AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Namma Metro: ವೈಟ್‌ಫೀಲ್ಡ್-ಕೆಆರ್ ಪುರಂ ಮೆಟ್ರೋ ಮಾರ್ಗ ಮಾರ್ಚ್ 25 ರಂದು ಉದ್ಘಾಟನೆ ಸಾಧ್ಯತೆ

ವೈಟ್​ಫೀಲ್ಡ್​​-ಕೆಆರ್​​ಪುರಂ ಮಾರ್ಗದ ಮೆಟ್ರೋ ಮಾರ್ಚ್​​ 25 ರಂದು ಉದ್ಘಾಟನೆಯಾಗುವ ಸಾಧ್ಯತೆ ಇದೆ ಎಂದು ಬಿಎಂಆರ್​ಸಿಎಲ್​ ಮೂಲಗಳು ತಿಳಿಸಿವೆ.

Namma Metro: ವೈಟ್‌ಫೀಲ್ಡ್-ಕೆಆರ್ ಪುರಂ ಮೆಟ್ರೋ ಮಾರ್ಗ ಮಾರ್ಚ್ 25 ರಂದು ಉದ್ಘಾಟನೆ ಸಾಧ್ಯತೆ
ನಮ್ಮ ಮೆಟ್ರೋ
ವಿವೇಕ ಬಿರಾದಾರ
|

Updated on:Mar 15, 2023 | 7:37 AM

Share

ಬೆಂಗಳೂರು: ಸಿಲಿಕಾನ್​ ಸಿಟಿ ಜನರ ಬಹುದಿನಗಳ ನಿರೀಕ್ಷೆ ಮತ್ತು ಹೆಚ್ಚುತ್ತಿರುವ ಟ್ರಾಫಿಕ್​ ಕಿರಿಕಿರಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವೈಟ್​ಫೀಲ್ಡ್​​​​ನಿಂದ ಕೆಆರ್ ​​ಪುರಂವರೆಗೆ ಮೆಟ್ರೋ (Whitefield-KR Puram Metro Line) ಸಂಚಾರ ಪ್ರಾರಂಭವಾಗಲಿದೆ. 12.74 ಕಿಮೀ ಮಾರ್ಗದ ಮೆಟ್ರೋ ಕಾಮಗಾರಿ ಪೂರ್ಣಗೊಂಡಿದ್ದು, ಎಲ್ಲ ಹಂತದ ಪರೀಕ್ಷೆಗಳು ನಡೆಯುತ್ತಿದ್ದು, ಇನ್ನೇನು ಲೋಕಾರ್ಪಣೆಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿಸಬೇಕಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL​) ಮೂಲಗಳ ಪ್ರಕಾರ ಮಾರ್ಚ್​​ 25 ರಂದು ಉದ್ಘಾಟನೆಯಾಗುವ ಸಾಧ್ಯತೆ ಇದೆ. ಆದರೆ ಈ ಕುರಿತು ಬಿಎಂಆರ್​ಸಿಎಲ್​ ಯಾವುದೆ ಅಧಿಕೃತ ಸುತ್ತೋಲೆ ಹೊರಡಿಸಿಲ್ಲ. ಈ ಬಗ್ಗೆ ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾತನಾಡಿ ನಾವು ಉದ್ಘಾಟನೆಗೆ ದಿನಾಂಕವನ್ನು ನಿಗದಿ ಮಾಡಿಲ್ಲ ಆದರೆ, ಈ ತಿಂಗಳ ಅಂತ್ಯದೊಳಗೆ ಉದ್ಘಾಟಿಸಲಿದ್ದೇವೆ ಎಂದು ಹೇಳಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಮಾರ್ಚ್​ 12 ರಂದು ಬೆಂಗಳೂರು-ಮೈಸೂರು ಎಕ್ಸಪ್ರೆಸ್​ವೇ (Bengaluru-Mysore Expressway) ಉದ್ಘಾಟನೆಗೆ ರಾಜ್ಯಕ್ಕೆ ಆಗಮಿಸಿದ ವೇಳೆಯೇ, ಕೆಆರ್​ ಪುರಂ-ವೈಟ್‌ಫೀಲ್ಡ್ ಮಾರ್ಗದ ಮೆಟ್ರೋ (Metro Train) ರೈಲನ್ನು ಉದ್ಘಾಟಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು”.

