ಮಳೆ ಅವಾಂತರ: ಬೆಂಗಳೂರಿನಲ್ಲಿ ಇನ್ನೂ 4 ದಿನ ಭಾರಿ ಮಳೆ ಸಾಧ್ಯತೆ, ದಾವಣಗೆರೆ ಜಗಳೂರು ರಾಜ್ಯ ಹೆದ್ದಾರಿ ಸಂಚಾರ ಬಂದ್

| Updated By: ಆಯೇಷಾ ಬಾನು

Updated on: Oct 15, 2022 | 8:50 AM

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ಬೆಂಗಳೂರಿನಲ್ಲಿ ಇನ್ನೂ 4 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇಂದು ಕೂಡ ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮಳೆ ಅವಾಂತರ: ಬೆಂಗಳೂರಿನಲ್ಲಿ ಇನ್ನೂ 4 ದಿನ ಭಾರಿ ಮಳೆ ಸಾಧ್ಯತೆ, ದಾವಣಗೆರೆ ಜಗಳೂರು ರಾಜ್ಯ ಹೆದ್ದಾರಿ ಸಂಚಾರ ಬಂದ್
ಮಳೆ
Follow us on

ಬೆಂಗಳೂರು: ರಾಜ್ಯದಲ್ಲಿ ವರುಣ ಮತ್ತೆ ಆರ್ಭಟಿಸುತ್ತಿದ್ದಾನೆ. ರಾಜ್ಯದ ಅನೇಕ ಕಡೆ ಪ್ರತಿ ದಿನ ಮಳೆಯಾಗುತ್ತಿದ್ದು ಅನೇಕ ಅವಾಂತರಗಳು ಸಹ ಸಂಭವಿಸಿವೆ. ಕಳೆದ ರಾತ್ರಿ ಬೆಂಗಳೂರಿ‌ನಲ್ಲಿ ನಿರಂತರ ಮಳೆಯಾಗಿದ್ದು ರಸ್ತೆಗಳು ಕೆರೆಯಂತಾಗಿವೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಅಲ್ಲದೆ ಮನೆಗಳಿಗೆ ನೀರು ನುಗ್ಗಿದ್ದು ಜನ ನಿದ್ದೆಗೆಡುವಂತಾಗಿದೆ.

ಇನ್ನು ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ಬೆಂಗಳೂರಿನಲ್ಲಿ ಇನ್ನೂ 4 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇಂದು ಕೂಡ ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳು ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿರಲಿದ್ದು ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ತುಮಕೂರು ಜಿಲ್ಲಾದ್ಯಂತ ಮುಂದುವರಿದ ಮಳೆ ಅಬ್ಬರ

ಗುಬ್ಬಿ, ತುಮಕೂರು, ಕೊರಟಗೆರೆ, ತಿಪಟೂರು, ಮಧುಗಿರಿ, ಚಿಕ್ಕನಾಯನಹಳ್ಳಿ, ತುರುವೆಕೆರೆ, ಕುಣಿಗಲ್, ಮಧುಗಿರಿ, ಪಾವಗಡ, ಶಿರಾ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಪರದಾಡುತ್ತಿದ್ದಾರೆ. ಎಂ.ಹೆಚ್ ಪಟ್ಟಣ ಬಳಿ ಹಲವು ತೋಟಗಳು ಜಲಾವೃತಗೊಂಡಿವೆ. ಬಹುತೇಕ ಅಡಕೆ ತೋಟಗಳಿಗೂ ನೀರು ನುಗ್ಗಿದೆ. ಇದನ್ನೂ ಓದಿ: ಕೋಮು ಸಂಘರ್ಷಕ್ಕೆ ಯತ್ನ; ಇಬ್ಬರು ಹಿಂದೂ ಕಾರ್ಯಕರ್ತರ ಬಂಧನ

ಇನ್ನು ಮಳೆಯ ನೀರಿನ ರಭಸಕ್ಕೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಶಿರಾ ರಸ್ತೆ ಕೊಚ್ಚಿ ಹೋಗಿದೆ. ನಿಟ್ಟೂರು ಹಾಗೂ ಶಿರಾ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆ ಹರಿದು ನೀರು ಹರಿಯುತ್ತಿದೆ. ಜಿಲ್ಲಾದ್ಯಂತ ಮಳೆಯ ಅವಾಂತರ ಮುಂದುವರಿದಿದೆ.

ದಾವಣಗೆರೆ ಜಗಳೂರು ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತ

ದಾವಣಗೆರೆಯಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ದಾವಣಗೆರೆ ತಾಲೂಕಿನ ಅಣಜಿ ಕೆರೆಗೆ ನೀರು ಹೆಚ್ಚಾದ ಹಿನ್ನೆಲೆ ರಾಜ್ಯ ಹೆದ್ದಾರಿ‌ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಆದೇಶ ಹೊರಡಿಸಿದ್ದಾರೆ. ಅಣಜಿ‌ಕೆರೆಗೆ ನೀರು ಹೆಚ್ಚಾದ ಹಿನ್ನೆಲೆ ಅಣಜಿ‌ ಮಾರ್ಗವಾಗಿ ಜಗಳೂರಿಗೆ ಹೋಗುವುದ‌ನ್ನ ನಿಷೇಧಿಸಲಾಗಿದೆ. ಬದಲಾಗಿ ಜಗಳೂರಿಗೆ ಹೋಗುವರು ಅಣಜಿ ಕ್ರಾಸ್ ನಿಂದ ಅರಸೀಕೆರೆ ಬಸವಕೋಟೆ ಮಾರ್ಗವಾಗಿ ಜಗಳೂರಿಗೆ ಅಥವಾ ರಾಷ್ಟ್ರೀಯ ಹೆದ್ದಾರಿ 48 ರ‌ ಮೂಲಕ ಭರಮಸಾಗರ ಹೋಗಿ ಜಗಳೂರಿಗೆ ಹೋಗಲು ಸೂಚನೆ ನೀಡಲಾಗಿದೆ.

