ಪಿಎಸ್​​ಐ ನೇಮಕಾತಿ ಅಕ್ರಮ ಪ್ರಕರಣ: ಸ್ವತಂತ್ರ ಸಂಸ್ಥೆಯಿಂದ ಮರು ಪರೀಕ್ಷೆ ನಡೆಸಿ ಎಂದ ಹೈಕೋರ್ಟ್, ಹಾಗಾದರೆ ಇದುವರೆಗೂ ನಡೆದಿದ್ದೇನು?

|

Updated on: Nov 10, 2023 | 5:19 PM

PSI recruitment re-exam: ಹಗರಣದಲ್ಲಿ ತನಿಖಾ ಸಂಸ್ಥೆ ಸಿಐಡಿ ಸಲ್ಲಿಸಿದ್ದ ಚಾರ್ಜ್ ಶೀಟ್ ವಿಚಾರಣೆಯನ್ನು ನಡೆಸಿದ್ದ ರಾಜ್ಯ ಹೈಕೋರ್ಟ್​ ಇಂದು (ನ.10) ಮಹತ್ವದ ಆದೇಶ ನೀಡಿದೆ. ಪಿಎಸ್ಐ 545 ಹುದ್ದೆಗಳಿಗೆ ಮರುಪರೀಕ್ಷೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ. ಗಮನಾರ್ಹವೆಂದರೆ, ಇಲಾಖೆಯ ವತಿಯಿಂದ ಬೇಡ, ಸ್ವತಂತ್ರ ಸಂಸ್ಥೆಯಿಂದ ಪರೀಕ್ಷೆ ನಡೆಸಿ ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಹಾಗಾದರೆ ಆ ಅಕ್ರಮಗಳು ಹೇಗೆ ಮೊಳಕೆಯಡೆದವು, ಅದಕ್ಕೆ ನೀರೆರೆದವರು ಯಾರು, ಯಾರೆಲ್ಲಾ ಜೈಲುಪಾಲಾದರು, ಮುಂದೆ ಹೇಗೆ-ಎಂತು? ಎಂದು ನೋಡುವುದಾದರೆ...

ಪಿಎಸ್​​ಐ ನೇಮಕಾತಿ ಅಕ್ರಮ ಪ್ರಕರಣ: ಸ್ವತಂತ್ರ ಸಂಸ್ಥೆಯಿಂದ ಮರು ಪರೀಕ್ಷೆ ನಡೆಸಿ ಎಂದ ಹೈಕೋರ್ಟ್, ಹಾಗಾದರೆ ಇದುವರೆಗೂ ನಡೆದಿದ್ದೇನು?
ಸ್ವತಂತ್ರ ಸಂಸ್ಥೆಯಿಂದ PSI ಮರು ಪರೀಕ್ಷೆ ನಡೆಸಿ ಎಂದ ಹೈಕೋರ್ಟ್
Follow us on

