ಬೆಂಗಳೂರು: ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ರದ್ದು ವಿಚಾರಕ್ಕೆ ಸಂಬಂಧಿಸಿ ಎಸಿಬಿ ರಚನೆ ಪ್ರಶ್ನಿಸಿದ್ದ ಪಿಐಎಲ್ ಸಂಬಂಧ ಇಂದು ತೀರ್ಪು ಪ್ರಕಟಗೊಂಡಿದೆ. ಹೈಕೋರ್ಟ್ ಎಸಿಬಿ ರಚನೆ ಆದೇಶ ರದ್ದುಪಡಿಸಿದೆ. ಎಸಿಬಿಗೆ ಪೊಲೀಸ್ ಠಾಣೆ ಸ್ಥಾನಮಾನವನ್ನು ರದ್ದುಪಡಿಸಿ ನ್ಯಾ.ಬಿ.ವೀರಪ್ಪ, ನ್ಯಾ.ಕೆ.ಎಸ್.ಹೇಮಲೇಖಾರವರಿದ್ದ ಪೀಠ ತೀರ್ಪು ನೀಡಿದೆ. ಎಸಿಬಿ ಲೋಕಾಯುಕ್ತ ವ್ಯಾಪ್ತಿಗೆ ನೀಡಿ ಆದೇಶ ಹೊರಡಿಸಿದೆ.
ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಮತ್ತೆ ಲೋಕಾಯುಕ್ತಕ್ಕೆ ಹೆಚ್ಚಿನ ಬಲ ಬಂದಿದೆ. 2016 ರಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ತೆಗೆದು ಎಸಿಬಿ ರಚಿಸಿದ್ದ ಸಿದ್ದರಾಮಯ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಲೋಕಾಯುಕ್ತ ಪೊಲೀಸ್ ಠಾಣೆಗೆ ಮರುಜೀವ ನೀಡಿ ಇವತ್ತು ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ.
ಅಂತೂ ಇಂತೂ ರಾಜ್ಯದಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರಕ್ಕೆ ಮತ್ತೆ ಕಡಿವಾಣ ಬೀಳುವ ನಿರೀಕ್ಷೆ ಶುರುವಾಗಿದೆ. 2016 ರಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ರದ್ದುಪಡಿಸಿ ಎಸಿಬಿ ರಚಿಸಿದ್ದ ಸಿದ್ದರಾಮಯ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. 2016 ರಲ್ಲಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ರವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಇಂದು ಮಹತ್ತ್ವದ ತೀರ್ಪು ನೀಡಿದೆ. ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ತೆಗೆದು ಎಸಿಬಿಗೆ ಪೊಲೀಸ್ ಠಾಣೆ ಸ್ಥಾನಮಾನ ನೀಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಇಷ್ಟು ದಿನ ಸರ್ಕಾರದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಸಿಬಿ ಅಧಿಕಾರಿಗಳು ಇನ್ನು ಮುಂದೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬಾಕಿ ಇರುವ ತನಿಖೆಯನ್ನೂ ಲೋಕಾಯುಕ್ತ ಪೊಲೀಸರೇ ಮುಂದುವರಿಸಲಿದ್ದಾರೆ. ಲೋಕಾಯುಕ್ತರ ನಿಗಾದಡಿ ಲೋಕಾಯುಕ್ತ ಪೊಲೀಸ್ ಠಾಣೆ ಇರುವುದರಿಂದ ಸರ್ಕಾರದ ಹಸ್ತಕ್ಷೇಪ ಕಡಿಮೆಯಾಗುವ ನಿರೀಕ್ಷೆ ಇದೆ.
ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಲೋಕಾಯುಕ್ತ, ಉಪಲೋಕಾಯುಕ್ತರ ನೇಮಕದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಜಾತಿ, ಧರ್ಮ, ಪಂಥಗಳ ಆಧಾರದಲ್ಲಿ ಲೋಕಾಯುಕ್ತ, ಉಪ ಲೋಕಾಯುಕ್ತರ ನೇಮಕ ಮಾಡದೇ ಅರ್ಹತೆಯ ಆಧಾರದಲ್ಲಿಯೇ ನೇಮಕ ಮಾಡಬೇಕೆಂದು ತಾಕೀತು ಮಾಡಿದೆ. ಲೋಕಾಯುಕ್ತ ವರದಿಗಳನ್ನು ತಿರಸ್ಕರಿಸುವ ಸರ್ಕಾರದ ಕ್ರಮಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಸಂಬಂಧ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಅಗತ್ಯವೆಂದು ಶಿಫಾರಸ್ಸು ಮಾಡಿದೆ. ಇನ್ನು ಲೋಕಾಯುಕ್ತ ಪೊಲೀಸ್ ಠಾಣೆಗೆ ನಿಯೋಜನೆಯಾಗುವ ಅಧಿಕಾರಿಗಳಿಗೆ ಕನಿಷ್ಟ 3 ವರ್ಷ ಸೇವಾವಧಿ ನಿಗದಿಪಡಿಸುವಂತೆಯೂ ನಿರ್ದೇಶನ ನೀಡಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ಕಿತ್ತುಕೊಂಡಿದ್ದರೆ, ಲೋಕಾಯುಕ್ತರಿಗೆ ಅಧಿಕಾರ ಕೊಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಉಲ್ಟಾ ಹೊಡೆದು ಎಸಿಬಿ ಸಮರ್ಥನೆ ಮಾಡಿಕೊಂಡಿತ್ತು. ಹೀಗೆ ರಾಜಕೀಯ ಪಕ್ಷಗಳ ನಿರ್ಲಕ್ಷಕ್ಕೆ ಗುರಿಯಾಗಿದ್ದ ಲೋಕಾಯುಕ್ತಕ್ಕೆ ಮತ್ತೆ ಬಲ ನೀಡುವ ಮೂಲಕ ಹೈಕೋರ್ಟ್ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬಿದೆ.
Published On - 3:15 pm, Thu, 11 August 22