AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SIR ಫಾರಂ 7 ವಿವಾದ: ಬಿಜೆಪಿ ಮುಖಂಡರ ವಿರುದ್ಧದ ಎಫ್ಐಆರ್​ಗೆ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್

ಎಸ್​ಐಆರ್​ ಫಾರಂ 7 ದುರುಪಯೋಗಪಡಿಸಿಕೊಂಡು ಮತದಾರರ ಡಿಲೀಟ್‌ ಆರೋಪ ಹಿನ್ನೆಲೆ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿದೆ. ಆದೇಶ ಕಾಯ್ದಿರಿಸಿದ ನ್ಯಾಯಾಲಯವು ಚುನಾವಣಾ ಆಯೋಗದ ಸಿಸಿಟಿವಿಯನ್ನು ಸಂರಕ್ಷಿಸಿಡಲು ಸೂಚಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ವಾದ, ಪ್ರತಿವಾದ ಸಂಪೂರ್ಣ ಮಾಹಿತಿ ಇಲ್ಲಿದೆ.

SIR ಫಾರಂ 7 ವಿವಾದ: ಬಿಜೆಪಿ ಮುಖಂಡರ ವಿರುದ್ಧದ ಎಫ್ಐಆರ್​ಗೆ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್
ಹೈಕೋರ್ಟ್Image Credit source: Getty images
ರಮೇಶ್​ ಎಮ್​.
| Edited By: |

Updated on:Oct 14, 2026 | 5:36 PM

Share

ಮುಖ್ಯಾಂಶಗಳು

  • ಎಸ್‌ಐಆರ್ ವೇಳೆ ತಪ್ಪು ಮಾಹಿತಿ ನೀಡಿ ಫಾರಂ 7 ಸಲ್ಲಿಕೆ ಆರೋಪ
  • ಎಫ್‌ಐಆರ್ ರದ್ದು ಕೋರಿ ವಸಂತಲಕ್ಷ್ಮೀ, ದೀಪಕ್ ಸಿಂಗ್ ಅರ್ಜಿ
  • ತನಿಖೆಗೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್

ಬೆಂಗಳೂರು, ಅಕ್ಟೋಬರ್​​​ 14: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಫಾರಂ 7 ದುರ್ಬಳಕೆ ಆರೋಪದ ಮೇಲೆ ಬಿಜೆಪಿ ಮುಖಂಡರ ಮೇಲೆ ದಾಖಲಾಗಿದ್ದ ಎಫ್​​​ಐಆರ್​​ಗೆ ಇತ್ತೀಚೆಗೆ ಹೈಕೋರ್ಟ್ ತಡೆ ನೀಡಿತ್ತು. ಇದೀಗ ಆದೇಶ ಕಾಯ್ದಿರಿಸಿ ತಡೆಯಾಜ್ಞೆಯನ್ನು ವಿಸ್ತರಿಸಲಾಗಿದ್ದು, ಚುನಾವಣಾ ಆಯೋಗದ ಸಿಸಿಟಿವಿ ಸಂರಕ್ಷಿಸುವಂತೆ ನ್ಯಾ. ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಪೀಠ ಸೂಚಿಸಿದೆ.

ತಡೆಯಾಜ್ಞೆ ತೆರವು ಕೋರಿ ಸರ್ಕಾರದ ಪರ ವಕೀಲರು ಮನವಿ

ಎಸ್‌ಐಆರ್ ವೇಳೆ ತಪ್ಪು ಮಾಹಿತಿ ನೀಡಿ ಫಾರಂ 7 ಸಲ್ಲಿಕೆ ಆರೋಪ ಹಿನ್ನೆಲೆ ಎಫ್‌ಐಆರ್​ ರದ್ದು ಕೋರಿ ಬಿಜೆಪಿ ಮುಖಂಡರಾದ ವಸಂತಲಕ್ಷ್ಮೀ ಮತ್ತು ದೀಪಕ್ ಸಿಂಗ್​​ ಇತ್ತೀಚೆಗೆ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ಮಾಡಿದ್ದ ಹೈಕೋರ್ಟ್, ಎಫ್‌ಐಆರ್​ಗೆ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆ ತೆರವು ಕೋರಿ ಸರ್ಕಾರದ ಪರ ವಕೀಲರು ಮನವಿ ಮಾಡಿದ್ದರು.