ಬೆಂಗಳೂರು: ಅಂದಿನ ರಾಜ್ಯ ಪೊಲೀಸ್ ಮಹಾ ನಿರ್ದೇಶಕ, ನಿಸ್ಪೃಹ ಐಪಿಎಸ್​​ ಅಧಿಕಾರಿ ಅಜಯ್​ ಕುಮಾರ್​ ಸಿಂಗ್​ ಅವರ ಮುಂದಾಲೋಚನೆಯ ಫಲವಾಗಿ ರಾಜ್ಯ ಪೊಲೀಸ್​​ ಇಲಾಖೆಗೆ ನಡೆಯುವ ಕಾನ್ಸ್​​​​ಟೇಬಲ್ ಮತ್ತು ಪಿಎಸ್​​ಐ ನೇಮಕಾತಿಗಳಿಗೆ ಖಡಕ್​​ ಆಗಿ ಪರೀಕ್ಷೆಗಳನ್ನು ನಡೆಸುವ ವ್ಯವಸ್ಥೆ ಜಾರಿಗೆ ಬಂದಿತ್ತು. ಇಡೀ ರಾಷ್ಟ್ರಕ್ಕೆ ಮಾದರಿಯಾಗಿತ್ತು​​​​​ ಅವರ ಮಾರ್ಗದರ್ಶನದಲ್ಲಿ ಮೂಡಿಬಂದಿದ್ದ ಪರೀಕ್ಷಾ ರೂಪುರೇಷೆ. ಅರ್ಹ ಅಭ್ಯರ್ಥಿಗಳಿಗೆ ಕಿಂಚಿತ್ತೂ ಅನ್ಯಾಯವಾಗದಂತೆ, ಇಲಾಖೆಗೂ ಅರ್ಹ ಅಭ್ಯರ್ಥಿಗಳು ನೇಮಕವಾಗಲಿ ಎಂಬುದು ಅವರ ಉದಾತ್ತ ಚಿಂತನೆಯಾಗಿತ್ತು. ಅವರು ಅಧಿಕಾರವಾಧಿಯಲ್ಲಿ ಇದ್ದಷ್ಟು ಕಾಲ ಈ ಪೊಲೀಸ್​ ನೇಮಕಾತಿ ಪರೀಕ್ಷೆಗಳಲ್ಲಿ ಕಿಂಚಿತ್ತೂ ಲೋಪವಾಗಿರಲಿಲ್ಲ. ಅಷ್ಟರಮಟ್ಟಿಗೆ ಅವರ ಪ್ರಯತ್ನಗಳು ಫಲ ನೀಡಿದ್ದವು. ಆದರೆ ಅವರ ಅಧಿಕಾರಾವಧಿ ಬಳಿಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬಹಳಷ್ಟು ನೀರು ಹರಿದಿದೆ. ಆ ನೀರಿನಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ತೇಲಿಬಂದಿವೆ. ಅವು ಪೊಲೀಸ್​ ನೇಮಕಾತಿ ಪರೀಕ್ಷೆಗಳಲ್ಲಿ ಭ್ರಷ್ಟಾಚಾರಕ್ಕೆ ನೀರೆರೆದರೆ, ಅದಕ್ಕಿಂತ ಅಧ್ವಾನವಾಗಿ ಶಿಸ್ತಿನ ಇಲಾಖೆಗೆ ಸೇರುವುದಕ್ಕೂ ಮುನ್ನವೇ ಪರಮಭ್ರಷ್ಟ ರೀತಿಯಲ್ಲಿ ಅಕ್ರಮಗಳನ್ನು ಎಸಗಲು ಒಂದಷ್ಟು ಯುವ ಅಭ್ಯರ್ಥಿಗಳೇ ಟೊಂಕಕಟ್ಟಿ ನಿಂತರು. ಅಲ್ಲಿಗೆ, ಪೊಲೀಸ್​ ಪರೀಕ್ಷೆಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇರಬಾರದು ಎಂಬ ಡಾ. ಅಜಯ್​ ಕುಮಾರ್​ ಸಿಂಗ್​ ಅವರ ಆಶೋತ್ತರಗಳಿಗೆ ಎಳ್ಳುನೀರು ಬಿಡಲಾಯಿತು.

PSI recruitment re-exam: ಹಗರಣದಲ್ಲಿ ತನಿಖಾ ಸಂಸ್ಥೆ ಸಿಐಡಿ ಸಲ್ಲಿಸಿದ್ದ ಚಾರ್ಜ್ ಶೀಟ್ ವಿಚಾರಣೆಯನ್ನು ನಡೆಸಿದ್ದ ರಾಜ್ಯ ಹೈಕೋರ್ಟ್​ ಇಂದು (ನ.10) ಮಹತ್ವದ ಆದೇಶ ನೀಡಿದೆ. ಪಿಎಸ್ಐ 545 ಹುದ್ದೆಗಳಿಗೆ ಮರುಪರೀಕ್ಷೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ. ಗಮನಾರ್ಹವೆಂದರೆ, ಇಲಾಖೆಯ ವತಿಯಿಂದ ಬೇಡ, ಸ್ವತಂತ್ರ ಸಂಸ್ಥೆಯಿಂದ ಪರೀಕ್ಷೆ ನಡೆಸಿ ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಹಾಗಾದರೆ ಆ ಅಕ್ರಮಗಳು ಹೇಗೆ ಮೊಳಕೆಯಡೆದವು, ಅದಕ್ಕೆ ನೀರೆರೆದವರು ಯಾರು, ಯಾರೆಲ್ಲಾ ಜೈಲುಪಾಲಾದರು, ಮುಂದೆ ಹೇಗೆ-ಎಂತು? ಎಂದು ನೋಡುವುದಾದರೆ…

