
ಬೆಂಗಳೂರು, ಡಿಸೆಂಬರ್ 27: ಬಂಡೀಪುರ ಮತ್ತು ನಾಗರಹೊಳೆಗಳಲ್ಲಿ ಸಫಾರಿಗಳ ಪುನರಾರಂಭಕ್ಕೆ ಒತ್ತಾಯಿಸಿ ಕರ್ನಾಟಕ ಇಕೋ-ಟೂರಿಸಂ ರೆಸಾರ್ಟ್ಸ್ ಅಸೋಸಿಯೇಷನ್ (KETRA) ಪ್ರವಾಸೋದ್ಯಮ ಸಚಿವರಿಗೆ ಪತ್ರ ಬರೆದಿದೆ. ಸಫಾರಿ ಸ್ಥಗಿತವಾಗಿರುವುದರಿಂದ ಉಂಟಾಗುತ್ತಿರುವ ಆರ್ಥಿಕ ಹಾನಿ ಮತ್ತು ಉದ್ಯೋಗ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದು, ಅಗತ್ಯವಿರುವ ಹೆಚ್ಚುವರಿ ಸುರಕ್ಷತಾ ಕ್ರಮಗಳೊಂದಿಗೆ ಸಫಾರಿಯನ್ನ ಮತ್ತೆ ಆರಂಭಿಸಬೇಕೆಂದು ಆಗ್ರಹಿಸಿದೆ.
ನವೆಂಬರ್‌ನಿಂದ ರಾಜ್ಯದಲ್ಲಿ ವನ್ಯಜೀವಿ ಸಫಾರಿಗಳನ್ನು ಸ್ಥಗಿತಗೊಳಿಸಿರುವುದರಿಂದ ಹಲವು ರೀತಿಯ ಸಮಸ್ಯೆಗಳು ಉದ್ಭವಿಸಿವೆ. ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಇರುವ ಪ್ರವಾಸೋದ್ಯಮದ ಉಚ್ಚ ಕಾಲಾವಧಿಯಲ್ಲಿ ಈ ಕ್ಷೇತ್ರವು ಕೋವಿಡ್-19 ಸಂದರ್ಭ ಉಂಟಾಗಿದ್ದ ಸ್ಥಿತಿಯನ್ನೇ ಅನುಭವಿಸುತ್ತಿದೆ. ಇದು ಕ್ಷೇತ್ರದ ಅಸ್ತಿತ್ವವನ್ನೇ ಅಪಾಯಕ್ಕೆ ತಳ್ಳಿದೆ. ಪ್ರಸ್ತುತವಾಗಿ ಸಫಾರಿ ಸ್ಥಗಿತಕ್ಕೆ ನೀಡಲಾಗುತ್ತಿರುವ ಕಾರಣಗಳು ವೈಜ್ಞಾನಿಕ ಅಥವಾ ಪ್ರಾಯೋಗಿಕವಾಗಿಲ್ಲ. ಸಫಾರಿಗೂ ಹುಲಿಗಳ ದಾಳಿಗೆ ಹಲವರು ಬಲಿಯಾಗಿರುವುದಕ್ಕೂ ಸಂಬಂಧ ಇಲ್ಲ. ಘಟನಾ ಸ್ಥಳಗಳಿಂದ ನಾಗರಹೊಳೆ ಸಫಾರಿ ವಲಯ ಪ್ರತ್ಯೇಕವಾಗಿದ್ದರೆ, ಬಂಡೀಪುರ ಸುಮಾರು 50-100 ಕಿ.ಮೀ. ದೂರದಲ್ಲಿದೆ.