ಇದನ್ನೂ ಓದಿ: ಕೆಆರ್​ಪುರಂ-ವೈಟ್​ಫೀಲ್ಡ್ ಮೆಟ್ರೋ ಮಾರ್ಗಕ್ಕೆ CMRSನಿಂದ ಗ್ರೀನ್​ ಸಿಗ್ನಲ್​​: ಟ್ರಾಫಿಕ್​ ದಟ್ಟಣೆಗೆ ಸಿಗುತ್ತಾ ಮುಕ್ತಿ?

ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಪಿಎಸ್‌ಯು ಅಡಿಯಲ್ಲಿ ಒಟ್ಟು 7 ರೈಲುಗಳನ್ನು ಬಿಇಎಂಎಲ್‌ ತಯಾರಿಸಿದೆ. ಈ ರೈಲುಗಳು ಕೆಆರ್ ​ಪುರಂ-ವೈಟ್‌ಫೀಲ್ಡ್ ಮಾರ್ಗವಾಗಿ ಕಾರ್ಯನಿರ್ವಹಿಸಲಿವೆ. ಬಿಇಎಂ​ಎಲ್ ಒಟ್ಟು 400 ಕೋಟಿ ರೂ. ವೆಚ್ಚದಲ್ಲಿ 42 ಮೆಟ್ರೋ ಬೋಗಿಗಳನ್ನು ತಯಾರಿಸಿದೆ.

ಈ ಮಾರ್ಗದ ರೈಲುಗಳು 12 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ. ಇನ್ನು ನೇರಳೆ ಮಾರ್ಗದಲ್ಲಿ 106 ಜನ ಲೋಕೋ ಪೈಲಟ್‌ಗಳಿದ್ದು, ಇದರಲ್ಲಿನ ಕೆಲವರನ್ನು ಕೆಆರ್​ ಪುರಂ-ವೈಟ್‌ಫೀಲ್ಡ್ ಮಾರ್ಗದ ರೈಲು ಓಡಿಸಲು ನೇಮಿಸಲಾಗುತ್ತದೆ. ಹೊಸದಾಗಿ ಸೇರ್ಪಡೆಯಾದ 7 ಮೆಟ್ರೋ ರೈಲುಗಳ ರಚನೆಯು, ಈಗ ಕಾರ್ಯನಿರ್ವಹಿಸುತ್ತಿರವ ಮೆಟ್ರೋ ರೈಲಿನಂತೆಯೇ ಇದೆ. ಆದರೆ, ಕಾರ್ಯಾಚರಣೆಯ ಅನುಕೂಲಕ್ಕಾಗಿ ಸ್ವಲ್ಪ ಮಾರ್ಪಾಡು ಮಾಡಲಾಗಿದೆ. ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಕೊನೆ ಹಂತದ ಕಾಮಗಾರಿ ಕೆಲಸ ಬಾಕಿ ಉಳಿದಿವೆ. ವಿಶೇಷವಾಗಿ ಕೆಆರ್ ಪುರಂ ಮೆಟ್ರೋ ನಿಲ್ದಾಣದಲ್ಲಿ, ಗ್ಲಾಸ್ ಫಿಕ್ಸಿಂಗ್ ಮತ್ತು ಸಿಗ್ನೇಜ್ ಬೋರ್ಡ್ ನಿರ್ವಹಣೆಯಂತಹ ಸಿವಿಲ್ ಕೆಲಸಗಳು ಬಾಕಿ ಇವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:34 am, Wed, 15 March 23