ಇದಕ್ಕೆ ಉದಾಹರಣೆಯಾಗಿ ನಿಲ್ಲುವ, ಇಡೀ ವ್ಯವಸ್ಥೆಯನ್ನೇ ಅಣಕ ಮಾಡುವಂತೆ 2021ರಲ್ಲಿ ನಡೆದ ಆ ಕರಾಳ ವಿದ್ಯಮಾನ ಎಲ್ಲರೂ ತಲೆತಗ್ಗಿಸುವಂತೆ ಮಾಡಿತ್ತು. ಆ ವರ್ಷ ನಡೆದ 545 ಪಿಎಸ್ಐ ನೇಮಕಾತಿ ಪರೀಕ್ಷೆ ಇಡೀ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿ ಉಳಿದುಬಿಟ್ಟಿದೆ. ಇಡೀ ರಾಜ್ಯದ ಮಾನವನ್ನು ಹರಾಜು ಹಾಕುವಂತೆ, ಕಾಲಮಾನಕ್ಕೆ ತಕ್ಕಂತೆ ಅತ್ಯಾಧುನಿಕ ಗ್ಯಾಜೆಟ್​​ಗಳನ್ನು ಬಳಸಿಕೊಂಡು ಕಂಡೂಕೇಳರಿಯದ ರೀತಿ ಅಕ್ರಮಗಳನ್ನು ಎಸಗಲಾಯಿತು. 80-90ರ ದಶಕದಲ್ಲಿ ಅತ್ಯಂತ ದಿಟ್ಟ ಪೊಲೀಸ್​ ಅಧಿಕಾರಿಗಳನ್ನು ಕಂಡಿದ್ದ ನಮ್ಮ ರಾಜ್ಯದಲ್ಲಿ ಕರ್ನಾಟಕ ಪೊಲೀಸ್​ ಅಂದರೆ ಇಡೀ ದೇಶವೇ ಎದ್ದುನಿಂತು ಪೊಲೀಸ್​ ಸೆಲ್ಯೂಟ್​ ಹೊಡೆಯುವಂತಾಗಿತ್ತು. ಆದರೆ 2021 ಪರೀಕ್ಷಾ ಅಭ್ಯರ್ಥಿಗಳ ಪೈಕಿ ಕೆಲವರು ಇಡೀ ದೇಶದ ಮುಂದೆ ತಲೆತಗ್ಗಿಸುವಂತೆ ರಂಗೋಲಿ ಕೆಳಗೆ ನುಗ್ಗಿ ಅಕ್ರಮಗಳನ್ನು ಎಸಗಿದರು. ಇದಕ್ಕೆ ಸಾಥ್​ ನೀಡಿದ್ದು ಮನೆಯ ಯಜಮಾನನಂತಿದ್ದ, ಆ ಪರೀಕ್ಷೆಯ ಉಸ್ತುವಾರಿ ವಹಿಸಿದ್ದ ಐಪಿಎಸ್ ಮಟ್ಟದ ಅಧಿಕಾರಿಯೇ ಜೈಲು ಸೇರಿದ್ದು ಇಡೀ ವ್ಯವಸ್ಥೆಯನ್ನು ನೋಡಿ ಗಹಗಹಿಸುವಂತೆ ಮಾಡಿತ್ತು.

ಈ ಮಧ್ಯೆ, ಚಾರ್ಜ್ ಶೀಟ್ ವಿಚಾರಣೆ ಮುಂದವರಿದು ಇಂದು ನವೆಂಬರ್​ 10ರಂದು ರಾಜ್ಯ ಹೈಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ. ಪಿಎಸ್ಐ 545 ಹುದ್ದೆಗಳಿಗೆ ಮರುಪರೀಕ್ಷೆಗೆ ಹೈಕೋರ್ಟ್ ಆದೇಶ ನೀಡಿದೆ. ಗಮನಾರ್ಹವೆಂದರೆ, ಇಲಾಖೆಯ ವತಿಯಿಂದ ಬೇಡ, ಸ್ವತಂತ್ರ ಸಂಸ್ಥೆಯಿಂದ ಪರೀಕ್ಷೆ ನಡೆಸಿ ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.

ಹಾಗಾದರೆ ಆ ಅಕ್ರಮಗಳು ಹೇಗೆ ಮೊಳಕೆಯಡೆದವು, ಅದಕ್ಕೆ ನೀರೆರೆದವರು ಯಾರು, ಯಾರೆಲ್ಲಾ ಜೈಲುಪಾಲಾದರು, ಮುಂದೆ ಹೇಗೆ-ಎಂತು? ಎಂದು ನೋಡುವುದಾದರೆ…

