AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ; ವೈಭವ್ ಬಾರಿಸಿದ 28 ಸಿಕ್ಸರ್‌ಗಳ ವಿಡಿಯೋ ರಿಲೀಸ್

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ ಸ್ಫೋಟಕ 204 ರನ್ ಸಿಡಿಸಿ ಇತಿಹಾಸ ಬರೆದಿದ್ದಾರೆ. ಅವರ ಈ ಅಬ್ಬರದ ಇನ್ನಿಂಗ್ಸ್‌ನಲ್ಲಿ 28 ಸಿಕ್ಸರ್‌ಗಳು ಸೇರಿದ್ದು, ಕೇವಲ 28 ಎಸೆತಗಳಲ್ಲಿ ಶತಕ ಹಾಗೂ 52 ಎಸೆತಗಳಲ್ಲಿ ದ್ವಿಶತಕ ಪೂರೈಸಿ ವೇಗದ ದಾಖಲೆ ನಿರ್ಮಿಸಿದ್ದಾರೆ. 15 ವರ್ಷದ ವೈಭವ್ ಆಟಕ್ಕೆ ಅಭಿಮಾನಿಗಳು ಬೆರಗಾಗಿದ್ದಾರೆ.

ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ; ವೈಭವ್ ಬಾರಿಸಿದ 28 ಸಿಕ್ಸರ್‌ಗಳ ವಿಡಿಯೋ ರಿಲೀಸ್
Vaibhav Sooryavanshi
ಪೃಥ್ವಿಶಂಕರ
|

Updated on: Nov 24, 2026 | 10:31 PM

Share

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಯುಎಇ ವಿರುದ್ಧ ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ ಬರೋಬ್ಬರಿ 204 ರನ್ ಸಿಡಿಸಿ ಎಲ್ಲರನ್ನೂ ಬೆರಗುಗೊಳಿಸಿದರು. ಅವರ ಈ ಸ್ಫೋಟಕ ಆಟಕ್ಕೆ ಯುಎಇ ಬೌಲರ್‌ಗಳು ತತ್ತರಿಸಿ ಹೋದರು. ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುತ್ತಿದ್ದವರಿಂದ ಹಿಡಿದು ಟಿವಿ ಹಾಗೂ ಮೊಬೈಲ್‌ನಲ್ಲಿ ಕಣ್ತುಂಬಿಕೊಳ್ಳುತ್ತಿದ್ದ ಲಕ್ಷಾಂತರ ಅಭಿಮಾನಿಗಳವರೆಗೆ ಎಲ್ಲರೂ ವೈಭವ್ ಆಟಕ್ಕೆ ಫಿದಾ ಆದರು. ಈ ದಾಖಲೆಯ ಇನ್ನಿಂಗ್ಸ್‌ನಲ್ಲಿ ಅವರು ಬರೋಬ್ಬರಿ 28 ಸಿಕ್ಸರ್‌ಗಳನ್ನು ಸಿಡಿಸಿದರು. ವೈಭವ್ ಬಾರಿಸಿದ ಪ್ರತಿಯೊಂದು ಸಿಕ್ಸರ್‌ನ ವಿಡಿಯೋ ಇದೀಗ ಬಿಡುಗಡೆಯಾಗಿದೆ.

ಭಾರತ ಎ ತಂಡದ ಇನ್ನಿಂಗ್ಸ್‌ನ ಮೊದಲ ಓವರ್‌ನಿಂದಲೇ ವೈಭವ್ ಅಬ್ಬರ ಶುರುವಾಗಿತ್ತು. ಈ ಪಂದ್ಯದಲ್ಲಿ ಭಾರತ ಎ ತಂಡಕ್ಕೆ ಗೆಲ್ಲಲು 250 ರನ್‌ಗಳ ಗುರಿ ನೀಡಲಾಗಿತ್ತು. ಹಿಂದಿನ ಎರಡು ಪಂದ್ಯಗಳಲ್ಲಿ ಭಾರತ ಎ ತಂಡದ ಪ್ರದರ್ಶನ ಹಾಗೂ ವೈಭವ್ ಬ್ಯಾಟಿಂಗ್ ನೋಡಿದ್ದ ಅಭಿಮಾನಿಗಳಿಗೆ ಇಂತಹ ದೊಡ್ಡ ಮಟ್ಟದ ಅಬ್ಬರದ ನಿರೀಕ್ಷೆಯೇ ಇರಲಿಲ್ಲ. ಮೊದಲ ಓವರ್‌ನ ಆರಂಭಿಕ ಎರಡು ಎಸೆತಗಳಲ್ಲಿ ವೈಭವ್ ಯಾವುದೇ ರನ್ ಗಳಿಸಲಿಲ್ಲ. ಆದರೆ ಅದಾದ ಬಳಿಕ ಶುರುವಾಗಿದ್ದೇ ನಿಜವಾದ ಸಿಕ್ಸರ್ ಸುನಾಮಿ. ಎದುರಾಳಿ ಬೌಲರ್‌ಗಳಿಗೆ ಬಿಡುವೇ ಕೊಡದೆ ವೈಭವ್ ಅಬ್ಬರಿಸಿದರು.

