
ಬೆಂಗಳೂರು, ನವೆಂಬರ್ 27: ಹೊರನಾಡು ಮತ್ತು ಗಡಿನಾಡು ಕನ್ನಡಿಗರ ವರ್ಗಗಳ ವ್ಯಾಪ್ತಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿರುವ ಮಾತೃಭಾಷೆ ಎಂಬ ಪದದ ವ್ಯಾಖ್ಯಾನದಲ್ಲಿ ಕೊಂಕಣಿಯನ್ನಯ ಸೇರಿಸದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಬೆಂಗಳೂರಿನ ಲೆಕ್ಕ ಪರಿಶೋಧಕ ವಿವೇಕ್ ಮಲ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಕೆಇಎ (KEA) ಪ್ರಮಾಣಪತ್ರ ಮಾದರಿ ಹಾಗೂ ಅಧಿಸೂಚನೆಯಲ್ಲಿ ಕನ್ನಡ, ತುಳು ಮತ್ತು ಕೊಡವ ಭಾಷೆಗಳನ್ನಷ್ಟೇ ಉಲ್ಲೇಖಿಸಲಾಗಿದೆ. ಈ ಪಟ್ಟಿಯಿಂದ ಕೊಂಕಣಿ ಭಾಷೆ ಸಂಪೂರ್ಣವಾಗಿ ಹೊರಗುಳಿದಿದೆ. ಈ ನಿರ್ಲಕ್ಷ್ಯದಿಂದ, ತಾತ್ಕಾಲಿಕವಾಗಿ ನಾನಾ ಕಾರಣಗಳಿಂದ ಕರ್ನಾಟಕದ ಹೊರಗಿರುವ ನಿಜವಾದ ಕನ್ನಡಿಗ (ಕೊಂಕಣಿ ಮಾತೃಭಾಷೆಯ) ವಿದ್ಯಾರ್ಥಿಗಳಿಗೆ ಕೆಸಿಇಟಿ (KCET) ಅರ್ಹತೆ ವಿಚಾರವಾಗಿ ತಕ್ಷಣಕ್ಕೆ ಹಿನ್ನಡೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳಲ್ಲಿ ಕೆಲಸದ ನಿಮಿತ್ತ ಕರ್ನಾಟಕದ ಹೊರಗೆ ವಾಸಿಸುವ ಕುಟುಂಬಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ರಕ್ಷಣಾ ಪಡೆಯಲ್ಲಿರುವವರು, ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿರುವವರು ಮತ್ತು ಭಾರತದಿಂದ ಹೊರಗೆ ಉದ್ಯೋಗ/ವ್ಯಾಪಾರಕ್ಕಾಗಿ ವಾಸಿಸುವ ಸಾವಿರಾರು ಕನ್ನಡಿಗ ಕುಟುಂಬದ ವಿದ್ಯಾರ್ಥಿಗಳಿಗೆ ಇದರಿಂದ ಸಮಸ್ಯೆಯಾಗಿದೆ. ಮಂಗಳೂರು, ಉಡುಪಿ, ಕಾರವಾರ, ಉತ್ತರ ಕನ್ನಡ, ಶಿವಮೊಗ್ಗ, ಬೆಂಗಳೂರು ಮತ್ತು ಸುತ್ತಲಿನ ಭಾಗಗಳಲ್ಲಿ ಇತಿಹಾಸಪೂರ್ವದಿಂದಲೇ ಸಾರಸ್ವತ, ಕ್ಯಾಥೋಲಿಕ್, ನವಾಯತ್, ಗೌಡ ಸಾರಸ್ವತ, ಕುಡುಂಬಿ ಮತ್ತು ಇತರ ಸಮುದಾಯಗಳ ಮಾತೃಭಾಷೆ ಕೊಂಕಣಿ ಆಗಿದ್ದು, ಇವರು ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಭಾಗವಾಗಿದ್ದಾರೆ ಎಂದು ವಿವೇಕ್ ಮಲ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಯಂಗ್ ಇಂಡಿಯಾ ಫೆಲೋಶಿಪ್ ಅರ್ಜಿ ಆಹ್ವಾನ; ಆಯ್ಕೆ ಪ್ರಕ್ರಿಯೆಯ ವಿವರ ಇಲ್ಲಿದೆ