ಕೆಲ ಗ್ರಾಮಗಳಲ್ಲಿ ನಿರಂತರ ಮಳೆಗೆ ಮನೆಗಳಿಗೆ ನೀರು ನುದ್ದಿದೆ. ನೀರು ಹರಿದು ಹೋಗುವ ಬಹುತೇಕ‌ ಚರಂಡಿ ಕಾಲುವೆಗಳು ಬ್ಲಾಕ್ ಆಗಿವೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಪುಣ್ಯಕ್ಷೇತ್ರ ಉಕ್ಕಡಗಾತ್ರಿ ಗ್ರಾಮದಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾ.ಪಂಗೆ ಮುತ್ತಿಗೆ ಹಾಕಿದ್ದಾರೆ. ತಕ್ಷಣಕ್ಕೆ ಚರಂಡಿ ಹಾಗೂ ಕಾಲುವೆಗಳನ್ನ ಸರಿ ಪಡಿಸಿ ಎಂದು ಆಗ್ರಹಿಸಿದ್ದಾರೆ.

ಮತ್ತೊಂದೆಡೆ ನಿರಂತರ ಮಳೆಗೆ 75 ವರ್ಷದ ಬಳಿಕ ದಾವಣಗೆರೆ ತಾಲೂಕಿನ ಆಲೂರು ಗ್ರಾಮದ ಪುರಾತನ ಬಾವಿ ಭರ್ತಿಯಾಗಿದೆ. ಹಿರೇಬಾವಿ ತುಂಬಿದ ಹಿನ್ನೆಲೆ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ಗ್ರಾಮದ ಅಂಜನೇಯ ದೇವಸ್ಥಾನದ ‌ಧರ್ಮದರ್ಶಿ ಸಮಿತಿ‌ ನೇತೃತ್ವದಲ್ಲಿ ನೂರಾರು ಮಹಿಳೆಯರು ಬಾವಿಗೆ ಬಾಗಿನ ಅರ್ಪಿಸಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಟರ್ಕಿಯಲ್ಲಿ ಕಲ್ಲಿದ್ದಲು ಗಣಿ ಸ್ಫೋಟ; 25 ಮಂದಿ ಸಾವು, 10ಕ್ಕೂ ಹೆಚ್ಚು ಜನ ನಾಪತ್ತೆ

ನಿರಂತರ ಮಳೆಯಿಂದಾಗಿ ಕುಸಿದ ಮಣ್ಣಿನ ಮನೆಗಳು

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಕಾಟಕರ ಓಣಿ, ಸುಳಿಬಾವಿ ಓಣಿ, ದೇಸಾಯಿ ಗಲ್ಲಿಯಲ್ಲಿ ಮಳೆಯಿಂದ 10 ಮನೆಗಳಿಗೆ ಹಾನಿಯಾಗಿದೆ. ಮಣ್ಣಿನ ಮನೆಗಳು ಕುಸಿದಿವೆ. ಹಾಗೂ ಬೆಳಗಾವಿ ‌ಜಿಲ್ಲೆ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದಲ್ಲಿ ಭಾರಿ ಮಳೆಯಿಂದ ಮನೆಗೆ ನೀರು ನುಗ್ಗಿ ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಬೈಕ್​​ನಲ್ಲಿ ಸೇತುವೆ ದಾಟುವಾಗ ಕೊಚ್ಚಿಹೋದ ಸವಾರರು

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಜಾಲಹಳ್ಳಿ-ಇಡಗೂರು ಗ್ರಾಮದ ಮಧ್ಯೆ ಬೈಕ್​​ನಲ್ಲಿ ಸೇತುವೆ ದಾಟುವಾಗ ಸವಾರರು ಕೊಚ್ಚಿಹೋದ ಘಟನೆ ನಡೆದಿದೆ. ಸ್ಥಳೀಯರ ಸಹಾಯದಿಂದ ಓರ್ವನ ರಕ್ಷಣೆ ಮಾಡಲಾಗಿದ್ದು ಮತ್ತೋರ್ವ ಮೃತಪಟ್ಟಿದ್ದಾನೆ. ಕುಡಿದ ಮತ್ತಿನಲ್ಲಿ ಸೇತುವೆ ದಾಟುವಾಗ ಸವಾರರು ಕೊಚ್ಚಿಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗ್ಗಿನ ಉಪಾಹಾರಕ್ಕೂ ಪರಿತಪಿಸುತ್ತಿರುವ ಗ್ರಾಮಸ್ಥರು

ಮಂಡ್ಯ ಜಿಲ್ಲೆಯಲ್ಲಿ ರಾತ್ರಿ ಸುರಿದ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ. ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮಕ್ಕೆ ನೀರು ನುಗ್ಗಿದ್ದು ಹಲವು ಮನೆಗಳಲ್ಲಿ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಮಕ್ಕಳ ಪಠ್ಯ ಪುಸ್ತಕ, ದಾಖಲೆ ಪತ್ರಗಳು, ದಿನಸಿ ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ನೀರಿನಲ್ಲಿ ಮುಳುಗಿವೆ. ಬೆಳಗ್ಗಿನ ಉಪಾಹಾರಕ್ಕೂ ಗ್ರಾಮಸ್ಥರು ಪರಿತಪಿಸುತ್ತಿರುವ ವಾತಾವರಣ ಸೃಷ್ಟಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:50 am, Sat, 15 October 22