14 ಸಿಕ್ಸರ್‌ಗಳ ಮೂಲಕವೇ ಶತಕದತ್ತ ದಾಪುಗಾಲು

ಮೊದಲ ಓವರ್‌ನ ಮೂರನೇ, ನಾಲ್ಕನೇ ಹಾಗೂ ಐದನೇ ಎಸೆತಗಳಲ್ಲಿ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿದ ವೈಭವ್, ಮುಂದಿನ ಓವರ್‌ನಲ್ಲೂ ಎರಡು ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು. ಮೂರನೇ ಓವರ್‌ನಲ್ಲೂ ಮತ್ತೆ ಮೂರು ಸಿಕ್ಸರ್ ಸಿಡಿಸಿದರು. ಹೀಗೆ ಮೊದಲ ಮೂರು ಓವರ್‌ಗಳಲ್ಲೇ ಎಂಟು ಸಿಕ್ಸರ್‌ಗಳನ್ನು ಬಾರಿಸಿದ 15 ವರ್ಷದ ವೈಭವ್, ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲಿಂದ ಶತಕದತ್ತ ಮುನ್ನುಗ್ಗುವಾಗ ಮತ್ತೆ ಆರು ಸಿಕ್ಸರ್‌ಗಳನ್ನು ಸಿಡಿಸಿದರು. ಇದರೊಂದಿಗೆ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿದ ಅತಿ ವೇಗದ ಬ್ಯಾಟರ್ ಎಂಬ ದಾಖಲೆ ಬರೆದರು.

ಮುಂದಿನ 14 ಸಿಕ್ಸರ್‌ಗಳೊಂದಿಗೆ ದ್ವಿಶತಕ

ಶತಕದ ಬಳಿಕವೂ ವೈಭವ್ ಅಬ್ಬರಕ್ಕೆ ಕಡಿವಾಣ ಬೀಳಲಿಲ್ಲ. ಕೇವಲ 12 ಎಸೆತಗಳಲ್ಲಿ 100ರಿಂದ 150 ರನ್‌ಗಳ ಗಡಿ ದಾಟಿದರು. ಈ ಮೂಲಕ 40 ಎಸೆತಗಳಲ್ಲಿ 150 ರನ್ ಗಳಿಸಿದ್ದ ತಮ್ಮದೇ ದಾಖಲೆಯನ್ನು ಹಿಂದಿಕ್ಕಿದರು. ಈ ಹಂತದಲ್ಲಿ ಇನ್ನೂ ಆರು ಸಿಕ್ಸರ್‌ಗಳನ್ನು ಬಾರಿಸಿ ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸಿದರು. ಇಷ್ಟಕ್ಕೇ ನಿಲ್ಲದ ವೈಭವ್, ಇನ್ನಿಂಗ್ಸ್‌ನಲ್ಲಿ 23 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಈ ಹಿಂದೆ ಇದ್ದ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನೂ ಮುರಿದರು. ಅದರಲ್ಲೂ 12ನೇ ಓವರ್‌ನಲ್ಲಿ ಸತತ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿ ಮೈದಾನದಲ್ಲಿ ರನ್‌ಗಳ ಮಳೆ ಸುರಿಸಿದರು.

ವೈಭವ್ ದ್ವಿಶತಕದ ಸುನಾಮಿ; 86 ಎಸೆತಗಳಲ್ಲಿ 250 ರನ್ ಬೆನ್ನಟ್ಟಿ ಗೆದ್ದ ಭಾರತ

ಬಳಿಕ 13ನೇ ಓವರ್‌ನಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದರು. ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸಿ, ಈ ಹಿಂದೆ 103 ಎಸೆತಗಳಲ್ಲಿ ದಾಖಲಾಗಿದ್ದ ವೇಗದ ದ್ವಿಶತಕದ ದಾಖಲೆಯನ್ನು ಹಿಂದಿಕ್ಕಿದರು. ತಮ್ಮ 28ನೇ ಹಾಗೂ ಕೊನೆಯ ಸಿಕ್ಸರ್ ಬಾರಿಸುವ ಮೂಲಕ ವೈಭವ್ ದ್ವಿಶತಕದ ಗಡಿ ತಲುಪಿದರು. ಅಂದರೆ, 150ರಿಂದ 200 ರನ್‌ಗಳವರೆಗೆ ಕೇವಲ ಎಂಟು ಸಿಕ್ಸರ್‌ಗಳ ನೆರವಿನಿಂದಲೇ ಈ ಯುವ ಆಟಗಾರ ಐತಿಹಾಸಿಕ ದಾಖಲೆ ನಿರ್ಮಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More