ಒಕ್ಕಲಿಗರಿಗೆ, ಲಿಂಗಾಯತರಿಗೆ 2 ಪರ್ಸೆಂಟ್ ಮೀಸಲಾತಿ ಹೆಚ್ಚಳ; ಪ್ರತಿಭಟನೆ ಹಿಂಪಡೆದ ಜಯಮೃತ್ಯುಂಜಯ ಸ್ವಾಮೀಜಿ, ಭಾವುಕರಾಗಿ ಕಣ್ಣೀರು

ಹೋರಾಟ ಅಂತ್ಯಗೊಳಿಸಿದ ನಂತರ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ ಭಾವುಕರಾದರು. ಕಣ್ಣೀರು ಹಾಕಿದರು.

ಒಕ್ಕಲಿಗರಿಗೆ, ಲಿಂಗಾಯತರಿಗೆ 2 ಪರ್ಸೆಂಟ್ ಮೀಸಲಾತಿ ಹೆಚ್ಚಳ; ಪ್ರತಿಭಟನೆ ಹಿಂಪಡೆದ ಜಯಮೃತ್ಯುಂಜಯ ಸ್ವಾಮೀಜಿ, ಭಾವುಕರಾಗಿ ಕಣ್ಣೀರು
ಜಯಮೃತ್ಯುಂಜಯ ಸ್ವಾಮೀಜಿ ಭಾವುಕ

Updated on: Mar 25, 2023 | 3:12 PM

ಬೆಂಗಳೂರು: ಕರ್ನಾಟಕ ಸರ್ಕಾರ 2ಬಿ ವರ್ಗದಡಿಯಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ 2ಸಿ ಮತ್ತು 2ಡಿ ಅಡಿಯಲ್ಲಿ ವರ್ಗೀಕರಿಸಿ ಒಕ್ಕಲಿಗರು ಮತ್ತು ಲಿಂಗಾಯತರಿಗೆ ಸಮಾನವಾಗಿ ಹಂಚಿಕೆ ಮಾಡಿದೆ. 3A ನಲ್ಲಿದ್ದ ಒಕ್ಕಲಿಗರನ್ನ 2C ಅಂತಾನೂ, 3Bನಲ್ಲಿದ್ದ ಲಿಂಗಾಯತರನ್ನ 2D ಅಂತಾ ಪ್ರತ್ಯೇಕ ಕ್ಯಾಟಗರಿ ಮಾಡಿದ್ದ ಸರ್ಕಾರ ಇದೀಗ 2C ಕ್ಯಾಟಗರಿ ಅಡಿ ಒಕ್ಕಲಿಗರಿಗೆ 6 ಪರ್ಸೆಂಟ್ ಮೀಸಲಾತಿ ನೀಡಿದೆ. 2D ಅಡಿ ಲಿಂಗಾಯತರಿಗೆ 7 ಪರ್ಸೆಂಟ್ ಮೀಸಲಾತಿ ಘೋಷಿಸಿದೆ. ಇದರ ಬೆನ್ನಲ್ಲೆ ಈಗ ಪಂಚಮಸಾಲಿ ಮಠಾಧೀಶ ಜಯಮೃತ್ಯುಂಜಯ ಸ್ವಾಮೀಜಿ ಅವರು ಚುನಾವಣೆ ಮುಗಿಯುವವರೆಗೆ ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲು ನಿರ್ಧರಿಸಿದ್ದಾರೆ.

ಪಂಚಮಸಾಲಿಗಳಿಗೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಸಮಾಧಾನಗೊಂಡಿರುವ ಜಯಮೃತ್ಯುಂಜಯ ಸ್ವಾಮೀಜಿ ಅವರು ಮುಷ್ಕರವನ್ನು ಅಂತ್ಯಗೊಳಿಸಿದ್ದಾಗಿ ಘೋಷಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಶನಿವಾರ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಮುಖಂಡರೊಂದಿಗೆ ಸಭೆ ನಡೆಸಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಇದರ ನಡುವೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸಭೆಯಿಂದ ಅರ್ಧಕ್ಕೆ ಎದ್ದು ಹೋದ ಘಟನೆ ನಡೆದಿದೆ. ಶೇ 2 ರಷ್ಟು ಮೀಸಲಾತಿ ಹೆಚ್ಚಿಸುವ ಸರ್ಕಾರದ ನಿರ್ಧಾರದಿಂದ ಎಲ್ಲಾ ನಾಯಕರು ಸಂತೋಷವಾಗಿಲ್ಲ ಎಂದು ಸರ್ಕಾರದ ನಿರ್ಧಾರಕ್ಕೆ ವಿಜಯಾನಂದ ಕಾಶಪ್ಪನವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾವುಕರಾದ ಜಯಮೃತ್ಯುಂಜಯ ಸ್ವಾಮೀಜಿ

