ಬೆಂಗಳೂರು: ಮಧ್ಯಾಹ್ನ ಆದ್ರೆ ಸಾಕು. ಸೂರ್ಯ ನೆತ್ತಿ ಮೇಲಿರುತ್ತಾನೆ. ಆಚೆ ಕಾಲಿಡಕ್ಕೂ ಆಗಲ್ಲ. ಸೆಕೆ ಅಂದ್ರೆ ಸೆಕೆ. ಇನ್ನು ಏಪ್ರಿಲ್ ಆರಂಭಕ್ಕೂ ಮುನ್ನ, ಮಾರ್ಚ್ ತಿಂಗಳ ಆರಂಭದಿಂದಲೇ ಬೇಸಿಗೆಯ ಬೇಗೆ ಹೆಚ್ಚಾಗಿದೆ. ಬಿಸಿಲನ್ನು ನೋಡಿ ಯಾವಾಗ ಮಳೆ ಬರುತ್ತಪ್ಪ ಅಂತ ಜನ ಗೋಳಾಡುತ್ತಿದ್ದಾರೆ. ಸದ್ಯ ರಾಜ್ಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಮುಂದಿನ 4 ದಿನ ಮಳೆ ಆಗುವ ಸಾಧ್ಯತೆ ಇದೆ. ಬಿಸಿಲಿಂದ ಬೇಸತ್ತ ಜನರಿಗೆ ಮಳೆ ತಂಪು ನೀಡಲಿದೆ.
ಬಿಸಿಲ ಧಗೆ ಹೆಚ್ಚುತ್ತಿರುವ ನಡುವೆ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆ. ಸಮುದ್ರಗಳಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಕಾರಣ ರಾಜ್ಯದ ವಿವಿಧೆಡೆ ಮಳೆ ಆಗುವ ಸಾಧ್ಯತೆ ಇದೆ. ಇಂದಿನಿಂದ ನಾಲ್ಕು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಾ.15ರಿಂದ 18ರವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವೆಡೆ ಮಳೆ ಆಗಲಿದೆ. ಮಾ.16 ರಿಂದ 18ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬಳ್ಳಾರಿ, ಬೀದರ್, ಧಾರವಾಡ, ಗದಗ, ಕಲಬುರಗಿ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಯ ಕೆಲವು ಕಡೆ ಮಾ.16 ರಿಂದ ಮಾ.18ರವರೆಗೆ ಮಳೆಯಾಗಲಿದೆ.
ಮಳೆ ಮುನ್ಸೂಚನೆ: ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು ಸಂಭವಿಸುವ ಸಾಧ್ಯತೆಯಿದೆ. pic.twitter.com/PQXo2T3kwz— Karnataka State Natural Disaster Monitoring Centre (@KarnatakaSNDMC) March 14, 2023
ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಬಿತ್ತು ವರ್ಷದ ಮೊದಲ ಮಳೆ, ಕಾಫಿ ಬೆಳೆಗಾರರಲ್ಲಿ ಹರ್ಷ
ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ಮಾ.17 ಮತ್ತು 18ರಂದು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಭಾಗದಲ್ಲಿ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಮೋಡಕವಿದ ವಾತಾವರಣವಿರಲಿದೆ ಎಚ್ಎಎಲ್ನಲ್ಲಿ 31.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 32.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 32.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬಾಗಲಕೋಟೆಯಲ್ಲಿ 13.0 ಡಿಗ್ರಿ ಸೆಲ್ಸಿಯಸ್ ಅತಿ ಕನಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 36.9 ಡಿಗ್ರಿ ಸೆಲ್ಸಿಯಸ್ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ದೆಹಲಿಯಲ್ಲಿ ತಾಪಮಾನ ಹೆಚ್ಚಾಗುತ್ತಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:05 am, Wed, 15 March 23