ವ್ಯಕ್ತಿ ಮೇಲೆ ರೌಡಿಶೀಟ್ ಕೇಸ್ ಓಪನ್ ಮಾಡುವ ಬಗ್ಗೆ ಪೊಲೀಸರಿಗೆ ಮಹತ್ವದ ಸಲಹೆ ನೀಡಿದ ಹೈಕೋರ್ಟ್​

ರೌಡಿಶೀಟ್ ತೆರೆಯುವ ಮುನ್ನ ವ್ಯಕ್ತಿಗಳ ವಿರುದ್ಧದ ಪ್ರಕರಣಗಳ ಇತ್ತೀಚಿನ ಸ್ಥಿತಿಗತಿಯನ್ನು ಕಡ್ಡಾಯವಾಗಿ ಪರಿಶೀಲನೆ ಮಾಡುವಂತೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಹಳೆಯ ಮಾಹಿತಿ ಆಧರಿಸಿ ರೌಡಿಶೀಟ್ ತೆರೆಯುವುದರಿಂದ ವ್ಯಕ್ತಿಯ ಘನತೆ, ಉದ್ಯೋಗ ಮತ್ತು ಸಾಮಾಜಿಕ ಸ್ಥಾನಮಾನಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ವ್ಯಕ್ತಿ ಮೇಲೆ ರೌಡಿಶೀಟ್ ಕೇಸ್ ಓಪನ್ ಮಾಡುವ ಬಗ್ಗೆ ಪೊಲೀಸರಿಗೆ ಮಹತ್ವದ ಸಲಹೆ ನೀಡಿದ ಹೈಕೋರ್ಟ್​
ಕರ್ನಾಟಕ ಹೈಕೋರ್ಟ್
Edited By:

Updated on: Oct 23, 2026 | 10:48 PM

ಮುಖ್ಯಾಂಶಗಳು

  • ರೌಡಿಶೀಟ್ ತೆರೆಯುವ ಮುನ್ನ ಪ್ರಕರಣಗಳ ಸ್ಥಿತಿಗತಿ ಪರಿಶೀಲಿಸಿ
  • ಆಡಳಿತಾತ್ಮಕ ಸೂಚನೆ ನೀಡಲು ಡಿಜಿ&ಐಜಿಪಿಗೆ ಹೈಕೋರ್ಟ್ ಸೂಚನೆ
  • ಹಳೆಯ ಮಾಹಿತಿಗಳನ್ನು ಆಧರಿಸಿ ರೌಡಿಶೀಟ್ ತೆರೆಯಬಾರದು

ಬೆಂಗಳೂರು, ಅಕ್ಟೋಬರ್​​ 23: ವ್ಯಕ್ತಿಗಳ ವಿರುದ್ಧ ರೌಡಿಶೀಟ್ ತೆರೆಯುವ ಅಥವಾ ಮುಂದುವರೆಸುವ ನಿಟ್ಟಿನಲ್ಲಿ ನೋಟಿಸ್​ ಜಾರಿಗೊಳಿಸುವ ಮುನ್ನ ಅವರ ವಿರುದ್ಧದ ಕ್ರಿಮಿನಲ್​​ ಪ್ರಕರಣಗಳ ಸ್ಥಿತಿಗತಿ ಪರಿಶೀಲಿಸುವಂತೆ ನ್ಯಾ.ಸೂರಜ್ ಗೋವಿಂದರಾಜ್​ರಿದ್ದ ಹೈಕೋರ್ಟ್ ಪೀಠ ಶುಕ್ರವಾರ ಮಹತ್ವದ ಆದೇಶ ಹೊರಡಿಸಿದೆ. ಆಡಳಿತಾತ್ಮಕ ಸೂಚನೆ ನೀಡಲು ಡಿಜಿ ಮತ್ತು ಐಜಿಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಹಳೆಯ ಮಾಹಿತಿಗಳನ್ನ ಆಧರಿಸಿ ರೌಡಿಶೀಟ್ ತೆರೆಯುವಂತಿಲ್ಲ

ವ್ಯಕ್ತಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ದತ್ತಾಂಶವನ್ನು ಪರಿಶೀಲಿಸಬೇಕು. ಹಳೆಯ ಮಾಹಿತಿಗಳನ್ನು ಆಧರಿಸಿ ರೌಡಿಶೀಟ್ ತೆರೆಯಬಾರದು ಎಂದು ಹೈಕೋರ್ಟ್ ತಿಳಿಸಿದೆ. ಪ್ರಕರಣಗಳ ಇತ್ತೀಚಿನ ಸ್ಥಿತಿಗತಿಯನ್ನು ಪರಿಶೀಲಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.