ಇದನ್ನೂ ಓದಿ: SIR ಫಾರಂ 7 ವಿವಾದ: ಬಿಜೆಪಿ ಮುಖಂಡರ ವಿರುದ್ಧ ದಾಖಲಾಗಿದ್ದ ಎಫ್ಐಆರ್​ಗೆ ಹೈಕೋರ್ಟ್ ತಡೆ

‘ಬಿಎಲ್‌ಎ ಹಾಗೂ ಬಿಎಲ್‌ಒಗಳ ಜೊತೆಗೂಡಿ ಮನೆಮನೆಗೆ ಹೋಗಿದ್ದಾರೆ. ಮನೆಯಲ್ಲಿರುವುದು ತಿಳಿದೂ ಅಲ್ಪಸಂಖ್ಯಾತರ ಮತಗಳನ್ನ ಮತಪಟ್ಟಿಯಿಂದ ಡಿಲೀಟ್​​ಗೆ ಅರ್ಜಿ ಸಲ್ಲಿಸಿದ್ದಾರೆ. ಎಲೆಕ್ಟ್ರಾನಿಕ್ ದಾಖಲೆಗಳ ನಾಶ ತಡೆಗೆ ತನಿಖೆ ಅಗತ್ಯ. ತನಿಖೆ ವೇಳೆ ಅರ್ಜಿದಾರರನ್ನು ಬಂಧಿಸುವುದಿಲ್ಲ. ಹೀಗಾಗಿ ತಡೆಯಾಜ್ಞೆ ತೆರವಿಗೆ’ ಎಜಿ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು.

ಹೈಕೋರ್ಟ್ ಸಾಲು ಸಾಲು ಪ್ರಶ್ನೆ

ಫಾರಂ ನಂ.7 ಸಲ್ಲಿಸಿದಾಗ ಆಕ್ಷೇಪಣೆಗೆ ಅವಕಾಶ ಕೊಡುವುದಿಲ್ಲವೇ ಎಂದು ಹೈಕೋರ್ಟ್ ಪ್ರಶ್ನಿಸಿದೆ. ದೇಶದೆಲ್ಲೆಡೆ ಎಸ್‌ಐಆರ್ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರತಿ ಮತದಾರರಿಗೂ ಜವಾಬ್ದಾರಿ ಇರುತ್ತದಲ್ಲವೇ? ಮತದಾರರು ಅಲ್ಲಿ ವಾಸಿಸುತ್ತಿದ್ದಾರಾ, ಇಲ್ವಾ ಯಾರು ತೀರ್ಮಾನಿಸುತ್ತಾರೆ? ಫಾರಂ ನಂ.7 ಬಗ್ಗೆ ಪೊಲೀಸರು ನಿರ್ಧರಿಸುತ್ತಾರಾ ಅಥವಾ ಕಾಯ್ದೆಯಲ್ಲಿರುವ ಅಧಿಕಾರಿಗಳು ನಿರ್ಧರಿಸುತ್ತಾರಾ ಎಂದು ಹೈಕೋರ್ಟ್ ಸಾಲು ಸಾಲು ಪ್ರಶ್ನೆ ಮಾಡಿದೆ.

LIVE TV

‘ವಿವಾಹ ನೋಂದಣಿಯಂತೆ ಪ್ರಕ್ರಿಯೆ ಅನುಸರಿಸಲಾಗುತ್ತಿದೆ. ಫಾರಂ 7 ಬಗ್ಗೆ ಕಚೇರಿಯಲ್ಲಿ ಅಂಟಿಸಲಾಗುತ್ತದೆ. ಬಹುತೇಕ ಸಂದರ್ಭದಲ್ಲಿ ಮತದಾರರಿಗೆ ಮಾಹಿತಿ ತಿಳಿಯುವುದಿಲ್ಲ. ಡಿಲೀಟ್ ಮಾಡುವ ಬಗ್ಗೆ ಅಧಿಕಾರಿಗಳಿಗೆ ವಿವೇಚನಾಧಿಕಾರವಿದೆ. ಆಕ್ಷೇಪಣೆ ಬಳಿಕ ಅಂಗೀಕರಿಸುವ, ತಿರಸ್ಕರಿಸುವ ವಿವೇಚನಾಧಿಕಾರವಿದೆ. ದುರುದ್ದೇಶದಿಂದ ಫಾರಂ 7 ನೀಡಿರುವ ಬಗ್ಗೆ ತನಿಖೆ ಅಗತ್ಯವಿದೆ’ ಎಂದು ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದಿಸಿದರು.