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಟೈಮ್ ಲೈನ್ ನೋಡುವುದಾದರೆ 2021, ಜನವರಿ 21 ರಂದು ಕರ್ನಾಟಕ ಪೊಲೀಸ್‌ ಇಲಾಖೆಯಿಂದ 545 ಪಿಎಸ್ಐ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ನಡೆಸುವುದಕ್ಕೆ ಅಧಿಕೃತ ಪ್ರಕಟಣೆ ಹೊರಬಿತ್ತು. ಅಲ್ಲಿಂದಾಚೆಗೆ ನಡೆದ ವಿದ್ಯಮಾನಗಳನ್ನು ನೋಡಿದರೆ ಈ ಪರೀಕ್ಷೆಗಳಲ್ಲಿ ಅಕ್ರಮ ನಡೆಸಲೆಬೇಕು ಎಂದು ಒಂದಷ್ಟು ಮಂದಿ ಅಭ್ಯರ್ಥಿಗಳು, ದಲ್ಲಾಳಿಗಳು ಮತ್ತು ಅದಕ್ಕೆ ನೀರೆರೆಯಲು ಉನ್ನತಮಟ್ಟದ ಅಧಿಕಾರಿಗಳು ಬಹುಶಃ ಈ ಅಧಿಕೃತ ಪ್ರಕಟಣೆ ಹೊರಬೀಳುವುದಕ್ಕೂ ಮುನ್ನವೇ ತಮ್ಮ ತಯಾರಿಗಳನ್ನು ಮಾಡಿಕೊಂಡಿದ್ದರಾ? ಎಂಬ ಅನುಮಾನ ಬಲವಾಗಿ ಕಾಡುತ್ತದೆ.

ಮುಂದೆ 2021, ಅಕ್ಟೋಬರ್‌ 3ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಪಿಎಸ್‌ಐ ನೇಮಕಾತಿಯ ಲಿಖಿತ ಪರೀಕ್ಷೆ ನಡೆಯಿತು. ಅಂದರೆ ಈ 9 ತಿಂಗಳ ಅವಧಿಯಲ್ಲಿ ಒಂದು ಕಡೆ ಪ್ರಾಮಾಣಿಕ ಅಭ್ಯರ್ಥಿಗಳು ತಮ್ಮ ಇಡೀ ಜೀವಮಾನದ ಸಾಮರ್ಥ್ಯವನ್ನು ಪಣಕ್ಕಿಟ್ಟು ತಯಾರಿ ನಡೆಸಿ, ಅತ್ಯುತ್ಸಾಹದಿಂದ ಪರೀಕ್ಷೆಗಳನ್ನು ಬರೆದರು. ಇನ್ನೇನು ಡಿಪಾರ್ಟ್​​ಮೆಂಟ್​​ ಗೆ ಎಂಟ್ರಿ ಕೊಡುವುದೊಂದೇ ಬಾಕಿ ಎಂದು ಅನೇಕ ಅರ್ಹ ಅಭ್ಯರ್ಥಿಗಳು ಮಾನಸಿಕವಾಗಿ ಸಿದ್ಧವಾಗತೊಡಗಿದರು.​ ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ. ಬೆಲೂನಿಗೆ ಚಿಕ್ಕ ಸೂಜಿ ಮೊನೆ ತಾಕಿ ಠುಸ್ಸೆನ್ನುವಂತಾಗಿತ್ತು ಅವರ ಉತ್ಸಾಹ. ಜೊತೆಗೆ ಪೊಲೀಸ್​ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೂ ಗರಬಡಿದಂತಾಗಿತ್ತು ಆ ಪರೀಕ್ಷೆಗಳಲ್ಲಿ ನಡೆದಿದ್ದ ಕರಾಳ ಅಕ್ರಮಗಳು. ಚಿಕ್ಕ ಸೂಜಿ ಅಲ್ಲ; ದೊಡ್ಡ ಗಡಪಾರಿಯನ್ನೇ ಇಕ್ಕಿ ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡಿತ್ತು ಐಪಿಎಸ್ ಅಧಿಕಾರಿ ನೇತೃತ್ವದ​ ಆ ದುಷ್ಟಕೂಟ.

