53 ಎಸೆತಗಳಲ್ಲಿ 204 ರನ್ ಸಿಡಿಸಿದ ವೈಭವ್; ಪಾಕಿಸ್ತಾನಕ್ಕೆ ಪರೋಕ್ಷ ವಾರ್ನಿಂಗ್
ನವೆಂಬರ್ 24ರಂದು ವೈಭವ್ ಸೂರ್ಯವಂಶಿ ಏಷ್ಯಾಕಪ್‌ನಲ್ಲಿ ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. 15 ವರ್ಷದ ಈ ಯುವ ಕ್ರಿಕೆಟಿಗ ವೇಗದ ಶತಕ, ದ್ವಿಶತಕ ದಾಖಲಿಸಿ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದ್ದಾರೆ. ಈ ಭರ್ಜರಿ ಇನ್ನಿಂಗ್ಸ್‌ನೊಂದಿಗೆ ಭಾರತ ಎ ತಂಡ ಸುಲಭ ಜಯಗಳಿಸಿತು. ಫೈನಲ್‌ನಲ್ಲಿ ಪಾಕಿಸ್ತಾನ ಎದುರಾದರೆ ಇದೇ ಬ್ಯಾಟಿಂಗ್ ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವೆಂಬರ್ 24ರ ದಿನ ಕ್ರಿಕೆಟ್ ಇತಿಹಾಸದಲ್ಲಿ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಸದಾ ನೆನಪಿನಲ್ಲಿ ಉಳಿಯಲಿದೆ. ಕೇವಲ 15 ವರ್ಷದ ಈ ಯುವ ಆಟಗಾರ ತನ್ನ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿದ್ದಾರೆ. ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ವೈಭವ್ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದ್ದಾರೆ. ಈ ವೇಳೆ ವೇಗದ ಶತಕ, ದ್ವಿಶತಕ ಹಾಗೂ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಐತಿಹಾಸಿಕ ಇನ್ನಿಂಗ್ಸ್ ಬಳಿಕ ವೈಭವ್ ಪಾಕಿಸ್ತಾನಕ್ಕೂ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಫೈನಲ್ ಪಂದ್ಯದಲ್ಲೂ ಇದೇ ರೀತಿಯ ಬ್ಯಾಟಿಂಗ್ ಪ್ರದರ್ಶಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
52 ಎಸೆತಗಳಲ್ಲೇ ದ್ವಿಶತಕ
ದೋಹಾದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ 249 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಆದರೆ ಈ ಗುರಿ ಬೆನ್ನಟ್ಟಿದ ಭಾರತ ಎ ತಂಡ ಕೇವಲ 14.2 ಓವರ್‌ಗಳಲ್ಲೇ ಗೆಲುವಿನ ದಡ ಸೇರಿ ಎಲ್ಲರನ್ನೂ ಅಚ್ಚರಿಗೊಳಿಸಿತು. ಈ ಭರ್ಜರಿ ಗೆಲುವಿನ ಹಿಂದಿನ ಪ್ರಮುಖ ಶಕ್ತಿ 15 ವರ್ಷದ ವೈಭವ್ ಸೂರ್ಯವಂಶಿ. ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅವರು ದಾಖಲೆಯ ಮೇಲೆ ದಾಖಲೆ ನಿರ್ಮಿಸಿದರು.
ವೈಭವ್ ಕೇವಲ 28 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆ ನಿರ್ಮಿಸಿದರು. ಅಷ್ಟಕ್ಕೇ ನಿಲ್ಲದ ಅವರು ಕೇವಲ 40 ಎಸೆತಗಳಲ್ಲಿ 150 ರನ್ ಪೂರೈಸಿದರು. ಬಳಿಕ 52 ಎಸೆತಗಳಲ್ಲೇ ದ್ವಿಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದರು.
ವೈಭವ್ ಅವರ ಈ ಅಬ್ಬರದ ಇನ್ನಿಂಗ್ಸ್ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ದಿಗ್ಗಜರನ್ನೂ ಬೆರಗುಗೊಳಿಸಿದೆ. ಆದರೆ ಇದೀಗ ಎಲ್ಲರ ಮುಂದಿರುವ ಪ್ರಶ್ನೆ ಒಂದೇ. ಯುಎಇ ವಿರುದ್ಧ ತೋರಿದ ಇದೇ ಬ್ಯಾಟಿಂಗ್ ಅಬ್ಬರವನ್ನು ಪಾಕಿಸ್ತಾನ ಅಥವಾ ಶ್ರೀಲಂಕಾದಂತಹ ಬಲಿಷ್ಠ ತಂಡಗಳ ವಿರುದ್ಧವೂ ಮುಂದುವರಿಸಲು ವೈಭವ್‌ಗೆ ಸಾಧ್ಯವಾಗುತ್ತದೆಯೇ?
