
ಬೆಂಗಳೂರು, ನವೆಂಬರ್ 27: IPC ಸೆಕ್ಷನ್ 498ಎ (ಮದುವೆಯಾದ ಮಹಿಳೆಯ ಮೇಲಿನ ಕ್ರೌರ್ಯ ಮತ್ತು ಹಿಂಸೆ)ಯಲ್ಲಿ ಬಳಸಿರುವ ಗಂಡ ಎಂಬ ಪದವು ಕೇವಲ ಕಾನೂನುಬದ್ಧವಾಗಿ ಮಾನ್ಯವಾದ ವಿವಾಹ ಸಂಬಂಧಕ್ಕೆ ಮಾತ್ರ ಸೀಮಿತವಲ್ಲ, ಬದಲಾಗಿ ಲಿವ್-ಇನ್ ರಿಲೇಷನ್ಶಿಪ್ಗಳಿಗೂ ಅನ್ವಯಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇತ್ತೀಚಿನ ದಿನಗಳಲ್ಲಿ ಲಿವ್-ಇನ್ ಸಂಬಂಧಗಳು ಹೆಚ್ಚಾಗುತ್ತಿರುವ ನಡುವೆ ಹೈಕೋರ್ಟ್ನ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಪ್ರಕರಣವೊಂದರ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ಅಂಶವನ್ನು ಉಲ್ಲೇಖಿಸಿದ್ದು, ವಿವಾಹದ ಸ್ವರೂಪದ ಸಂಬಂಧಗಳಿಗೂ ಕ್ರೌರ್ಯದ ವಿಚಾರದಲ್ಲಿ IPC ಸೆಕ್ಷನ್ 498ಎ ಅನ್ವಯವಾಗಲಿದೆ ಎಂದು ತಿಳಿಸಿದೆ. ಅಲ್ಲದೆ ಈ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನ ನ್ಯಾಯಮೂರ್ತಿ ಸೂರಜ್ ಗೋವಿಂದ್ರಾಜ್ ವಜಾಗೊಳಿಸಿದ್ದಾರೆ. ದೂರುದಾರೆಯೊಂದಿಗೆ ಅರ್ಜಿದಾರನ ವಿವಾಹ ಕಾನೂನಾತ್ಮಕವಾಗಿ ಅಮಾನ್ಯವಾಗಿರುವುದರಿಂದ, 498ಎ ಅನ್ವಯಿಸದು ಎಂದು ಶಿವಮೊಗ್ಗ ಮೂಲದ ಅರ್ಜಿದಾರರ ಪರವಾಗಿ ವಕೀಲರು ವಾದಿಸಿದ್ದರು. ಅರ್ಜಿದಾರ ಈಗಾಗಲೇ ವಿವಾಹಿತನಾಗಿರುವುದರಿಂದ, ಆತ ದೂರುದಾರೆಯ ಗಂಡ ಎಂದು ಪರಿಗಣಿಸಲಾಗದು. ಹೀಗಾಗಿ 498ಎ ಅಡಿಯಲ್ಲಿ ಪ್ರಕರಣ ದಾಖಲಿಸುವಂತಿಲ್ಲ ಎಂದು ವಾದಿಸಿದ್ದರು.
ಇದನ್ನೂ ಓದಿ: ಆಧಾರ್ ಹೊಂದಿರುವ ಒಳನುಸುಳುಕೋರರನ್ನು ಮತದಾರರೆಂದು ಪರಿಗಣಿಸಬೇಕೆ?; ಸುಪ್ರೀಂ
ಆದರೆ ಅರ್ಜಿದಾರರ ಪರ ವಕೀಲರ ವಾದ ಒಪ್ಪದ ನ್ಯಾಯಾಲಯ, ತನ್ನ ಮೊದಲ ವಿವಾಹವನ್ನು ಮರೆಮಾಚಿ ದೂರುದಾರೆ ಜೊತೆಗೆ ಮದುವೆ ಸ್ವರೂಪದ ಸಂಬಂಧ ಇಟ್ಟುಕೊಂಡಿದ್ದಾರೆ. ಅಲ್ಲದೆ ಮೊದಲೇ ಬೇರೊಬ್ಬಳ ಜೊತೆ ಮದುವೆಯಾಗಿ, ಒಂದು ಮಗುವನ್ನೂ ಹೊಂದಿದ್ದಾರೆ. ಹೀಗಿದ್ದರೂ ಆ ವಿಷಯ ಮರೆಮಾಚಿ ದೂರುದಾರೆಯ ಜೊತೆ ಮದುವೆಯಾಗಿ ವಾಸ ಮಾಡಿದ್ದಾರೆ. ಆಕೆಯ ಕುಟುಂಬದಿಂದ ಚಿನ್ನ, ಬೆಳ್ಳಿ ಮತ್ತು ನಗದು ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕವೂ ಹೆಚ್ಚಿನ ಬೇಡಿಕೆಗಳನ್ನು ಮಾಡಿ, ಹಿಂಸೆ ಹಾಗೂ ಕ್ರೌರ್ಯ ನಡೆಸಲಾಗಿದೆ. ಆಕೆ ಪ್ರಾಣ ತೆಗೆಯಲೂ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ. ಹೀಗಾಗಿ ಅರ್ಜಿದಾರರ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಸಂಬಂಧ ಕಾನೂನಾತ್ಮಕವಾಗಿಲ್ಲ ಎಂಬ ನೆಪದಲ್ಲಿ 498ಎಯಿಂದ ತಪ್ಪಿಸಿಕೊಳ್ಳುವುದು ಸಾಧ್ಯ ಎಂಬ ಸಂದೇಶ ಇದರಿಂದ ಹೊರಬರುತ್ತದೆ. ಅದು ನ್ಯಾಯಕ್ಕೆ ವಿರುದ್ಧ ಎಂದು ನ್ಯಾಯಾಲಯ ಸ್ಪಷ್ಟಪಡಿಸಿರೋದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:14 pm, Thu, 27 November 25