ವರದಿ ನೀಡುತ್ತೇವೆ, ಆಗ ಹೈಕೋರ್ಟ್ ತೀರ್ಮಾನಿಸಲಿ ಎಂದ ಎಜಿ 

ಈ ವೇಳೆ ಚುನಾವಣಾಧಿಕಾರಿ ತೀರ್ಮಾನಿಸಿದ ಬಳಿಕ ಕ್ರಮ ಕೈಗೊಳ್ಳಬಹುದಲ್ಲವೇ, ಪೊಲೀಸರಿಂದ ಸಮಾನಾಂತರ ತನಿಖೆ ಅಗತ್ಯವಿದೆಯೇ ಎಂದು ಸರ್ಕಾರಕ್ಕೆ ನ್ಯಾ. ಅನಂತ್ ರಾಮನಾಥ್ ಹೆಗ್ಡೆ ಪ್ರಶ್ನೆ ಮಾಡಿದರು. ಮತದಾರರನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಲಾಗುತ್ತಿದೆ. ಆಯೋಗ, ಪೊಲೀಸರ ವಿಚಾರಣೆಗಳ ವರದಿಯನ್ನು ಮುಂದಿಡುತ್ತೇವೆ. ಆಗ ಹೈಕೋರ್ಟ್ ಈ ಬಗ್ಗೆ ತೀರ್ಮಾನಿಸಲಿ ಎಂದು ಎಜಿ ವಾದಿಸಿದರು.

ಡಿಲೀಟ್ ಆದ ಮತದಾರರಿಗೂ ಮೇಲ್ಮನವಿಯ ಹಕ್ಕಿದೆ: ವಕೀಲ ವಿವೇಕ್ ರೆಡ್ಡಿ ವಾದ

ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್ ರೆಡ್ಡಿ ವಾದಿಸಿದ್ದು, ‘ಡಿಲೀಟ್ ಆದ ಮತದಾರರಿಗೂ ಮೇಲ್ಮನವಿಯ ಹಕ್ಕಿದೆ. ಎರಡು ಹಂತದ ಮೇಲ್ಮನವಿ ಸಲ್ಲಿಸಬಹುದು. ಈ ಹಂತದಲ್ಲೇ ಪೊಲೀಸ್ ದೂರು ನೀಡುವ ಅಗತ್ಯವಿಲ್ಲ’ ಎಂದರು. ಆದರೆ ವಿವೇಕ್ ರೆಡ್ಡಿ ವಾದಕ್ಕೆ ಎಜಿ ಶಶಿಕಿರಣ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದು, ಪಿಕ್‌ಪಾಕೆಟ್​​​ಗೆ ಆದರೂ ಪೊಲೀಸ್ ದೂರು ನೀಡಬಹುದು. ಮತದಾನದ ಹಕ್ಕು ಹರಣವಾದರೆ ದೂರು ನೀಡಲಾಗುವುದೆ’ ಎಂದು ಪ್ರಶ್ನಿಸಿದರು. ‘ಪಿಕ್​ಪಾಕೆಟ್​​ಗೆ ದೂರು ನೀಡುವುದು ಒಂದೇ ಮಾರ್ಗ, ಆದರೆ ಮತದಾರರ ಪಟ್ಟಿ ಬಗ್ಗೆ ಪರ್ಯಾಯ ಆಯ್ಕೆಗಳಿವೆ’ ಎಂದು ಈ ವೇಳೆ ಹೈಕೋರ್ಟ್ ಹೇಳಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:35 pm, Wed, 14 October 26

Follow Us
ರಮೇಶ್​ ಎಮ್​.
ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More