
ಬೆಂಗಳೂರು, (ಫೆಬ್ರವರಿ 19): ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ ‘ಬೆಂಗಳೂರು ಚಲೋ’ ಪ್ರತಿಭಟನೆ (Karnataka Transport employees strike) ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸಾರಿಗೆ ನೌಕರರು ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ರಾಜ್ಯ ಸರ್ಕಾರದ ವೇತನ ಪರಿಷ್ಕರಣೆ ಆದೇಶ ಹಾಗೂ ಹಲವು ತಿಂಗಳ ಹಿಂಬಾಕಿ ನೀಡಲು ಮಾರ್ಚ್ 2ರ ಗಡುವು ನೀಡಿದೆ.38 ತಿಂಗಳ ಹಿಂಬಾಕಿ ಪೈಕಿ 26 ತಿಂಗಳ ಹಿಂಬಾಕಿ ನೀಡುವುದಾಗಿ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಅಲ್ಲದೇ ವೇತನ ಪರಿಷ್ಕರಣೆಗೂ ಸಹ ಸರ್ಕಾರ ಒಪ್ಪಿಕೊಂಡಿದೆ. ಆದರೂ ಸಾರಿಗೆ ನೌಕರರಿಗೆ ತೃಪ್ತಿ ತಂದಿಲ್ಲ. 38 ತಿಂಗಳ ಹಿಂಬಾಕಿ ಹಣ ನೀಡಬೇಕೆಂದು ಪಟ್ಟಿ ಹಿಡಿದಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಕೆಎಸ್ಆರ್ಟಿಸಿ ಎಂಡಿ ಫ್ರೀಡಂಪಾರ್ಕ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನೌಕರರ ಜತೆ ಚರ್ಚಿಸಿದರು. ಬಳಿಕ ಅಂತಿಮವಾಗಿ ಸಭೆ ಮಾಡಿ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದುಕೊಂಡಿದ್ದಾರೆ.
ನಾಳೆಯಿಂದ ಮುಷ್ಕರ ನಡೆಸದಿರಲು ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಆದ್ರೆ, ಸರ್ಕಾರಕ್ಕೆ ಮಾರ್ಚ್ 2ರ ಗಡುವು ನೀಡಿದ್ದು, ಮಾರ್ಚ್ 2ರೊಳಗಾಗಿ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವರಾಜೇ ಅರಸ್ ತಿಳಿಸಿದ್ದಾರೆ. ಆದ್ರೆ, ಇದಕ್ಕೆ ಸಾರಿಗೆ ನೌಕರರು ಆಕ್ಷೇಪ ವ್ಯಕ್ತಪಡಿಸಿದ್ದು, ನಾಳೆಯಿಂದ ಮುಷ್ಕರ ನಡೆಸುವಂತೆ ಸಾರಿಗೆ ಸಿಬ್ಬಂದಿ ಆಗ್ರಹಿಸಿದ್ದಾರೆ.
ಇಂದು ಗುರುವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ ಹಮ್ಮಿಕೊಂಡಿದ್ದು, ಸ್ಥಳಕ್ಕೆ ಕೆಎಸ್ಆರ್ಟಿಸಿ ಎಂಡಿ ಭೇಟಿ ನೀಡಿ ನೌಕರರ ಸಮಸ್ಯೆಯನ್ನು ಆಲಿಸಿದ್ದು, ಕೆಲ ಭರವಸೆ ನೀಡಿದರು. ಬಳಿಕ ವೇಳೆ ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸದಸ್ಯರು, ಮುಖಂಡರು ಚರ್ಚಿಸಿ ಮುಷ್ಕರವನ್ನು ತಾತ್ಕಾಲಿಕವಾಗಿ ವಾಪಾಸ್ ಪಡೆದಿದೆ. ನಮ್ಮ ಎಲ್ಲ ಬೇಡಿಕೆಗಳು ಪೂರ್ಣವಾಗಿ ರಾಜ್ಯ ಸರ್ಕಾರ ಈಡೇರಿಸಬೇಕು. ಅದಕ್ಕಾಗಿ ಹತ್ತು ದಿನಗಳ ಗಡುವು (ಮಾರ್ಚ್ 2) ನೀಡಲಾಗಿದೆ. ಸದ್ಯ ಮುಷ್ಕರ ಹಿಂಪಡೆದಿದ್ದರಿಂದ ಸಾರಿಗೆ ನೌಕರರ ಹೋರಾಟ ತಾತ್ಕಾಲಿಕವಾಗಿ ಅಂತ್ಯವಾಗಿದೆ. ನಾಳೆಯಿಂದ ಎಂದಿನಂತೆ ಬಸ್‌ಗಳು ಸಂಚರಿಸಲಿವೆ.
