
ಬೆಂಗಳೂರು,ಜನವರಿ 02: ಬೆಂಗಳೂರಿನ ಕಾಡುಗೊಂಡನಹಳ್ಳಿ (KG Halli) ರೈಲ್ವೆ ಟ್ರ್ಯಾಕ್ ಸಮೀಪದ ಚುನಾ ಲೈನ್ ಪ್ರದೇಶದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರ ದುಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಅಕ್ರಮವಾಗಿ ಕೋಗಿಲು ಲೇಔಟ್‌ನಲ್ಲಿ ನೆಲೆಸಿದ್ದರೂ ಅಲ್ಲಿನ ನಿವಾಸಿಗಳಿಗೆ ಸರ್ಕಾರ ಕೊಟ್ಟ ಆಸರೆ ಕೆ ಜಿ ಹಳ್ಳಿ ನಿವಾಸಿಗಳಿಗೆ ಸಿಗದಂತಾಗಿದೆ.
ಕಳೆದ ವರ್ಷದ ಅಕ್ಟೋಬರ್ 30ರಂದು ರೈಲ್ವೆ ಇಲಾಖೆ ನಡೆಸಿದ ತೆರವು ಕಾರ್ಯಾಚರಣೆಯಿಂದಾಗಿ ಸುಮಾರು 30 ಮನೆಗಳಲ್ಲಿ ವಾಸವಾಗಿದ್ದ 80ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿದ್ದು, ಎರಡು ತಿಂಗಳಿಗೂ ಹೆಚ್ಚು ಕಾಲ ಕಳೆದರೂ ಇನ್ನೂ ಯಾವುದೇ ಪರಿಹಾರ ಅಥವಾ ಪರ್ಯಾಯ ವಸತಿ ಸಿಗದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ವೇ ನಂಬರ್ 71ಕ್ಕೆ ಸೇರಿದ ಈ ಜಾಗದಲ್ಲಿ ಕಳೆದ 150 ವರ್ಷಗಳಿಂದ 88 ಕುಟುಂಬಗಳು ಬದುಕು ಕಟ್ಟಿಕೊಂಡಿದ್ದಾಗಿ ಸ್ಥಳೀಯರು ಹೇಳಿದ್ದಾರೆ. ಹಲವಾರು ದಶಕಗಳಿಂದ ಇಲ್ಲಿಯೇ ವಾಸವಿರುವ ಕುರಿತು ದಾಖಲೆಗಳನ್ನೂ ಅವರು ಹೊಂದಿದ್ದಾರೆ. 2016-17ರಲ್ಲಿ ಬಿಬಿಎಂಪಿಯೇ ಈ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಹಾಯ ನೀಡಿದ್ದೂ ಇದೆ ಎನ್ನಲಾಗಿದೆ.
ಸದ್ಯ ನಿರಾಶ್ರಿತರು ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ತಾತ್ಕಾಲಿಕ ಶೇಡ್‌ಗಳಲ್ಲಿ ವಾಸಿಸುತ್ತಿದ್ದು, ಮಳೆ, ಚಳಿಯಲ್ಲಿಯೇ ದಿನ ನೂಕುತ್ತಿದ್ದಾರೆ. ಮನೆಗಳನ್ನು ಒದಗಿಸುವುದಾಗಿ ಶಾಸಕ ಕೆ.ಜೆ. ಜಾರ್ಜ್ ಭರವಸೆ ನೀಡಿದ್ದರೂ ಅವರಿಂದ ಯಾವುದೇ ಸ್ಪಂದನೆ ಇಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಕೋಗಿಲು ಲೇಔಟ್‌ನಲ್ಲಿ ಮನೆ ಕಳೆದುಕೊಂಡವರಿಗೆ ತ್ವರಿತ ಪರಿಹಾರ ದೊರೆತಿದ್ದರೆ, KG ಹಳ್ಳಿ ನಿರಾಶ್ರಿತರಿಗೆ ಮಾತ್ರ ತಿಂಗಳುಗಳಾದರೂ ನ್ಯಾಯ ಸಿಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ತಕ್ಷಣ ಕ್ರಮ ಕೈಗೊಂಡು ಮಾನವೀಯ ನೆಲೆಯಲ್ಲಿ ಪರಿಹಾರ ನೀಡಬೇಕೆಂಬುದು ಹಳ್ಳಿಗರು ಒತ್ತಾಯಿಸಿದ್ದಾರೆ.
ವರದಿ: ಅರುಣ್ ಕುಮಾರ್ ಆರ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.