ರೌಡಿಶೀಟ್ ತೆರೆಯುವುದರಿಂದ ವ್ಯಕ್ತಿಯ ಗೌರವ, ಘನತೆ, ಉದ್ಯೋಗ ಹಾಗೂ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ವ್ಯಕ್ತಿಯ ಸಾಮಾಜಿಕ ಸ್ಥಾನಮಾನದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಸೋಶಿಯಲ್ ಮೀಡಿಯಾ ಪೋಸ್ಟ್ ಆಧರಿಸಿ ಏಕಾಏಕಿ ಬಂಧಿಸುವಂತಿಲ್ಲ: ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ಸೂಚನೆ

ವ್ಯಕ್ತಿಗಳ ವಿರುದ್ಧ ಬಾಕಿ ಇರುವ ಪ್ರಕರಣಗಳ ದತ್ತಾಂಶವನ್ನು ನೈಜ ಸಮಯದಲ್ಲಿ ನವೀಕರಿಸಬೇಕು. ಪ್ರಕರಣಗಳ ಪ್ರಸ್ತುತ ಸ್ಥಿತಿಗತಿಯನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ.

ಪ್ರಕರಣದ ಹಿನ್ನೆಲೆ 

ಆಂಥೋನಿ ಡೇವಿಡ್ ಜೆ ಅಲಿಯಾಸ್ ಕುಟ್ಟಿ (26) ಎಂಬಾತನ ವಿರುದ್ಧ ಎಫ್​​ಐಆರ್​​ ಇದೆ ಎಂಬ ಕಾರಣಕ್ಕೆ ರೌಡಿಶೀಟ್​​ನಲ್ಲಿ ಹೆಸರು ಸೇರಿಸುವುದಾಗಿ ಜುಲೈ 16ರಂದು ನೋಟಿಸ್​ ಬಂದಿತ್ತು. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ವಿರುದ್ಧ ರೌಡಿಶೀಟ್ ತೆರೆಯಲು ನೀಡಲಾಗಿದ್ದ ನೋಟಿಸ್ ಅನ್ನು 2024ರ ಜುಲೈ 22ರಲ್ಲೇ ಹೈಕೋರ್ಟ್ ರದ್ದುಗೊಳಿಸಿತ್ತು. ಅಲ್ಲದೆ, ಅದೇ ಪ್ರಕರಣಕ್ಕೆ ಸಂಬಂಧಿಸಿದ ಕ್ರಿಮಿನಲ್ ವಿಚಾರಣೆಯಲ್ಲಿ 2025ರ ಜುಲೈ 10ರಂದು ತಾನು ಖುಲಾಸೆಗೊಂಡಿರುವುದನ್ನೂ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಇದನ್ನೂ ಓದಿ: SIR ಫಾರಂ 7 ವಿವಾದ: ಬಿಜೆಪಿ ಮುಖಂಡರ ವಿರುದ್ಧ ದಾಖಲಾಗಿದ್ದ ಎಫ್ಐಆರ್​ಗೆ ಹೈಕೋರ್ಟ್ ತಡೆ

ಅರ್ಜಿದಾರರ ವಾದವನ್ನು ಆಲಿಸಿದ ನ್ಯಾ.ಸೂರಜ್ ಗೋವಿಂದರಾಜ್​ರಿದ್ದ ಹೈಕೋರ್ಟ್ ಪೀಠ, ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಖುಲಾಸೆಗೊಂಡ ಬಳಿಕವು ರೌಡಿಶೀಟ್ ತೆರೆಯಲು ಅಥವಾ ಮುಂದುವರಿಸಲು ಯಾವುದೇ ವಾಸ್ತವಿಕ ಅಥವಾ ಕಾನೂನುಬದ್ಧ ಆಧಾರವಿಲ್ಲ ಎಂದು ಹೇಳಿದೆ. ಹೀಗಾಗಿ, ಅರ್ಜಿದಾರರ ವಿರುದ್ಧ ನೀಡಲಾಗಿದ್ದ ನೋಟಿಸ್ ಅನ್ನು ರದ್ದುಗೊಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us