ಬೆಂಗಳೂರು: ಕರ್ನಾಟಕ ಅಸೆಂಬ್ಲಿಗೆ ಮೇ 10 ರಂದು ನಡೆದಿದ್ದ ಮಹಾ ಚುನಾವಣೆಯ ಫಲಿತಾಂಶ ಇದೀಗ ನಿಧಾನಕ್ಕೆ ಒಂದೊಂದಾಗಿ ಹೊರಬೀಳುತ್ತಿದೆ. ಸದ್ಯಕ್ಕೆ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲವಾದರೂ ಬೆಳೆಗ್ಗೆ 10 ಗಂಟೆ ವೇಳೆಗೆ ಮೊದಲ ಚಿತ್ರಣ ಸಿಗುವ ಸಾಧ್ಯತೆಯಿದೆ. ಈ ಮಧ್ಯೆ ಸಧ್ಯದ ಟ್ರೆಂಡ್ ಪ್ರಕಾರ ಅನೇಕ ಮಹಾಮಹಿಮರು ಹಿನ್ನಡೆ ಸಾಧಿಸಿದ್ದಾರೆ. ಆಡಳಿತಾರೂಢ ಬಿಜೆಪಿ ಪಕ್ಷವೂ ಹಿನ್ನಡೆ ಸಾಧಿಸಿದೆ. ಈ ವಿದ್ಯಮಾನದ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಾಂವಿಧಾನಿಕವಾಗಿ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಮುಂದುವರಿದಿದ್ದಾರೆ.
ಆದರೆ ಆರಂಭಿಕ ಟ್ರೆಂಡ್ ನೋಡಿದರೆ ಅವರ ಪಕ್ಷ ಸೋಲಿನತ್ತ ಮುಖಮಾಡಿದೆ. ಹೀಗಾಗಿ ಅವರು ಮುಖ್ಯಮಂತ್ರಿ ಪಟ್ಟದಿಂದ ವಿಮುಖರಾಗಬೇಕಾಗುತ್ತದೆ. ಹಾಗಾದರೆ ಆ ಪ್ರಕ್ರಿಯೆ ಹೇಗೆ ನಡೆಯಬಹುದು ಅಂದರೆ… ಮೊದಲಿಗೆ ಸದ್ಯದ ಮುನ್ನೆಡೆಯಲ್ಲಿರುವಂತೆ ಇಂದು ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್ ಪಕ್ಷವೇ ನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ/ ಗೆಲುವು ಸಾಧಿಸುವಂತಾದರೆ ಸಿಎಂ ಬೊಮ್ಮಾಯಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸ್ವಯಂ ಪ್ರೇರಿತರಾಗಿ ರಾಜೀನಾಮೆ ಸಲ್ಲಿಸಬೇಕಾಗುತ್ತದೆ.
ಆಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೆ ನೀಡುವ ರಾಜೀನಾಮೆಯನ್ನು ಅಂಗೀಕರಿಸುತ್ತಾರೆ. ಬಳಿಕ ಮುಂದಿನ ವ್ಯವಸ್ಥೆ ಆಗುವವರೆಗೂ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಸೂಚಿಸುತ್ತಾರೆ. ಅದರ ಅನ್ವಯ ಮುಂದೆ ಬಹುಮತ ಸಾಧಿಸಿದರೆ ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಳ್ಳುವ ದಿನಾಂಕ ನಿಗದಿಪಡಿಸುತ್ತದೆ. ಅಲ್ಲಿಯವರೆಗೂ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಮುಂದುವರಿಯಲಿದ್ದಾರೆ. ಆದರೆ…
ಅಲ್ಲಿಯವರೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಸ್ತುವಾರಿಯಾಗಿ ಇರುತ್ತಾರೆಯಷ್ಟೇ ಹೊರತು ಯಾವುದೇ ಸರ್ಕಾರಿ ಆದೇಶಗಳನ್ನು (G.O.) ಹೊರಡಿಸುವಂತಿಲ್ಲ. ಯಾವುದೇ ಯೋಜನೆಗಳನ್ನು ಪ್ರಕಟಿಸುವಂತಿಲ್ಲ. ಅದರಾಚೆಗೂ ಪ್ರಕಟಿಸಿದ್ದೇ ಆದರೆ ಮುಂಬರುವ ಮುಖ್ಯಮಂತ್ರಿ ತಮ್ಮ ಮೊದಲ ಆದೇಶದಲ್ಲಿಯೇ ಆ ಸರಕಾರಿ ಆದೇಶವನ್ನು ಅನೂರ್ಜಿತಗೊಳಿಸಬಹುದು. ಆದರೆ ಈ ಮಧ್ಯೆ ಹಾಲಿ ಮುಖ್ಯಮಂತ್ರಿಗೆ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಹೊರಡಿಸುವ ಪ್ರಮುಖ ಆದೇಶಗಳು ಮಾತ್ರ ಜಾರಿಗೆ ಬರುತ್ತದೆ.
ಕರ್ನಾಟಕ ಚುನಾವಣಾ ಫಲಿತಾಂಶ ಲೈವ್ ಅಪ್ಡೇಟ್ಸ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಚುನಾವಣಾ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:44 am, Sat, 13 May 23