ಮೊದಲು ಅಭ್ಯರ್ಥಿಗಳ ಮೂಗಿಗೆ ಪರೀಕ್ಷಾ ಅಕ್ರಮದ ವಾಸನೆ ಬಡಿಯತೊಡಗಿತ್ತು. ನಾವು ಬರೆದಿದ್ದ ಪೊಲೀಸ್ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆಯಂತೆ ಎಂದು ಒಬ್ಬೊಬ್ಬರಾಗಿ, ಖಾಸಗಿಯಾಗಿ ಮಾತನಾಡಿಕೊಂಡರು. ಒಂದಷ್ಟು ಮಂದಿ ಧೈರ್ಯ ತಂದುಕೊಂಡು ಸ್ಥಳೀಯ ಮಟ್ಟದ ರಾಜಕಾರಣಿಗಳ ಕಿವಿಗೆ ಮಾಹಿತಿ ಹಾಕಿದರು. ಆದರೆ ಆಯಾ ಭಾಗದ ಕೆಲ ರಾಜಕಾರಣಿಗಳು ತಮ್ಮ ಶಕ್ತ್ಯಾನುಸಾರ ಈ ಅಕ್ರಮಗಳನ್ನು ಪೋಷಿಸಿದ್ದಾರೆ ಎಂಬುದು ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮನದಟ್ಟು ಆಗತೊಡಗಿತು. ತಡಮಾಡದೆ ಕೆಲ ಅಭ್ಯರ್ಥಿಗಳು 2022ರ ಜನವರಿ 1 ರಂದು ಪರೀಕ್ಷೆ ನಡೆದು ಸುಮಾರು ಮೂರು ತಿಂಗಳ ಬಳಿಕ ಇಲಾಖೆಯ ಸಾರಥ್ಯ ವಹಿಸಿದ್ದ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಅಕ್ರಮದ ಬಗ್ಗೆ ಸುಳಿವು ನೀಡಿದರು. ವಿಷಯ ತಿಳಿದು ಆಘಾತಗೊಂಡ ಸಚಿವ ಆರಗ ಜ್ಞಾನೇಂದ್ರರು ಹೌದಾ ಹೀಗೆಲ್ಲಾ ಕ್ರಮಗಳು ನಡೆದಿವೆಯಾ? ತನಿಖೆ ಮಾಡಿಸೋಣ ಎಂದು ಭರವಸೆಯ ಮಾತುಗಳನ್ನಾಡಿದರು.

ತಕ್ಷಣ, ತಮ್ಮ ನಂಬಿಕಸ್ಥ ಪೊಲೀಸ್ ಅಧಿಕಾರಿಗೆ ಫೋನ್ ಮಾಡಿ ಹೌದೇನ್ರೀ ಅಕ್ರಮಗಳು ನಡೆದಿವೆಯಂತೆ ಎಂದು ಅಮಾಯಕವಾಗಿ ಕೇಳಿದರು. ಅಷ್ಟೊತ್ತಿಗೆ​ ಅಕ್ರಮಗಳ ಹೆಣದ ವಾಸನೆ ಇಲಾಖೆಗೆ ಬಡಿದಾಗಿತ್ತು. ಬಿಗ್ ಬಾಸ್​​ ಹೇಳುತ್ತಿದ್ದಂತೆ ಇಲಾಖೆಯ ಟಾಪ್ ಬ್ರಾಸ್​​ ಅಧಿಕಾರಿಗಳು ತನಿಖೆಗೆ ಇಳಿದು ಪೋಸ್ಟ್​ಮಾರ್ಟಮ್​​​ ಕಾರ್ಯಕ್ಕೆ ಕೈಹಾಕಿದರು. ಈ ಮಧ್ಯೆ, 2022ರ ಜನವರಿ 18 ರಂದು 545 ಪಿಎಸ್‌ಐ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಅಧಿಕೃತವಾಗಿ ಪ್ರಕಟವೂ ಆಯಿತು. ಆದರೆ ಗೃಹ ಸಚಿವರ ಆಣತಿ ಮೇರೆಗೆ 2022ರ ಫೆಬ್ರವರಿ 7ರಂದು ತಾತ್ಕಾಲಿಕ ಆಯ್ಕೆ ಪಟ್ಟಿಗೆ ತಡೆ ನೀಡುವುದಾಗಿ ನೇಮಕಾತಿ ವಿಭಾಗದ ಎಡಿಐಜಿ ಅಧಿಕೃತವಾಗಿ ಹೇಳಿದರು. ಚೋದ್ಯವೆಂದರೆ ಕಳ್ಳಬೆಕ್ಕಿನಂತೆ ಕಣ್ಣುಮುಚ್ಚಿಕೊಂಡು ಹಾಲು ಕುಡಿದಿದ್ದ ಆ ಅಧಿಕಾರಿಯೇ ಇಡೀ ಅಕ್ರಮಗಳ ಸರದಾರ ಎಂಬುದು ಇಡೀ ನಾಡಿಗೆ ತಿಳಿಯಲು 4 ತಿಂಗಳು ಬೇಕಾಯಿತು.

