
ಬೆಂಗಳೂರು, ಸೆಪ್ಟೆಂಬರ್ 12: ಬೆಂಗಳೂರು ನಗರದಲ್ಲಿ ಪ್ರತಿದಿನ ಸಾವಿರಾರು ಹೊಸ ವಾಹನಗಳು ರಸ್ತೆಗಿಳಿಯುತ್ತಿರುವುದರಿಂದ ಹಳೆಯ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರಿಂದ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ವಾಹನ ಗುಜರಿ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯಡಿ ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗಿದೆ.
ನಗರದಲ್ಲಿ ಹೆಚ್ಚುತ್ತಿರುವ ಹಳೆಯ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸಾರಿಗೆ ಇಲಾಖೆ 2022ರ ಡಿಸೆಂಬರ್‌ನಲ್ಲಿ ವಾಹನ ಗುಜರಿ ನೀತಿಯನ್ನು ಜಾರಿಗೆ ತಂದಿತ್ತು. ಅದರಡಿ, 2023ರ ಸೆಪ್ಟೆಂಬರ್ 1ರಿಂದ 2026ರ ಜುಲೈ 31ರವರೆಗೆ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳ ಮೂಲಕ ಒಟ್ಟು 14,042 ಹಳೆಯ ವಾಹನಗಳನ್ನು ಗುಜರಿಗೆ ಹಾಕಲಾಗಿದೆ. ಇದರಲ್ಲಿ 9,976 ಖಾಸಗಿ ವಾಹನಗಳು ಹಾಗೂ 3,390 ಸರ್ಕಾರಿ ಹಳೆಯ ವಾಹನಗಳು ಸೇರಿವೆ.
ರಾಜ್ಯದಲ್ಲಿ 15 ವರ್ಷಕ್ಕಿಂತ ಹಳೆಯದಾದ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ವ್ಯವಸ್ಥೆ ಜಾರಿಯಲ್ಲಿದೆ. ಇದರ ಜೊತೆಗೆ, ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳನ್ನು ಸ್ವಯಂಪ್ರೇರಿತವಾಗಿ ಸ್ಕ್ರ್ಯಾಪ್ ಮಾಡಿಸಿಕೊಳ್ಳಬಹುದು. ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವವರಿಗೆ ಸಾರಿಗೆ ಇಲಾಖೆ ತೆರಿಗೆ ವಿನಾಯಿತಿಯನ್ನೂ ನೀಡುತ್ತಿದೆ. ದ್ವಿಚಕ್ರ ವಾಹನಗಳನ್ನು ಸ್ಕ್ರ್ಯಾಪ್ ಮಾಡಿದರೆ 1 ಸಾವಿರದಿಂದ 5 ಸಾವಿರ ರೂಪಾಯಿವರೆಗೆ, ನಾಲ್ಕು ಚಕ್ರದ ವಾಹನಗಳನ್ನು ಗುಜರಿಗೆ ಹಾಕಿದರೆ 10 ಸಾವಿರದಿಂದ 50 ಸಾವಿರ ರೂಪಾಯಿವರೆಗೆ ಹೊಸ ವಾಹನ ಖರೀದಿ ವೇಳೆ ತೆರಿಗೆ ವಿನಾಯಿತಿ ಸಿಗಲಿದೆ.
ಬಳಕೆಯ ಅವಧಿ ಮುಗಿದ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜರಿಗೆ ಹಾಕಲು ಪ್ರೋತ್ಸಾಹಿಸುವುದು ಹಾಗೂ ವಾಹನಗಳ ವೈಜ್ಞಾನಿಕ ಮರುಬಳಕೆಗೆ ಸೂಕ್ತ ವ್ಯವಸ್ಥೆ ರೂಪಿಸುವುದು ನೀತಿಯ ಉದ್ದೇಶವಾಗಿದೆ.
ವಾಹನ ಸ್ಕ್ರ್ಯಾಪಿಂಗ್ ಎಂದರೆ ಬಳಕೆಯಲ್ಲಿಲ್ಲದ ಅಥವಾ ಬಳಕೆಯ ಅವಧಿ ಮುಗಿದ ವಾಹನಗಳನ್ನು ನಿಯಮಾನುಸಾರ ವಿಲೇವಾರಿ ಮಾಡಿ, ಅದರ ವಿವಿಧ ಭಾಗಗಳು ಮತ್ತು ಲೋಹಗಳನ್ನು ಮರುಬಳಕೆ ಮಾಡುವುದು. ಇದರಿಂದ ಹಳೆಯ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಸಹಾಯವಾಗಲಿದೆ.
ಈ ಕುರಿತು ಮಾತನಾಡಿದ ವಾಹನ ಮಾಲೀಕರು, ದೆಹಲಿ ಮಾದರಿಯಲ್ಲಿ 15 ಮತ್ತು 20 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕುವ ಆದೇಶವನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಪ್ರಮುಖ ನಗರಗಳ ಇಂದಿನ ವಾಯು ಗುಣಮಟ್ಟ ಹೀಗಿದೆ
ನಗರದಲ್ಲಿ ಹಳೆಯ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ವಾಯುಮಾಲಿನ್ಯವೂ ಹೆಚ್ಚಾಗುತ್ತಿದೆ. ಹೀಗಾಗಿ ಹಳೆಯ ವಾಹನಗಳನ್ನು ಹಂತ ಹಂತವಾಗಿ ಗುಜರಿಗೆ ಸೇರಿಸುವ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