ಹೋರಾಟ ಅಂತ್ಯಗೊಳಿಸಿದ ನಂತರ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ ಭಾವುಕರಾದರು. ದೇವರು ನಮಗೆ 2% ಮೀಸಲಾತಿಯನ್ನು ಕರುಣಿಸಿದ್ದಾರೆ. ಹೊಟ್ಟೆ ತುಂಬಾ ಊಟ ಸಿಕ್ಕಿಲ್ಲ. ಆದರೆ ಹಸಿದ ಹೊಟ್ಟೆಗೆ ಪ್ರಸಾದ ಸಿಕ್ಕಿದಂತೆ ಆಗಿದೆ. ನೀತಿಸಂಹಿತೆ ಜಾರಿಯಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಮುಂದೆ ಯಾವ ಸರ್ಕಾರ ಆಡಳಿತಕ್ಕೆ ಬರುತ್ತದೆಯೋ ಗೊತ್ತಿಲ್ಲ. ದೊಡ್ಡ ದೊಡ್ಡ ಮಠದವರು ನನಗೆ ಬೆಂಬಲ ಕೊಟ್ಟಿಲ್ಲ. ನಮ್ಮ ಹೋರಾಟದ ಪರಿಣಾಮ ಇಡೀ ಲಿಂಗಾಯಿತ ಸಮುದಾಯಕ್ಕೆ ಅನುಕೂಲವಾಗಿದೆ. ಚುನಾವಣೆ ಮುಗಿದ ನಂತರ ಹೋರಾಟ ಮುಂದುವರೆಸೋಣ ಎಂದರು.

ಇದನ್ನೂ ಓದಿ: ರಾಜಕೀಯ ಲಾಭದ ದುರುದ್ದೇಶದ ಪರಿಷ್ಕೃತ ಮೀಸಲಾತಿ ನೀತಿಯಿಂದ ಯಾವ ಸಮುದಾಯಕ್ಕೂ ಲಾಭ ಇಲ್ಲ: ಸಿದ್ದರಾಮಯ್ಯ

ಪಂಚಮಸಾಲಿ ಹೋರಾಟ ತಾರ್ಕಿಕ ಅಂತ್ಯವನ್ನು ತಲುಪಿದೆ. 2 ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದೇವೆ. ನಮ್ಮ ಪ್ರತಿಭಟನೆ ಜನವರಿಯಲ್ಲಿ ಶಿಗ್ಗಾಂವಿಯಿಂದ ಫ್ರೀಡಂ ಪಾರ್ಕ್‌ಗೆ ಸ್ಥಳಾಂತರಗೊಂಡಿತು. ಲಿಂಗಾಯತ ಉಪಪಂಗಡಗಳಿಗೆ ಶೇ 7ರಷ್ಟು ಮೀಸಲಾತಿ ನೀಡಲಾಗಿದೆ. ಇದು ನಮ್ಮ ಹೋರಾಟದ ಮೊದಲ ಗೆಲುವು. ನಾವು ಈಗ ನಮ್ಮ ಪ್ರತಿಭಟನೆಯನ್ನು ಹಿಂಪಡೆಯುತ್ತಿದ್ದೇವೆ ಮತ್ತು ಚುನಾವಣೆಯ ನಂತರ ನಾವು ಅದನ್ನು ಪುನರಾರಂಭಿಸುತ್ತೇವೆ ಎಂದರು.

ಇನ್ನು ಮತ್ತೊಂದೆಡೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದು, ಆದಷ್ಟು ಬೇಗ ಅಧಿಸೂಚನೆ ಆಗುವಂತೆ ನೋಡಿಕೊಳ್ಳುತ್ತೇನೆ ಎಂದರು. ನಾವು 2A ಅಡಿಯಲ್ಲಿ ಮೀಸಲಾತಿಗೆ ಒತ್ತಾಯಿಸಿದ್ದೇವೆ ಆದರೆ ಆ ವರ್ಗೀಕರಣದಲ್ಲಿ ಈಗಾಗಲೇ 101 ಜಾತಿಗಳು ಇರುವುದರಿಂದ ಸರ್ಕಾರವು ನಮಗೆ 2D ನೀಡಿದೆ. ನಮಗೆ 2ಎ ಅಡಿಯಲ್ಲಿ ಒದಗಿಸಲಾದ ಎಲ್ಲಾ ಮೀಸಲಾತಿಗಳನ್ನು ನೀಡಲಾಗಿದೆ. ಅಮಿತ್ ಶಾ ಮತ್ತು ಜೆಪಿ ನಡ್ಡಾ ನನ್ನೊಂದಿಗೆ 3 ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದರು.

ಇದು ಚುನಾವಣೆ ಗಿಮಿಕ್; ಮುಸ್ಲಿಮರು ಮತ್ತು ನಮ್ಮ ನಡುವೆ ಜಗಳ ತಂದಿಡುವ ಕೆಲಸ

ವಿಜಯಾನಂದ ಕಾಶೆಪ್ಪನವರ್ ಮಾತನಾಡಿ, ನಾವು ಕೇಳಿರುವುದು 15% ಮೀಸಲಾತಿ. ಆದರೆ ಈಗ 7% ನೀಡಲಾಗಿದೆ. ಇದು ಚುನಾವಣಾ ತಂತ್ರ ಆಗಿರಬಹುದು. ನೋಟಿಫಿಕೇಶನ್ ಆಗಲಿ. ಬೇರೆ ಸಮುದಾಯದಿಂದ ಕಿತ್ತುಕೊಂಡು ನಮಗೆ ಮೀಸಲಾತಿ ಕೊಡುವುದು ಬೇಕಾಗಿಲ್ಲ. ಈಗ ಕೇವಲ 2% ಮಾತ್ರ ಮೀಸಲಾತಿ ಸಿಕ್ಕಂತಾಗಿದೆ. ಮುಸ್ಲಿಮರ ಮೀಸಲಾತಿಯನ್ನು ಕಸಿದು ನಮಗೆ ಕೊಟ್ಟಿದ್ದಾರೆ. ಆ ಮೂಲಕ ಮುಸ್ಲಿಮರು ಮತ್ತು ನಮ್ಮ ನಡುವೆ ಜಗಳ ತಂದಿಡುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:12 pm, Sat, 25 March 23