
ಬೆಂಗಳೂರು, ಅಕ್ಟೋಬರ್ 20: ಮಕ್ಕಳ ಕೈಗೆ ಮೋಟಾರು ವಾಹನಗಳನ್ನು ನೀಡುವುದಕ್ಕೆ ಅದು ಆಟಿಕೆಯಲ್ಲ ಮತ್ತು ಸಾರ್ವಜನಿಕ ರಸ್ತೆಗಳು ಆಟದ ಮೈದಾನವಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಮೈಸೂರಿನಲ್ಲಿ 14 ವರ್ಷದ ಬಾಲಕನೋರ್ವ ಕಾರು ಚಲಾಯಿಸಿ ನಡೆಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದ ಪ್ರಕರಣದಲ್ಲಿ, ಅಪರಾಧ ಮುಕ್ತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿದೆ. ಅಲ್ಲದೆ, ಆರೋಪಿ ಬಾಲಕನ ತಂದೆಯ ವಿರುದ್ಧದ ಉದ್ದೇಶಪೂರ್ವಕವಲ್ಲದ ನರಹತ್ಯೆ (Culpable Homicide) ಆರೋಪದ ವಿಚಾರಣೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
2020ರ ಡಿಸೆಂಬರ್‌ನಲ್ಲಿ ಹಳೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಡೆದ ಈ ದುರ್ಘಟನೆಯಲ್ಲಿ ದಂಪತಿ ಹಾಗೂ ಅವರ 5 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತ ನಡೆಸಿದ ವೋಕ್ಸ್‌ವ್ಯಾಗನ್ ವೆಂಟೋ ಕಾರನ್ನು ಅರ್ಜಿದಾರ ನದೀಮ್-ಉರ್-ರೆಹಮಾನ್ ಅವರ ಮಾಲೀಕರು ಅವರಿಗೆ ನೀಡಿದ್ದರು. ತನಗೆ ಅರಿವಿಲ್ಲದಂತೆ ಮಗ ಆ ಕಾರನ್ನು ತೆಗೆದುಕೊಂಡು ಹೋಗಿದ್ದಾನೆಂದು ನದೀಮ್ ಹೇಳಿದ್ದರು. ಹೀಗಾಗಿ ಇದು ಉದ್ದೇಶಪೂರ್ವಕವಲ್ಲದ ನರಹತ್ಯೆಯೆಂದು ಪರಿಗಣಿಸಿ ದೋಷಾರೋಪ ಪಟ್ಟಿ ರದ್ದುಪಡಿಸಬೇಕೆಂದು ಅರ್ಜಿದಾರರಪರ ವಕೀಲರು ವಾದಿಸಿದ್ದರು. ಆದರೆ ಈ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಕಷ್ಟ ಬಂದಾಗ ಮಗನ ಅಪ್ರಾಪ್ತತೆಯ ಸಬೂಬು ಹೇಳಿ ಪೋಷಕರು ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರರು ತಾವೇ ಮಗನಿಗೆ ಗಾಡಿಯ ಕೀ ಕೊಟ್ಟು ಕಳುಹಿಸಿರುವುದು ದೋಷಾರೋಪ ಪಟ್ಟಿಯಲ್ಲಿ ಸಾಬೀತಾಗಿದೆ. ಪೋಷಕರು ಸ್ವಇಚ್ಛೆಯಿಂದ ವಾಹನದ ಕೀಗಳನ್ನು ಅಪ್ರಾಪ್ತರಿಗೆ ನೀಡಿದಾಗ ಸಂಭವಿಸುವ ದುರಂತಗಳಿಗೆ ಅವರೇ ಹೊಣೆಯಾಗಬೇಕಾಗುತ್ತದೆ. ಇದು ಕೇವಲ ನಿರ್ಲಕ್ಷ್ಯವೇ ಅಥವಾ ಕುಕೃತ್ಯವೇ ಎಂಬುದು ವಿಚಾರಣೆಯ ಹಂತದಲ್ಲಿ ನಿರ್ಧಾರವಾಗಲಿದೆ ಎಂದು ಕೋರ್ಟ್ ತಿಳಿಸಿದೆ. ಕರ್ನಾಟಕದಲ್ಲಿ ಅಪ್ರಾಪ್ತರು ನಡೆಸುವ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, 2025-26ರಲ್ಲಿ ರಾಜ್ಯದಲ್ಲಿ ಅಪ್ರಾಪ್ತರಿಂದಲೇ 751 ಅಪಘಾತಗಳು ಸಂಭವಿಸಿವೆ ಎಂದು ಕಳವಳ ವ್ಯಕ್ತಪಡಿಸಿದೆ. ಈ ಕಠಿಣ ಆದೇಶದ ಮೂಲಕ ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡುವ ಪೋಷಕರಿಗೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