ಕೆಇಎ ನಿರ್ಧಾರದಿಂದ ನಿಜವಾದ ಕನ್ನಡಿಗ ವಿದ್ಯಾರ್ಥಿಗಳು ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.ಹೊರನಾಡು/ಗಡಿಯನಾಡು ಕನ್ನಡಿಗ ವರ್ಗಕ್ಕೆ ಅರ್ಹತೆ ಕಳೆದುಕೊಳ್ಳುತ್ತಿದ್ದಾರೆ. ಪರೀಕ್ಷೆಗೆ ಪ್ರವೇಶ ಅವಕಾಶಗಳನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಿದ್ದಾರೆ ಮತ್ತು ಕರ್ನಾಟಕದ ಹೊರಗಿರುವ ಅಥವಾ ವಿದೇಶದಲ್ಲಿರುವ ಕುಟುಂಬಗಳು ಕೇವಲ ಈ ತಾಂತ್ರಿಕ ತಪ್ಪಿನಿಂದ ತೊಂದರೆ ಅನುಭವಿಸುತ್ತಿವೆ. ಆದ್ದರಿಂದ, KCET ಸಮಾಲೋಚನೆ ಮತ್ತು ಪ್ರವೇಶ ಪ್ರಕ್ರಿಯೆಗಳು ಮುಂದುವರಿಸುವ ಮೊದಲು ತಕ್ಷಣದ ತಿದ್ದುಪಡಿ ಅಗತ್ಯವಿದೆ ಎಂದು ಅವರು ಆಗ್ರಹಿಸಿದ್ದಾರೆ.
ಪ್ರಸ್ತುತ ವ್ಯಾಖ್ಯಾನದ ಪ್ರಕಾರ, ಕರ್ನಾಟಕದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳೂ ಸಹ ‘ಮಾತೃಭಾಷೆಯ’ ಆಧಾರಾದ ಮೇಲೆ ಕನ್ನಡಿಗರ ಪಟ್ಟಿಯಿಂದ ಹೊರಗುಳಿಯುವಂತಾಗಿದೆ. ಶಂಕರ ನಾಗ್, ಉಳ್ಳಾಲ ಶ್ರೀನಿವಾಸ್ ಮಲ್ಯ, ಪ್ರಕಾಶ್ ಪಡುಕೋಣೆ, ಮಾರ್ಗರೇಟ್ ಆಳ್ವ, ಐವಾನ್ ಡಿಸೋಜಾ ಸೇರಿ ಸಾಹಿತ್ಯ/ಸಾಂಸ್ಕೃತಿಕ ವಲಯದ ಅನೇಕರಾದ ಗೋವಿಂದ ಪಾಯಿ, ಗಿರೀಶ್ ಕಾರ್ನಾಡ್, ಸುರ್ಯಕಾಂತ ಕಾಮತ್ ಮುಂತಾದವರ ಕುಟುಂಬಗಳು ಕರ್ನಾಟಕಕ್ಕೆ ಹೆಮ್ಮೆ ತಂದರೂ ಅವರ ಮಾತೃಭಾಷೆ ಆಧಾರದ ಮೇಲೆ ಅವರನ್ನು ಕನ್ನಡಿಗ ಎಂಬ ವ್ಯಾಖ್ಯಾನದಿಂದ ಹೊರಗಿಡಲ್ಪಡುವುದು ನೋವುಂಟು ಮಾಡಿದೆ. ಹೊರನಾಡು/ಗಡಿಯನಾಡು ಕನ್ನಡಿಗರ ಅರ್ಥ ಸದಾ ಕರ್ನಾಟಕದ ಹೊರಗೆ ವಾಸಿಸುವ ಕನ್ನಡಿಗರನ್ನು ಬೆಂಬಲಿಸುವುದು. ಆದರೆ ಕೊಂಕಣಿಗರ ವಿಷಯದಲ್ಲಿಇದು ವಿರುದ್ಧವಾಗಿದೆ. ಹೀಗಾಗಿ ಹೊರನಾಡು/ಗಡಿಯನಾಡು ಕನ್ನಡಿಗರ ಮಾತೃಭಾಷೆ ಪಟ್ಟಿಯಲ್ಲಿ ಕನ್ನಡ, ತುಳು, ಕೊಡವ ಭಾಷೆ ಜೊತೆಗೆ ಕೊಂಕಣಿ ಭಾಷೆಯನ್ನು ತಕ್ಷಣ ಸೇರಿಸಬೇಕು ಎಂದು ವಿವೇಕ್ ಮಲ್ಯ ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:18 pm, Thu, 27 November 25