ರಾಜ್ಯ ಸರ್ಕಾರ ಮುಷ್ಕರ ಮುನ್ನಾದಿನ ಬುಧವಾರ (ಫೆ.18) 24 ತಿಂಗಳ ಹಿಂಬಾಕಿ ವೇತನ ಬಿಡುಗಡೆ ನಿರ್ಧರಿಸಿದ್ದರ ಜೊತೆಗೆ ವೇತನ ಪರಿಷ್ಕರಣೆಗೆ ಆದೇಶಿಸಿತ್ತು. ಇದರಿಂದ ಬೇಡಿಕೆಗಳ ಪೂರ್ಣ ಈಡೇರಿದಂತಾಗಿಲ್ಲ ಎಂದು ದೂರಿರುವ ಸಾರಿಗೆ ನೌಕರರು ಬೇಡಿಕೆಗಳು ಪೂರ್ಣವಾಗಿ ಈಡೇರಿಸಬೇಕು. 38 ತಿಂಗಳ ಹಿಂಬಾಕಿ ನೀಡಲೇಬೇಕು. ವೇತನ ಹೆಚ್ಚಿಸಬೇಕು. ಅದಕ್ಕಾಗಿ ಸರ್ಕಾರ ನಿರ್ಧಾರ ಕೈಗೊಳ್ಳಲು ಹತ್ತು ದಿನ ಸಮಯ ನೀಡಿದ್ದು, ಅಷ್ಟರದಲ್ಲಿ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದರೆ ಮಾರ್ಚ್ 02ರಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಮೂಲಕ ಮುಷ್ಕರ ಮತ್ತೆ ಮುಂದುವರಿಯಲಿದೆ ಎಂದು ನೌಕರರ ಜಂಟಿ ಕ್ರಿಯಾ ಸಮಿತಿ ಸ್ಪಷ್ಟಪಡಿಸಿದೆ.
ಇನ್ನು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರ ವಾಪಾಸ್ ಪಡೆದಿದ್ದಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ನೌಕರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೇಡಿಕೆಗಳು ಪೂರ್ಣ ಈಡೇರಿಸುವವರೆಗೂ ಮುಷ್ಕರ ನಿಲ್ಲಿಸಬಾರದೆಂದು ಒತ್ತಾಯಿಸಿದರು. ಬೇಕೆ ಬೇಕು ನ್ಯಾಯಬೇಕು, ಗೆಲ್ಲವವರೆಗೂ ಹೋರಾಟ ಬೀಡಲ್ಲ ಎಂದು ಘೋಷಣೆ ಆಕ್ರೋಶ ಹೊರಹಾಕಿದರು. ಬಳಿಕ ಜಂಟಿ ಸಮಿತಿ ಸದಸ್ಯರು ಮಾತಿನಂತೆ ಒಲ್ಲದ ಮನಸ್ಸಿನಿಂದ ಸಾರಿಗೆ ನೌಕರರು ಮುಷ್ಕರ ವಾಪಾಸ್ ನಿರ್ಧಾರ ಸ್ವಾಗತಿಸಿದ್ದಾರೆ.
Published On - 5:21 pm, Thu, 19 February 26