
ಬೆಂಗಳೂರು, ನವೆಂಬರ್ 13: ಕರ್ನಾಟಕದಲ್ಲಿ ಮದ್ಯ ಮಾರಾಟದಿಂದ ಸರ್ಕಾರದ ಆದಾಯ ಹೆಚ್ಚಾಗುತ್ತಿದ್ದರೂ, ವ್ಯಕ್ತಿಯೊಬ್ಬರ ಸರಾಸರಿ ಮದ್ಯ ಸೇವನೆಯ ಪ್ರಮಾಣ ಇಳಿಕೆಯಾಗಿದೆ. ರಾಜ್ಯದಲ್ಲಿ ಜಾರಿಗೆ ತಂದಿರುವ ಹೊಸ ಮದ್ಯ ತೆರಿಗೆ ನೀತಿ ಗ್ರಾಹಕರ ಕುಡಿಯುವ ಅಭ್ಯಾಸದ ಮೇಲೆ ಪರಿಣಾಮ ಬೀರಿರುವ ಸೂಚನೆಗಳು ಕಂಡುಬಂದಿವೆ. ಮೇ ತಿಂಗಳಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಪ್ರತಿ ವ್ಯಕ್ತಿಯ ಶುದ್ಧ ಆಲ್ಕೋಹಾಲ್ ಸೇವನೆ ಪ್ರಮಾಣ ಶೇ 2.4ರಷ್ಟು ಕಡಿಮೆಯಾಗಿದೆ. ಮತ್ತೊಂದೆಡೆ, ಸರ್ಕಾರದ ಅಬಕಾರಿ ಆದಾಯದಲ್ಲಿ ಶೇ 13.4ರಷ್ಟು ಏರಿಕೆಯಾಗಿದೆ.
ಬ್ರೂವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (BAI) ನೀಡಿರುವ ಮಾಹಿತಿಯ ಪ್ರಕಾರ, 2026ರ ಮೇಯಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಕರ್ನಾಟಕದಲ್ಲಿ ಪ್ರತಿ ವ್ಯಕ್ತಿಯ ಶುದ್ಧ ಆಲ್ಕೋಹಾಲ್ ಸೇವನೆ 1.59 ಲೀಟರ್‌ಗೆ ಇಳಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಪ್ರಮಾಣ 1.63 ಲೀಟರ್ ಇತ್ತು. ಅಂದರೆ ಶೇ 2.4ರಷ್ಟು ಇಳಿಕೆ ದಾಖಲಾಗಿದೆ.
ಇದಕ್ಕೆ ಪ್ರಮುಖ ಕಾರಣಗಳಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಆಲ್ಕೋಹಾಲ್ ಇನ್ ಬೆವರೇಜ್ (AIB) ತೆರಿಗೆ ನೀತಿಯೂ ಒಂದಾಗಿದೆ. ಮೇ 11ರಿಂದ ಜಾರಿಗೆ ಬಂದಿರುವ ಈ ನೀತಿಯಡಿ, ಪಾನೀಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಗ್ರಾಹಕರು ಕಡಿಮೆ ಆಲ್ಕೋಹಾಲ್ ಅಂಶವಿರುವ ಪಾನೀಯಗಳತ್ತ ಒಲವು ತೋರುತ್ತಿದ್ದಾರೆ ಎಂದು BAI ತಿಳಿಸಿದೆ.
ಮದ್ಯ ಸೇವನೆಯ ಪ್ರಮಾಣ ಕಡಿಮೆಯಾಗಿದ್ದರೂ ರಾಜ್ಯದ ಅಬಕಾರಿ ಆದಾಯ ಮಾತ್ರ ಗಣನೀಯವಾಗಿ ಹೆಚ್ಚಾಗಿದೆ. 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಕರ್ನಾಟಕ ಸರ್ಕಾರದ ಅಬಕಾರಿ ಆದಾಯ 22,191.63 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 13.4ರಷ್ಟು ಏರಿಕೆಯಾಗಿದೆ.
ಇನ್ನೊಂದೆಡೆ, ಒಟ್ಟು ಮದ್ಯ ಮಾರಾಟದ ಪ್ರಮಾಣ ಶೇ.16ರಷ್ಟು ಹೆಚ್ಚಾಗಿದೆ. ಬಿಯರ್ ಮತ್ತು ವೈನ್ ಮಾರಾಟದ ಪಾಲು ಶೇ.36ರಿಂದ ಶೇ 45ಕ್ಕೆ ಏರಿಕೆಯಾಗಿದೆ. ಕಡಿಮೆ ದರದ ಭಾರತೀಯ ನಿರ್ಮಿತ ವಿದೇಶಿ ಮದ್ಯದ (IMFL) ಕೆಲವು ತಯಾರಕರು ತಮ್ಮ ಉತ್ಪನ್ನಗಳ ಆಲ್ಕೋಹಾಲ್ ಪ್ರಮಾಣವನ್ನು ಶೇ 42.8ರಿಂದ ಶೇ 40ಕ್ಕೆ ಇಳಿಸಿದ್ದಾರೆ. ಕರ್ನಾಟಕದಲ್ಲಿ ಮಾರಾಟವಾಗುವ IMFLನ ಸರಾಸರಿ ಆಲ್ಕೋಹಾಲ್ ಪ್ರಮಾಣ ಶೇ 40.5ಕ್ಕೆ ಇಳಿದಿದೆ ಎಂದು BAI ತಿಳಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