ಈ ಮಧ್ಯೆ, ಪಿಎಸ್ಐ ನೇಮಕಾತಿ ಅಕ್ರಮದ ತನಿಖೆಯನ್ನು ಅಂದಿನ ಬಿಜೆಪಿ ಸರ್ಕಾರ 2022ರ ಏಪ್ರಿಲ್‌ 7 ರಂದು ಸಿಐಡಿ ಹೆಗಲಿಗೆ ಹಾಕಿ ಕೈತೊಳೆದುಕೊಂಡಿತು. 2022, ಏಪ್ರಿಲ್‌ 8 – ಕಲಬುರ್ಗಿ ನಗರ ಪೊಲೀಸ್‌ ಠಾಣೆಗೆ ಬೆಂಗಳೂರು ಸಿಐಡಿ ಇನ್‌ಸ್ಪೆಕ್ಟರ್ ಕೆ.ಎಚ್ ದಿಲೀಪ್‌ ಕುಮಾರ್‌ ಅವರು ದೂರು ನೀಡುವ ಮೂಲಕ ತನಿಖಾಶಾಸ್ತ್ರ ಚಾಲನೆ ಪಡೆಯಿತು. 2022, ಏಪ್ರಿಲ್‌ 9 ಕೆಲ ಅನಾಮಧೇಯ ಆರೋಪಿಗಳ ವಿರುದ್ಧ ಕಲಬುರ್ಗಿ ನಗರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ ದಾಖಲಾಯಿತು. ಮುಂದೆ ತನಿಖೆಯ ವೇಳೆ ಅತ್ಯಂತ ಕರಾಳ ಮುಖಗಳು, ವಿದ್ಯಮಾನಗಳು ಬೆಳಕಿಗೆ ಬಂದವು. ಅನೇಕ ಕರಾಳ ಅಭ್ಯರ್ಥಿಗಳು ಮತ್ತು ಅದಕ್ಕೆ ಎಡಿಜಿಪಿ, ಡಿವೈಎಸ್​​​ಪಿ ಮಟ್ಟದ ಅಧಿಕಾರಿಗಳೇ ರಂಗೋಲಿ ಕೆಳಗೆದೂರಿ ಸಾಥ್ ನೀಡಿದ್ದಾರೆ ಎಂಬುದು ರುಜುವಾಗತೊಡಗಿತು. ಆದರೆ ಕರ್ನಾಟಕ ಪೊಲೀಸ್ ವ್ಯವಸ್ಥೆಯ ಮಾನವನ್ನು ಎತ್ತಿಹಿಡಿಯುವುದಕ್ಕೆ ಟೊಂಕಕಟ್ಟಿ ನಿಂತಿದ್ದ ಸಿಐಡಿ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿ ಪ್ರದೇಶದಲ್ಲಿ ಪಾತಾಳ ಗರಡಿಯನ್ನೇ ಹಾಕಿ, ಅಕ್ರಮಕೋರರನ್ನು ಹಿಡಿದರು.

ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ 2022, ಏಪ್ರಿಲ್‌ 9 ರಂದು ಅಭ್ಯರ್ಥಿ ವೀರೇಶ್ ಎಂಬಾತನನ್ನು ಮೊದಲು ಬಂಧಿಸಲಾಯಿತು. ಅದಾದಮೇಲೆ 2022, ಏಪ್ರಿಲ್‌ 21 – ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿ ಐವರನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸುವುದಕ್ಕೆ ಸಿಐಡಿ ತನ್ನ ಬತ್ತಳಿಕೆಯಲ್ಲಿನ ಅಷ್ಟೂ ಪೊಲೀಸ್​ ಬುದ್ಧಿಯನ್ನು ಬಳಸಬೇಕಾಯ್ತು. ಅಷ್ಟರಮಟ್ಟಿಗೆ ದಿವ್ಯಾ ಹಾಗರಗಿ ಕಬಂದಬಾಹು ಹರಡಿಕೊಂಡಿತ್ತು.

ಆದರೆ ಅದಕ್ಕಿಂತ ಭಯಾನಕವಾದ ಆತಂಕಕಾರಿ ಸಂಗತಿಯೆಂದರೆ ಕೆಲ ಅಭ್ಯರ್ಥಿಗಳನ್ನು ಅಕ್ಷರಶಃ ಕೈಹಿಡಿದು ಅಕ್ರಮವೆಸಗುವುದಕ್ಕೆ ನೆರವಾದ ದೊಡ್ಡ ಕುಳಗಳು ಕಾರ್ಯಮಗ್ನರಾಗಿದ್ದರು. ಅವರನ್ನೂ ಹೆಡೆಮುರಿಗೆ ಕಟ್ಟಲಾಯಿತು. 2022, ಏಪ್ರಿಲ್‌ 22 ರಂದು ಅಫಜಲಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಾಂತೇಶ್‌ ಪಾಟೀಲನನ್ನು ಬಂಧಿಸಲಾಯಿತು‌. ಸರಿಯಾಗಿ ಆಗಲೇ ರಾಜಕೀಯ ಕೆಸರೆರಚಾಟ ಶುರುವಾಗಿದ್ದು. ಗುಲ್ಬರ್ಗ ಭಾಗದ ರಾಜಕಾರಣಿಗಳು ಅಕ್ರಮದಲ್ಲಿ ಇನ್ವಾಲ್ವ್​​ ಆಗಿದ್ದಾರೆ ಎಂಬ ಮಾತು ದಟ್ಟವಾಗಿ ಕೇಳಿಬಂದಿತು. ‌ಹೀಗೆ ಒಬ್ಬೊಬ್ಬರನ್ನಾಗಿ ಹೊಂಚುಹಾಕಿ ಪೊಲೀಸ್​ ಕೋಳ ತೊಡಿಸುವ ಕಾರ್ಯ ನಿರಂತರವಾಗಿ ನಡೆದಿತ್ತು.