ಇದನ್ನೂ ಓದಿ: ಸಫಾರಿ ವೇಳೆ ಕಾಣಿಸಿಕೊಂಡ ಭಾರಿ ಗಾತ್ರದ ಹುಲಿ
ಸಫಾರಿಗಳ ಸ್ಥಗಿತದಿಂದಾಗಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳ ದೈನಂದಿನ ಆದಾಯದಲ್ಲಿ ಭಾರಿ ನಷ್ಟ ಉಂಟಾಗಿದೆ. ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ಸ್ ದಿನಕ್ಕೆ ಅಂದಾಜು 30 ಲಕ್ಷ ನಷ್ಟ ಅನುಭವಿಸುತ್ತಿದೆ. ಅರಣ್ಯ ಇಲಾಖೆಗೆ ದಿನಕ್ಕೆ ಸಫಾರಿ ಶುಲ್ಕ ರೂಪದಲ್ಲಿ ಬರುತ್ತಿದ್ದ ಅಂದಾಜು 30 ಲಕ್ಷ ಆದಾಯ ನಿಂತಿದೆ. ರಾಜ್ಯದ ಖಜಾನೆಗೆ ದಿನಕ್ಕೆ ಅಂದಾಜು 60-70 ಲಕ್ಷ ಜಿಎಸ್ಟಿ ಹಣ ಖೋತಾ ಆಗುತ್ತಿದ್ದು, ಒಟ್ಟು ಮೂರು ಕೋಟಿ ರೂ.ಗಳಿಗಿಂತ ಹೆಚ್ಚಿನ ಆದಾಯದ ಮೇಲೆ ಪರಿಣಾಮ ಉಂಟಾಗಿದೆ.
ಸಫಾರಿ ಕ್ಷೇತ್ರವು ಸುಮಾರು 8,000 ಜನರಿಗೆ ಉದ್ಯೋಗ ಒದಗಿಸುತ್ತಿದ್ದು, ಇವರಲ್ಲಿ ಶೇ. 80ರಷ್ಟು ಜನರು ಅರಣ್ಯ ಪ್ರದೇಶಗಳ ಸುತ್ತಮುತ್ತಲಿನ ಗ್ರಾಮಗಳು ಮತ್ತು ಆದಿವಾಸಿ ಸಮುದಾಯಗಳಿಗೆ ಸೇರಿದವರು. ಸಫಾರಿ ಬಂದ್ ಆಗಿರುವ ಕಾರಣ ಮುಂದಿನ 30 ದಿನಗಳಲ್ಲಿ 1,200–1,500 ದಿನಗೂಲಿ ಮತ್ತು ಒಪ್ಪಂದ ಆಧಾರಿತ ಉದ್ಯೋಗಗಳು ನಷ್ಟವಾಗುವ ಸಾಧ್ಯತೆ ಇದೆ. ಇದು ಹೀಗೆ ಮುಂದುವರಿದರೆ ನಿಯಮಿತ ಸಿಬ್ಬಂದಿಯನ್ನು ಒಳಗೊಂಡಂತೆ ಸುಮಾರು 4,000 ಜನರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ.
ವನ್ಯಜೀವಿ ಪ್ರವಾಸೋದ್ಯಮ ದಕ್ಷಿಣ ಭಾರತದ ಮೂಲಸ್ತಂಭ. ಹೀಗಿರುವಾಗ ಅಂತರಾಷ್ಟ್ರೀಯ ಪ್ರವಾಸೋದ್ಯಮ ಸಂಯೋಜಕರು ಈಗಾಗಲೇ ವಿದೇಶಿ ಪ್ರವಾಸಿಗರನ್ನು ಕರ್ನಾಟಕ ಬಿಟ್ಟು ಬೇರೆಡೆಗೆ ಕರೆದೊಯ್ಯಲು ಆರಂಭಿಸಿದ್ದಾರೆ. ಈ ರೀತಿಯ ಪ್ರವಾಸಗಳು ಸಾಮಾನ್ಯವಾಗಿ 3–6 ತಿಂಗಳು ಮುಂಚಿತವಾಗಿ ಯೋಜಿಸಲಾಗುತ್ತವೆ. ಆದರೆ ಹಠಾತ್ ಆಗಿ ಅವು ರದ್ದಾದಾಗ ಜಾಗತಿಕ ಮಟ್ಟದಲ್ಲಿ ನಕಾರಾತ್ಮಕ ವಿಮರ್ಶೆಗಳಿಗೆ ಒಳಗಾಗಿ, ಕರ್ನಾಟಕದ ಹೆಸರಿಗೆ ಚ್ಯುತಿ ಬರಲಿದೆ ಎಂದು KETRA ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.