ಅಲ್ಪ ಸಂಖ್ಯಾತರನ್ನು EWSಗೆ ಸೇರ್ಪಡೆ: ಸರ್ಕಾರದ ನಿರ್ಧಾರದ ವಿರುದ್ಧ ಮುಸ್ಲಿಂ ಸಮುದಾಯ ಅಸಮಾಧಾನ
ರಾಜ್ಯ ಸರ್ಕಾರ (OBC) 2ಬಿಯಲ್ಲಿದ್ದ ಮುಸ್ಲಿಂರನ್ನು, ಆರ್ಥಿಕವಾಗಿ ದುರ್ಬಲ ವಿಭಾಗ (EWS) ಗೆ ಸೇರಿಸಿದ್ದನ್ನು ನಾವು ಒಪ್ಪುವುದಿಲ್ಲ. ಏಕೆಂದರೆ ಮುಂದಿನ ದಿನಗಳಲ್ಲಿ ಇಡ್ಲೂಎಸ್ಗೆ ಯಾವ ಸಮುದಾಯದವರನ್ನು ಬೇಕಾದರೂ ಸರ್ಕಾರ ಸೇರಿಸಬಹುದು. ಹೀಗಾಗಿ ಇದನ್ನು ಮುಸ್ಲಿಂ ಸಮುದಾಯ ಒಪ್ಪಲ್ಲ ಎಂದು ಸರ್ಕಾರದ ನಿರ್ಧಾರದ ವಿರುದ್ಧ ಮುಸ್ಲಿಂ ಸಮುದಾಯ ಅಸಮಾಧಾನ ಹೊರಹಾಕಿದೆ.

ಬೆಂಗಳೂರು: ರಾಜ್ಯ ಸರ್ಕಾರ (OBC) 2ಬಿಯಲ್ಲಿದ್ದ ಮುಸ್ಲಿಂರನ್ನು (Muslim), ಆರ್ಥಿಕವಾಗಿ ದುರ್ಬಲ ವಿಭಾಗ (EWS) ಗೆ ಸೇರಿಸಿದ್ದನ್ನು ನಾವು ಒಪ್ಪುವುದಿಲ್ಲ. ಏಕೆಂದರೆ ಮುಂದಿನ ದಿನಗಳಲ್ಲಿ ಇಡ್ಲೂಎಸ್ಗೆ ಯಾವ ಸಮುದಾಯದವರನ್ನು ಬೇಕಾದರೂ ಸರ್ಕಾರ (Karnataka Government) ಸೇರಿಸಬಹುದು. ಹೀಗಾಗಿ ಇದನ್ನು ಮುಸ್ಲಿಂ ಸಮುದಾಯ ಒಪ್ಪಲ್ಲ ಎಂದು ಸರ್ಕಾರದ ನಿರ್ಧಾರದ ವಿರುದ್ಧ ಮುಸ್ಲಿಂ ಸಮುದಾಯ ಅಸಮಾಧಾನ ಹೊರಹಾಕಿದೆ. ನಮಗೆ 2ಬಿಯಲ್ಲಿ ಶೇ 4 ರಷ್ಟು ಪ್ರತ್ಯೇಕ ಮೀಸಲಾತಿ ಇತ್ತು. ಆದರೆ ಈಗ ಈ ಮೀಸಲಾತಿ ನಮಗೆ ಸಿಗುವುದಿಲ್ಲ. ಈ ಹಿನ್ನೆಲೆ ನಾವು ಅಧಿಸೂಚನೆ ಹೊರಡಿಸದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಹೇಳಿದರು.
ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರ ಶೇ 10 ರಷ್ಟು ಮೀಸಲಾತಿ ನಮಗೆ ಸಿಗಲ್ಲ. ಏಕೆಂದರೆ ಇಡ್ಲೂಎಸ್ನಿಂದ ಬ್ರಾಹ್ಮಣರಿಗೆ, ಜೈನರಿಗೆ ಮತ್ತು ಬೇರೆ ಸಮುದಾಯದವರನ್ನು ಸೇರಿದರೇ ಅವರಿಗೂ ಹಂಚಿಕೆಯಾಗುತ್ತದೆ. ಈ ಸಂಬಂಧ ಮುಸ್ಲಿಂ ಸಮುದಾಯದವರ ಮಧ್ಯೆ ದೊಡ್ಡ ಚರ್ಚೆಯಾಗುತ್ತಿದೆ. ನಿನ್ನೆ (ಮಾ.24) ರಂದು ನಾನು ಕಾನೂನು ಸಚಿವ ಮಾಧುಸ್ವಾಮಿ ಅವರ ಜೊತೆ ಮಾತಾನಾಡಿದ್ದೆ, ಆಗ ಅವರು ಹೇಳಿದರು ಇದರಿಂದ ನಿಮಗೆ ಸಮಸ್ಯೆಯಾಗಲ್ಲ ಆರ್ಥಿಕ ಹಿಂದುಳಿದ ಪ್ರವರ್ಗದಡಿ ಮೀಸಲಾತಿ ಸಿಗಲಿದೆ ಅಂದರು. ಆದರೆ ಇದನ್ನು ನಾವು ಒಪ್ಪುವುದಿಲ್ಲ ಎಂದು ಶಾಫಿ ಸಅದಿ ಹೇಳಿದ್ದಾರೆ.