ಅಲ್ಲಿಯವರೆಗೂ ಇಲಾಖೆಯ ಆಚೆ ಅಕ್ರಮಗಳನ್ನು ಎಸಗಿದ್ದವರನ್ನು ಬಂಧಿಸಲಾಯಿತು. ಮುಂದೆ ಮನೆಯ ಯಜಮಾನ ಪೊಲೀಸ್‌ ನೇಮಕಾತಿ ವಿಭಾಗದ ಎಜಿಡಿಪಿ ಅಮೃತ್‌ ಪೌಲ್‌ ಸಹ ಅಕ್ರಮದಲ್ಲಿ ಭಾಗಿ ಎಂಬುದು ಮೇಲ್ನೋಟಕ್ಕೆ ರುಜುವಾತಾಗುತ್ತಿದ್ದಂತೆ 2022, ಏಪ್ರಿಲ್‌ 27 ರಂದು ಅವರನ್ನು ವರ್ಗಾವಣೆ ಮಾಡಲಾಯಿತು. ಅದರೊಂದಿಗೆ ಪರೀಕ್ಷಾ ಅಕ್ರಮ ನಡೆದಿರುವುದು ಖಚಿತ ಎಂಬುದು ದೃಢಪಡುತ್ತಿದ್ದಂತೆ 2022, ಏಪ್ರಿಲ್‌ 29 ರಂದು ಪಿಎಸ್‌ಐ ನೇಮಕಾತಿ ಮರು ಪರೀಕ್ಷೆಗೆ ಅಂದಿನ ಸರ್ಕಾರ ನಿರ್ಧರಿಸಿತು.

ಆದರೆ ಇದನ್ನು ಒಪ್ಪದ ಕೆಲ ಅರ್ಹ ಅಭ್ಯರ್ಥಿಗಳು 2022, ಏಪ್ರಿಲ್‌ 30 ರಂದು ಮರು ಪರೀಕ್ಷೆ ನಿರ್ಧಾರ ಹಿಂಪಡೆಯಲು ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ದೌರ್ಭಾಗ್ಯವೆಂದರೆ ಹಾಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಪರೀಕ್ಷೆಗಳಲ್ಲಿ ಅಕ್ರಮ ಎಸಗಿದ ಅಗ್ರಗಣ್ಯರು ಎಂಬುದು ಸಾಬೀತಾಯಿತು. ಕೆಲ ಅಭ್ಯರ್ಥಿಗಳು ಅಕ್ರಮಗಳನ್ನು ಎಸಗಿ ರ್ಯಾಂಕುಗಳನ್ನು ಪಡೆದಿದ್ದರು. ಇದರಿಂದಾಗಿ ಸಿಐಡಿ ಅಧಿಕಾರಿಗಳು 2022ರ ಮೇ ತಿಂಗಳಲ್ಲಿ 400ಕ್ಕೂ ಹೆಚ್ಚು ಅಭ್ಯರ್ಥಿಗಳ ವಿಚಾರಣೆ ನಡೆಸಿದರು. ಮೇ 10 ರ ವೇಳೆಗೆ ನೇಮಕಾತಿ ವಿಭಾಗದಲ್ಲಿ ಕಾರ್ಯನಿರ್ವಹಿಸಿ, ಅಕ್ರಮವೆಸಗಿದ್ದ ನಾಲ್ವರು ಅಧಿಕಾರಿಗಳು ಸೇರಿ 6 ಮಂದಿಯನ್ನು ಸಿಐಡಿ ಪೊಲೀಸರು ಬಂಧಿಸಿದರು.

