶ್ ಗೌಡರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್ ಹಾಗೂ ಸಂಜೀವ್ ಖನ್ನಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಡಾ.ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠವು ಬಿಡಿಎ ಅಧಿಕಾರಿಗಳ ಧೋರಣೆಗೆ ಕಿಡಿಕಾರಿತ್ತು.
ಎಲ್ಲ ಕಾಮಗಾರಿಗಳ ವರದಿ ಪಡೆಯಲು ಮುಖ್ಯಮಂತ್ರಿಗೆ ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಮನವಿ
ಕೋಲಾರ: ‘ಗುತ್ತಿಗೆದಾರರಿಗೆ ಸಹಕರಿಸದ ಕಾರಣ ನನ್ನ ಮೇಲೆ ಲಂಚದ ಆರೋಪ ಮಾಡಿದ್ದಾರೆ’ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ‘ಕೋಲಾರ ಜಿಲ್ಲೆಯಲ್ಲಿ ಹೆಚ್ಚಾಗಿ ಕಳಪೆ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ’ ಎಂದು ಎಲ್ಲ ಗುತ್ತಿಗೆದಾರರ ಮೇಲೆ ಪರೋಕ್ಷವಾಗಿ ಹರಿಹಾಯ್ದಿದ್ದಾರೆ. ಇತ್ತೀಚೆಗಷ್ಟೇ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮುನಿರತ್ನ ಲಂಚ ಕೇಳುತ್ತಿದ್ದಾರೆ. ಲಂಚ ಪಡೆಯಲೆಂದೇ ವ್ಯಕ್ತಿಯೊಬ್ಬರನ್ನು ನಿಯೋಜಿಸಿದ್ದಾರೆ ಎಂದು ದೂರಿದ್ದರು. ಕಾಂಗ್ರೆಸ್ನ ಹಲವು ನಾಯಕರು ಈ ಆರೋಪ ಪ್ರಸ್ತಾಪಿಸಿ ಮುನಿರತ್ನ ಅವರನ್ನು ಟೀಕಿಸಿದ್ದರು.
ಪತ್ರದಲ್ಲೇನಿದೆ?
‘ಆಗಸ್ಟ್ 19ರಂದು ನನ್ನ ಉಸ್ತುವಾರಿ ಜಿಲ್ಲೆಯಾದ ಕೋಲಾರ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಜಿಲ್ಲೆಯ ಹಲವು ರಸ್ತೆಗಳು ಗುಂಡಿ ಬಿದ್ದು ಹಾಳಾಗಿರುವ ವಿಷಯ ಪ್ರಸ್ತಾಪವಾಯಿತು. ನಾನು ಆಗಸ್ಟ್ 22, 23ರಂದು ಪ್ರಗತಿ ಸ್ಥಳ ಪರಿಶೀಲನೆ ನಡೆಸಿದ ಯಾವುದೇ ಗುಂಡಿಗಳು ಇರಬಾರದು ಎಂದು ಮೌಖಿಕವಾಗಿ ಸೂಚಿಸಿದ್ದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಇತ್ತೀಚೆಗಷ್ಟೇ ಡಾಂಬರು ಹಾಕಿದ ರಸ್ತೆಗಳ ಗುಣಮಟ್ಟ ಪರಿಶೀಲನೆಗೆ ಸೂಚಿಸಿದ್ದೆ. ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಲೋಪದೋಷಗಳು ಕಾಣಿಸಬಹುದು. ಅಂಥ ಸಂದರ್ಭದಲ್ಲಿ ಸಹಕಾರ ನೀಡಬೇಕು ಎಂದು ಕೆಲ ಗುತ್ತಿಗೆದಾರರು ಕೋರಿದ್ದರು. ನಾನು ಅವರಿಗೆ ಸಹಕರಿಸದ ಕಾರಣ ನನ್ನ ಮೇಲೆ ಲಂಚದ ಆರೋಪ ಮಾಡಿದ್ದಾರೆ’ ಎಂದು ತಮ್ಮ ವಿರುದ್ಧದ ಆರೋಪಕ್ಕೆ ವಿವರಣೆ ನೀಡಲು ಮುನಿರತ್ನ ಯತ್ನಿಸಿದ್ದಾರೆ.
‘ಕೋಲಾರ ಜಿಲ್ಲೆಯಲ್ಲಿ ಹೆಚ್ಚಾಗಿ ಕಳಪೆ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಇದರ ತಪಾಸಣೆ ಮಾಡಿ, ಸಂಪೂರ್ಣ ವರದಿ ಮತ್ತು ದಾಖಲೆಗಳನ್ನು ಒದಗಿಸಲು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಗುಣಮಟ್ಟ ಪರಿಶೀಲಿಸುವ ಯಂತ್ರದೊಂದಿಗೆ ಗುಣಮಟ್ಟ ಪರಿಶೀಲಿಸಬೇಕು. ಗುಣಮಟ್ಟ ಪರಿಶೀಲನೆ ಸಂದರ್ಭದಲ್ಲಿ 3ನೇ ವ್ಯಕ್ತಿಯ ವರದಿ ಪಡೆಯಲು (ಥರ್ಡ್ ಪಾರ್ಟಿ) ಬೆಂಗಳೂರಿನ ‘ಬ್ಯೂರೊ ವೆರಿಟಾಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯಿಂದ ಗುಣಮಟ್ಟ ವರದಿ ಪಡೆಯಬೇಕು’ ಎಂದು ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ವಿನಂತಿಸಿದ್ದಾರೆ.
ಕೆಂಪಣ್ಣ ಭ್ರಷ್ಟಾಚಾರದ ಆರೋಪಕ್ಕೆ ಮುನಿರತ್ನ ಸೆಡ್ಡು
ಏನೇ ಆರೋಪ ಮಾಡಿರಬಹುದು, ಆದರೆ ಸಾಕ್ಷಿ ಇದೆಯಾ? ಅವರು ದಾಖಲೆ ಕೊಡಬೇಕು, ಇಲ್ಲದಿದ್ರೆ ನಾನು ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇನೆ ಎಂದು ಟಿವಿ9ಗೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿಕೆ ನೀಡಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸಚಿವ ವಿ.ಮುನಿರತ್ನ ವಿರುದ್ಧ ಕೆಂಪಣ್ಣ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಆರೋಪಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಸಾಕ್ಷಿ ಕೊಡಲಿ. ನನ್ನ ಬಳಿ ಯಾರು ಬಂದಿದ್ದಾರೆ, ನಾನು ಏನು ಹೇಳಿದ್ದೇನೆ. ಎಲ್ಲವನ್ನೂ ನಾನೇ ತನಿಖೆ ಮಾಡಿಸುತ್ತೇನೆ, ಇದನ್ನ ಬಿಡಲ್ಲ. ಸರ್ಕಾರ, ಸಚಿವರ ಬಗ್ಗೆ ಆರೋಪ ಮಾಡಿದ್ರೆ ಸುಮ್ಮನಿರಲ್ಲ. ಇದನ್ನ ಇಲ್ಲಿಗೆ ಬಿಡಲ್ಲ, ಕಾನೂನು ಹೋರಾಟ ಮಾಡ್ತೇನೆ. ನನ್ನ ತಪ್ಪಿದ್ದರೆ ಏನು ಶಿಕ್ಷೆ ಕೊಟ್ಟರೂ ನಾನು ಅನುಭವಿಸ್ತೇನೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Fri, 26 August 22