ಬ್ಯಾಟಿಂಗ್ ಲಯ ಮತ್ತೆ ಮರಳಿದೆ
ಪಂದ್ಯದ ಬಳಿಕ ತಮ್ಮ ಬ್ಯಾಟಿಂಗ್ ಪ್ರದರ್ಶನದ ಕುರಿತು ಮಾತನಾಡಿದ ವೈಭವ್, ಪಾಕಿಸ್ತಾನದ ಹೆಸರನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ ಫೈನಲ್‌ನಲ್ಲೂ ಇದೇ ರೀತಿಯ ಆಟವಾಡುವ ವಿಶ್ವಾಸ ವ್ಯಕ್ತಪಡಿಸಿದರು. ‘ನನ್ನ ಬ್ಯಾಟಿಂಗ್ ಲಯ ಮತ್ತೆ ಮರಳಿದೆ. ಮುಂದಿನ ಪಂದ್ಯಗಳಲ್ಲೂ ಇದೇ ರೀತಿಯ ಆಟ ಮುಂದುವರಿಸಲು ಪ್ರಯತ್ನಿಸುತ್ತೇನೆ. ನಾವು ಸೆಮಿಫೈನಲ್ ಗೆದ್ದು ಫೈನಲ್ ತಲುಪುತ್ತೇವೆ ಎಂಬ ವಿಶ್ವಾಸವಿದೆ. ಫೈನಲ್‌ನಲ್ಲೂ ಇದೇ ರೀತಿ ಬ್ಯಾಟ್ ಬೀಸಲು ಪ್ರಯತ್ನಿಸುತ್ತೇನೆ’ ಎಂದು ವೈಭವ್ ಹೇಳಿದ್ದಾರೆ.
ಇನ್ನು ಭಾರತ ಎ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದು, ಅಲ್ಲಿ ಶ್ರೀಲಂಕಾ ಎ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ ಪಾಕಿಸ್ತಾನ ಎ ತಂಡವು ಬಾಂಗ್ಲಾದೇಶ ಎ ವಿರುದ್ಧ ಸೆಣಸಾಡಲಿದೆ. ಈ ಎರಡೂ ಸೆಮಿಫೈನಲ್‌ಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಗೆಲುವು ಸಾಧಿಸಿದರೆ, ಫೈನಲ್‌ನಲ್ಲಿ ಮತ್ತೊಮ್ಮೆ ಸಾಂಪ್ರದಾಯಿಕ ಎದುರಾಳಿಗಳ ಕಾದಾಟಕ್ಕೆ ವೇದಿಕೆ ಸಿದ್ಧವಾಗಲಿದೆ.
ವೈಭವ್ ದ್ವಿಶತಕದ ಸುನಾಮಿ; 86 ಎಸೆತಗಳಲ್ಲಿ 250 ರನ್ ಬೆನ್ನಟ್ಟಿ ಗೆದ್ದ ಭಾರತ
ಫೈನಲ್‌ನಲ್ಲಿ ಭಾರತ-ಪಾಕ್ ಮುಖಾಮುಖಿ?
ಎರಡೂ ತಂಡಗಳ ಪ್ರದರ್ಶನ ಗಮನಿಸಿದರೆ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಈ ಹಣಾಹಣಿ ನಡೆದರೆ, ಎಲ್ಲರ ಕಣ್ಣು ವೈಭವ್ ಸೂರ್ಯವಂಶಿ ಮೇಲಿರಲಿದೆ. ಇದಕ್ಕೆ ಕಾರಣ ಗುಂಪು ಹಂತದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಕೇವಲ 11 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಹೀಗಾಗಿ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡುವ ಅವಕಾಶ ಸಿಕ್ಕರೆ, ವೈಭವ್ ತಮ್ಮ ಹಿಂದಿನ ವೈಫಲ್ಯಕ್ಕೆ ಬ್ಯಾಟ್ ಮೂಲಕವೇ ಉತ್ತರ ನೀಡುತ್ತಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:41 pm, Tue, 24 November 26