ಇದನ್ನೂ ಓದಿ: ಪಿಂಜಾರ, ನದಾಫ್, ಚಪ್ಪರ ಬಂದ್ ಸೇರಿ 13 ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿ ಸರ್ಕಾರ ಆದೇಶ
ಇದುವರೆಗೆ ಸಾಮಾಜಿಕವಾಗಿ ಹಿಂದುಳಿದ ಮೀಸಲಾತಿ ಸಿಗುತ್ತಿತ್ತು. ಆದರೆ ಈಗ ಮುಸ್ಲಿಂರಿಗೆ ಅನ್ಯಾಯವಾಗುತ್ತೆ. ನಮ್ಮಲ್ಲಿ ಜಾತಿ ಪದ್ಧತಿಯಿಲ್ಲ. ಮುಸ್ಲಿಂರು ಸಾಮಾಜಿಕವಾಗಿ ಹಿಂದುಳಿದವರು. ಮಾಜಿ ಮುಖ್ಯಮಂತ್ರಿ ದಿವಂಗತ ವೀರಪ್ಪ ಮೊಯ್ಲಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಅವಧಿಯಲ್ಲಿ ಈ ಕಾಯ್ದೆ ಬಂದಿತ್ತು ಎಂದು ತಿಳಸಿದರು.
ಪ್ರಬಲ ವರ್ಗಗಳಿಗೆ ಮೀಸಲಾತಿ ಹಂಚಿದ ಸರ್ಕಾರ
ಮುಸ್ಲಿಮರು ಈ ಹಿಂದೆ ರಾಜ್ಯದಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) 2B ಗುಂಪಿನ ಅಡಿಯಲ್ಲಿದ್ದರು. ಇದರಿಂದ ಈ ಸಮುದಾಯಕ್ಕೆ ಶೇ 4 ರಷ್ಟು ಮೀಸಲಿತ್ತು. ಪ್ರವರ್ಗ 2 ಬಿಯಲ್ಲಿರುವ ಮುಸ್ಲಿಮರನ್ನು ಇಡ್ಲೂಎಸ್ಗೆ ಸೇರಿಸಿ, 2ಬಿಯಲ್ಲಿರುವ ಶೇ 4ರಷ್ಟು ಮೀಸಲಾತಿಯನ್ನು ಪ್ರಬಲ ವರ್ಗಗಳಾದ ಒಕ್ಕಲಿಗರಿಗೆ ಹಾಗೂ ವೀರಶೈವ ಲಿಂಗಾಯತರಿಗೆ ತಲಾ ಎರಡು ಪ್ರತಿಶತದಷ್ಟು ಸರ್ಕಾರ ಹಂಚಿಕೆ ಮಾಡಿದೆ.
ಏನಿದು ಇಡಬ್ಲ್ಯೂಎಸ್ ಕೋಟಾ?
ಸಮಾಜದ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡುವ ಉದ್ದೇಶದಿಂದ 2019ರಲ್ಲಿ ಇಡಬ್ಲ್ಯೂಎಸ್ ಕೋಟಾವನ್ನು ಸರ್ಕಾರ ಜಾರಿಗೆ ತಂದಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ (ಎಸ್‌ಇಬಿಸಿ) ಶೇ 50ರಷ್ಟು ಮೀಸಲಾತಿಯ ಹಾಲಿ ವ್ಯವಸ್ಥೆಯಿಂದ ಹೊರತಾಗಿರುವವರಿಗೆ ಈ ಶೇ 10ರಷ್ಟು ಮೀಸಲಾತಿ ಅನ್ವಯವಾಗುತ್ತದೆ.
ಇಡಬ್ಲ್ಯೂಎಸ್‌ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಮೀಸಲಾತಿ ನೀಡಲು ಅವಕಾಶ ಒದಗಿಸುವ ಸಂವಿಧಾನ (103ನೇ ತಿದ್ದಪಡಿ) ಕಾಯ್ದೆ 2019ಕ್ಕೆ ಸಂಸತ್‌ನಲ್ಲಿ ಅಂಗೀಕಾರ ದೊರೆತಿತ್ತು. ಸಂವಿಧಾನಕ್ಕೆ ಹೊಸದಾಗಿ ಸೇರ್ಪಡೆ ಮಾಡಲಾದ 15 (6) ವಿಧಿ ಮತ್ತು 16 (6) ವಿಧಿಗಳು, ರಾಜ್ಯ ಸರ್ಕಾರಿ ಉದ್ಯೋಗ ಹಾಗೂ ರಾಜ್ಯ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಇಡಬ್ಲ್ಯೂಎಸ್‌ಗೆ ಮೀಸಲಾತಿ ನೀಡಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶವನ್ನು ರಾಜ್ಯ ಸರ್ಕಾರಗಳಿಗೆ ನೀಡುತ್ತವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