2022, ಮೇ 12 – ನೇಮಕಾತಿ ವಿಭಾಗದಲ್ಲಿ ಡಿವೈಎಸ್‌ಪಿ ಆಗಿದ್ದ ಶಾಂತಕುಮಾರ್‌ ಬಂಧನದೊಂದಿಗೆ ಐಪಿಎಸ್ ಲಿಂಕ್​​ ಬಹಿರಂಗವಾಗಿತ್ತು​​. 2022, ಮೇ 26 & 27 – ಸಿಐಡಿ ಅಧಿಕಾರಿಗಳಿಂದ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್‌ ಪೌಲ್‌ ವಿಚಾರಣೆ ನಡೆಯಿತು. 2022, ಜೂನ್‌ 1 – ಸಿಐಡಿ ಅಧಿಕಾರಿಗಳಿಂದ ಆರ್‌ಡಿ ಪಾಟೀಲ್‌ ಅಳಿಯ ಪ್ರಕಾಶ್‌ ಸೇರಿ ಮೂವರ ಬಂಧನವಾಗಿತ್ತು. 2022, ಜುಲೈ 4 ರಂದು ಸಿಐಡಿ ಅಧಿಕಾರಿಗಳು ಪೊಲೀಸ್‌ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್‌ ಪೌಲ್‌ ನನ್ನು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಬಿಟ್ಟುಬಂದರು. 2022 , ಜುಲೈ 27 ರಂದು ಒಂದನೇ ಎಸಿಎಂಎಂ ಕೋರ್ಟ್ ಗೆ 3065 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು.

545 ಪಿಎಸ್‌ಐಗಳ ನೇಮಕಾತಿಗಾಗಿ ಅಕ್ಟೋಬರ್ 3, 2021 ರಂದು 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ಒಟ್ಟು 54,289 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದ 52 ಅಭ್ಯರ್ಥಿಗಳು ಸೇರಿದಂತೆ ಹಗರಣಕ್ಕೆ ಸಂಬಂಧಿಸಿದಂತೆ 110 ಜನರನ್ನು ಬಂಧಿಸಲಾಗಿದೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಇದೇ ವೇಳೆ ಈ 52 ಅಭ್ಯರ್ಥಿಗಳು ಯಾವುದೇ ಪೊಲೀಸ್ ನೇಮಕಾತಿಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ. ಪರೀಕ್ಷೆಯಲ್ಲಿ ರಿಗ್ಲಿಂಗ್ ಮಾಡಿದ ಆರೋಪದ ಮೇಲೆ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಬಂಧನಕ್ಕೊಳಗಾಗಿದ್ದು ಕರ್ನಾಟಕದಲ್ಲಿ ಮೊದಲ ಬಾರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಎಡಿಜಿಪಿ ಶ್ರೇಣಿಯ ಅಧಿಕಾರಿಯೇ ಬಂಧಿಸಿದಂತಾಗಿಯಿತು. ಇದೀಗ ಎಡಿಜಿಪಿ ಅಮೃತ ಪಾಲ್​ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಈ ಮಧ್ಯೆ, ಚಾರ್ಜ್ ಶೀಟ್ ವಿಚಾರಣೆ ಮುಂದವರಿದು ಇಂದು ನವೆಂಬರ್​ 10ರಂದು ರಾಜ್ಯ ಹೈಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ. ಪಿಎಸ್ಐ (PSI) 545 ಹುದ್ದೆಗಳಿಗೆ ಮರುಪರೀಕ್ಷೆಗೆ (PSI Reexam) ಹೈಕೋರ್ಟ್ ಆದೇಶ ನೀಡಿದೆ. ಗಮನಾರ್ಹವೆಂದರೆ, ಇಲಾಖೆಯ ವತಿಯಿಂದ ಬೇಡ, ಸ್ವತಂತ್ರ ಸಂಸ್ಥೆಯಿಂದ ಪರೀಕ್ಷೆ ನಡೆಸಿ ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.

ಇದರೊಂದಿಗೆ, ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ನೇಮಕಾತಿ ಸಂಬಂಧದ ಅಧಿಸೂಚನೆಯನ್ನು ರದ್ದುಪಡಿಸಿ, ನೂತನವಾಗಿ ಪರೀಕ್ಷೆ ನಡೆಸಲು ಹಿಂದಿನ ಸರ್ಕಾರದ ಕ್ರಮವನ್ನು ನ್ಯಾಯಾದೀಶ ಪಿ.ಎಸ್. ದಿನೇಶ್ ಕುಮಾರ್, ಟಿ.ಜಿ. ಶಿವಶಂಕರೇಗೌಡ ಅವರ ನ್ಯಾಯಪೀಠ ಎತ್ತಿಹಿಡಿದಿದೆ.

Published On - 4:05 pm, Fri, 10 November 23